ಕೃಷ್ಣ ಭಟ್ ಅಳದಂಗಡಿ- Motivational story
ಒಂದು ಸಾರಿ ಒಬ್ಬ ಶ್ರೀಮಂತ ಮನುಷ್ಯ ತನ್ನ ಪರಿಸರದಲ್ಲಿನ ಬಡವರಿಗೆ ಉಚಿತವಾಗಿ ಆಹಾರ ನೀಡುವ ಒಂದು ಯೋಜನೆ ಆರಂಭಿಸಿದರು. ಹಾಗಂತ ಅವರಿಗೆ ದಾನ ಮಾಡಬೇಕು ಅನ್ನೋ ಆಸೆಯಾಗಲಿ, ಬಡವರ ಸೇವೆಯ ಗುರಿಯಾಗಲೀ ಇರಲಿಲ್ಲ. ಈ ರೀತಿ ಸೇವೆ ಮಾಡಿದರೆ ಒಳ್ಳೆಯ ಹೆಸರು ಬರುತ್ತದೆ ಎಂಬ ದೂರಾಲೋಚನೆ. ಅವರಿಗೆ ಒಂದು ದಿನಸಿ ಅಂಗಡಿ ಇತ್ತು. ಈ ರೀತಿ ದಾನ ಮಾಡಿ ಗಮನ ಸೆಳೆದರೆ ತನ್ನ ಅಂಗಡಿಯ ವ್ಯಾಪಾರವೂ ಹೆಚ್ಚುತ್ತದೆ ಎನ್ನುವ ನಿರೀಕ್ಷೆಯೂ ಇತ್ತು.
ಅವರು ಹೋಲ್‌ಸೇಲ್ ಬ್ಯುಸಿನೆಸ್ ಮ್ಯಾನ್ ಆಗಿದ್ದರಿಂದ ಅಂಗಡಿಯಲ್ಲಿ ಅವಧಿ ಮುಗಿದ ವಸ್ತುಗಳು ಸಾಕಷ್ಟು ಉಳಿಯುತ್ತಿದ್ದವು. ಈ ವ್ಯಾಪಾರಿ ತನ್ನ ದಾನ ಧರ್ಮದ ಸೇವೆಗೆ ಬಳಸುತ್ತಿದ್ದುದು ಅದೇ ವಸ್ತುಗಳನ್ನು. ಬಾಕಿ ಉಳಿದ ಕಾಳುಗಳನ್ನು ಸೇರಿಸಿ ಅವುಗಳನ್ನು ಹಿಟ್ಟು ಮಾಡಿಸಿ ಚಪಾತಿ ತಯಾರಿಸಲಾಗುತ್ತಿತ್ತು.. ಮಲ್ಟಿಗ್ರೇನ್ ಚಪಾತಿ!
ಮುಂದೆ ಕೆಲವು ಸಮಯದಲ್ಲಿ ಅವರ ಮಗನಿಗೆ ಮದುವೆಯಾಯಿತು. ಸೊಸೆ ಮನೆಗೆ ಬಂದರು. ತುಂಬಾ ವಿಧೇಯ, ಸವಿ ಮಾತಿನ ಮತ್ತು ಎಲ್ಲರ ಕಷ್ಟ ನೋವುಗಳನ್ನು ಅರ್ಥ ಮಾಡಿಕೊಂಡ ಒಬ್ಬ ಒಳ್ಳೆಯ ಹೆಣ್ಮಗಳು ಆಕೆ.
ಕೆಲವು ದಿನಗಳ ನಂತರ ಆಕೆಗೆ ಮಾವ ಮಾಡುತ್ತಿರುವ ಸೇವೆಯ ವಿಚಾರ ಗೊತ್ತಾಯಿತು. ಅದೇ ಹೊತ್ತಿಗೆ ಈ ಸೇವೆಗೆ ಬಳಸುತ್ತಿರುವುದು ಅವಧಿ ಮೀರಿದ, ಹಾಳಾದ ಕಾಳುಗಳ ಹಿಟ್ಟನ್ನು ಎಂದು ತಿಳಿದು ಬೇಜಾರೂ ಆಯಿತು. ಸೇವೆಯ ಹೆಸರಿನಲ್ಲಿ ಈ ರೀತಿ ಕಳಪೆ ಆಹಾರ ನೀಡುವುದು ತಪ್ಪು ಎಂದು ಆಕೆಗೆ ಅನಿಸಿತು.
