ಕೃಷ್ಣ ಭಟ್ ಅಳದಂಗಡಿ- Motivational story
ವಿಶ್ವನಾಥ್ ಒಬ್ಬ ಪ್ರಗತಿಪರ ಕೃಷಿಕನಾಗಿ ನಾಡಿನ ಗಮನ ಸೆಳೆದವರು. ಅವರು ಬೆಳೆಯುವ ಮೆಕ್ಕೆಜೋಳಕ್ಕೆ ಎಲ್ಲೆಡೆ ಭಾರಿ ಬೇಡಿಕೆ. ಕೃಷಿ ಪಂಡಿತ, ಸೂಪರ್ ಸ್ಟಾರ್ ರೈತ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಪ್ರತಿ ವರ್ಷವೂ ಅವರ ಹೊಲದಲ್ಲಿ ಬೆಳೆದ ಜೋಳದ ತೆನೆಗೆ ಪ್ರಶಸ್ತಿಗಳು ಬರುತ್ತಿದ್ದವು. ರುಚಿ, ಆಕಾರ, ಗಾತ್ರ, ಸೌಂದರ್ಯ ಎಲ್ಲದರಲ್ಲೂ ಅದು ಆಕರ್ಷಕವೇ ಆಗಿತ್ತು.
ನಾಡಿನ ಹಲವು ಪತ್ರಿಕೆಗಳು, ಟಿವಿಗಳಲ್ಲಿ ಅವರ ಸಂದರ್ಶನ ಪ್ರಕಟವಾಗಿತ್ತು. ಅವರು ಹೇಗೆ ಬೆಳೆಯುತ್ತಾರೆ, ಎಲ್ಲಿಂದ ಬೀಜ ತರುತ್ತಾರೆ, ಮಾರುಕಟ್ಟೆ ಹೇಗೆ, ಬೇಡಿಕೆಯನ್ನು ಹೇಗೆ ಪೂರೈಸುತ್ತಾರೆ ಎಂಬ ಬಗ್ಗೆ ಹಲವು ಹಲವು ಪ್ರಶ್ನೆಗಳನ್ನು ಕೇಳಿ ಲೇಖನ, ಎಪಿಸೋಡ್‍ಗಳನ್ನು ಮಾಡಿದ್ದರು.
ಅದೊಂದು ಬಾರಿ ಒಬ್ಬ ವರದಿಗಾರ ಕುತೂಹಲಕಾರಿಯಾದ ಪ್ರಶ್ನೆಯನ್ನು ಕೇಳಿದ: ವಿಶ್ವನಾಥ್ ಅವರೇ ಪ್ರತಿ ವರ್ಷವೂ ನೀವೇ ನಂಬರ್ ಒನ್ ಆಗುತ್ತೀರಲ್ಲಾ.. ಇದರ ರಹಸ್ಯವೇನು ಅಂತ.
ವಿಶ್ವನಾಥ್ ಸ್ವಲ್ಪ ಹೊತ್ತು ಯೋಚಿಸಿ ಉತ್ತರಿಸಿದರು: ನಾನು ಹೇಗೆ ಬೆಳೆಯುತ್ತೇನೆ, ಎಲ್ಲಿಂದ ಬೀಜ ತರುತ್ತೇನೆ ಎನ್ನುವ ಬಗ್ಗೆ ಈಗಾಗಲೇ ಹಲವು ಕಡೆಗಳಲ್ಲಿ ಹೇಳಿದ್ದೇನೆ. ಇದಕ್ಕೆ ಸಂಬಂಧಪಟ್ಟ ಇನ್ನೊಂದು ಇಂಟರೆಸ್ಟಿಂಗ್ ವಿಷಯ ಹೇಳುತ್ತೇನೆ: ನಾನು ನನ್ನ ಹೊಲದಲ್ಲಿ ಬೆಸ್ಟ್ ಕ್ವಾಲಿಟಿ ಬೀಜ ಬಿತ್ತನೆ ಮಾಡುತ್ತೇನಲ್ಲ. ಅದೇ ಬೀಜಗಳನ್ನು ನಾನು ನನ್ನ ಸುತ್ತಮುತ್ತಲಿನ ರೈತರಿಗೂ ಕೊಡುತ್ತೇನೆ!
