Site icon Vistara News

Motivational story | ಆ ಕೋಣೆಯಲ್ಲೊಂದು ಹಾವಿತ್ತು, ದೀಪ ಹಿಡಿದುಕೊಂಡು ಹೋದಾಗ ಅದು ಮಾಯವಾಗಿತ್ತು!

rope and snake
https://vistaranews.com/wp-content/uploads/2023/01/Motivational-story-adondu-nadi-theera.mp3
ಸ್ಫೂರ್ತಿ ಕಥೆಯನ್ನು ಕೇಳಿ.. ಕುಸುಮಾ ಆಯರಳ್ಳಿ ಅವರ ಧ್ವನಿಯಲ್ಲಿ

ಕೃಷ್ಣ ಭಟ್‌ ಅಳದಂಗಡಿ- Motivational story
ಅದೊಂದು ನದಿ ತೀರ. ಅಲ್ಲೊಂದು ಆಶ್ರಮವಿತ್ತು. ಅಲ್ಲೊಬ್ಬರು ಸಂತರಿದ್ದರು. ಸಾಕಷ್ಟು ಭಕ್ತರು ಮತ್ತು ಶಿಷ್ಯರು ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು.

ಅದೊಂದು ದಿನ ಒಬ್ಬ ಶಿಷ್ಯ ಕೇಳಿದ: ಗುರುಗಳೇ ಶಿಕ್ಷಣದ ಮಹತ್ವ ಏನು? ಅದು ನಮಗೆ ಏನು ಕೊಡುತ್ತದೆ? ವಿದ್ಯೆ ಕಲಿಯದಿದ್ದರೆ ಏನಾಗುತ್ತದೆ?

ಆಗ ಸಂತರು ನಗುತ್ತಾ ಹೇಳಿದರು: ಕೆಲವೊಂದು ವಿಚಾರಗಳನ್ನು ನಾವು ವಿವರಿಸಬಾರದು. ಅದು ಅದರ ಪಾಡಿಗೆ ನಮ್ಮ ಅರಿವಿಗೆ ಬರಬೇಕು. ನಿನಗೂ ಒಂದು ಹಂತದಲ್ಲಿ ಇದು ಅರ್ಥವಾಗುತ್ತದೆ. ಶಿಷ್ಯ ಅದನ್ನು ಅಲ್ಲಿಗೇ ಬಿಟ್ಟಿದ್ದ.

ಕೆಲವು ದಿನಗಳ ಬಳಿಕ ಗುರುಗಳು ಶಿಷ್ಯನನ್ನು ಕರೆದು ʻಈ ಪುಸ್ತಕವನ್ನು ತೆಗೆದುಕೊಂಡು ಹೋಗಿ ನನ್ನ ಕೋಣೆಯ ಮೇಜಿನ ಮೇಲೆ ಇಟ್ಟು ಬಾʼ ಎಂದರು. ಅದು ಕತ್ತಲೆ ಕೋಣೆಯಾಗಿತ್ತು. ಶಿಷ್ಯ ಒಳಗೆ ಹೋದವನೇ ಓಡೋಡಿ ವಾಪಸ್‌ ಬಂದ. ಅವನು ಭಯದಿಂದ ನಡುಗುತ್ತಿದ್ದ.

ಗುರುಗಳು ಕೇಳಿದರು: ಏನಾಯಿತು? ನೀನ್ಯಾಕೆ ಇಷ್ಟೊಂದು ನಡುಗುತ್ತಿದ್ದೀಯಾ?
ಶಿಷ್ಯ ಹೇಳಿದ: ನಿಮ್ಮ ಕೋಣೆಯಲ್ಲಿ ಒಂದು ಹಾವು ಉಂಟು ಗುರುಗಳೇ..
ಗುರುಗಳು ಹೇಳಿದರು: ನಿನಗೆಲ್ಲೋ ಭ್ರಮೆಯಲ್ಲಿ ಹಾವು ಕಂಡಿರಬೇಕು. ನನ್ನ ಕೋಣೆಗೆ ಹಾವು ಹೇಗೆ ಬರ್ತದೆ? ಇನ್ನೊಮ್ಮೆ ಹೋಗಿ ನೋಡಿ ಬಾ..