ಆ ಶ್ರೀಮಂತ ವ್ಯಾಪಾರಿಯ ಮನೆಯಲ್ಲಿ ಪ್ರತಿಯೊಂದಕ್ಕೂ ಆಳುಕಾಳುಗಳಿದ್ದರು. ಅಡುಗೆ ಮನೆಯಲ್ಲಂತೂ ಹಲವು ಜನ. ಈ ನಡುವೆ ಹೊಸದಾಗಿ ಬಂದ ಸೊಸೆ ಅಡುಗೆ ಮನೆ ಜವಾಬ್ದಾರಿಯನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದರು. ಎಲ್ಲ ಆಹಾರ ನಾನೇ ತಯಾರಿಸುತ್ತೇನೆ ಎಂದಳು. ವ್ಯಾಪಾರಿ, ಮಗ, ಅತ್ತೆ ಎಲ್ಲರೂ ಯಾಕಮ್ಮಾ.. ಇಷ್ಟೆಲ್ಲ ಜನ ಕೆಲಸದವರು ಇದ್ದಾರಲ್ಲಾ ಅಂದರು. ಆದರೆ, ʻʻನಾನಾದರೂ ಇಲ್ಲಿ ಏನು ಮಾಡಲಿ.. ನನಗೂ ಅಭ್ಯಾಸ ಆಗಬೇಕಲ್ಲʼʼ ಎಂದು ಆಕೆ ಅವರನ್ನು ಒಪ್ಪಿಸಿದಳು.
ಮೊದಲ ದಿನ ಎಲ್ಲರೂ ಊಟದ ಟೇಬಲ್‌ಗೆ ಬಂದು ಕುಳಿತರು. ಸೊಸೆ ಏನು ಮಾಡಿದ್ದಾಳೆ, ಹೇಗೆ ಮಾಡುತ್ತಾಳೆ ಎನ್ನುವ ಕುತೂಹಲ ವ್ಯಾಪಾರಿಗೆ. ಸೊಸೆ ಎಲ್ಲರಿಗೂ ಚಪಾತಿ ಬಡಿಸಿದಳು. ವ್ಯಾಪಾರಿ ಬಿಸಿ ಬಿಸಿ ಚಪಾತಿಯನ್ನು ಮುಟ್ಟಿ ನೋಡಿದರು. ಖುಷಿ ಆಯಿತು. ಹಾಗೇ ತುಂಡರಿಸಿ ಬಾಯಿಗೆ ಇಡಬೇಕು ಎನ್ನುವಾಗ ಏನೋ ಅಡ್ಡವಾಸನೆ, ಚಪಾತಿ ಕೂಡಾ ಗಟ್ಟಿ ಗಟ್ಟಿಯಾಗಿತ್ತು.
ಕೂಡಲೇ ಆತ ಚಪಾತಿಯನ್ನು ಉಗುಳಿ ಸೊಸೆಯನ್ನು ಕೇಳಿದ: ಅಲ್ಲಾ ಮಗಳೇ ಯಾಕೆ ಚಪಾತಿ ಇಷ್ಟು ಕೆಟ್ಟದಾಗಿದೆ. ಯಾವ ಹಿಟ್ಟು ಬಳಸಿದ್ದು?
ಅದಕ್ಕೆ ಸೊಸೆ ಹೇಳಿದಳು: ಮಾವ, ಇದು ತುಂಬಾ ಒಳ್ಳೆಯ ಚಪಾತಿ. ಇದು ಈ ಜನ್ಮದ್ದಲ್ಲ. ಮುಂದಿನ ಜನ್ಮದಲ್ಲಿ ನಾವು ತಿನ್ನುವ ಚಪಾತಿ ಎಂದಳು.
