ಕೃಷ್ಣ ಭಟ್ ಅಳದಂಗಡಿ- Motivational story
ಆವತ್ತು ಭಾನುವಾರ. ಉದ್ಯಮಿ ರಾಜನ್ ಕೈಯಲ್ಲಿ ಕಾಫಿ ಹಿಡಿದುಕೊಂಡು ಬಂದು ಬಂಗಲೆಯ ಅಂಗಳದಲ್ಲಿ ಚೇಯರ್ ಹಾಕಿ ಕುಳಿತಿದ್ದರು. ಚಂದದ ಎಳೆ ಬಿಸಿಲು. ಅತ್ತಿತ್ತ ನೋಡುತ್ತಿದ್ದಾಗ ಅವರ ಕಣ್ಣು ನೆಲದ ಮೇಲೆ ಓಡಾಡುತ್ತಿದ್ದ ಒಂದು ಇರುವೆಯ ಮೇಲೆ ಬಿತ್ತು. ಆ ಇರುವೆ ತನಗಿಂತ ನೂರಾರು ಪಟ್ಟು ಹೆಚ್ಚು ಗಾತ್ರದ ಒಂದು ಎಲೆಯ ತುಂಡನ್ನು ಪ್ರಯಾಸದಿಂದ ಎಳೆದುಕೊಂಡು ಹೋಗ್ತಾ ಇತ್ತು. ಗಂಟೆಗಟ್ಟಲೆ ನೋಡ್ತಾ ಕೂತರು ರಾಜನ್. ಕೆಲವೇ ಸೆಂ.ಮೀ. ದೂರಕ್ಕೆ ಮಾತ್ರ ಸಾಗಿತ್ತು ಸವಾರಿ. ಅದರಲ್ಲೂ ಎಷ್ಟೊಂದು ಅಡೆತಡೆಗಳು?
ಇರುವೆ ಸಾಗೋ ದಾರಿಯಲ್ಲಿ ನೆಲ ಒಂದು ಕಡೆ ಬಿರುಕುಬಿಟ್ಟಿತ್ತು… ಇಲ್ಲಿ ಹೇಗೆ ಎಳೆದುಕೊಂಡು ಹೋಗುತ್ತದೆ ಎನ್ನುವ ಕುತೂಹಲ ರಾಜನ್‍ಗೆ. ಆ ಜಾಗ ತಲುಪುತ್ತಿದ್ದಂತೆಯೇ ಇರುವೆ ಒಂದು ಕ್ಷಣ ನಿಂತಿತು. ಈ ಪ್ರಯಾಣ ಇಲ್ಲಿಗೆ ಮುಗಿಯುತ್ತದೆ ಅಂದುಕೊಂಡರು ರಾಜನ್. ಆದರೆ, ಇರುವೆ ಎಲೆಯನ್ನು ಮುಂದಿನಿಂದ ಎಳೆಯುವ ಬದಲು ಹಿಂದಿನಿಂದ ಕಷ್ಟಪಟ್ಟು ತಳ್ಳುತ್ತಾ ಎಳೆಯನ್ನು ಬಿರುಕಿನಾಚೆ ದಾಟಿಸಿಬಿಟ್ಟಿತು. ಆಮೇಲೆ ಅದರ ಮೇಲೆ ರಾಜ ಠೀವಿಯಲ್ಲಿ ನಡೆಯುತ್ತಾ ಮತ್ತೊಂದು ಭಾಗಕ್ಕೆ ಹೋಗಿ ತನ್ನ ಪ್ರಯಾಣ ಮುಂದುವರಿಸಿತು.
ರಾಜನ್‍ಗೆ ಎಲಲಾ ಅನಿಸಿತು. ಇಷ್ಟು ಸಣ್ಣ ಇರುವೆಗೆ ಇಷ್ಟೊಂದು ಬುದ್ಧಿವಂತಿಕೆ! ದೇವರ ಸೃಷ್ಟಿ ವಿಚಿತ್ರವಪ್ಪಾ ಅನಿಸಿತು. ಈ ಪುಟ್ಟ ಪ್ರಾಣಿಗೆ ಇಷ್ಟೊಂದು ವಿಶ್ಲೇಷಣಾ ಶಕ್ತಿ, ಹೊಸ ದಾರಿಯ ಶೋಧದ ಶಕ್ತಿ, ಕಷ್ಟಗಳನ್ನು ಮೀರುವ ಪವರ್ ಎಲ್ಲ ಇದೆಯಲ್ವಾ ಅನಿಸಿತು.
ಬಿಸಿಲು ಸ್ವಲ್ಪ ಜೋರಾಯಿತು ಅಂತ ಒಳಗೆ ಹೋದರು ರಾಜನ್. ಆದರೆ, ಮನಸು ಕೇಳ್ತಾ ಇರ್ಲಿಲ್ಲ. ಇರುವೆ ಏನಾಯ್ತೋ ಅನ್ನೋ ಕುತೂಹಲ. ಒಂದು ಗಂಟೆ ಬಿಟ್ಟು ಮತ್ತೆ ಬಂದು ನೋಡಿದರು.
