ಕೃಷ್ಣ ಭಟ್ ಅಳದಂಗಡಿ- motivational story
ಕಾಶಿ ಸಂಸ್ಥಾನವನ್ನು ಬ್ರಹ್ಮದತ್ತನೆಂಬ ಮಹಾರಾಜನು ಆಳುತ್ತಿದ್ದ ಕಾಲವದು. ಅವನ ಆಸ್ಥಾನದಲ್ಲಿ ಪರಮ ಜ್ಞಾನಿಯಾದ ದೇವದತ್ತ ಎಂಬ ವಿದ್ವಾಂಸರಿದ್ದರು. ರಾಜ ಅವರಿಗೆ ಅತ್ಯುನ್ನತವಾದ ಗೌರವವನ್ನು ನೀಡುತ್ತಿದ್ದ. ಅವರ ಮಾತನ್ನು ವೇದವಾಕ್ಯ ಎಂಬಂತೆ ಪಾಲಿಸುತ್ತಿದ್ದ. ಇಂಥ ಜ್ಞಾನಿಗಳು ಆಸ್ಥಾನದಲ್ಲಿರುವುದೇ ರಾಜ್ಯದ ಭಾಗ್ಯ ಎನ್ನುತ್ತಿದ್ದ.
ಅದೊಂದು ದಿನ ಆಚಾರ್ಯ ದೇವದತ್ತರು ಆಸ್ಥಾನದಿಂದ ಮನೆಗೆ ಹೊರಟಿದ್ದರು. ಅವರು ಸಾಗುವ ದಾರಿಯಲ್ಲೇ ಬಿಗಿಭದ್ರತೆಯ ಖಜಾನೆ ಇತ್ತು. ಅದಕ್ಕೊಬ್ಬ ಕಾವಲುಗಾರ. ದೇವದತ್ತರು ಮನೆಗೆ ಹೋಗುತ್ತಲೇ ಖಜಾನೆ ಕಡೆಗೆ ಹೋದರು. ಕಾವಲುಗಾರ ಭಕ್ತಿಯಿಂದ ಕೈಮುಗಿದು ಅವರನ್ನು ಒಳಗೆ ಬಿಟ್ಟ. ಒಳಗೆ ಹೋದ ದೇವದತ್ತರು ಒಂದು ಬಂಗಾರದ ನಾಣ್ಯವನ್ನು ತೆಗೆದುಕೊಂಡು ಹೊರಬಿದ್ದರು.
ಕಾವಲುಗಾರನಿಗೆ ಆಶ್ಚರ್ಯವಾಯಿತು.`ʻಇಂಥ ಶ್ರೇಷ್ಠರಾದ ದೇವದತ್ತರು ಯಾರಿಗೂ ಹೇಳದೆ ಖಜಾನೆಯಿಂದ ನಾಣ್ಯ ತೆಗೆದುಕೊಂಡು ಹೋದದ್ದು ಯಾಕೆ? ಅವರು ನಾಣ್ಯವನ್ನು ತೆಗೆದುಕೊಂಡು ಹೋಗಿದ್ದಾರೆಂದರೆ ಏನೋ ಕಾರಣವಿರಲೇಬೇಕು. ಏನಾದರೂ ಅವಸರವಿತ್ತೋ ಏನೋ’ ಎಂದು ಅಂದುಕೊಂಡ. ದೇವದತ್ತರು ನಾಣ್ಯ ತೆಗೆದುಕೊಂಡು ಹೋಗಿದ್ದಾರೆ ಎಂದು ಬರೆದಿಟ್ಟ.
ಮರುದಿನವೂ ದೇವದತ್ತರು ಖಜಾನೆಗೆ ಹೋಗಿ ಅದೇ ರೀತಿ ಮಾಡಿದರು. ಆಗ ಖಜಾನೆ ಕಾವಲುಗಾರನಿಗೆ ನಿಲ್ಲಿಸಿ ಕೇಳೇ ಬಿಡೋಣ ಅನಿಸಿತು. ಆದರೂ ತಾಳ್ಮೆ ವಹಿಸಿದ. ದೊಡ್ಡವರು ಏನೂ ಉದ್ದೇಶವಿಲ್ಲದೆ ಹಾಗೆ ಮಾಡಲಾರರು ಎಂದು ಸಮಾಧಾನ ಮಾಡಿಕೊಂಡ.
