Site icon Vistara News

Motivational story : ಯಾರದೋ ಮಗನನ್ನು ಉಳಿಸಲು ಓಡಿ ಬಂದ ಆ ವೈದ್ಯರ ಮಗು ಸ್ಮಶಾನದಲ್ಲಿತ್ತು!

doctor

ಕೃಷ್ಣ ಭಟ್‌ ಅಳದಂಗಡಿ- motivational story
ಅಲ್ಲೊಂದು ಭೀಕರ ಅಪಘಾತವಾಗಿತ್ತು. ಸೈಕಲ್‍ನಲ್ಲಿ ಹೋಗುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿ ತಲೆಗೆ ಹೊಡೆತ ಬಿದ್ದಿತ್ತು. ಹತ್ತಿರದ ಆಸ್ಪತ್ರೆಗೆ ಕರೆದೊಯ್ದಾಗ, “ಕೂಡಲೇ ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋಗಿ. ತಕ್ಷಣ ತಲೆಯ ಆಪರೇಷನ್ ಆಗದೆ ಇದ್ದರೆ ಅಪಾಯ ಉಂಟಾದೀತು” ಎಂದು ಎಚ್ಚರಿಸಿದರು.

ಕೂಡಲೇ ಸಮೀಪದ ದೊಡ್ಡಾಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಹೋದಾಗ ಬ್ರೇನ್ ಸರ್ಜರಿ ಮಾಡುವ ವೈದ್ಯರು ಇರಲಿಲ್ಲ. ಕೂಡಲೇ ಅವರಿಗೆ ಕರೆ ಮಾಡಲಾಯಿತು. ಬಾಲಕನ ತಂದೆಗೆ ಅವರು ಬರುವುದನ್ನು ಕಾಯುವಷ್ಟು ತಾಳ್ಮೆ ಇರಲಿಲ್ಲ. ಎಲ್ಲಿ ಮಗ ಪ್ರಾಣ ಕಳೆದುಕೊಳ್ಳುತ್ತಾನೋ ಎಂಬ ಆತಂಕದಿಂದ ವೈದ್ಯರಿಗೆ ಚೆನ್ನಾಗಿ ಬೈದ.

ಕೆಲವೇ ಹೊತ್ತಲ್ಲಿ ವೈದ್ಯರು ಬಂದೇ ಬಿಟ್ಟರು. ಬಂದಾಗಲೂ `ಏನು ಡಾಕ್ಟರ್, ಇಷ್ಟೊಂದು ಲೇಟ್ ಆಗಿ ಬಂದಿರಿ.. ನಿಮಗೆಲ್ಲ ದುಡ್ಡು ಮಾತ್ರ ಬೇಕು. ಮಕ್ಕಳ ಜೀವ ಉಳಿಯಬೇಕು ಅನ್ನೋ ಕಳಕಳಿ ಇಲ್ಲ’ ಎಂದು ಬೇಸರದಿಂದಲೇ ಹೇಳಿದ. ಆಗ ಡಾಕ್ಟರ್ ಸಣ್ಣ ಮುಗುಳ್ನಗುವಿನೊಂದಿಗೆ “ದಯವಿಟ್ಟು ಕ್ಷಮಿಸಿ, ನಾನು ಕರೆ ಸ್ವೀಕರಿಸಿದ ಮೇಲೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೆ ಬಂದಿದ್ದೇನೆ. ಸ್ವಲ್ಪ ತಾಳ್ಮೆಯಿಂದಿರಿ. ನಾನು ಆಪರೇಷನ್ ಮುಗಿಸುತ್ತೇನೆ. ಉಳಿದ ವಿಚಾರ ಆಮೇಲೆ ಮಾತನಾಡೋಣ,” ಎಂದು ಒಳಗೆ ಹೋದರು.

ಸುಮಾರು ಎರಡು ಗಂಟೆ ಕಾಲ ಸರ್ಜರಿ ಮಾಡಿದ ಬಳಿಕ ವೈದ್ಯರು ಅದೇ ಆಪರೇಷನ್ ಡ್ರೆಸ್‍ನಲ್ಲೇ ಹೊರಗೆ ಬಂದರು. `ನಿಮ್ಮ ಮಗ ಬದುಕುತ್ತಾನೆ. ಡೋಂಟ್‍ವರಿ’ ಎಂದು ಅಪ್ಪನಿಗೆ ಹೇಳಿ ಮಾರುತ್ತರಕ್ಕೆ ಅವಕಾಶವಿಲ್ಲದಂತೆ ಓಡುತ್ತಲೇ ಹೋದರು.

