Site icon Vistara News

Motivational story: ಸ್ವಲ್ಪ ನೋವು ಸಹಿಸಿಕೊಂಡಿದ್ದರೆ ನೀನೇ ಮೂರ್ತಿಯಾಗುತ್ತಿದ್ದೆ!

stone and idol
https://vistaranews.com/wp-content/uploads/2023/01/Motivational-story-shile.mp3
ಸ್ಫೂರ್ತಿ ಕಥೆಯನ್ನು ಕೇಳಿ.. ಕುಸುಮಾ ಆಯರಳ್ಳಿ ಅವರ ಧ್ವನಿಯಲ್ಲಿ..

ಕೃಷ್ಣ ಭಟ್‌ ಅಳದಂಗಡಿ-Motivational story
ಒಬ್ಬ ಶಿಲ್ಪಿ ಒಂದು ಸಾರಿ ಮೂರ್ತಿ ಮಾಡಲು ಕಲ್ಲು ಹುಡುಕುತ್ತಾ ಬೆಟ್ಟಕ್ಕೆ ಹೋದ. ಅತ್ತಿತ್ತ ಅಲೆಯುತ್ತಾ ತನಗೆ ಸರಿಯಾಗುವ ಶಿಲೆಗಾಗಿ ಕಣ್ಣರಳಿಸಿ ನೋಡಿದ, ಮುಟ್ಟಿ ನೋಡಿದ. ಚಾಣದಲ್ಲಿ ಮೆಲ್ಲಗೆ ಬಡಿದು ನೋಡಿದ. ಕೊನೆಗೆ ಒಂದು ಕಡೆ ಒಂದು ಕಲ್ಲು ಅವನಿಗೆ ಇಷ್ಟವಾಯಿತು. ಹಾಗೆ ಅದನ್ನು ಮನೆಗೆ ಸಾಗಿಸುವ ವ್ಯವಸ್ಥೆ ಮಾಡಿದ.

ಮುಂದೆ ಸಾಗ್ತಾ ಇದ್ದ ಹಾಗೆ ಅವನಿಗೆ ಇನ್ನೂ ಹೊಳಪಾದ, ಮೂರ್ತಿ ಮಾಡುವುದಕ್ಕೆ ಇನ್ನಷ್ಟು ಅನುಕೂಲ ಅನಿಸುವ ಮತ್ತೊಂದು ಕಲ್ಲು ಕಂಡಿತು. ಓ ಅದಕ್ಕಿಂತಲೂ ಇದು ಚೆನ್ನಾಗಿದೆ ಅನಿಸಿ ಅದನ್ನೂ ಮನೆಗೆ ಸಾಗಿಸಿದ.

ಮನೆಗೆ ಬಂದ. ಎರಡೂ ಕಲ್ಲುಗಳನ್ನು ನೋಡಿದ. ಎರಡನೇ ಸಲ ಕಂಡ ಕಲ್ಲಿನಿಂದ ಮೂರ್ತಿ ಮಾಡಿದರೆ ಚೆನ್ನಾಗಿ ಆದೀತು ಅಂದುಕೊಂಡು ಉಳಿ, ಚಾಣ ಮತ್ತಿತರ ಸಲಕರಣೆಗಳನ್ನು ಜೋಡಿಸಿದ. ಆದರೆ, ಮೊದಲ ಉಳಿಪೆಟ್ಟು ತಿನ್ನುತ್ತಲೇ ಕಲ್ಲು ಮಾತನಾಡತೊಡಗಿತು: ಅಣ್ಣಾ ದಯವಿಟ್ಟು ಹೊಡೆಯಬೇಡ. ತುಂಬ ನೋವಾಗುತ್ತದೆ ನಂಗೆ. ಬಿಟ್ಟು ಬಿಡು ನನ್ನ- ಅಂತ ಕೇಳಿಕೊಂಡಿತು.

