ಕೃಷ್ಣ ಭಟ್ ಅಳದಂಗಡಿ- Motivational story
ವಿಶ್ವನಾಥ ರಾಯರಿಗೆ ಗಾರ್ಡನಿಂಗ್ ಅಂದರೆ ಇಷ್ಟ. ಅವರು ತಮ್ಮ ಸಣ್ಣ ಜಾಗದಲ್ಲೇ ಬೇರೆ ಬೇರೆ ರೀತಿಯ ಗಿಡಗಳನ್ನು ಬೆಳೆಸಿದ್ದರು. ಅವರ ಪಕ್ಕದ ಮನೆಯ ರಮೇಶ್ ಎನ್ನುವ ಯುವಕ ವಿಶ್ವನಾಥ ರಾಯರ ಈ ಹವ್ಯಾಸಕ್ಕೆ ಆಕರ್ಷಿತನಾಗಿ ತಾನೂ ಗಾರ್ಡನ್ ಮಾಡಬೇಕು ಎಂದು ನಿರ್ಧರಿಸಿದ. ವಿಶ್ವನಾಥ ರಾಯರಿಗೆ ಸ್ಪರ್ಧೆ ಒಡ್ಡುವಂತೆ ತಾನು ಎಲ್ಲೆಲ್ಲಿಂದಲೋ ಗಿಡಗಳನ್ನು ತಂದು ನೆಡತೊಡಗಿದ. ಬಣ್ಣ ಬಣ್ಣದ ಹೂವಿನ ಗಿಡಗಳನ್ನು ತಂದು ಕುಂಡಗಳಲ್ಲಿ ಇಟ್ಟ. ದಿನದಿಂದ ದಿನಕ್ಕೆ ರಮೇಶನ ಕೈತೋಟ ಎಲ್ಲರ ಕಣ್ಣಿಗೆ ಹಬ್ಬವಾಗುತ್ತಾ ಸಾಗಿತು.
ಅದೊಂದು ಸಾರಿ ವಿಶ್ವನಾಥ ರಾಯರು ಮತ್ತು ರಮೇಶ್ ಒಂದೇ ರೀತಿಯ ಗಿಡವನ್ನು ತೆಗೆದುಕೊಂಡರು. ಇಬ್ಬರೂ ಒಂದೇ ದಿನ ಗಿಡಗಳನ್ನು ನೆಟ್ಟರು. ತಾನು ನೆಟ್ಟ ಗಿಡ ವಿಶ್ವನಾಥ ರಾಯರ ಗಿಡಕ್ಕಿಂತ ಚೆನ್ನಾಗಿ ಬೆಳೆಯಬೇಕು ಎಂದು ರಮೇಶ್ ಪ್ಲ್ಯಾನ್ ಮಾಡಿದ. ಅದಕ್ಕೆ ಎಲ್ಲೆಲ್ಲಿಂದಲೋ ಸಲಹೆ ಪಡೆದು ಗೊಬ್ಬರ ತಂದು ಹಾಕಿದ. ಬೇಗ ಬೆಳೆಯಲೆಂದು ಸ್ವಲ್ಪ ಜಾಸ್ತಿನೇ ಹಾಕಿದ. ದಿನವೂ ಒಂದರ ಬದಲು ಎರಡು ಹೊತ್ತು ನೀರು ಹಾಕಿದ.
ಇತ್ತ ವಿಶ್ವನಾಥ ರಾಯರು ತಮಗೆ ಎಷ್ಟು ಕೂಡುತ್ತದೋ ಅಷ್ಟರ ಮಟ್ಟಿಗೆ ಆರೈಕೆ ಮಾಡಿದರು. ಅವರಿಗೆ ಹುಡುಗ ತನಗೆ ಸ್ಪರ್ಧೆಗೆ ಬಿದ್ದಿದ್ದಾನೆ ಎಂದು ಗೊತ್ತಿರಲಿಲ್ಲ.
ನೋಡ ನೋಡುತ್ತಿದ್ದಂತೆಯೇ ರಮೇಶನ ತೋಟದ ಗಿಡ ಎತ್ತರೆತ್ತರ ಬೆಳೆಯಿತು. ಅವನಿಗೋ ಒಳಗೊಳಗೆ ಸಂತೋಷ. ವಿಶ್ವನಾಥ ರಾಯರನ್ನು ಮೀರಿಸಿದೆ ಅಂತ. ಅಕ್ಕಪಕ್ಕದ ಮನೆಯವರು ಕೂಡಾ ವಿಶ್ವನಾಥ ರಾಯರ ಗಿಡಕ್ಕಿಂತ ರಮೇಶನ ಗಿಡವೇ ಚೆನ್ನಾಗಿ ಬೆಳೆದಿದೆ ಎಂದೆಲ್ಲಾ ಮಾತನಾಡಿಕೊಂಡರು. ರಮೇಶ ಹೆಮ್ಮೆಯಿಂದ ಬೀಗುತ್ತಿದ್ದ.
