ಕೃಷ್ಣ ಭಟ್ ಅಳದಂಗಡಿ- Motivational story
ಇದು ಕೆಲವು ವರ್ಷಗಳ ಹಿಂದಿನ ಕಥೆ. ಆಗೆಲ್ಲ ಹಳ್ಳಿಗಳು ಈಗಿನಂತೆ ಬೆಳೆದಿರಲಿಲ್ಲ. ಊರಿಗೊಂದು ದಿನಸಿ ಅಂಗಡಿ, ಒಂದು ಸೆಲೂನು, ಒಬ್ಬ ಟೇಲರ್.. ಹೀಗೆ ಸಣ್ಣ ಸಣ್ಣ ವ್ಯವಸ್ಥೆಗಳಿದ್ದ ಕಾಲ ಅದು.
ಅಲ್ಲಿ ರಮೇಶ್ ಎನ್ನುವ ಒಬ್ಬ ಟೇಲರ್ ಇದ್ದ. ಊರಿಗೆ ಅವನೊಬ್ಬನೇ ಟೇಲರ್ ಆಗಿದ್ದರಿಂದ ಪ್ರತಿಯೊಬ್ಬರೂ ಬಟ್ಟೆ ಹೊಲಿಯಲು ಅವನ ಬಳಿಗೇ ಬರುತ್ತಿದ್ದರು. ಅವನಿಗೆ ಒಳ್ಳೆಯ ಹಣವೂ ಸಿಗುತ್ತಿತ್ತು.
ರಮೇಶ್ ಆರಂಭದಲ್ಲಿ ಎಲ್ಲರಿಗೂ ಪ್ರಿಯವಾಗುವಂತೆ ಕೆಲಸ ಮಾಡುತ್ತಿದ್ದ. ಆದರೆ, ಯಾವಾಗ ಜನರಿಗೆ ಬೇರೆ ಆಯ್ಕೆಗಳು ಇಲ್ಲ ಎಂದು ತಿಳಿಯಿತೋ ಆಗ ಸ್ವಲ್ಪ ಅಹಂಕಾರ ಬೆಳೆಯಿತು. ಸಮಯಕ್ಕೆ ಸರಿಯಾಗಿ ಬಟ್ಟೆ ವಾಪಸ್ ಕೊಡುತ್ತಿರಲಿಲ್ಲ. ಹೊಲಿದದ್ದು ಸರಿಯಾಗಲಿಲ್ಲ ಎಂದು ಯಾರಾದರೂ ಹೇಳಿದರೆ ವಾದ ಮಾಡುತ್ತಿದ್ದ, ಅಪಮಾನ ಮಾಡುತ್ತಿದ್ದ, ಇನ್ಯಾವತ್ತೂ ನನ್ನ ಬಳಿ ಬಟ್ಟೆ ತರಬೇಡಿ ಎನ್ನುತ್ತಿದ್ದ. ಜನರಿಗೆ ಅವನ ವರ್ತನೆಯಿಂದ ಕಿರಿಕಿರಿ ಆಗುತ್ತಿತ್ತು. ಆದರೆ, ಅನ್ಯ ದಾರಿಯಿಲ್ಲದೆ ಅವನ ಬಳಿಗೇ ಹೋಗುತ್ತಿದ್ದರು.
ಒಂದು ಸಾರಿ ಒಬ್ಬ ಮಹಿಳೆ ತನ್ನ ಮಗುವಿನೊಂದಿಗೆ ಆ ಊರಿಗೆ ಬಂದು ನೆಲೆಸಿದರು. ಆಕೆಗೆ ಹೊಲಿಯುವುದು ಗೊತ್ತಿತ್ತು. ಆದರೆ, ಹೊಲಿಯುವ ಮೆಷಿನ್ ಇರಲಿಲ್ಲ. ಆಕೆ ರಮೇಶನ ಬಳಿ ಬಂದು ಏನಾದರೂ ಕೆಲಸವಿದ್ದರೆ ಕೊಡುತ್ತೀರಾ ಎಂದು ವಿಚಾರಿಸಿದಳು. ಆದರೆ, ರಮೇಶ ಆಕೆಯನ್ನು ನಿಂದಿಸಿ ವಾಪಾಸು ಕಳುಹಿಸಿದ. ಕನಿಷ್ಠ ಪಕ್ಷ ಹೆಮ್ಮಿಂಗ್, ಬಟನ್ ಹಾಕುವ ಕೆಲಸವನ್ನಾದರೂ ಕೊಡಬಹುದಿತ್ತು.. ಅದನ್ನೂ ಮಾಡಲಿಲ್ಲ.
ಅಪಮಾನಿತಳಾದ ಮಹಿಳೆ ತಾನೇ ಕಷ್ಟಪಟ್ಟು ಕೆಲಸ ಮಾಡಿ ಹಣ ಹೊಂದಿಸಿ ಒಂದು ಹೊಲಿಗೆ ಯಂತ್ರ ಖರೀದಿ ಮಾಡಿದಳು. ಮತ್ತು ಅದೇ ಊರಲ್ಲಿ ಅಂಗಡಿ ಶುರು ಮಾಡಿದಳು. ಆಕೆಯ ಹೊಲಿಗೆ ಚೆನ್ನಾಗಿತ್ತು, ಜತೆಗೆ ಮೃದುವಾದ ಮಾತು ಎಲ್ಲರನ್ನೂ ಸೆಳೆಯಿತು. ಊರಿನ ಜನರು ತಮ್ಮ ಬಟ್ಟೆಗಳನ್ನು ಆಕೆಗೇ ನೀಡಲು ಶುರು ಮಾಡಿದರು. ಆಕೆಯ ಬೇಡಿಕೆ ಹೆಚ್ಚಿತು. ಈ ನಡುವೆ, ರಮೇಶನ ವ್ಯವಹಾರ ಕುಸಿದು ಹೋಯಿತು. ಕೊನೆ ಕೊನೆಗೆ ಅವನ ಬಳಿ ಯಾರೂ ಹೋಗುತ್ತಿರಲಿಲ್ಲ. ಆತ ಮತ್ಸರ ಮತ್ತು ಸಿಟ್ಟಿನಿಂದ ಕುದಿಯತೊಡಗಿದ.
