Site icon Vistara News

Motivational story | ಆ ಜೋಡಿ ಅಷ್ಟೊಂದು ಅನ್ಯೋನ್ಯವಾಗಿ ಇರುವುದು ಹೇಗೆಂಬ ಪ್ರಶ್ನೆಗೆ ಉತ್ತರ ಸಿಕ್ಕಿತು! ಅದು very simple!

cute family

ಕೃಷ್ಣ ಭಟ್‌ ಅಳದಂಗಡಿ-motivational story
ಅದೊಂದು ವಠಾರ. ಒಂದೇ ಕಾಂಪೌಂಡ್‍ನೊಳಗೆ ಎರಡು ಮನೆಗಳು. ಅದರಲ್ಲಿ ಎರಡೂ ಮನೆಗಳಲ್ಲಿ ಮದುವೆಯಾಗಿ ಇನ್ನೇನು ಮೂರೋ ನಾಲ್ಕೋ ವರ್ಷ ಆಗಿರುವ ಗಂಡ-ಹೆಂಡತಿ. ಅಚ್ಚರಿ ಎಂದರೆ ಎರಡೂ ಮನೆಗಳ ಪರಿಸ್ಥಿತಿ ಸಂಪೂರ್ಣ ಭಿನ್ನ. ಒಂದು ಮನೆಯಲ್ಲಿ ಪ್ರತಿದಿನ ಬೆಳಗಾಗಿದ್ದರೆ ಜಗಳ, ಸಿಟ್ಟು, ಸೌಂಡು! ಆದರೆ, ಮತ್ತೊಂದು ಮನೆಯಲ್ಲಿ ಜಗಳವಿಲ್ಲ, ಗಲಾಟೆಯಿಲ್ಲ, ಶಾಂತ!

ಎರಡು ಮನೆಗಳ ಬಗ್ಗೆ ಅಕ್ಕಪಕ್ಕದ ಮನೆಗಳಲ್ಲಿ ನಿತ್ಯ ಚರ್ಚೆ. ಗಲಾಟೆ ನಡೆಯೋ ಮನೆಯ ಬಗ್ಗೆ ಏನಪ್ಪಾ ಇವರು ಎಷ್ಟೊಂದು ಜಗಳ ಮಾಡ್ಕೋತಾರಲ್ವಾ’ ಅಂತ ಮಾತಾಡಿಕೊಂಡರೆ, ಎರಡನೇ ಮನೆಯವರ ಅನ್ಯೋನ್ಯತೆಯೂ ಕಣ್ಣು ಕುಕ್ಕುತ್ತಿತ್ತು, ಹೊಟ್ಟೆ ಉರಿ ಹುಟ್ಟಿಸುತ್ತಿತ್ತು.

ಈ ನಡುವೆ, ನಿತ್ಯ ಜಗಳ ಮಾಡಿಕೊಳ್ಳುತ್ತಿದ್ದ ಗಂಡ-ಹೆಂಡತಿಗೇ ಕುತೂಹಲ ಆಯಿತು. ಅವರು ಯಾವುದೇ ಜಗಳವಿಲ್ಲದೆ ಹೇಗಿದ್ದಾರೆ ಅಂತ.
ಒಂದು ಪ್ರಶಾಂತವಾದ ಕ್ಷಣದಲ್ಲಿ ಹೆಂಡತಿ ಗಂಡನಿಗೆ ಹೇಳಿದಳು: ಅವರು ಅಷ್ಟು ಪ್ರೀತಿಯಿಂದ ಹೇಗಿದ್ದಾರೆ ಅಂತ ಕಂಡುಹಿಡಿಯಬಹುದಾರಿ? ಎಂದು ಕೇಳಿದಳು.

ಗಂಡನೂ ತಕರಾರಿಲ್ಲದೆ ಒಪ್ಪಿಕೊಂಡ. ಅದೊಂದು ದಿನ ಗಂಡ ಏನೋ ಫೋನಿನಲ್ಲಿ ಮಾತನಾಡುವವನಂತೆ ನಟಿಸುತ್ತಾ ಅವರ ಅಂಗಳದ ಆಚೆಗೆ ಓಡಾಡಲು ಶುರುಮಾಡಿದ. ಒಳಗೆ ಏನೆಲ್ಲ ನಡೆಯುತ್ತದೆ ಎನ್ನುವುದನ್ನು ಗಮನಿಸುವುದು ಅವನ ಉದ್ದೇಶ.

