Site icon Vistara News

Motivational story : ಸಮಯವಿಲ್ಲ ಅಂತೀವಲ್ಲಾ.. ಹೊಂದಿಸಿಕೊಂಡರೆ ಎಷ್ಟೊಂದು ಸಮಯವಿದೆ ಅಂತ ಹೇಳಿಕೊಟ್ರು ಪ್ರೊಫೆಸರ್‌!

stone pebbles sand

#image_title

ಕೃಷ್ಣ ಭಟ್‌ ಅಳದಂಗಡಿ- Motivational story
ಪ್ರೊಫೆಸರ್‌ ಸುಧೀಂದ್ರ ಪ್ರಸಾದ್‌ ಅವರು ಕ್ಲಾಸಿನಲ್ಲಿ ಯಾವಾಗಲೂ ಹೊಸ ವಿಷಯಗಳನ್ನು ಹೇಳುವುದಕ್ಕೆ ಹೆಸರಾದವರು. ಆವತ್ತು ಕೂಡಾ ಅವರು ಏನೋ ಹೊಸದನ್ನು ವಿದ್ಯಾರ್ಥಿಗಳಿಗೆ ಹೇಳಬೇಕು ಎಂದುಕೊಂಡು ಬಂದಿದ್ದರು. ಅವರು ಕ್ಲಾಸಿಗೆ ಬಂದಾಗ ಒಂದು ಕೈಯಲ್ಲಿ ಪುಸ್ತಕಗಳ ಜತೆ ಒಂದು ಜಾರ್‌ ಮತ್ತು ಒಂದು ಬಾಕ್ಸ್‌ ಕೂಡಾ ಇತ್ತು.

ತಮ್ಮ ನಿತ್ಯದ ಪಾಠವನ್ನು ಮಾಡಿದ ಬಳಿಕ ಕೊನೆಯಲ್ಲಿ ಅವರು ಜಾರನ್ನು ತೆಗೆದುಕೊಂಡರು. ಇದರಲ್ಲಿ ಏನಿದೆ ಎಂದು ವಿದ್ಯಾರ್ಥಿಗಳನ್ನು ಕೇಳಿದರು. ವಿದ್ಯಾರ್ಥಿಗಳು ʻಅದು ಖಾಲಿಯಾಗಿದೆʼ ಎಂದರು. ಸುಧೀಂದ್ರ ಪ್ರಸಾದ್‌ ಅವರು ಅದಕ್ಕೆ ಕೆಲವು ಕಲ್ಲುಗಳನ್ನು ಹಾಕಿ ತುಂಬಿಸಿದರು. ಆ ಬಳಿಕ ಕೇಳಿದರು: ಈ ಜಾರ್‌ ಫುಲ್‌ ಆಗಿದೆ ಆಲ್ವಾ?

ಆಗ ವಿದ್ಯಾರ್ಥಿಗಳು: ಹೌದು ಸರ್‌ ಫುಲ್‌ ಆಗಿದೆ ಅಂದರು.

ಆಗ ಪ್ರೊಫೆಸರ್‌ ಆ ಜಾರನ್ನು ಸ್ವಲ್ಪ ಶೇಕ್‌ ಮಾಡಿ, ಅದರೊಳಗೆ ಕೆಲವು ಸಣ್ಣ ಕಲ್ಲುಗಳನ್ನು ತುಂಬಿದರು. ವಿದ್ಯಾರ್ಥಿಗಳಿಗೆ ಆಶ್ಚರ್ಯವಾಯಿತು.

ಪ್ರೊಫೆಸರ್‌ ಮತ್ತೆ ಕೇಳಿದರು: ಈಗ ಅದು ತುಂಬಿದೆ ಅನಿಸುತ್ತೆ ಅಲ್ವಾ?
ವಿದ್ಯಾರ್ಥಿಗಳು ಹೌದು ಎಂದರು.

ಪ್ರೊಫೆಸರ್‌ ಮತ್ತೊಮ್ಮೆ ಜಾರನ್ನು ಅಲುಗಾಡಿಸಿ ಸ್ವಲ್ಪ ಮರಳು ತಂದು ಸುರಿದರು. ಅಚ್ಚರಿ ಎಂದರೆ ಅದು ಕೂಡಾ ತುಂಬಿಕೊಂಡಿತು. ಈಗಂತೂ ಫುಲ್‌ ಆಗೇ ಬಿಟ್ಟಿತು ಎಂದು ಮಕ್ಕಳೆಲ್ಲ ಅಭಿಪ್ರಾಯಪಟ್ಟರು.

ಪ್ರೊಫೆಸರ್‌ ಒಂದು ಲೋಟ ನೀರು ತರುವಂತೆ ಒಬ್ಬ ವಿದ್ಯಾರ್ಥಿಗೆ ಸೂಚಿಸಿದರು. ಆತ ತರುತ್ತಿದ್ದಂತೆಯೇ ಅದನ್ನು ಅದರೊಳಗೆ ಸುರಿದರು. ಅದು ಕೂಡಾ ತುಂಬಿಕೊಂಡಿತು.