ʻಇರು ಒಳಗೆ ಹೋಗುವಾಗ ನಾನು ಹೇಳಿಕೊಡುವ ಈ ಮಂತ್ರವನ್ನು ಪಠಿಸು. ಒಂದು ವೇಳೆ ಹಾವು ಇದ್ದರೂ ಅದು ಓಡಿ ಹೋಗುತ್ತದೆ. ಹಾವುಗಳು ಈ ಮಂತ್ರ ಕೇಳಿದ ಕೂಡಲೇ ಓಡ್ತವೆʼʼ ಎಂದು ಗುರುಗಳು ಹೇಳಿದರು.

ಶಿಷ್ಯ ಮತ್ತೊಮ್ಮೆ ಕೋಣೆಗೆ ಹೋದ. ಮಂತ್ರವನ್ನು ಹೇಳುತ್ತಲೇ ಕೋಣೆ ಪ್ರವೇಶ ಮಾಡಿದರೂ ಹಾವಿನ್ನೂ ಅಲ್ಲೇ ಇತ್ತು! ಮಂತ್ರ ಕೇಳಿ ಓಡುವುದು ಬಿಡಿ, ಸಣ್ಣಗೆ ಕದಲಲೂ ಇಲ್ಲ. ಶಿಷ್ಯ ಮತ್ತೆ ಓಡಿ ಬಂದು ಗುರುಗಳಿಗೆ ವರದಿ ಒಪ್ಪಿಸಿದ.

ಇನ್ನೊಂದು ಬಾರಿ ಹೋಗಿ ನೋಡಿ ಬಾ ಎಂದು ಗುರುಗಳು ಶಿಷ್ಯನಿಗೆ ಹೇಳಿದರು. ಈ ಬಾರಿ ಅವರು ಒಂದು ದೀಪವನ್ನು ಕೊಟ್ಟರು. ʻʻಈ ದೀಪ ಹಿಡಿದುಕೊಂಡು ಹೋಗು. ಬೆಳಕು ನೋಡಿದ ಕೂಡಲೇ ಹಾವಿದ್ದರೂ ಓಡುತ್ತದೆʼʼ ಎಂದರು.

ಶಿಷ್ಯ ದೀಪ ಹಿಡಿದುಕೊಂಡು ಒಳಗೆ ಹೋಗುತ್ತಾನೆ… ಹಾವೇ ಇಲ್ಲ! ಅಲ್ಲಿ ಒಂದು ಹಗ್ಗ ನೇತಾಡುತ್ತಿತ್ತು. ಅದು ಕತ್ತಲೆಯಲ್ಲಿ ಅವನಿಗೆ ಹಾವಿನಂತೆ ಕಂಡಿತ್ತು.
ಅವನು ಮರಳಿ ಬಂದು ಗುರುಗಳಿಗೆ ವರದಿ ಒಪ್ಪಿಸಿದ: ಅಲ್ಲಿ ಹಾವಿರಲಿಲ್ಲ ಗುರುಗಳೇ.. ಒಂದು ಹಗ್ಗ ಇತ್ತು. ಅದು ಕತ್ತಲೆಯಲ್ಲಿ ನನಗೆ ಹಾವಿನಂತೆ ಕಂಡಿತ್ತು!

ಆಗ ಸಂತರು ನಗುತ್ತಾ ಹೇಳಿದರು: ಆವತ್ತು ನೀನು ಶಿಕ್ಷಣದ ಮಹತ್ವದ ಬಗ್ಗೆ ಪ್ರಶ್ನೆ ಕೇಳಿದೆಯಲ್ಲಾ.. ಅದಕೆ ಇದುವೇ ಉತ್ತರ. ನೀನು ಕತ್ತಲೆಯಲ್ಲಿ ನೋಡಿದ್ದು ಭ್ರಮೆ. ಬೆಳಕಲ್ಲಿ ನೋಡಿದ್ದು ವಾಸ್ತವ. ಜಗತ್ತು ಇಂಥ ಹಲವಾರು ಭ್ರಮೆಗಳಿಂದ ತುಂಬಿರುತ್ತದೆ. ಆ ಭ್ರಮೆಗಳಿಂದ ಹೊರಬರಲು ಒಂದು ದೀಪ ಬೇಕಿರುತ್ತದೆ. ಆ ದೀಪವೇ ಶಿಕ್ಷಣ, ಅರಿವು, ತಿಳಿವು.

ಇದನ್ನೂ ಓದಿ | Motivational story | ಸಾಧುವಿನ ಬಳಿಗೆ ಹೋದ ಯುವ ರಾಜಕಾರಣಿ ಬಾಯಿಗೆ ಬಂದಂತೆ ಬೈದ: ಪ್ರತಿಯಾಗಿ ಸಾಧು ಮಾಡಿದ್ದೇನು?

Exit mobile version