ವ್ಯಾಪಾರಿ ಹೇಳಿದ: ನನಗೆ ಅರ್ಥವಾಗಲಿಲ್ಲ.. ಯಾಕಿಷ್ಟು ಕೆಟ್ಟ ಚಪಾತಿ ಮಾಡಿದೆ?
ಸೊಸೆ ವಿವರಿಸಿದಳು: ಮಾವ.. ಇವತ್ತು ನಾವು ಈ ಮಟ್ಟದ ಶ್ರೀಮಂತಿಕೆಯಿಂದ ಇರುವುದಕ್ಕೆ ಕಾರಣ… ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯಫಲ. ನಾವು ತಿನ್ನುತ್ತಿರುವುದು ಅದರ ಫಲವನ್ನು. ಈಗ ನಾವು ಮಾಡುವ ಒಳ್ಳೆಯ ಕೆಲಸಗಳ ಫಲ ಮುಂದೆ ಅಥವಾ ಮುಂದಿನ ಜನ್ಮದಲ್ಲಿ ಸಿಗುತ್ತದೆ.
ಈಗ ನಾವು ಬಡವರಿಗೆ ದಾನ ಮಾಡುತ್ತೇವೆ, ಸೇವೆ ಮಾಡುತ್ತೇವೆ. ಅವರಿಗೆ ಯಾವ ರೀತಿಯ ಸೇವೆ ಮಾಡುತ್ತೇವೋ ಅದೇ ರೀತಿಯ ಫಲ ನಮಗೆ ಸಿಗುತ್ತದೆ ಎಂದು ನನಗೆ ಅನಿಸುತ್ತದೆ. ಈಗ ನಾವು ಅವರಿಗೆ ಹಾಳಾದ ಹಿಟ್ಟಿನ ಚಪಾತಿ ಮಾಡಿ ಹಾಕಿ ಸೇವೆ ಎಂದು ಬೀಗುತ್ತಿದ್ದೇವೆ. ನಮಗೂ ಮುಂದಿನ ಜನ್ಮದಲ್ಲಿ ಇಂಥಹುದೇ ಚಪಾತಿ ಸಿಗಬಹುದಲ್ಲವೇ ಮಾವ? ಈಗಿನಿಂದಲೇ ಇಂಥ ಚಪಾತಿ ತಿನ್ನುವುದನ್ನು ರೂಢಿಸಿಕೊಂಡರೆ ಮುಂದೆ ಬೇಜಾರಾಗುವುದು ತಪ್ಪುತ್ತದೆ ಎಂದು ಅನಿಸಿತು- ಎಂದಳು.
ಆಗ ಶ್ರೀಮಂತನಿಗೆ ತನ್ನ ತಪ್ಪಿನ ಅರಿವಾಯಿತು. ತಾನು ಸೇವೆ, ದಾನ-ಧರ್ಮದ ಹೆಸರಿನಲ್ಲಿ ನೀಡುತ್ತಿರುವ ಚಪಾತಿ ಇಷ್ಟೊಂದು ಕಳಪೆಯಾಗಿರುತ್ತದೆಯೇ ಎಂದು ಆತ ಮರಳಿ ಕೇಳಿದ. ಹೌದು ಮಾವ, ನಾನು ಅದೇ ಹಿಟ್ಟನ್ನು ಬಳಸಿ ಚಪಾತಿ ಮಾಡಿದ್ದೆ – ಅಂದಳು ಸೊಸೆ.
ಶ್ರೀಮಂತ ವ್ಯಾಪಾರಿಗೆ ತನ್ನ ತಪ್ಪಿನ ಅರಿವಾಯಿತು. ತನ್ನ ಸೊಸೆ ಬುದ್ಧಿವಂತಳೂ ಅನಿಸಿತು. ಮುಂದೆ ಈ ಬಡವರ ಸೇವೆಯ ಜವಾಬ್ದಾರಿಯನ್ನು ಆಕೆಗೇ ವಹಿಸಿದ.
ಇದನ್ನೂ ಓದಿ | Motivational Story | ಅಪ್ಪ, ಅಮ್ಮನ ಕೈಯನ್ನು ಯಾವತ್ತಾದ್ರೂ ನೋಡಿದಿರಾ?