ಕೃಷ್ಣ ಭಟ್ ಅಳದಂಗಡಿ – Motivational story
ಜುವೆಲ್ಲರಿ ಶಾಪ್ ಇಟ್ಟುಕೊಂಡಿದ್ದ ಒಬ್ಬ ಅಕ್ಕಸಾಲಿಗರು ಆಕಸ್ಮಿಕವಾಗಿ ತೀರಿಕೊಂಡರು. ಅಕಾಲಿಕ ಮರಣದಿಂದ ಅವರ ಕುಟುಂಬ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿತು. ದಿನದ ಒಂದು ಹೊತ್ತಿನ ಆಹಾರಕ್ಕೂ ಕಷ್ಟವಾಯಿತು.
ಅಕ್ಕಸಾಲಿಗನಿಗೆ ಇದ್ದದ್ದು ಒಬ್ಬ ಹೆಂಡತಿ ಮತ್ತು 14 ವರ್ಷದ ಮಗ. ಒಂದು ದಿನ ಅಕ್ಕಸಾಲಿಗನ ಹೆಂಡತಿ ಮನೆಯ ಕಪಾಟಿನ ಬಾಗಿಲು ತೆಗೆದಾಗ ಒಂದು ನೆಕ್ಲೇಸ್ ಕಾಣಿಸಿತು. ಆಕೆಗೆ ಜೀವ ಬಂದ ಹಾಗಾಯಿತು. ಇದನ್ನು ಮಾರಾಟ ಮಾಡಿದರೆ ಸ್ವಲ್ಪ ದಿನವಾದರೂ ಊಟ ಮಾಡಬಹುದು ಎನಿಸಿತು. ಆಕೆ ಮಗನನ್ನು ಕರೆದು ಹೇಳಿದಳು: ಇದನ್ನು ತೆಗೆದುಕೊಂಡು ಹೋಗಿ ಅಪ್ಪನ ಫ್ರೆಂಡ್ ಒಬ್ಬರು ಅಂಕಲ್ ಇದ್ದಾರಲ್ವಾ? ಅವರಿಗೆ ಕೊಟ್ಟು ಹಣ ತೆಗೆದುಕೊಂಡು ಬಾ.
ಹುಡುಗ ಅಂಕಲ್ ಅಂಗಡಿಗೆ ಹೋಗಿ ನೆಕ್ಲೇಸ್‍ನ್ನು ಅವರ ಕೈಗೆ ಕೊಟ್ಟ. ಅಂಕಲ್ ಆ ನೆಕ್ಲೇಸನ್ನು ನೋಡಿದರು, ಭಾರ ನೋಡಿದರು. ಬಳಿಕ ಹೇಳಿದರು: ಮಗೂ ನಿನ್ನ ಅಮ್ಮನಿಗೆ ಹೇಳು, ಈಗ ಮಾರ್ಕೆಟ್‍ನಲ್ಲಿ ಚಿನ್ನಕ್ಕೆ ರೇಟು ಸ್ವಲ್ಪ ಕಡಿಮೆ ಇದೆ. ಒಳ್ಳೆ ರೇಟು ಬಂದ ಮೇಲೆ ಮಾರಬಹುದು ಅಂತ ಹೇಳು. ಈಗ ಸ್ವಲ್ಪ ಹಣ ನಾನೇ ಕೊಟ್ಟಿರ್ತೇನೆ. ನೆಕ್ಲೇಸ್ ಮಾರಿದಾಗ ಅದನ್ನು ವಾಪಸ್ ಕೊಟ್ಟರೆ ಸಾಕು.
