ಕೃಷ್ಣ ಭಟ್ ಅಳದಂಗಡಿ- Motivational story
ಒಬ್ಬ ಶ್ರೀಮಂತ ವ್ಯಕ್ತಿ ಇರ್ತಾರೆ. ದೊಡ್ಡ ಜಮೀನ್ದಾರ. ಅವರಿಗೆ ನಾಲ್ವರು ಗಂಡು ಮಕ್ಕಳು. ಎಲ್ಲರಿಗೂ ಇಂತಿಷ್ಟು ಜಮೀನು ಅಂತ ನಿಗದಿ ಮಾಡಿ ಕೊಡಲಾಗಿತ್ತು. ಅವರು ಮನೆ ಕಟ್ಟಿಕೊಂಡು ಮಡದಿ ಮಕ್ಕಳೊಂದಿಗೆ ನೆಮ್ಮದಿಯಾಗಿದ್ದರು. ಅಷ್ಟಾದರೂ ಜಮೀನ್ದಾರರ ಬಳಿ ದೊಡ್ಡ ಪ್ರಮಾಣದ ಭೂಮಿ ಇತ್ತು. ಅದನ್ನು ತನ್ನ ಕಾಲಾಂತರದಲ್ಲಿ ಏನು ಮಾಡುವುದು ಎನ್ನುವ ಬಗ್ಗೆ ಯೋಚಿಸ್ತಾ ಇದ್ದರು.
ಅದೊಂದು ದಿನ ತಮ್ಮ ನಾಲ್ಕೂ ಗಂಡು ಮಕ್ಕಳನ್ನು, ಅವರ ಪತ್ನಿಯರನ್ನು ಕರೆಸಿಕೊಂಡರು ಯಜಮಾನರು. ಎಲ್ಲರನ್ನೂ ಕೂರಿಸಿ,`ʻʻನಾನು ನಿಮಗೆಲ್ಲರಿಗೂ ಒಂದು ಸೇರು ವಿಶೇಷವಾದ ಭತ್ತವನ್ನು ಕೊಡುತ್ತೇನೆ. ಇದನ್ನು ನೀವು ಏನು ಬೇಕಾದರೂ ಮಾಡಬಹುದು. ಆದರೆ, ಜತನದಿಂದ ಕಾಪಾಡಬೇಕು. ಮೂರು ವರ್ಷದ ನಂತರ ಇದೇ ದಿನ ಅದನ್ನು ತಂದು ನನಗೆ ಒಪ್ಪಿಸಬೇಕು” ಎಂದು ಹೇಳಿದರು.
ಮಕ್ಕಳಿಗೆ ಅಪ್ಪನ ಹೊಸ ಆಟ ಏನು ಅಂತ ಕುತೂಹಲವಾಯಿತಾದರೂ, ಕೆಲವರಂತೂ ವಯಸ್ಸಾಗ್ತಾ ಆಗ್ತಾ ಅರುಳು ಮರುಳಾಗಿದೆ ಅಂದುಕೊಂಡರು. ಆದರೂ ಮಾತು ಮೀರಲಾಗದೆ ಅದನ್ನು ಸ್ವೀಕರಿಸಿದರು.
ಮೂರು ವರ್ಷ ಕಳೆಯಿತು. ಭತ್ತವನ್ನು ಮರಳಿ ತಂದುಕೊಡುವ ದಿನ ಇವತ್ತು ಅಂತ ಅಪ್ಪನೇ ನೆನಪು ಮಾಡಿದ್ದರು.
ಮೊದಲು ದೊಡ್ಡ ಮಗ ಮತ್ತು ಕುಟುಂಬ ಬಂತು. ದೊಡ್ಡ ಮಗ ಅಪ್ಪ ಕೊಟ್ಟ ಭತ್ತವನ್ನು ಯಾರು ಜೋಪಾನ ಮಾಡುತ್ತಾರೆ ಅಂತ ಎಲ್ಲೋ ಎಸೆದುಬಿಟ್ಟಿದ್ದ. ಮರಳಿ ಕೊಡಬೇಕಾದ ದಿನ ಬಂದಾಗ ಕೈಗೆ ಸಿಕ್ಕಿದ ಭತ್ತವನ್ನು ತೆಗೆದುಕೊಂಡು ಬಂದಿದ್ದರು. ಅಪ್ಪನಿಗೆ ಇದು ಗೊತ್ತಾಯಿತು. ಆದರೂ ಏನೂ ಮಾತನಾಡಲಿಲ್ಲ.