ಆವತ್ತು ಹೆಂಡತಿ ಹಾಲ್‍ನ್ನು ಬಟ್ಟೆಯಿಂದ ಒರಸುತ್ತಿದ್ದಳು. ಅಷ್ಟು ಹೊತ್ತಿಗೆ ಕಿಚನ್‍ನಿಂದ ದಡಾರ್ ಅಂತ ಸೌಂಡು ಬಂತು. ಹೆಂಡತಿ ಒಳಗೆ ಓಡಿದಳು. ಅಲ್ಲಿ ಏನಾಗಿತ್ತೆಂದರೆ ನೀರು ತುಂಬಿದ ಬಕೆಟ್ ದಢಾರನೆ ಉರುಳಿ ಬಿದ್ದು ಇಡೀ ಕೋಣೆ ಕಂಬಳದ ಗದ್ದೆಯಾಗಿತ್ತು!

ಈಗ ಮನೆಯೊಳಗೆ ಮಾರಿಹಬ್ಬ ಇದೆ ಎಂದು ಹೊರಗೆ ಕಾಯುತ್ತಿದ್ದವನು ಅಂದುಕೊಂಡ. ಆದರೆ, ಹಾಗೇನೂ ಆಗಲಿಲ್ಲ.

ಹೆಂಡತಿ ಹೇಳಿದಳು: ನಾನು ನೆಲ ಒರಸೋ ನೀರನ್ನು ಅಲ್ಲೇ ಬಿಟ್ಟು ಬಂದಿದ್ದೆ. ತಪ್ಪಾಯ್ತುರಿ..
ಅದಕೆ ಗಂಡ ಹೇಳಿದ: ಇಲ್ಲ ಇಲ್ಲ ಮಿಸ್ಟೇಕ್ ನಂದೆ.. ನಾನು ಅವಸರದಲ್ಲಿ ಸೀದಾ ಅಡುಗೆ ಮನೆಗೆ ಹೋದೆ, ನಾನೇ ನೋಡ್ಕೊಂಡು ಹೋಗಬೇಕಿತ್ತು. ಅಷ್ಟು ದೊಡ್ಡ ಬಕೆಟ್ ಕಣ್ಣಿಗೆ ಕಾಣಿಸಲಿಲ್ಲ ಅಂದ್ರೆ ಏನು? ನಾನೇ ಕ್ಷಮೆ ಕೇಳ್ಬೇಕು.
ಅದಾದ ಬಳಿಕ ಅವರಿಬ್ಬರೂ ಸೇರಿ ಮನೆ ಪೂರ್ತಿ ಆವರಿಸಿದ ನೀರನ್ನು ಹಿಂಡಿ ತೆಗೆದು ಸ್ವಚ್ಛಗೊಳಿಸಿದರು. ಮಧ್ಯೆ ಮಧ್ಯೆ ಹಿಂದೆ ಆಗಿದ್ದ ಇಂಥಹುದೇ ಘಟನೆಗಳ ಮೆಲುಕು.

ಹೊರಗೆ ಕಾಯುತ್ತಿದ್ದ ಪಕ್ಕದ ಮನೆಯವನು ಇದೆಲ್ಲ ಮುಗಿದ ಬಳಿಕ ಮನೆಗೆ ಹೋದ.
ಹೆಂಡತಿ ಕೇಳಿದಳು: ಅವರು ಅಷ್ಟು ಚೆನ್ನಾಗಿರುವುದು ಹೇಗೆ ಅಂತ ಗೊತ್ತಾಯಿತಾ?
ಅವನು ಹೇಳಿದ: ಆಶ್ಚರ್ಯ ಕಣೆ… ನೋಡು ನಮ್ಮ ಮನೆಯಲ್ಲಿ ನಾವು ಯಾರು ಏನೇ ತಪ್ಪು ಮಾಡಿದರೂ ಇನ್ನೊಬ್ಬರ ಮೇಲೆ ದೂರು ಹಾಕಲು ಪ್ರಯತ್ನ ಮಾಡುತ್ತೇವೆ. ಆದರೆ, ಆ ಮನೆಯಲ್ಲಿ ಯಾರು ತಪ್ಪು ಮಾಡಿದರೂ ನಾನೇ ಕಾರಣ, ನಾನೇ ಕಾರಣ’ ಅಂತ ಜಗಳ ಆಡುತ್ತಾರೆ! ಏನೇ ತೊಂದರೆ ಆದರೂ ಇಬ್ಬರೂ ಸೇರಿ ಪರಿಹಾರ ಮಾಡಿಕೊಳ್ಳುತ್ತಾರೆ. ಹೀಗಾಗಿ ಅವರಿಗೆ ಜಗಳ ಮಾಡುವುದಕ್ಕೆ ಕಾರಣವೇ ಉಳಿದಿರುವುದಿಲ್ಲ ಅನಿಸುತ್ತದೆ.
ಇದನ್ನೂ ಓದಿ | Motivational story | ಪರ್ವತದ ನೆತ್ತಿಯಲ್ಲಿ ಕುಳಿತು ಪ್ರಾಣಿಗಳನ್ನು ಪಳಗಿಸುತ್ತಿದ್ದರು ಆ ಹೆಣ್ಮಗಳು!

Exit mobile version