ಇದನ್ನೆಲ್ಲ ಗಮನಿಸಿದ ರಮೇಶನ ಹೆಂಡತಿ ಆ ಮಹಿಳಾ ಟೇಲರ್ ಬಳಿಗೆ ಹೋದಳು. ಗಂಡನಿಗೆ ಆಗಿರುವ ಸಮಸ್ಯೆಯನ್ನು ವಿವರಿಸಿದಳು. ಒಂದು ಗ್ರಾಮದಲ್ಲಿ ಇಬ್ಬರು ಟೇಲರ್ ಗಳಿದ್ದರೆ ಒಂದು ಕುಟುಂಬ ಉಪವಾಸ ಬೀಳಬೇಕಾಗುತ್ತದೆ ಎಂದು ವಿವರಿಸಿದರು. ʻಒಂದೊಮ್ಮೆ ನೀವು ಒಪ್ಪುವುದಾದರೆ ನಾನು ಒಂದು ಲಕ್ಷ ರೂ. ಕೊಡುತ್ತೇನೆ. ನೀವು ನಿಮ್ಮ ಅಂಗಡಿ ಬಿಟ್ಟುಕೊಡುತ್ತೀರಾ,” ಎಂದು ವಿನಂತಿಸಿದಳು.
ಇನ್ನೊಬ್ಬ ಹೆಣ್ಮಗಳ ಕುಟುಂಬಕ್ಕೆ ಆಗುತ್ತಿರುವ ಸಮಸ್ಯೆಯನ್ನು ಅರ್ಥ ಮಾಡಿಕೊಂಡ ಮಹಿಳಾ ಟೇಲರ್ ಆಕೆ ನೀಡಿದ ಒಂದು ಲಕ್ಷ ರೂ.ಯನ್ನು ಹಿಡಿದುಕೊಂಡು ಆವತ್ತು ರಾತ್ರಿಯೇ ಪಕ್ಕದ ಊರಿಗೆ ವಲಸೆಹೋದಳು.
ಆವತ್ತು ದಿನವಿಡೀ ರಮೇಶ ಮನೆಗೆ ಹೋಗಿರಲಿಲ್ಲ. ರಾತ್ರಿ ಒಂದಿಷ್ಟು ಪಾನಮತ್ತನಾಗಿ, ಸ್ವಲ್ಪ ಪೆಟ್ರೋಲ್ ಖರೀದಿಸಿದ. ಮಧ್ಯರಾತ್ರಿಯಾಗುತ್ತಲೇ ಮಹಿಳೆಯ ಶಾಪ್ ಇದ್ದಲ್ಲಿಗೆ ಹೋಗಿ ಪೆಟ್ರೋಲ್ ಹಾಕಿ ಸುಟ್ಟುಬಿಟ್ಟ. ಸ್ವಲ್ಪ ಹೊತ್ತು ಹುಚ್ಚನಂತೆ ಕುಣಿದಾಡಿದ.
ಅಂಗಡಿಗೆ ಬೆಂಕಿ ಬಿದ್ದ ವಿಷಯ ರಮೇಶನ ಪತ್ನಿಗೆ ತಿಳಿಯಿತು. ಆಕೆ ಓಡೋಡಿ ಬಂದಳು. ಗಂಡನನ್ನು ಕರೆದು ಹೇಳಿದಳು: ಎಂಥ ಅನ್ಯಾಯ ಮಾಡಿದಿರಿ ನೀವು. ನಿಮಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಇವತ್ತು ಸಂಜೆಯಷ್ಟೇ ನಾನು ಒಂದು ಲಕ್ಷ ರೂ. ಕೊಟ್ಟು ಈ ಅಂಗಡಿ ಖರೀದಿಸಿದೆ. ಆಕೆ ಮರುಮಾತಿಲ್ಲದೆ ಅಂಗಡಿ ಬಿಟ್ಟುಕೊಟ್ಟಿದ್ದಾಳೆ. ನೀವು ನೋಡಿದರೆ ನನ್ನ ತಲೆಗೇ ಬೆಂಕಿ ಇಟ್ಟಿದ್ದೀರಾ ಎಂದು ಆಕ್ರೋಶದಿಂದ ಹೇಳಿದಳು.
ರಮೇಶ್ ತಲೆ ಮೇಲೆ ಕೈ ಇಟ್ಟು ಕುಳಿತಿದ್ದ.
ಇದನ್ನೂ ಓದಿ | Motivational story | ಆ ಯುದ್ಧದಲ್ಲಿ ಅವರನ್ನು ಗೆಲ್ಲಿಸಿದ್ದು ದೇವರಾ? ಅಥವಾ ಅವರ ನಂಬಿಕೆಯಾ?