ಕೃಷ್ಣ ಭಟ್ ಅಳದಂಗಡಿ- Motivational story
ಅದೊಂದು ಕಾಲೇಜು. ಅಲ್ಲೊಬ್ಬ ಹುಡುಗನಿದ್ದ. ಕ್ಲಾಸಿನಲ್ಲಿ ತುಂಬ ವಿಷಾದದಿಂದ ಕೂತಿರುತ್ತಿದ್ದ. ಯಾರೊಂದಿಗೂ ಮಾತಿಲ್ಲ, ಸ್ನೇಹವಿಲ್ಲ. ಆಕಾಶವೇ ಕಳಚಿ ಬಿದ್ದಂತೆ ಕುಳಿತಿರುತ್ತಿದ್ದ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಒಬ್ಬ ಉಪನ್ಯಾಸಕರು ಅವನನ್ನು ಕರೆದು ಕ್ಲಾಸ್ ಮುಗಿದ ಬಳಿಕ ಸ್ಟಾಫ್ ರೂಮಿಗೆ ಬರುವಂತೆ ಹೇಳಿದರು.
ಹುಡುಗ ಸ್ಟಾಫ್ ರೂಮಿಗೆ ಬಂದ. ಉಪನ್ಯಾಸಕರು ಅವನನ್ನು ಕೂರಿಸಿ ಕೇಳಿದರು: ನೀನು ಸಿಕ್ಕಾಪಟ್ಟೆ ಡಲ್ ಆಗಿರ್ತೀಯಾ.. ಯಾವುದರಲ್ಲೂ ನಿನಗೆ ಆಸಕ್ತಿ ಇಲ್ಲ. ಹೀಗಾದರೆ ಕಲಿಕೆಯೂ ಕಷ್ಟ ಆಗ್ತದೆ.. ಯಾಕೆ ಹೀಗಿದ್ದೀ?
ಹುಡುಗ ತನ್ನ ಸಮಸ್ಯೆ ಹೇಳಿಕೊಂಡ: ನಾನು ಬದುಕಿನಲ್ಲಿ ತುಂಬ ನೋವು ಅನುಭವಿಸಿದ್ದೇನೆ. ಅದೆಷ್ಟೋ ಕೆಟ್ಟ ಘಟನೆಗಳಿಂದ ನನಗೆ ಹೊರಬರಲು ಆಗುತ್ತಿಲ್ಲ. ಎಲ್ಲಿ ಕುಳಿತರೂ ಅದೇ ಯೋಚನೆ ಬರುತ್ತದೆ. ಹಾಗಾಗಿ ನನಗೆ ಯಾವುದರ ಮೇಲೂ ಗಮನ ಹರಿಸಲು ಆಗುತ್ತಿಲ್ಲ.
ಉಪನ್ಯಾಸಕರು ಅವನ ಮಾತುಗಳನ್ನು ಜತನದಿಂದ ಆಲಿಸಿದರು. ಮತ್ತು ನಾಡಿದ್ದು ನಮ್ಮ ಮನೆಗೆ ಬಾ ಎಂದು ಆಹ್ವಾನಿಸಿದರು. ನಿಗದಿಯಾದ ದಿನ ಹುಡುಗ ಬಂದ. ಉಪನ್ಯಾಸಕರು ಪ್ರೀತಿಯಿಂದ ಒಳಗೆ ಕರೆಸಿಕೊಂಡರು.
ʻʻನಿನಗೆ ಲಿಂಬೆ ಷರಬತ್ತು ಇಷ್ಟಾನಾ” ಎಂದು ವಿದ್ಯಾರ್ಥಿಯನ್ನು ಕೇಳಿದರು. ಹುಡುಗ ಹೌದು ಎಂದ. ಒಳಗೆ ಹೋಗಿ ಷರಬತ್ತು ಮಾಡುವಾಗ ಉಪನ್ಯಾಸಕರು ಉದ್ದೇಶಪೂರ್ವಕವಾಗಿಯೇ ಸ್ವಲ್ಪ ಹೆಚ್ಚೇ ಉಪ್ಪು ಹಾಕಿದರು. ಸಕ್ಕರೆ ಕಡಿಮೆ ಹಾಕಿದರು. ತಂದುಕೊಟ್ಟರು.
ಹುಡುಗ ಒಂದು ಸಿಪ್ ಕುಡಿದು ಸಣ್ಣಗೆ ಮುಖ ಕಿವುಚಿದಂತೆ ಮಾಡಿದ. ಕೂಡಲೇ ಉಪನ್ಯಾಸಕರು ಕೇಳಿದರು: ಏನಾಯ್ತು, ಷರಬತ್ತು ಇಷ್ಟವಾಗಲಿಲ್ಲವೇ?
