ಕೃಷ್ಣ ಭಟ್ ಅಳದಂಗಡಿ- motivational story
ವಿಶ್ವನಾಥ್ ಅವರು ಯಾರಿಗೋ ಹಣ ನೀಡಬೇಕಾಗಿತ್ತು. ಹೀಗಾಗಿ ಬ್ಯಾಂಕ್‍ನಿಂದ ಕ್ಯಾಶ್ ವಿತ್‍ಡ್ರಾ ಮಾಡಿಕೊಳ್ಳಲು ಹೋಗಿದ್ದರು. ವಿತ್‍ಡ್ರಾವಲ್ ಸ್ಲಿಪ್‍ನಲ್ಲಿ 1,00,000 ರೂ. ಎಂದು ಬರೆದು ಎರಡೂ ಕಡೆ ಸಹಿ ಮಾಡಿಕೊಟ್ಟರು. ಕ್ಯಾಶಿಯರ್ ಇವರೇ ವಿಶ್ವನಾಥ್ ಎನ್ನುವುದನ್ನು ಖಚಿತ ಮಾಡಿಕೊಂಡು ಹಣವನ್ನು ಕೊಟ್ಟರು.
ಕ್ಯಾಶಿಯರ್ ಕೊಟ್ಟ ಹಣವನ್ನು ಅಲ್ಲೇ ಪಕ್ಕದಲ್ಲಿ ನಿಂತು ಲೆಕ್ಕ ಮಾಡಿದರೆ ಅದರಲ್ಲಿ 1,00,000 ರೂ. ಬದಲು 1,20,000 ರೂ. ಇದೆ! ವಿಶ್ವನಾಥ್ ಕ್ಯಾಶಿಯರ್ ಮುಖವನ್ನೊಮ್ಮೆ ನೋಡಿದರು, ಇದ್ಯಾವುದರ ಪರಿವೆಯೇ ಇಲ್ಲದೆ ಅವರು ಇನ್ನೊಂದು ವ್ಯವಹಾರದಲ್ಲಿ ನಿರತರಾಗಿದ್ದರು. ವಿಶ್ವನಾಥ್ ಮೆಲ್ಲಗೆ ಹಣವನ್ನು ಬ್ಯಾಗ್‍ನಲ್ಲಿಟ್ಟು ಜಾಗ ಖಾಲಿ ಮಾಡಿದರು.
ನಾನು ಈ ರೀತಿ ಮಾಡಿದ್ದು ಸರಿಯಾ, ತಪ್ಪಾ ಎನ್ನುವ ಪ್ರಶ್ನೆಯೊಂದು ಅವರ ಮನಸ್ಸನ್ನು ಕೊರೆಯಲು ಆರಂಭಿಸಿತು. ಒಮ್ಮೆ ಈ ಹಣವನ್ನು ಹಿಂದಿರುಗಿಸಬೇಕು ಎಂದು ಮನಸು ಹೇಳಿದರೆ, ಇನ್ನೊಮ್ಮೆ ಬೇರೆ ಯಾರಿಗಾದರೂ ನಾನು ಈ ತರ ತಪ್ಪಿ ಹೆಚ್ಚು ಹಣ ಕೊಟ್ಟರೆ ಅವರು ಹಿಂದಿರುಗಿಸುತ್ತಿದ್ದರಾ ಎನ್ನುವ ಪ್ರಶ್ನೆ ಕಾಡಿತು. ಯಾರು ಕೊಡ್ತಾರೆ? ಯಾರೂ ಕೊಡುವುದಿಲ್ಲ ಎಂದು ಮನಸು ಹೇಳಿತು. ಹಾಗಾಗಿ ಕೊಡುವುದು ಬೇಕಿಲ್ಲ ಎಂದು ವಿಶ್ವನಾಥ್ ತೀರ್ಮಾನ ಮಾಡಿದರು.