ಕಲ್ಲಿನ ಹೃದಯ ಅರಿಯುವಷ್ಟು ಸೂಕ್ಷ್ಮ ವ್ಯಕ್ತಿಯಾದ ಶಿಲ್ಪಿಯ ಹೃದಯವೂ ಕರಗಿತು. ಅವನು ಆ ಕಲ್ಲನ್ನು ಬದಿಗಿಟ್ಟು ಸಾಮಾನ್ಯ ಎನಿಸಿದ್ದ ಮತ್ತೊಂದು ಕಲ್ಲಿನಿಂದ ಮೂರ್ತಿ ಮಾಡಲು ನಿರ್ಧರಿಸಿ ಉಳಿ ಪೆಟ್ಟು ನೀಡಲು ಆರಂಭಿಸಿದ. ನಿಜವೆಂದರೆ, ಈ ಕಲ್ಲಿಗೂ ನೋವಾಗುತ್ತಿತ್ತು. ಆದರೂ ಅವುಡುಗಚ್ಚಿಕೊಂಡು ಸಹಿಸಿಕೊಂಡಿತು. ಕೆಲವೇ ದಿನದಲ್ಲಿ ಮೂರ್ತಿ ಸಿದ್ಧವಾಯಿತು. ಮೂರ್ತಿ ಬೇಕು ಎಂದು ಹೇಳಿದ್ದ ಗ್ರಾಮಸ್ಥರು ಬಂದರು. ಮೂರ್ತಿಯ ಚಂದಕ್ಕೆ ಬೆರಗಾದರು. ಅದನ್ನು ಒಯ್ಯುವಾಗ ಇನ್ನೊಂದು ಸಾಮಾನ್ಯ ಕಲ್ಲು ಸಿಗಬಹುದಾ ಎಂದು ಶಿಲ್ಪಿಯನ್ನು ಕೇಳಿದರು. ಆಗ ಶಿಲ್ಪಿ ಆ ಎರಡನೇ ಕಲ್ಲನ್ನು ತೋರಿಸಿದ.

ಗ್ರಾಮಸ್ಥರು ಎರಡೂ ಕಲ್ಲನ್ನು ಒಯ್ದರು. ತಾವು ಕಟ್ಟಿದ ದೇವಸ್ಥಾನದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಹೊರಗಡೆ ಎರಡನೇ ಕಲ್ಲನ್ನು ನೆಟ್ಟರು. ಊರಿನ ಎಲ್ಲ ಭಕ್ತರು ಬಂದು ಮೂರ್ತಿಗೆ ಹಾಲು, ಎಳನೀರು ಅಭಿಷೇಕ ಮಾಡಲು ಶುರು ಮಾಡಿದರು. ಕೈಮುಗಿದರು, ನಮಿಸಿದರು. ಬಳಿಕ ಪಕ್ಕದಲ್ಲೇ ಇದ್ದ ಕಲ್ಲಿಗೆ ತೆಂಗಿನಕಾಯಿ ಒಡೆದರು.

ಇದನ್ನೆಲ್ಲ ನೋಡುತ್ತಿದ್ದ ಎರಡನೇ ಕಲ್ಲಿಗೆ ಅಳುವೇ ಬಂತು. ಅದು ಮೂರ್ತಿಯ ಬಳಿ ತನ್ನ ಕಷ್ಟ ಹೇಳಿಕೊಂಡಿತು.`ಜನ ನಿನಗೆ ಹಾಲು, ತುಪ್ಪದ ಅಭಿಷೇಕ ಮಾಡ್ತಾರೆ. ನನ್ನ ತಲೆಗೆ ಬಂದು ಡಬ್ಬಾಂತ ಹೊಡೀತಾರೆ. ಎಷ್ಟೊಂದು ತಾರತಮ್ಯ ಮಾಡ್ತಾರೆ? ಎಷ್ಟು ನೋವಾಗುತ್ತೆ ಗೊತ್ತಾ?” ಅಂತ.

ಅದಕ್ಕೆ ಮೂರ್ತಿ ಹೇಳಿತು: ನಾನೂ ಗಮನಿಸಿದೆ ಗೆಳೆಯಾ.. ನಿಜವೆಂದರೆ ನಾನು ನೀನು ಗುಡ್ಡದ ಮೇಲೆ ಒಟ್ಟಿಗೇ ಬಿದ್ದುಕೊಂಡಿದ್ದವರು. ಇಬ್ಬರನ್ನೂ ಶಿಲ್ಪಿ ಮನೆಗೆ ಕರೆದುಕೊಂಡು ಬಂದ. ಸತ್ಯ ಹೇಳಬೇಕು ಎಂದರೆ ಮೂರ್ತಿಯಾಗಬೇಕಾಗಿದ್ದವನು ನೀನು. ಮೊದಲು ಬಯಸಿದ್ದೇ ನಿನ್ನನ್ನು. ನಿನ್ನ ಹೊಳಪೂ ಜಾಸ್ತಿ ಇತ್ತು. ಆದರೆ, ನೀನು ನೋವು ಅಂತ ಚೀರಿದೆ. ಹಾಗಾಗಿ ನಿನ್ನನ್ನು ಬಿಟ್ಟು ನನ್ನನ್ನು ಆರಿಸಿಕೊಂಡ. ಆವತ್ತು ನೀನು ಸ್ವಲ್ಪ ನೋವು ಸಹಿಸಿಕೊಂಡಿದ್ದರೆ ನನ್ನ ಜಾಗದಲ್ಲಿ ನೀನಿರುತ್ತಿದ್ದೆ- ಎಂದು ಹೇಳಿತು.

Motivational story | ಅಪಮಾನಗಳಿಗೆ ಜಗ್ಗದಿರು ಮಗಳೇ, ಎದ್ದು ಕುಣಿಯುತ್ತಿರು

Exit mobile version