ಆಗ ಅಪ್ಪನಿಗೆ ಮತ್ತಷ್ಟು ಸಿಟ್ಟು ಬಂತು. ಆಗ ಬಂದಿದ್ದೇ ಲೇಟು. ಈಗಲಾದರೂ ನಿಂತು ಒಂದೆರಡು ಸರಿಯಾದ ಮಾಡು ಆಡಿ ಹೋಗಬಹುದಿತ್ತಲ್ಲ. ಡಾಕ್ಟರ್ ಗೆ ಎಂಥ ಧಿಮಾಕು ನೋಡಿ. ಮಕ್ಕಳು ನಮ್ಮದಲ್ವಾ? ಅವರಿಗೇನಾಗಬೇಕಾಗಿದೆ ಎಂದು ಹೇಳಿದ.

ಆಗ ನರ್ಸ್ ಹೇಳಿದರು.

ದಯವಿಟ್ಟು ವಿಷಯವನ್ನು ಅರ್ಥ ಮಾಡಿಕೊಳ್ಳದೆ ಏನೇನೋ ಮಾತನಾಡಬೇಡಿ. ನಿಮ್ಮ ಮಗು ಜೀವನ್ಮರಣ ಸ್ಥಿತಿಯಲ್ಲಿರುವುದನ್ನು ತಿಳಿದ ಕ್ಷಣವೇ ಅವರು ಓಡೋಡಿ ಬಂದಿದ್ದಾರೆ. ಈಗ ಪ್ರಾಣ ಉಳಿಸಿದ್ದಾರೆ. ಇನ್ನೇನಾಗಬೇಕು ನಿಮಗೆ? ಅವರ ಕಥೆ ಗೊತ್ತಾ ನಿಮಗೆ? ಎಂದು ಬೈದೇ ಬಿಟ್ಟರು.

ಆಗ ಆ ವ್ಯಕ್ತಿ “ಅವರಿಗೆ ಇನ್ಯಾವುದೋ ಆಸ್ಪತ್ರೆಗೆ ಹೋಗಲಿಕ್ಕೆ ಇರಬೇಕು. ಅದಕೆ ಅವಸರ,” ಅಂತ ಉಡಾಫೆ ಮಾತು ಆಡಿದ.

ಆಗ ನರ್ಸ್ ಹೇಳಿದಳು: ನಿಮ್ಮ ಸಣ್ಣತನಗಳನ್ನು ಬೇರೆಯವರ ಮೇಲೆ ಆರೋಪಿಸಬೇಡಿ. ನಿಜ ಅಂದರೆ ನಿಮ್ಮ ಮಗನನ್ನು ಕರೆದುಕೊಂಡು ಬಂದಾಗ ನಾವು ಫೋನ್ ಮಾಡಿದ ಹೊತ್ತಿನಲ್ಲಿ ಅವರು ಸ್ಮಶಾನದಲ್ಲಿದ್ದರು. ಅವರ ಒಬ್ಬನೇ ಮಗ ನಿನ್ನೆ ಸೈಕಲ್‍ಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದ. ಅವನ ಅಂತ್ಯ ಸಂಸ್ಕಾರ ನಡೆಸುತ್ತಿದ್ದರು. ಆದರೆ, ಇನ್ನೊಂದು ಮಗುವಿನ ಪ್ರಾಣ ಉಳಿಸಬೇಕು ಎಂಬ ಹಠದಿಂದ ಅಲ್ಲಿನ ಕೆಲಸವನ್ನು ಬದಿಗಿಟ್ಟು ಇಲ್ಲಿಗೆ ಬಂದಿದ್ದಾರೆ. ಈಗ ಇಲ್ಲಿಂದ ಹೋಗಿ ಅವರು ಮುಂದಿನ ಕೆಲಸ ಮಾಡಬೇಕು.

ಅಪ್ಪ ನಾಚಿಕೆಯಿಂದ ತಲೆ ತಗ್ಗಿಸಿದ.

ಇದನ್ನೂ ಓದಿ | Motivational story | ನಿಮ್ಮಲ್ಲಿ ಆಯುಧಗಳಿವೆ ನಿಜ, ಅವುಗಳನ್ನು ಕಾಲ ಕಾಲಕ್ಕೆ ಹರಿತಗೊಳಿಸುತ್ತಿದ್ದೀರಾ?

Exit mobile version