ಅದೊಂದು ದಿನ ರಾತ್ರಿ ಭಾರಿ ಗಾಳಿ ಮಳೆ ಸುರಿಯಿತು. ವಿಪರೀತ ಗಾಳಿಗೆ ಮನೆಯ ಮಾಡಿನ ಹಂಚೆಲ್ಲ ಹಾರಿ ಹೋಗುತ್ತದೋ ಎಂಬಂತೆ ದಡಬಡ ಆಯಿತು. ಮರುದಿನ ಬೆಳಗ್ಗೆ ಎದ್ದು ನೋಡಿದರೆ ರಮೇಶ ಹೊಸದಾಗಿ ನೆಟ್ಟಿದ್ದ ಗಿಡ ಬೇರು ¸ಸಮೇತ ನೆಲಕ್ಕೆ ಉರುಳಿತ್ತು. ಅವನು ಕೂಡಲೇ ವಿಶ್ವನಾಥ ರಾಯರ ಗಿಡವನ್ನು ನೋಡಿದ. ಅದು ಏನೂ ಆಗದೆ ಹಾಗೇ ಇತ್ತು. ರಮೇಶನಿಗೆ ತನ್ನ ಗಿಡ ಉರುಳಿದ್ದಕ್ಕಿಂತಲೂ ವಿಶ್ವನಾಥ ರಾಯರ ಗಿಡಕ್ಕೆ ಏನೂ ಆಗದೆ ಇರುವುದೇ ಚಿಂತೆಯಾಗಿತ್ತು.
ಇದೇ ಹೊತ್ತಿಗೆ ವಿಶ್ವನಾಥ ರಾಯರು ತಮ್ಮ ಕೈ ತೋಟಕ್ಕೆ ಬಂದರು. ಅವರು ರಮೇಶನ ಗಿಡ ಮುರಿದ ಬಗ್ಗೆ ಬೇಸರ ಮಾಡಿಕೊಂಡರು. ಅಲ್ಲೇ ಇದ್ದ ರಮೇಶ ಕೇಳಿದ: ನಾನು ಇಷ್ಟೊಂದು ಗೊಬ್ಬರ ಕೊಟ್ಟು ಬೆಳೆಸಿದೆ. ಬೇಗನೆ ಗಟ್ಟಿಮುಟ್ಟಾಗಿ ಬೆಳೆದಿದೆ. ಆದರೂ ಅದು ಉರುಳಿ ಬಿದ್ದಿದ್ದು ಹೇಗೆ?
ಅದಕ್ಕೆ ವಿಶ್ವನಾಥ ರಾಯರು ಹೇಳಿದರು: ನನಗೆ ಇದರ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ನನ್ನ ಪ್ರಕಾರ ಯಾವುದೇ ಗಿಡ ಒಮ್ಮೆಗೇ ವಿಪರೀತವಾಗಿ ಎತ್ತರಕ್ಕೆ ಬೆಳೆಯಬಾರದು. ನಾವು ಈ ಗಿಡವನ್ನು ಎಲ್ಲಿಂದಲೋ ತಂದು ನೆಟ್ಟಿರುತ್ತೇವೆ. ಅದು ಮೊದಲು ಭೂಮಿಗೆ ಹೊಂದಾಣಿಕೆಯಾಗಿ ಬೇರು ಬಿಟ್ಟು ನಿಲ್ಲಬೇಕು. ನಂತರ ಅದರ ಬೆಳವಣಿಗೆಯನ್ನು ಅದೇ ನೋಡಿಕೊಳ್ಳುತ್ತದೆ. ನಾವು ನೆಟ್ಟಕೂಡಲೇ ವಿಪರೀತ ಗೊಬ್ಬರ ಹಾಕಿ ಬೆಳೆಸಿದರೆ ಅದು ಎತ್ತರಕ್ಕೇನೋ ಬೆಳೆಯುತ್ತದೆ, ದಷ್ಟಪುಷ್ಟವಾಗಿಯೂ ಬೆಳೆದೀತು. ಆದರೆ, ಅದನ್ನು ಆಧರಿಸುವ ಬೇರುಗಳೇ ಇನ್ನೂ ಗಟ್ಟಿಯಾಗಿರುವುದಿಲ್ಲ. ಹಾಗಾಗಿ ಅದು ಸಣ್ಣ ಬಿರುಗಾಳಿಗೂ ತಲೆ ಬಾಗಿ ಉರುಳುವ ಅಪಾಯವಿರುತ್ತದೆ. ಬೇರು ಗಟ್ಟಿಯಾಗಿರುವ ಗಿಡ ಯಾವತ್ತೂ ಸಂಪೂರ್ಣವಾಗಿ ಉರುಳಿ ಬೀಳುವ ಅಪಾಯ ಕಡಿಮೆ. ಕೆಲವೊಮ್ಮೆ ಕೊಂಬೆಗಳು ಬಿದ್ದಾವು ಅಷ್ಟೆಎಂದರು.
ರಮೇಶನಿಗೆ ತಾನು ಎಡವಿದ್ದೆಲ್ಲಿ ಎಂದು ಅರ್ಥವಾಯಿತು. ಅಷ್ಟು ಹೊತ್ತಿಗೆ ಅವನ ಪುಟ್ಟ ಮಗಳೂ ಅಲ್ಲಿಗೆ ಬಂದಳು. ಅವನು ಅವಳನ್ನು ತಬ್ಬಿಕೊಂಡ. `ʻʻಹೌದು ಸರ್ ಮೊದಲು ಬೇರುಗಳು ಗಟ್ಟಿಯಾಗಬೇಕು, ನಂತರ ಗಿಡ ಅದರ ಪಾಡಿಗೆ ಬೆಳೆಯುತ್ತದೆ,” ಎಂದು ಜೋರಾಗಿ ಹೇಳಿದ.
ಇದನ್ನೂ ಓದಿ | Motivational story: ಮೂರ್ಖನಾಗಿದ್ದು ಯಾರು? ಅವನಾ? ಇವನಾ?