ಹುಡುಗ ಆಯಿತು ಎಂದು ನೆಕ್ಲೇಸ್ ಹಿಡಿದು ಹೊರಟ. ಆಗ ಅಂಕಲ್ ಮತ್ತೆ ಹುಡುಗನನ್ನು ಕರೆದರು: ನೀನು ಶಾಲೆಗೆ ಹೋಗ್ತೀಯಲ್ಲಾ.. ಶಾಲೆ ಬಿಟ್ಟ ಮೇಲೆ ಸಂಜೆ ಹೊತ್ತು ಇಲ್ಲಿಗೆ ಬಾ. ಇಲ್ಲಿ ಸಣ್ಣಪುಟ್ಟ ಕೆಲಸ ಮಾಡು. ಇದರಿಂದ ನೀನು ಕೂಡಾ ಅಮ್ಮನಿಗೆ ಸಹಾಯ ಮಾಡಿದ ಹಾಗಾಗುತ್ತದೆ ಎಂದರು.
ಮರುದಿನದಿಂದ ಹುಡುಗ ಸಂಜೆ ಹೊತ್ತು ಅಂಗಡಿಗೆ ಹೋಗಲು ಶುರು ಮಾಡಿದ. ರಕ್ತಗತವಾಗಿ ಬಂದ ಗುಣವೋ ಗೊತ್ತಿಲ್ಲ. ಜುವೆಲರಿ ಕೆಲಸ ಬೇಗನೆ ಒಲಿಯಿತು. ಅದರಲ್ಲೂ ಮುಖ್ಯವಾಗಿ ಆಭರಣ ಮತ್ತು ಹರಳುಗಳ ಪರೀಕ್ಷೆ ಮಾಡುವ ವಿಷಯದಲ್ಲಿ ಆತ ನಿಪುಣನಾದ. ಅಂಕಲ್ ಕೊಡುತ್ತಿದ್ದ ಸಣ್ಣ ಮೊತ್ತದಿಂದ ಕುಟುಂಬದ ನಿರ್ವಹಣೆಯೂ ನಡೆಯುತ್ತಿತ್ತು. ಜತೆಗೆ ಹುಡುಗನ ಕೆಲಸ ನೋಡಿ ಬೇರೆ ಕಡೆಯಿಂದಲೂ ಆಫರ್‌ಗಳು ಬಂದವು.
ಅದೊಂದು ದಿನ ಅಂಕಲ್ ಹುಡುಗನನ್ನು ಕರೆದು ಹೇಳಿದರು: ಮಗಾ, ಅಮ್ಮನಿಗೆ ಹೇಳು, ಈಗ ಮಾರ್ಕೆಟ್ ಚೆನ್ನಾಗಿದೆ. ಆ ನೆಕ್ಲೇಸನ್ನು ಮಾರಬಹುದು ಅಂತ ಹೇಳು.
ಹುಡುಗ ಮನೆಗೆ ಹೋಗಿ ಅಮ್ಮನಿಗೆ ವಿಷಯ ತಿಳಿಸಿದ. ಅಮ್ಮ ಮುತ್ತಿನ ನೆಕ್ಲೇಸ್ ತಂದುಕೊಟ್ಟಳು. ಹುಡುಗ ಸುಮ್ಮನೆ ಎಷ್ಟು ಹಣ ಸಿಗಬಹುದು ಎನ್ನುವ ಕುತೂಹಲದಿಂದ ಅದನ್ನು ಪರೀಕ್ಷಿಸಿ ನೋಡಿದ. ಆದರೆ, ಆ ನೆಕ್ಲೇಸ್ ಬಂಗಾರದ್ದಾಗಿರಲಿಲ್ಲ. ಹರಳು ಕೂಡಾ ಒರಿಜಿನಲ್ ಆಗಿರಲಿಲ್ಲ.
ಮರುದಿನ ಅಂಗಡಿಗೆ ಬಂದಾಗ ಅಂಕಲ್ ಕೇಳಿದರು: ನೆಕ್ಲೇಸ್ ಯಾಕೆ ತಂದಿಲ್ಲ ಮಗಾ..