ಎರಡನೇ ಮಗ ಬಂದ. ಅವನು ಅಪ್ಪನ ಮಾತನ್ನು ಪಾಲಿಸುವುದಕ್ಕಾಗಿ ಅತ್ಯಂತ ಜತನದಿಂದ ಅದನ್ನು ಒಂದು ಡಬ್ಬಿಯಲ್ಲಿ ಹಾಕಿ ರಕ್ಷಿಸಿದ್ದ. ಅತ್ಯಂತ ಖುಷಿಯಿಂದ ತಂದು ಕೊಟ್ಟ. ಅಪ್ಪ ಅದನ್ನು ಪರೀಕ್ಷಿಸಿ ʻಚೆನ್ನಾಗಿ ಕಾಪಾಡಿದ್ದೀರಿ’ ಎಂದು ಶಹಬ್ಬಾಸ್ ಹೇಳಿದ. ಅವನಿಗೆ ಖುಷಿಯಾಗಿ ಅಣ್ಣನತ್ತ ನೋಡಿ ನಕ್ಕ.
ಮೂರನೇ ಮಗ ಖಾಲಿ ಕೈಯಲ್ಲಿ ಬಂದ. ʻʻಅಪ್ಪಾ ನೀನು ಕೊಟ್ಟ ಅಕ್ಕಿಯನ್ನು ಜೋಪಾನವಾಗಿಯೇ ಇಟ್ಟಿದ್ದೆ. ಆದರೆ, ಅದೊಂದು ದಿನ ಮನೆಯಲ್ಲಿ ಅನ್ನಕ್ಕೂ ಅಕ್ಕಿ ಇರಲಿಲ್ಲ. ಹೀಗಾಗಿ ಅದನ್ನೇ ಅಡುಗೆ ಮಾಡಿ ಊಟ ಮಾಡಿದೆವು. ನೀನು ಕೊಟ್ಟ ಭತ್ತವನ್ನು ನಿಜಕ್ಕೂ ಸರಿಯಾಗಿ ಬಳಸಿದ್ದೇವೆ ಅಪ್ಪಾ” ಎಂದ. ʻನಾನು ಕೊಟ್ಟ ಭತ್ತ ನಿಮ್ಮ ಹೊಟ್ಟೆ ತುಂಬಿಸಿದ್ದರೆ ಅದಕ್ಕಿಂತ ದೊಡ್ಡ ಖುಷಿ ಏನಿದೆ ಮಗನೆ’ ಎಂದು ಶುಭ ಹಾರೈಸಿದರು.
ಇನ್ನುಳಿದದ್ದು ನಾಲ್ಕನೇ ಮಗ. ಆವನಿನ್ನೂ ಬಂದಿರಲಿಲ್ಲ. ಮೂರೂ ಜನ ಅಣ್ಣ-ತಮ್ಮಂದಿರು ʻಎಲ್ಲಿಟ್ಟಿದ್ದೇನೆ ಎಂದು ನೆನಪಾಗ್ತಿಲ್ವೇನೋ’ ಅಂತ ತಮಾಷೆ ಮಾಡುತ್ತಿದ್ದರು. ಅಷ್ಟು ಹೊತ್ತಿಗೆ ಮನೆಯ ಹೊರಗಡೆ ದೊಡ್ಡ ವಾಹನವೊಂದು ಬಂದು ನಿಂತಿತು. ಅದರಲ್ಲಿದ್ದ ಆಳುಗಳು ಹಲವು ಮೂಟೆಗಳನ್ನು ತಂದಿಟ್ಟರು.
ಬಹುಶಃ ಏನೋ ಆರ್ಡರ್ ಮಾಡಿದ್ದನ್ನು ತಂದಿದ್ದಾರೆ ಎಂದು ಎಲ್ಲರೂ ಭಾವಿಸಿದರು. ಅಷ್ಟು ಹೊತ್ತಿಗೆ ಅದೇ ವಾಹನದಿಂದ ಕೊನೆಯ ಮಗ ಇಳಿದು ಬಂದ.
