ಕೃಷ್ಣ ಭಟ್ ಅಳದಂಗಡಿ- motivational story
ವಿಶ್ವನಾಥ ರಾಯರು ಪರಮ ಶ್ರೀಮಂತ. ಹತ್ತಾರು ಕಂಪನಿಗಳ ಒಡೆಯ. ಎಲ್ಲ ಆಸ್ತಿಪಾಸ್ತಿ ಲೆಕ್ಕ ಹಾಕಿದರೆ ಕನಿಷ್ಠ 500 ಕೋಟಿ ಬಾಳುತ್ತಿದ್ದರು. ಅದೊಂದು ದಿನ ರಾಯರು ತಮ್ಮ ವೃತ್ತಿ ಬದುಕಿನಿಂದ ವಿರಾಮ ಪಡೆಯಲು ನಿರ್ಧರಿಸಿದರು. ಮನೆಯವರನ್ನೆಲ್ಲ ಕರೆದು ತೀರ್ಮಾನ ಪ್ರಕಟಿಸಿ ಹೊಣೆಗಾರಿಕೆಗಳನ್ನು ಹಸ್ತಾಂತರಿಸಿದರು.
ನಾಳೆಯಿಂದ ಬದುಕನ್ನು ಇನ್ನಷ್ಟು ಖುಷಿಯಿಂದ ಕಳೆಯಬೇಕು, ಇಷ್ಟು ವರ್ಷ ಹಣದ ಹಿಂದೆಯೇ ಓಡಿದ್ದಾಯಿತು, ಈಗ ಊರು ಸುತ್ತಬೇಕು, ಫ್ರೆಂಡ್ಸ್ ಭೇಟಿ ಆಗಬೇಕು ಅಂದುಕೊಂಡರು.
ಹಾಗೆ ಮಲಗಿಕೊಂಡಾಗಲೇ ಎದೆಯಲ್ಲೇನೋ ಚಳಕ್ಕೆಂದಿತು. ಅಮ್ಮಾ ಅಂದವರೇ ರಾಯರು ಒಂದು ಬದಿಗೆ ತಿರುಗಿದರು. ಅಲ್ಲಿ ದೇವತೆಯೊಬ್ಬ ನಿಂತಿದ್ದ.
ಅವನಂದ: ರಾಯರೇ ನಿಮ್ಮ ಜೀವನ ಮುಗಿಯಿತು. ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ.
ರಾಯರಿಗೆ ವಿಷಯ ಅರ್ಥವಾಯಿತು. ಆದರೂ ಅವರೊಂದು ವಿನಂತಿ ಮಾಡಿದರು. “ದೇವಾ.. ನಾನು ಏನೇನೋ ಆಸೆ ಇಟ್ಟುಕೊಂಡಿದ್ದೆ. ಬದುಕನ್ನು ಚಂದವಾಗಿ ಬದುಕಬೇಕೆಂದು ಬಯಸಿದ್ದೆ. ಎಲ್ಲೆಲ್ಲೋ ತಿರುಗಾಡಬೇಕಿತ್ತು. ಒಂದು ತಿಂಗಳು ಅವಕಾಶ ಕೊಡು. ಜೀವದಾನ ಕೊಡು. ನಾನು ನನ್ನ ಸಮಸ್ತ ಆಸ್ತಿಯನ್ನು ಬರೆದುಕೊಡುತ್ತೇನೆ’ ಅಂದರು.
ದೇವರು ಒಪ್ಪಲಿಲ್ಲ. ‘ನನ್ನ ಕುಟುಂಬದವರನ್ನೊಮ್ಮೆ ಕಣ್ಣಾರೆ ನೋಡಬೇಕು. ನನ್ನ ಬ್ಯುಸಿ ಮಧ್ಯೆ ಅದೂ ಸಾಧ್ಯವಾಗಲಿಲ್ಲ. ಒಮ್ಮೆ ಫ್ರೆಂಡ್ಸ್, ಮನೆಯವರ ಜತೆ ಮನ ಬಿಚ್ಚಿ ಮಾತಾಡೋಕೆ ಒಂದು ಗಂಟೆ ಕೊಡು’ ಎಂದರು.
ದೇವರು ಅದಕ್ಕೂ ಒಪ್ಪಲಿಲ್ಲ. ಕೊನೆಗೆ ಒಂದು ಸಣ್ಣ ವಿದಾಯ ಪತ್ರ ಬರೆಯಲಾದರೂ ಒಂದು ನಿಮಿಷ ಕೊಡು ಎಂದು ಅಂಗಲಾಚಿದರು. ದೇವರಿಗೆ ಏನನಿಸಿತೋ ಏನೊ, ಆಯ್ತು ಅಂದವರೇ ಒಂದು ಸಣ್ಣ ಪೇಪರ್, ಪೆನ್ನು ಕೊಟ್ಟರು.
ವಿಶ್ವನಾಥ ರಾಯರು ಬರೆಯಲು ಶುರು ಮಾಡಿದರು..
ನಾನು ಸಾಕಷ್ಟು ಹಣ ಮಾಡಿದ್ದೇನೆ ಎಂಬ ಹೆಮ್ಮೆ ಇತ್ತು. ಹಣದಿಂದ ಏನನ್ನು ಬೇಕಾದರೂ ಖರೀದಿ ಮಾಡಬಲ್ಲೆ ಎಂಬ ಹುಂಬತನವಿತ್ತು. ಆದರೆ ಎಲ್ಲ ಹಣವನ್ನು ಕೊಡುತ್ತೇನೆ ಎಂದರೂ ಕನಿಷ್ಠ ಒಂದು ಗಂಟೆ ಅವಧಿಯನ್ನು ಖರೀದಿಸಲೂ ನನಗೆ ಸಾಧ್ಯವಾಗುತ್ತಿಲ್ಲ. ಎಲ್ಲರಿಗೆ ವಿದಾಯ ಹೇಳೋ ಈ ಘಳಿಗೆಯಲ್ಲಿ ನಾನು ಹೇಳೋದಿಷ್ಟೆ: ದಯವಿಟ್ಟು ನಿಮ್ಮ ಕುಟುಂಬ, ಸ್ನೇಹಿತರ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಬದುಕಿನ ಪ್ರತಿಯೊಂದು ಕ್ಷಣವನ್ನೂ ಎಂಜಾಯ್ ಮಾಡಿ. ನಿಮಗಿಷ್ಟವಾದ ಜಾಗಗಳಿಗೆ ಹೋಗಿ, ಮನೆ ಮಂದಿ ಜತೆ ಕಾಲ ಕಳೆಯಿರಿ.. ಯಾಕೆಂದರೆ ಇವೆಲ್ಲ ಮತ್ತೆ ಬೇಕೆಂದರೂ ಸಿಗುವುದಿಲ್ಲ.
ಬರೆಯುತ್ತಿದ್ದ ಕೈಗಳು ಹಾಗೇ ನಿಶ್ಚಲವಾದವು.
ಇದನ್ನೂ ಓದಿ| Motivational story: ಒಬ್ಬ ರಂಗುರಂಗಿನ ಬಿಸಿನೆಸ್ ಮ್ಯಾನ್ ಮತ್ತು ಅವನ ನಾಲ್ವರು ಮಡದಿಯರು!