ಮೂರನೇ ದಿನವೂ ದೇವದತ್ತರು ಖಜಾನೆಯನ್ನು ಪ್ರವೇಶಿಸಿದರು. ಈ ಬಾರಿ ಒಂದು ನಾಣ್ಯದ ಬದಲು ಒಂದು ಮುಷ್ಠಿ ನಾಣ್ಯವನ್ನು ತೆಗೆದು ಶಲ್ಯದಲ್ಲಿ ಕಟ್ಟಿಕೊಂಡು ಹೊರಟರು. ಈಗ ಕಾವಲುಗಾರನಿಗೆ ತಡೆಯಲಾಗಲಿಲ್ಲ. ಅವನು ಕೂಡಲೇ ದೇವದತ್ತರನ್ನು ಹಿಡಿದು ತಂದು ರಾಜರ ಮುಂದೆ ನಿಲ್ಲಿಸಿದ.
ಕಾವಲುಗಾರ ಹೇಳಿದ ಕಥೆ ಕೇಳಿ ಎಲ್ಲರಿಗೂ ಆಶ್ಚರ್ಯವಾಯಿತು. ಪರಮ ಸಾಧ್ವಿಗಳಾದ ಆಚಾರ್ಯರು ಹೀಗೆ ಮಾಡಿದರೇ ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡರು.
ರಾಜ ಬ್ರಹ್ಮದತ್ತನಿಗೂ ಸಿಕ್ಕಾಪಟ್ಟೆ ಸಿಟ್ಟುಬಂತು. `ʻʻಆಚಾರ್ಯರೇ ನೀವು ಮಹಾಪರಾಧವನ್ನು ಮಾಡಿದ್ದೀರಿ. ಕಳವು ಮಾಡಿದ್ದೀರಿ ಎಂದರೆ ನೀವು ಇದು ಕಳವಲ್ಲ ಎಂದು ವಾದಿಸಿ ಗೆಲ್ಲಬಹುದು. ಆದರೆ, ನಮ್ಮೆಲ್ಲರ ನಂಬಿಕೆಗೆ ದೊಡ್ಡ ದ್ರೋಹವನ್ನು ಮಾಡಿದ್ದೀರಿ. ಇದಕ್ಕಾಗಿ ನೀವು ಶಿಕ್ಷೆ ಅನುಭವಿಸಬೇಕಾಗುತ್ತದೆ” ಎಂದು ಹೇಳಿದ. ತನ್ನ ಸೈನಿಕರನ್ನು ಕರೆದು, ಇವರು ಖಜಾನೆಯಿಂದ ಯಾರಿಗೂ ಹೇಳದೆ ಹಣ ತೆಗೆದುಕೊಂಡಿರುವುದರಿಂದ ಅವರ ಬೆರಳುಗಳನ್ನು ಕತ್ತರಿಸಿ ಎಂದು ಆದೇಶ ನೀಡಿದ.
ಈ ರಾಜಾಜ್ಞೆಯನ್ನು ಕೇಳಿದ ಆಚಾರ್ಯ ದೇವದತ್ತರು ಮುಗುಳ್ನಕ್ಕರು. ಆಗ ರಾಜಾ ಬ್ರಹ್ಮದತ್ತ ಕೇಳಿದ: ನಿಮಗೆ ಶಿಕ್ಷೆ ವಿಧಿಸಿದ ಈ ಹೊತ್ತಲ್ಲೂ ಯಾಕೆ ನಗುತ್ತಿದ್ದೀರಿ?