ಅಪ್ಪ ಆಶ್ಚರ್ಯದಿಂದ ಕೇಳಿದರು: ನಾನು ಕೊಟ್ಟ ಅಕ್ಕಿ ಎಲ್ಲೋ?
ಕೊನೆಯ ಮಗ ಹೇಳಿದ: ಅಪ್ಪಾ.. ಆವತ್ತು ನೀವು ಒಂದು ಸೇರು ಭತ್ತ ಕೊಟ್ರಲ್ವಾ.. ಅದನ್ನು ಏನು ಮಾಡೋದು ಅಂತ ಯೋಚನೆ ಮಾಡ್ತಾ ಇದ್ದೆ. ಆಗ ನನ್ನ ಹೆಂಡತಿ ಹೇಳಿದಳು, ಇದನ್ನು ನಾವು ಬಿತ್ತೋಣ. ಬೆಳೆ ಬಂದಾಗ ಅದನ್ನೂ ಬಿತ್ತಿ ಹೊಸ ಬೆಳೆ ತೆಗೆಯೋಣ ಅಂತ. ಹಾಗೆ ನಾವು ಮೂರು ಬೆಳೆ ಮಾಡಿದ್ದೇವೆ. ಅದರ ಒಟ್ಟಾರೆ ಫಸಲನ್ನು ತಂದಿದ್ದೇವೆ. ಬೈಹುಲ್ಲು ತಂದಿಲ್ಲ ಅಪ್ಪಾ.. ಇನ್ನೊಮ್ಮೆ ತರುತ್ತೇನೆ.
ಅಪ್ಪ ನಾಲ್ಕನೇ ಮಗನನ್ನು ಬಾಚಿ ತಬ್ಬಿಕೊಂಡರು. ಒಂದು ಬೀಜದ ಮಹತ್ವವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀಯಾ? ಇವತ್ತು ಅದೊಂದೇ ಬೀಜ ಆಗಿರಬಹುದು, ಒಂದೇ ಬೀಜಕ್ಕೆ ಲಕ್ಷಾಂತರ ಬೀಜಗಳನ್ನು ಸೃಷ್ಟಿಸುವ ಶಕ್ತಿ ಇದೆ. ಅದನ್ನು ಚೆನ್ನಾಗಿ ಬಳಸಿಕೊಂಡಿದ್ದೀಯಾ? ನಿನ್ನ ಬುದ್ಧಿವಂತಿಕೆಗೆ ಮೆಚ್ಚಿದ್ದೇನೆ. ನನ್ನ ಪಾಲಿನ ಜಾಗವನ್ನು ನಿನಗೇ ನೀಡುತ್ತಿದ್ದೇನೆ. ನನ್ನ ಪರಂಪರೆಯನ್ನು ನೀನೇ ಉಳಿಸಬೇಕು ಎಂದು ಹೇಳಿದರು. ಉಳಿದ ಅಣ್ಣ ತಮ್ಮಂದಿರು ಪೆಚ್ಚು ಮೋರೆ ಹಾಕಿದರು.
ಆಗ ಕೊನೆಯ ಮಗ ಹೇಳಿದ: ಅಪ್ಪಾ.. ನನಗೆ ಯಾವ ಪಾಲೂ ಬೇಡಪ್ಪಾ.. ಕೊಡುವುದಿದ್ದರೆ ಎಲ್ಲರಿಗೂ ಸಮನಾಗಿ ಕೊಡು. ಇಲ್ಲಿವರೆಗೆ ನಿನ್ನ ಬದುಕಿನ ಪಾಠ ನನ್ನ ಅಣ್ಣನವರಿಗೆ ಅರ್ಥ ಆಗಿರಲಿಲ್ಲ. ಈಗ ಗೊತ್ತಾಗಿದೆ. ಮುಂದೆ ನನಗಿಂತಲೂ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಅಂದ.
ಅಪ್ಪ ದೇವರಿಗೆ ಕೈಮುಗಿಯುತ್ತಾ ಗದ್ಗದಗೊಂಡ.
ಇದನ್ನೂ ಓದಿ | Motivational story | ಶ್ರೀಮಂತ ಉದ್ಯಮಿ ಮರಣ ಮಂಚದಲ್ಲಿ ಕುಳಿತು ಬರೆದ ವಿದಾಯ ಪತ್ರದಲ್ಲಿ ಏನಿತ್ತು?