ಕೃಷ್ಣ ಭಟ್ ಅಳದಂಗಡಿ- motivational story
ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಅಂಗಡಿಯೊಂದರ ಬಳಿಯಲ್ಲಿ ನಿಂತು ಯಾರಿಗೋ ಫೋನ್ ಮಾಡುತ್ತಿದ್ದ. ಸಾಮಾನ್ಯವಾಗಿ ಈ ವಯಸ್ಸಿನ ಹುಡುಗರೆಲ್ಲ ಚಾಟಿಂಗ್, ಯಾರದೋ ಜತೆ ಏನೇನೋ ಮಾತುಗಳನ್ನು ಆಡ್ತಾ ಇರ್ತಾರೆ. ಈ ಹುಡುಗ ಏನು ಮಾತನಾಡುತ್ತಿರಬಹುದು ಎಂಬ ಕುತೂಹಲ ಅಂಗಡಿಯವನಿಗೆ.
ಅವನು ಮೆಲ್ಲನೆ ಕಿವಿಗೊಟ್ಟ. ಏನಾದರೂ ತಪ್ಪು ದಾರಿ ಹಿಡಿದಿದ್ದರೆ ಅವನ ಅಪ್ಪನಿಗೆ ಹೇಳೋಣ ಅನ್ನುವ ದೂರದ ಒಂದು ಒಳ್ಳೆಯತನವೂ ಮನಸ್ಸಿನಲ್ಲಿ ಇತ್ತೋ ಏನೋ. ಹುಡುಗ ಸ್ವಲ್ಪ ಧ್ವನಿ ಬದಲಿಸಿ ಮಾತನಾಡುತ್ತಿದ್ದಂತೆ ಕಂಡಿತು.
`ʻʻಮೇಡಂ ನಾನೊಬ್ಬ ಬಡ ಯುವಕ. ಕಾಲೇಜಿಗೆ ಹೋಗ್ತಾ ಇದ್ದೇನೆ. ಬಿಡುವಿನ ವೇಳೆಯಲ್ಲಿ ಲಾನ್ ಕಟ್ಟಿಂಗ್ ಮಾಡುವ ಕೆಲಸ ಮಾಡುತ್ತೇನೆ. ಏನಾದರೂ ಕೆಲಸ ಇದೆಯಾ?ʼʼ ಅಂತ ಕೇಳಿದ.
ಆ ಕಡೆಯಿಂದ ಮಾತನಾಡುತ್ತಿದ್ದವರು ಒಬ್ಬ ಮಹಿಳೆ. ಅವರು, `ʻಇಲ್ಲ ನಾವು ಆಲ್‍ರೆಡಿ ಒಬ್ಬ ಹುಡುಗನನ್ನು ಫಿಕ್ಸ್ ಮಾಡಿದ್ದೇವೆ,” ಎಂದರು.
ಹುಡುಗ ಮುಂದುವರಿಸಿದ: ʻʻಮೇಡಂ ಮೇಡಂ.. ನಾನು ನೀವು ಈಗ ಕೊಡುತ್ತಿರುವ ಹಣದ ಅರ್ಧ ರೇಟಿಗೆ ಕೆಲಸ ಮಾಡಿಕೊಡುತ್ತೇನೆ. ತುಂಬ ಚಂದ ಮಾಡಿಕೊಡ್ತೇನೆ.ʼʼ
ಮಹಿಳೆ ಹೇಳಿದರು: ಈಗ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವ ಹುಡುಗ ತುಂಬ ಚೆನ್ನಾಗಿ ಕೆಲಸ ಮಾಡುತ್ತಿದ್ದಾನೆ. ಅವನ ಕೆಲಸ ಬಗ್ಗೆ ಸಂಪೂರ್ಣ ತೃಪ್ತಿ ಇದೆ.
ಹುಡುಗ ಹಠ ಬಿಡಲಿಲ್ಲ: ಮೇಡಂ ನಾನು ಕೇವಲ ಲಾನ್ ಕಟ್ಟಿಂಗ್ ಮಾತ್ರ ಮಾಡೋದಲ್ಲ. ಮನೆ ಅಂಗಳ, ಹೊರಗಡೆ ಎಲ್ಲ ಗುಡಿಸ್ತೇನೆ. ಊರಲ್ಲಿ ನಿಮ್ಮಷ್ಟು ಚಂದದ ಗಾರ್ಡನ್ ಬೇರೆ ಇಲ್ಲ ಅನ್ನೋ ತರ ನೋಡಿಕೊಳ್ತೇನೆ. ದಯವಿಟ್ಟು ಕೆಲಸ ಕೊಡಿ ಮೇಡಂ.