ಸ್ವಲ್ಪ ಹೊತ್ತಿನಲ್ಲೇ ಮತ್ತೆ ಹಣದ್ದೇ ಯೋಚನೆ. ಕ್ಯಾಶಿಯರ್ ಈಗ ಈ ಹಣವನ್ನು ತನ್ನ ಕೈಯಿಂದ ಕಟ್ಟಬೇಕಾಗುತ್ತದೆ. ಅವನ ಹಣಕಾಸು ಪರಿಸ್ಥಿತಿ ಹೇಗಿದೆಯೋ ಎಂಬ ಯೋಚನೆ ಕಾಡಿತು. ಮತ್ತೊಂದು ಕ್ಷಣ, ಬ್ಯಾಂಕ್‍ನವರಿಗೆ ಏನು ಒಳ್ಳೆಯ ಸಂಬಳ ಬರ್ತದೆ, ಇರ್ಲಿ ಬಿಡು, ಅದೃಷ್ಟದ ಹಾಗೆ ಸಿಕ್ಕಿದ ಹಣವನ್ನು ಯಾಕೆ ಕೊಡಬೇಕು ಎಂದಿತು ಮನಸು.
ಬ್ಯಾಂಕ್‍ನಲ್ಲಿ ದೊಡ್ಡ ಮೊತ್ತದ ವ್ಯವಹಾರ ನಡೆಸೋರು ಕಡಿಮೆ. ಹಾಗಾಗಿ ನನಗೇ ಹೆಚ್ಚು ಹಣ ಹೋಗಿರಬಹುದು ಎಂಬುದು ತಿಳಿದುಬಿಟ್ಟರೆ, ನನ್ನನ್ನೇ ಕೇಳಿಬಿಟ್ಟರೆ ಎಂಬ ಆತಂಕವೂ ಕಾಡಿತು. ಆದರೆ, ಒಮ್ಮೆ ಹಣ ನನ್ನ ಕೈಗೆ ಬಂದರೆ ಅದು ನನ್ನದೇ ಅಲ್ವಾ ಎಂದು ಮನಸ್ಸು ಮತ್ತೊಂದು ದಿಕ್ಕಿನಿಂದ ಯೋಚಿಸಿತು. ಹೀಗೆ ಹಲವು ಬಾರಿ ತಾಕಲಾಟಗಳ ನಡುವೆ ಸಂಜೆ ನಾಲ್ಕು ಗಂಟೆ ದಾಟಿತ್ತು.
ಆಗ ಮತ್ತೊಮ್ಮೆ ಯೋಚನೆ ಮಾಡಿದರು ವಿಶ್ವನಾಥ್. ಆಗ ಮನಸು ಹೇಳಿತು, ಇನ್ನೊಬ್ಬರ ತಪ್ಪಿನ ಲಾಭವನ್ನು ಪಡೆಯುವುದು ಸರಿಯಲ್ಲ. ಈ 20,000 ರೂ. ನನ್ನ ಪ್ರಾಮಾಣಿಕತೆಗೆ ಎದುರಾಗಿರುವ ಒಂದು ಪರೀಕ್ಷೆ ಅಷ್ಟೆ. ಇದರಲ್ಲಿ ಗೆಲ್ಲಬೇಕಾ, ಸೋಲಬೇಕಾ ಎನ್ನುವುದಷ್ಟೇ ಮುಖ್ಯ ಅಂದಿತು. ವಿಶ್ವನಾಥ್ ಮುಂದೆ ಒಂದು ಕ್ಷಣವೂ ಯೋಚಿಸದೆ ಬ್ಯಾಂಕ್‍ಗೆ ಹೋದರು.
ಅಲ್ಲಿ ಕ್ಯಾಶಿಯರ್ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಮೈ ತುಂಬ ಬೆವರಿತ್ತು. ವಿಶ್ವನಾಥ್ 20,000 ರೂ.ವನ್ನು ಕೌಂಟರ್ ನಲ್ಲಿ ಇಟ್ಟು ವಿಷಯ ತಿಳಿಸಿದರು. ಕ್ಯಾಶಿಯರ್ ಅಷ್ಟೂ ಹಣವನ್ನು ಬಾಚಿ ತಬ್ಬಿಕೊಂಡು ವಸ್ತುಶಃ ಕಣ್ಣೀರು ಹಾಕಿದರು.