ಇರುವೆ ತನ್ನ ಗುರಿಯನ್ನು ತಲುಪಿಬಿಟ್ಟಿತ್ತು. ಗೋಡೆಯ ಪಕ್ಕದ ಸಣ್ಣ ರಂಧ್ರವೊಂದರ ಬಾಗಿಲಿಗೆ ಆ ಎಲೆಯನ್ನು ತಲುಪಿಸುವಲ್ಲಿ ಯಶಸ್ವಿಯಾಗಿತ್ತು. ಬಹುಶಃ ಅದರಾಚೆಗೆ ನೆಲದ ಒಳಗೆ ಅದರ ಮನೆ ಇರಬೇಕು.
ರಾಜನ್ ಗಮನಿಸುತ್ತಾ ಇದ್ದರು. ಬಿಲದ ಬಾಗಿಲು ಒಂದು ಇರುವೆಗಷ್ಟೇ ಹೋಗಬಹುದಾದಷ್ಟು ಸಣ್ಣದಿತ್ತು. ಇರುವೆ ಬಾಗಿಲಲ್ಲೇ ಕುಳಿತು ಎಲೆಯನ್ನು ಒಳಗೆ ತೆಗೆದುಕೊಂಡು ಹೋಗುವುದು ಎಂದು ಯೋಚಿಸುತ್ತಿದ್ದಂತೆ ಭಾಸವಾಯಿತು.
ಗಂಟೆಗಳ ಹಿಂದೆ ಇರುವೆಗೂ ಮನುಷ್ಯರಂತೆಯೇ ಯೋಚಿಸುವ ಮೆದುಳು ಇದೆಯಲ್ವಾ ಅಂತ ಅಚ್ಚರಿಪಟ್ಟಿದ್ದ ಉದ್ಯಮಿಗೆ ಅಯ್ಯೋ ಇರುವೆಗೂ ಮನುಷ್ಯರಂತಹುದೇ ದೌರ್ಬಲ್ಯಗಳೂ ಇವೆಯಲ್ವಾ ಅನಿಸಲು ಆರಂಭವಾಯಿತು.
ಆ ಎಲೆಯನ್ನು ಅಲ್ಲಿವರೆಗೆ ಎಷ್ಟೊಂದು ಕಷ್ಟಪಟ್ಟಿದೆ, ಏನೆಲ್ಲ ಅಡೆತಡೆ ಎದುರಿಸಿದೆ. ಎಷ್ಟೊಂದು ಪ್ಲ್ಯಾನ್‍ಗಳನ್ನು ಮಾಡಿದೆ. ಆದರೆ, ಮನೆಯೊಳಗೆ ಹೋಗಲು ಆಗುತ್ತಿಲ್ಲ! ಬಿಟ್ಟೇ ಹೋಗಬೇಕು.
ರಾಜನ್ ಕೂಡಾ ಯೋಚಿಸಲು ಆರಂಭಿಸಿದರು. ನಾವು ಕೂಡಾ ಕುಟುಂಬದ ಬಗ್ಗೆ ಚಿಂತೆ ಮಾಡ್ತೇವೆ, ಉದ್ಯೋಗದ ಬಗ್ಗೆ ಯೋಚಿಸ್ತೇವೆ. ಅಷ್ಟು ದುಡ್ಡು ಬೇಕು, ಇಷ್ಟು ದೊಡ್ಡ ಮನೆ ಬೇಕು, ಬಿಎಂಡಬ್ಲ್ಯು ಕಾರು ಬೇಕು, ಬ್ರ್ಯಾಂಡೆಡ್ ಡ್ರೆಸ್, ಶೂಗಳೇ ಬೇಕು. ಸ್ವಯಂ ನಾನೇ ನಿದ್ದೆಬಿಟ್ಟು, ಕುಟುಂಬ ಬಿಟ್ಟು, ಎಲ್ಲ ಖುಷಿಗಳನ್ನೂ ತ್ಯಾಗ ಮಾಡಿ ಏನೆಲ್ಲಾ ಮಾಡಿಕೊಂಡೆ. ಆದರೆ, ಎಲ್ಲವೂ ಆ ಬಾಗಿಲಿನ ವರೆಗೆ ಮಾತ್ರ ನನ್ನ ಜತೆಗೆ ಬರ್ತದೆ ಅಲ್ವಾ? ಅದಕ್ಕಿಂತ ಹೆಚ್ಚಾಗಿ ಏನೇನೋ ಮಾಡ್ಬೇಕು ಅನ್ನೋ ಒತ್ತಡ, ಸೋಲಿನ ಭಯ, ಕಳೆದುಕೊಳ್ಳುವ ಭೀತಿಯಲ್ಲೇ ಬದುಕು ಕಳೆದುಹೋಯ್ತಲ್ಲ ಅಂತ ಯೋಚಿಸತೊಡಗಿದರು.
ಇದನ್ನೂ ಓದಿ | Motivational story | ಬೈದು ಬುದ್ಧಿ ಹೇಳುವಷ್ಟು ಪವರ್ ಇದ್ರೂ ಬೆನ್ನುತಟ್ಟಿ ಏನೋ ಹೇಳ್ತೇವಲ್ಲ.. ಅದು ನಿಜವಾದ ಶಕ್ತಿ!