ಅದಕ್ಕೆ ಆಚಾರ್ಯ ದೇವದತ್ತರು ಹೇಳಿದರು: ರಾಜಾ, ನಾನು ಶ್ರೀಮಂತನಾಗಬೇಕು ಎನ್ನುವ ಕಾರಣಕ್ಕೋ, ಏನೋ ಕಷ್ಟವಾಗಿದೆ ಎಂಬ ಕಾರಣಕ್ಕೋ ಖಜಾನೆಯಿಂದ ಹಣ ತೆಗೆದಿಲ್ಲ. ಈ ರಾಜ್ಯ ನಾನೊಬ್ಬ ಮಹಾವಿದ್ವಾಂಸನೆಂದು ಗೌರವಿಸುತ್ತದೆಯೋ ಅಥವಾ ನಾನೊಬ್ಬ ಒಳ್ಳೆಯ ಮನುಷ್ಯ ಎಂಬ ಕಾರಣಕ್ಕೆ ಗೌರವಿಸುತ್ತದೋ ಎನ್ನುವುದನ್ನು ಪರೀಕ್ಷೆ ಮಾಡಲು ಈ ರೀತಿ ಮಾಡಿದೆ. ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನೀನು ಅಥವಾ ಈ ರಾಜ್ಯ ನನ್ನನ್ನು ನನ್ನ ಜ್ಞಾನಕ್ಕಾಗಿ ಗೌರವಿಸುವುದೇ ಆದರೆ ಆವತ್ತಿಗೂ ಇವತ್ತಿಗೂ ನನ್ನ ಜ್ಞಾನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಬದಲಾಗಿರುವುದು ನನ್ನ ನಡವಳಿಕೆ. ನಾನು ಕಳವು ಮಾಡಿದಾಗ ನನ್ನ ಮೇಲಿನ ನಂಬಿಕೆ, ಗೌರವ ಕುಸಿಯಿತು. ಈ ಹೊತ್ತಿನಲ್ಲಿ ನನ್ನ ಯಾವ ಜ್ಞಾನವೂ ಲೆಕ್ಕಕ್ಕೆ ಬರಲಿಲ್ಲ. ಯಾವನೇ ವ್ಯಕ್ತಿ ಎಷ್ಟೇ ದೊಡ್ಡವನಾದರೂ ಅವನಲ್ಲಿ ಒಳ್ಳೆಯತನ, ಪ್ರಾಮಾಣಿಕತೆ, ಸಹೃದಯತೆ ಇಲ್ಲದೆ ಹೋದರೆ ಅವನು ಜನರ ಮನಸಿನಲ್ಲಿ ಸದ್ಭಾವನೆಯನ್ನು ಉಳಿಸಿಕೊಳ್ಳುವುದಿಲ್ಲ ಎನ್ನುವುದನ್ನು ಸಾಬೀತು ಮಾಡಲು ಹೀಗೆ ಮಾಡಿದೆ.. ತಪ್ಪಾಗಿದ್ದರೆ ಕ್ಷಮೆ ಇರಲಿ.
ಆಗ ರಾಜ ಹೇಳಿದ: ಹೌದು ಆಚಾರ್ಯರೇ, ಕೇವಲ ಪ್ರತಿಭೆ, ಬುದ್ಧಿವಂತಿಕೆ, ಜ್ಞಾನದಿಂದ ಮನುಷ್ಯ ದೊಡ್ಡವನಾಗುವುದಿಲ್ಲ. ನೈತಿಕತೆ, ಒಳ್ಳೆತನಗಳು ಇದ್ದಾಗ ಮಾತ್ರ ಅದಕ್ಕೆ ಗೌರವ ದೊರೆಯುವುದು. ನಮ್ಮ ಪ್ರಜೆಗಳಿಗೆ ಒಳ್ಳೆಯ ಪಾಠವನ್ನೇ ಮಾಡಿದಿರಿ.
ಕೊನೆಗೆ ರಾಜ ದೇವದತ್ತರ ಕ್ಷಮೆ ಕೇಳಿ ಬಂಧಮುಕ್ತಗೊಳಿಸಿದ. ಅಷ್ಟು ಹೊತ್ತಿಗೆ ಖಜಾನೆಯ ಕಾವಲುಗಾರ ಬಂದು, ʻಕ್ಷಮಿಸಿ ಆಚಾರ್ಯರೇ’ ಅಂದ. ಆಗ ದೇವದತ್ತರು: ನೀನು ಕ್ಷಮೆ ಕೇಳಬೇಕಾಗಿಲ್ಲ. ನೀನು ನಿನ್ನ ಕರ್ತವ್ಯವನ್ನು ಸರಿಯಾಗಿ ಮಾಡಿದ್ದಿ. ನನ್ನ ಮೇಲಿನ ಪ್ರಭಾವಳಿಗಳ ಕಾರಣಕ್ಕೆ ಎರಡು ದಿನ ವಿನಾಯಿತಿ ಕೊಟ್ಟಿದ್ದಿ. ಆದರೆ, ಬಳಿಕ ಮನುಷ್ಯ ಎಷ್ಟೇ ದೊಡ್ಡವನಾದರೂ ಇಂಥ ವರ್ತನೆ ಸಹಿಸಲಾಗದು ಎಂದು ನನಗೆ ತೋರಿಸಿಕೊಟ್ಟಿ. ಶಹಭಾಷ್ ಎಂದರು.
ಇದನ್ನೂ ಓದಿ | Motivational story | ಆ ಅಜ್ಜಿಗೆ ಮತ್ತು ಪುಟ್ಟ ಮಗುವಿಗೆ ಆವತ್ತು ದೇವರು ಸಿಕ್ಕಿದ