“ನೀವು ಈ ಹಣ ತಂದು ಕೊಡದಿದ್ದರೆ ನಾನು ತುಂಬ ಕಷ್ಟಕ್ಕೆ ಬೀಳುತ್ತಿದ್ದೆ ಸರ್. ಇವತ್ತು ತುಂಬ ದೊಡ್ಡ ಮೊತ್ತದ ವ್ಯವಹಾರಗಳೇ ನಡೆದಿದ್ದವು. ಹಾಗಾಗಿ ಯಾರಿಗೆ ಹೆಚ್ಚು ಹಣ ಹೋಗಿದೆ ಎನ್ನುವುದು ಗೊತ್ತೇ ಆಗುತ್ತಿರಲಿಲ್ಲ. ನೀವು ತಂದು ಕೊಡದೆ ಇದ್ದರೆ ನನ್ನ ಸಂಬಳದಲ್ಲಿ ಮುರಿಯುತ್ತಿದ್ದರು. ಮೊದಲೇ ಮಕ್ಕಳ ಸ್ಕೂಲ್ ಫೀಗೆ ಸಾಲ ಮಾಡಿದ್ದೇನೆ. ಇದನ್ನೂ ಮುರಿದುಕೊಂಡರೆ ದೊಡ್ಡ ಸಮಸ್ಯೆ ಆಗುತ್ತಿತ್ತು. ಥ್ಯಾಂಕ್ಸ್ ಸರ್. ಹತ್ತು ನಿಮಿಷ ನಿಲ್ಲಿ, ಕೆಲಸ ಮುಗಿಸಿ ಬರ್ತೇನೆ. ಒಂದು ಕಾಫಿ ಕುಡಿಯೋಣ” ಎಂದರು ಕ್ಯಾಶಿಯರ್.
ಆಗ ವಿಶ್ವನಾಥ್ ಹೇಳಿದರು: ಅದೆಲ್ಲ ಏನೂ ಬೇಡ. ಇವತ್ತು ನನ್ನ ಲೆಕ್ಕದಲ್ಲಿ ನಿಮಗೆ ಟ್ರೀಟ್. ಬೇಕಿದ್ದರೆ ನಮ್ಮಿಬ್ಬರೂ ಮನೆಯವರನ್ನೂ ಕರೆಯೋಣ ಅಂದರು.
ಕ್ಯಾಶಿಯರ್‍ಗೆ ಆಶ್ಚರ್ಯ. ಅಯ್ಯೋ ನೀವ್ಯಾಕೆ ಟ್ರೀಟ್ ಕೊಡಬೇಕು.. ನಾನಲ್ವೇ ಅಂದರು.
ಆಗ ವಿಶ್ವನಾಥ್ ಹೇಳಿದರು: ನೀವು 20,000 ರೂ. ಜಾಸ್ತಿ ಕೊಟ್ಟಿದ್ದರಿಂದ ಇವತ್ತು ನಾನೆಷ್ಟು ಆಸೆಬುರುಕ ಎನ್ನುವುದು ನನಗೇ ಗೊತ್ತಾಯಿತು. ಕೊನೆಗೂ ನಾನು ಈ ದುರಾಸೆಗಳನ್ನು ಮೀರಬಲ್ಲೆ ಎನ್ನುವುದು ಕೂಡಾ ಪ್ರೂವ್ ಆಯಿತು. ಈ ತಾಕಲಾಟದಲ್ಲಿ ಕೊನೆಗೂ ನಾನು ಗೆದ್ದಿದ್ದೇನೆ. ಇಂಥಹುದೊಂದು ಅವಕಾಶ ಮಾಡಿಕೊಟ್ಟಿದ್ದು ನೀವು. ಅದಕ್ಕೆ ಕೃತಜ್ಞತೆಯಾಗಿ ಈ ಪಾರ್ಟಿ ಎಂದರು ವಿಶ್ವನಾಥ್.
ಹೀಗೂ ಯೋಚಿಸಬಹುದೇ ಎಂದು ಅವಾಕ್ಕಾದರು ಕ್ಯಾಶಿಯರ್.
ಇದನ್ನೂ ಓದಿ | Motivational story | ಆ ಹರಳಿಗಿಂತಲೂ ಅಮೂಲ್ಯವಾದುದು ಶಿಕ್ಷಕಿಯಲ್ಲಿತ್ತು.. ಅದು ಆ ಯುವಕನಿಗೆ ಕಂಡಿತ್ತು!