ಹುಡುಗ ಹೇಳಿದ: ಇದಕ್ಕೆ ಉಪ್ಪು ಜಾಸ್ತಿ ಆಗಿದೆ.
ಉಪನ್ಯಾಸಕರು ಹೇಳಿದರು: ಓ ಹೌದಾ? ಸ್ಸಾರಿ, ಗೊತ್ತಾಗಲಿಲ್ಲ. ನಿಂಗೆ ಕುಡಿಯೋಕೆ ಆಗಲ್ಲ ಅಂದ್ರೆ ಕೊಡು, ಚೆಲ್ಲಿಬಿಡೋಣ.
ಉಪನ್ಯಾಸಕರು ಆತನ ಕೈಯಲ್ಲಿದ್ದ ಗ್ಲಾಸನ್ನು ತೆಗೆದುಕೊಂಡು ಚೆಲ್ಲಲು ಅಣಿಯಾದರು. ಆಗ ಹುಡುಗ ಅವರನ್ನು ತಡೆದು ಹೇಳಿದ: ಸರ್, ಅದನ್ನು ಚೆಲ್ಲುವುದೇನೂ ಬೇಕಿಲ್ಲ. ಅದಕ್ಕೆ ಸ್ವಲ್ಪ ಉಪ್ಪು ಜಾಸ್ತಿ ಆಗಿದೆ ಅಷ್ಟೆ. ಸ್ವಲ್ಪ ಸಕ್ಕರೆ ಹಾಕಿದರೆ ರುಚಿ ಚೆನ್ನಾಗಿರ್ತದೆ.
ಉಪನ್ಯಾಸಕರು ತುಂಬ ಖುಷಿಯಿಂದ ಹೇಳಿದರು: ನಾನು ನಿನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದೇ ಅದಕ್ಕೆ. ಇದು ನಿನಗೆ ಅರ್ಥವಾಗಲಿ ಅಂತ.
ಹುಡುಗ ಆಶ್ಚರ್ಯದಿಂದ ನೋಡಿದ.
ಉಪನ್ಯಾಸಕರು ಮುಂದುವರಿಸಿದರು: ಈ ಷರಬತ್ತಿಗೂ ನಿನ್ನ ಬದುಕಿಗೂ ಹೋಲಿಕೆ ಮಾಡಿ ನೋಡು. ನಿನ್ನ ಬದುಕಿನಲ್ಲಿ ಸಾಕಷ್ಟು ಕಹಿ ಘಟನೆಗಳು ನಡೆದಿವೆ. ಅವುಗಳನ್ನು ನಿನ್ನ ಬದುಕಿನಿಂದ ತೆಗೆದು ಹಾಕಲು ಸಾಧ್ಯವಿಲ್ಲ. ಆದರೆ, ಆ ಕಹಿಯನ್ನು ಮರೆಸುವ ಸಿಹಿ ಘಟನೆಗಳನ್ನು ಸೃಷ್ಟಿಸಿಕೊಳ್ಳಲು ಇನ್ನೂ ಅವಕಾಶವಿದೆ. ನೀವು ಹಳೆಯದನ್ನೇ ನೆನಪಿಸಿಕೊಂಡು ಅಳುತ್ತಿದ್ದರೆ ಅದನ್ನು ಬದಲಿಸಲು ಆಗುತ್ತದಾ? ಇಲ್ಲ. ನೀನು ಅದರ ನೆನಪಿನಲ್ಲಿ ವರ್ತಮಾನವನ್ನೂ, ಭವಿಷ್ಯವನ್ನೂ ಹಾಳು ಮಾಡಿಕೊಳ್ಳಬಹುದು ಅಷ್ಟೆ. ಬಾ ಬದುಕೆಂಬ ಉಪ್ಪು ತುಂಬಿದ ಷರಬತ್ತಿಗೂ ಒಂದಿಷ್ಟು ಸಿಹಿ ಹಾಕಿ ಖುಷಿಯಾಗಿ ಕುಡಿಯೋಣ.
ಹುಡುಗನಿಗೆ ಏನು ಹೇಳಲೂ ತೋಚಲಿಲ್ಲ. ದೊಡ್ಡದೊಂದು ನಿಟ್ಟುಸಿರುಬಿಟ್ಟ!
ಇದನ್ನೂ ಓದಿ | Motivational story | ತಪ್ಪಾಗಿದ್ದು ಗೊತ್ತಾಗಬಾರದು ಎಂದು ತಿದ್ದುತ್ತಿದ್ದ ಹುಡುಗನಿಗೆ ಟೀಚರ್ ಹೇಳಿದ ಪಾಠ ಏನು?