ಹುಡುಗ ಹೇಳಿದ: ಅದು ಒರಿಜಿನಲ್ ಅಲ್ಲ ಅಂಕಲ್.. ನಕಲಿ ಅದು. ಅದು ಸರಿ ನೀವು ಯಾಕೆ ಆವತ್ತು ನಾನು ಮೊದಲ ಬಾರಿ ತಂದಾಗ ಅದು ನಕಲಿ ಎಂದು ಹೇಳಲಿಲ್ಲ? ಈಗ ಮಾರುವುದು ಬೇಡ, ಮುಂದೆ ಮಾರ್ಕೆಟ್‍ನಲ್ಲಿ ಹೆಚ್ಚು ಬೆಲೆ ಸಿಗುವಾಗ ಮಾರೋಣ ಅಂದಿದ್ದು ಯಾಕೆ ಎಂದು ಕೇಳಿದ.
ಅದಕ್ಕೆ ಅಂಕಲ್ ಹೇಳಿದರು: ನೀನು ಆವತ್ತು ನೆಕ್ಲೇಸ್ ತಂದಾಗ ನಿಮಗೆ ಹಣಕಾಸಿನ ತುರ್ತು ಅಗತ್ಯ ಇತ್ತು. ಆಗ ನಾನೇನಾದರೂ ಇದು ನಕಲಿ ಎಂದಿದ್ದರೆ ಒಂದು ನಿನಗೆ, ನಿನ್ನ ತಾಯಿಗೆ ತುಂಬ ಬೇಸರವಾಗುತ್ತಿತ್ತು. ಬದುಕಿಗೆ ಇದ್ದ ಒಂದು ಆಸರೆಯೂ ಕೈ ಬಿಟ್ಟಿತಲ್ಲ ಎಂದು ನೀವು ಆಶಾವಾದವನ್ನೆ ಕಳೆದುಕೊಳ್ಳುವ ಅಪಾಯವಿತ್ತು. ಎರಡನೆಯದು ನಾನೇ ಸುಳ್ಳು ಹೇಳುತ್ತಿದ್ದೇನೆ ಎಂದು ಭಾವಿಸುವ ಸಾಧ್ಯತೆಯೂ ಇತ್ತು. ನಿನ್ನ ಅಪ್ಪನಿಗೆ ನಾನು ಒಳ್ಳೆಯ ಗೆಳೆಯ. ಆದರೂ ಕುಟುಂಬಕ್ಕೆ ಮೋಸ ಮಾಡಿದೆ ಎಂದು ನೀವು ತಿಳಿದುಕೊಳ್ಳುತ್ತಿದ್ದಿರೇನೋ. ಅದಕ್ಕಾಗಿ ಇನ್ನೊಮ್ಮೆ ಮಾರಬಹುದು ಎಂದು ಸಾಗ ಹಾಕಿದೆ. ಅದಕ್ಕಿಂತಲೂ ಹೆಚ್ಚಾಗಿ ನನಗೆ ನೆಕ್ಲೇಸನ್ನೋ, ಇನ್ನೇನನ್ನೋ ಇಟ್ಟುಕೊಂಡು ಸಹಾಯ ಮಾಡುವುದು ಬೇಕಿರಲಿಲ್ಲ. ನನ್ನ ಗೆಳೆಯನ ಕುಟುಂಬಕ್ಕೆ ಆಸರೆಯಾಗಬೇಕು ಅಂತ ಬಯಸಿ ನಿನಗೆ ಕೌಶಲವನ್ನು ಕಲಿಸಿದೆ. ಈಗ ನೀನೇ ಅದನ್ನು ಪರೀಕ್ಷಿಸಬಲ್ಲೆ. ನಿನಗೇ ಎಲ್ಲ ನಿಜಗಳು ಅರ್ಥವಾಗಿವೆ. ಅಂಕಲ್ ಹೆಲ್ಪ್ ಮಾಡಿದ್ರು ಅಂತ ನೀನು ಅಂದುಕೊಳ್ತೀಯಲ್ಲಾ.. ಅಷ್ಟು ಸಾಕು.
ಇದನ್ನೂ ಓದಿ | Motivational story |ಒಂದೇ ಊರು, ಒಬ್ಬನೇ ವ್ಯಕ್ತಿ ಒಂದೇ ಪ್ರಶ್ನೆ, ಎರಡು ಉತ್ತರ! ಯಾಕೆ ಹೀಗೆ?