ಆದರೆ, ಮಹಿಳೆ ಯಾವ ಕಾರಣಕ್ಕೂ ಒಪ್ಪಿಗೆ ಕೊಡಲಿಲ್ಲ. ಈಗ ಕೆಲಸ ಮಾಡುತ್ತಿರುವ ಹುಡುಗ ಚೆನ್ನಾಗೇ ಇದಾನೆ. ಬದಲಾಯಿಸುವ ಅವಶ್ಯಕತೆಯೇ ಇಲ್ಲ ಅಂತ ಮತ್ತೆ ಮತ್ತೆ ಸ್ಪಷ್ಟಪಡಿಸಿದರು.
ಹುಡುಗ ಫೋನ್ ಕಟ್ ಮಾಡಿದ. ತುಂಬ ಬೇಸರ ಆಗಿರಬಹುದು ಎಂದು ಅಂಗಡಿಯವನು ಭಾವಿಸಿದ್ದ. ಆದರೆ ಹುಡುಗ ಸಿಕ್ಕಾಪಟ್ಟೆ ಖುಷಿಯಾಗಿದ್ದ.
ಅಂಗಡಿಯವನು ಹುಡುಗನ ಕರೆದು ಹೇಳಿದ: ಹುಡುಗಾ ನಿನ್ನ ಕೆಲಸದ ಶ್ರದ್ಧೆ, ಪಾಸಿಟಿವಿಟಿ ನೋಡಿ ಖುಷಿಯಾಯ್ತು. ನಾನು ನಿಂಗೆ ಕೆಲಸ ಕೊಡಿಸ್ತೀನಿ.
ಹುಡುಗ ಹೇಳಿದ; ತ್ಯಾಂಕ್ಸ್ ಅಂಕಲ್. ನೀವು ಕೆಲಸ ಕೊಡಿಸ್ತೀನಿ ಅಂದಿದ್ದು ನನಗೆ ಖುಷಿ ಆಯ್ತು. ಆದರೆ, ನನಗೆ ಕೆಲಸ ಬೇಕಿಲ್ಲ.
ಅಂಗಡಿಯವನಿಗೆ ಆಶ್ಚರ್ಯ: ಅಲ್ಲಯ್ಯ, ಒಂದು ಕೆಲಸ ಕೊಡಿ ಎಂದು ಫೋನಲ್ಲಿ ಗೋಗರೆಯುತ್ತಿದ್ದಿಯಲ್ಲ.. ಅಂದ.
ಹುಡುಗ: ಇಲ್ಲ ಸಾರ್, ನಾನು ಜಾಬ್ ಕೇಳುತ್ತಿರಲಿಲ್ಲ. ಈಗ ಕೆಲಸ ಮಾಡುತ್ತಿರುವ ಜಾಗದಲ್ಲಿ ನನ್ನ ನಿರ್ವಹಣೆ ಹೇಗಿದೆ, ಅದಕ್ಕೆ ಅಲ್ಲಿ ಅಭಿಪ್ರಾಯ ಹೇಗಿದೆ ಎಂದು ತಿಳಿಯುವ ಪ್ರಯತ್ನ ಮಾಡಿದೆ. ನಾನೀಗ ಫೋನ್ ಮಾಡಿದ್ದು, ಈಗ ಕೆಲಸ ಮಾಡುತ್ತಿರುವ ಮನೆಗೇ ಅಂಕಲ್.
ಅಂಗಡಿಯವನಿಗೆ ಆಶ್ಚರ್ಯ ಆಯಿತು.
ಓ ಹಾಗಿದ್ರೆ ಸೆಲ್ಫ್ ಅಪ್ರೈಸಲ್ ಮಾಡ್ತಾ ಇದೀಯಾ? ಕಂಪನಿಗಳಲ್ಲಿ ಇದೆಲ್ಲ ಇದೆ ಎಂದು ಕೇಳಿದ್ದೆ. ನೀನು ಮಾಡಿದ್ದು ಸರಿ, ನಾವು ಮಾಡೋ ಸಣ್ಣ ಪುಟ್ಟ ಕೆಲಸಗಳಲ್ಲೂ ಈ ರೀತಿಯ ಆತ್ಮವಿಮರ್ಶೆ ಇದ್ದರೆ ತುಂಬ ಚಂದ. ನೀನು ನನ್ನ ಕಣ್ಣನ್ನೂ ತೆರೆಸಿದೆ. ನಾನೂ ನನ್ನ ವ್ಯವಹಾರದಲ್ಲಿ ಎಷ್ಟೊಂದು ಪ್ರಾಮಾಣಿಕವಾಗಿದ್ದೇನೆ ಎನ್ನುವುದನ್ನು ಚೆಕ್ ಮಾಡಿಕೊಳ್ಳಬೇಕಿದೆ- ಅಂದುಕೊಂಡ.
ಇದನ್ನೂ ಓದಿ | Motivational story | ಸಂಬಂಧವೇ ಇಲ್ಲದ ಕ್ಷುಲ್ಲಕ ವಿಷಯ ಹಿಡಿದು ಬಡಿದಾಡುವ ಮಂದಿಗೆ ಅರ್ಜೆಂಟಾಗಿ ಈ ಕಥೆ ಹೇಳಬೇಕು!