ಆಗ ವರದಿಗಾರ ಕೇಳಿದ: ನೀವು ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಭಾಗವಹಿಸುವವರು. ಹಾಗಿರುವಾಗ ಒಳ್ಳೆಯ ಗುಣಮಟ್ಟದ ಬೀಜಗಳನ್ನು ಬೇರೆಯವರ ಜತೆ ಹಂಚಿಕೊಂಡಾಗ ನಿಮಗೆ ತೊಂದರೆ ಆಗುವುದಿಲ್ಲವೇ?
ವಿಶ್ವನಾಥ್ ಉತ್ತರಿಸಿದರು: ನಿಮಗೆ ಒಂದು ವಿಷಯ ಗೊತ್ತಿರಬಹುದು.. ಪರಾಗಸ್ಪರ್ಶ ಆಗುವುದು ಒಂದು ತೆನೆಯಿಂದ ಇನ್ನೊಂದು ತೆನೆಗೆ. ಅದು ಗಾಳಿಯಲ್ಲಿ ಹಾರಿ ಬಂದು ಇನ್ನೊಂದು ಕಡೆ ಕುಳಿತುಕೊಳ್ಳುತ್ತದೆ. ಅದೇ ಇನ್ನೊಂದು ಹೊಲದಿಂದಲೂ ಬಂದು ಸೇರಬಹುದು. ನನ್ನ ಹೊಲದ ಜೋಳದ ತೆನೆ ಚೆನ್ನಾಗಿರಬೇಕು ಎಂದರೆ ನನ್ನ ಪಕ್ಕದ ಹೊಲದ ತೆನೆಗಳೂ ಚೆನ್ನಾಗಿರಬೇಕು. ನನ್ನ ಪಕ್ಕದ ಹೊಲದವರ ಬೀಜಗಳು ಕಳಪೆಯಾದರೆ ಕ್ರಾಸ್‍ಪಾಲಿನೇಷನ್ ಮೂಲಕ ನನ್ನ ಹೊಲದ ಮೇಲೂ ಪರಿಣಾಮ ಬೀರುತ್ತದೆ. ಉತ್ತಮ ಜೋಳ ಬೆಳೆಯುವ ಉದ್ದೇಶ ನನಗಿರುವುದೇ ಆದರೆ, ಪಕ್ಕದವರೂ ಉತ್ತಮ ಬೆಳೆಯನ್ನೇ ಬೆಳೆಯುವಂತೆ ಸಹಾಯ ಮಾಡುವುದು ನನ್ನ ಕರ್ತವ್ಯವಾಗಿರುತ್ತದೆ ಎಂದರು.
ರೈತನ ಹೃದಯಂಗಮ ಮಾತುಗಳನ್ನು ವರದಿ ಮಾಡಿದ ವರದಿಗಾರ ಕೊನೆಯಲ್ಲಿ ಎರಡು ಸಾಲು ಬರೆದಿದ್ದ: ನಾವೊಂದು ಅರ್ಥಪೂರ್ಣ ಬದುಕನ್ನು ನಡೆಸಲು ನಿರ್ಧರಿಸಿದ್ದೇವೆ ಎಂದರೆ ನಮ್ಮ ಆಸುಪಾಸಿನವರ ಬದುಕನ್ನೂ ಹಸನುಗೊಳಿಸುವ ಸಣ್ಣ ಜವಾಬ್ದಾರಿಯನ್ನು ನಾವು ಹೊತ್ತುಕೊಳ್ಳಬೇಕಾಗುತ್ತದೆ. ನಾನೊಬ್ಬ ಉತ್ತಮ ರೈತ ಎಂದು ಗುರುತಿಸಿಕೊಂಡರೆ ಸಾಲದು, ಉಳಿದವರೂ ಸಶಕ್ತರಾಗಬೇಕು ಎನ್ನುವ ಧ್ಯೇಯ ವಿಶ್ವನಾಥ ಅವರದಾಗಿತ್ತು.
ಇದನ್ನೂ ಓದಿ | Motivational story | ಈಜು ಕಲೀಬೇಕು ಎಂದರೆ ಯಾರಾದರೂ ನಮ್ಮನ್ನು ನೀರಿಗೆ ದೂಡಲೇಬೇಕು!