ವಿದ್ಯಾರ್ಥಿಗಳಿಗೆ ಆಶ್ಚರ್ಯವಾಯಿತು. ನಾವು ಮೊದಲ ಸಲ ಹಾಕಿದ ಕಲ್ಲಿನಿಂದಲೇ ಇಡೀ ಜಾರ್‌ ತುಂಬಿತು ಅಂದುಕೊಂಡಿದ್ದೆವು. ಈಗ ನೋಡಿದರೆ, ಸಣ್ಣ ಕಲ್ಲು, ಮರಳು, ನೀರು ಎಲ್ಲವನ್ನು ಹಾಕಿದರೂ ಇನ್ನೂ ಜಾಗ ಇದೆ ಅಂತಿದೆ ಜಾರು ಅಂತ ಅಚ್ಚರಿಪಟ್ಟರು.

ಆಗ ಪ್ರೊಫೆಸರ್‌ ಇಡೀ ಪ್ರಯೋಗವನ್ನು ವಿವರಿಸಿದರು.
ನೋಡಿ ನಾವು ನಮ್ಮ ಲೈಫಿನಲ್ಲಿ ಜಾರ್‌ನಲ್ಲಿರುವ ದೊಡ್ಡ ಒಂದೆರಡು ಕೆಲಸವನ್ನೋ, ಜವಾಬ್ದಾರಿಯನ್ನೋ ಇಟ್ಟುಕೊಂಡು ಬೇರೆ ವಿಚಾರಗಳಿಗೆ ಜಾಗವೇ ಇಲ್ಲ ಅಂದುಕೊಂಡು ಬಿಟ್ಟಿರುತ್ತೇವೆ. ಆದರೆ, ಗಮನಿಸಿ ನೋಡಿದರೆ ಅವುಗಳ ಜತೆಗೆ ಇನ್ನೂ ಅನೇಕ ವಿಷಯಗಳನ್ನು ಸೇರಿಸಿಕೊಳ್ಳಬಹುದು.

ಇಲ್ಲಿ ನಾವು ಎರಡನೇ ಬಾರಿ ಹಾಕಿದ ಸಣ್ಣ ಸಣ್ಣ ಕಲ್ಲುಗಳಿವೆಯಲ್ಲಾ.. ಇವು ನಾವು ನಮ್ಮ ಪ್ರಧಾನ ಕೆಲಸಗಳ ಜತೆಗೆ ಮಾಡಬಹುದಾದ ಇತರ ಕೆಲಸಗಳು, ನಿಭಾಯಿಸಬಹುದಾದ ಬೇರೆ ಜವಾಬ್ದಾರಿಗಳು, ಸಂಬಂಧಗಳು.

ಮೂರನೇ ಬಾರಿ ಹಾಕಿದ ಮರಳು ಇದೆಯಲ್ಲಾ.. ಇದು ನಾವು ನಮಗಾಗಿ ಸಮಯ ಮಾಡಿಕೊಳ್ಳಬೇಕಾದ ಸಣ್ಣ ಪುಟ್ಟ ಸಂಗತಿಗಳು. ಅದು ನಾವು ನಮ್ಮ ಹವ್ಯಾಸಗಳನ್ನು ಬೆಳೆಸಲು ಮಾಡುವ ಪ್ರಯತ್ನ ಇರಬಹುದು, ಕುಟುಂಬದೊಂದಿಗೆ ಕಳೆಯುವ ಕ್ಷಣಗಳಿರಬಹುದು, ನಮ್ಮ ಮನಸ್ಸನ್ನು ಪ್ರಫುಲ್ಲಿತಗೊಳಿಸುವ ಸಂಗತಿಗಳಿರಬಹುದು.

ನಿಜವೆಂದರೆ, ಇಷ್ಟೆಲ್ಲ ಮಾಡಿದರೂ ಇನ್ನೂ ಉಳಿದಿರುತ್ತದಲ್ಲ.. ಸಮಯ ಅದು ನಮಗೇ ನಾವು ನೀಡಬಹುದಾದ ಮೌನಕಾಲ. ಸುಮ್ಮನೆ ನಾವೇ ಇದ್ದುಬಿಡುವ ಅಂತರಂಗವನ್ನು ಅವಲೋಕಿಸುವ ಸಮಯ.

ಇಷ್ಟು ಹೇಳಿ ಪ್ರೊಫೆಸರ್‌ ಮೌನವಾದರು. ಎಲ್ಲರ ಮನಸಿನೊಳಗೂ ಅವರು ಹೇಳುತ್ತಿದ್ದ ವಿಚಾರಗಳು ಮೆಲ್ಲಗೆ ಇಂಗುತ್ತಿದ್ದವು.

ಇದನ್ನೂ ಓದಿ : Motivational story : ಮುಖ್ಯ ಆಗುವುದು ಯಾವುದು? ನಮಗಿರುವ ಜ್ಞಾನವೋ? ನಮ್ಮ ನಡವಳಿಕೆಯೋ?

Exit mobile version