ಕೃಷ್ಣ ಭಟ್ ಅಳದಂಗಡಿ- Motivational story
ಒಬ್ಬರು ಸನ್ಯಾಸಿ ಒಂದು ಮರದ ಕೆಳಗೆ ಕುಳಿತಿದ್ದರು. ಹಾಗೆ ಧ್ಯಾನಸ್ಥರಾಗಿದ್ದಾಗ ಅವರ ಬೋಳು ತಲೆಗೆ ಒಂದು ಹನಿ ಬಿದ್ದಂತಾಯಿತು. ಏನೂ ಅಂತ ತಲೆ ಎತ್ತಿ ನೋಡಿದರೆ ಮೇಲೆ ಕೊಂಬೆಯಲ್ಲಿ ಒಂದು ಕಾಗೆ ಕೂತಿತ್ತು. ಸನ್ಯಾಸಿ ಗಮನವಿಟ್ಟು ನೋಡಿದಾಗ ಕಾಗೆ ಅಳುತ್ತಿರುವುದು ಕಂಡುಬಂತು. ಅವರು ಕಾಗೆ ಬಳಿ, ಯಾಕಳುತ್ತಿದ್ದೀಯಾ ಮರಿ ಎಂದು ಪ್ರೀತಿಯಿಂದ ಕೇಳಿದರು.
ಆಗ ಕಾಗೆ ಹೇಳಿತು: ಗುರುಗಳೇ ನನಗೆ ಬದುಕೇ ಬೇಸರವಾಗಿದೆ. ಯಾರೂ ಕೂಡಾ ನನ್ನನ್ನು ಪ್ರೀತಿಸುತ್ತಿಲ್ಲ. ನನ್ನ ಕಪ್ಪು ಬಣ್ಣ, ಅಪಶಕುನವೆಂಬ ನಂಬಿಕೆಗಳು ಎಲ್ಲರೂ ನನ್ನನ್ನು ದೂರ ಮಾಡುವಂತೆ ಮಾಡಿವೆ. ನಾನು ಅಂಗಳಕ್ಕೆ ಹೋದರೆ ಸಾಕು ಓಡಿಸುತ್ತಾರೆ. ಯಾರೂ ತಿನ್ನಲು ಏನೂ ಕೊಡುವುದಿಲ್ಲ. ಎಲ್ಲರೂ ನನ್ನನ್ನು ದ್ವೇಷಿಸುವವರೇ. ಹೀಗೆ ಬದುಕುವುದಕ್ಕಿಂತ ಸಾಯುವುದೇ ಒಳ್ಳೆಯದಲ್ವೇ ಅಂತ ಕೆಲವೊಮ್ಮೆ ಅನಿಸುತ್ತದೆ.
ಕಾಗೆಯ ಮಾತು ಕೇಳಿ ಗುರುಗಳಿಗೂ ಕರುಣೆ ಬಂತು. ಅವರೊಂದು ವಿವೇಕದ ಮಾತು ಹೇಳಿದರು: ಮಗೂ ನಾವು ಹೇಗಿರುತ್ತೇವೆಯೋ ಅದರಲ್ಲೇ ಸಂತೋಷವನ್ನು ಕಾಣಬೇಕು.
ಆದರೆ, ಕಾಗೆಗೆ ಅದು ಹಿತವಾಗಲಿಲ್ಲ. ನನ್ನ ಕಷ್ಟ ನಿಮಗೂ ಅರ್ಥವಾಗಲಿಲ್ಲವಲ್ಲ ಗುರುಗಳೆ ಎಂದು ಇನ್ನಷ್ಟು ಬೇಸರಿಸಿತು. ಆಗ ಸನ್ಯಾಸಿ `ಆಯಿತು ಬಿಡು.. ನಿನಗೀಗ ಏನಾಗಬೇಕು ಅಂತ ಆಸೆ ಇದೆ. ಅದನ್ನು ಹೇಳು. ನನ್ನ ಮಂತ್ರಶಕ್ತಿಯಿಂದ ಹಾಗೆ ಮಾಡುತ್ತೇನೆ’ ಅಂದರು. ಕಾಗೆಗೆ ಖುಷಿಯಾಯಿತು. `ಹಾಗಿದ್ದರೆ ಗುರುಗಳೇ ದಯವಿಟ್ಟು ನನ್ನನ್ನು ನೀರಿನಲ್ಲಿ ಈಜುವ ಒಂದು ಹಂಸವಾಗಿ ಮಾಡಿ ಪ್ಲೀಸ್’ ಎಂದಿತು.
ಆಗ ಗುರುಗಳು `ಖಂಡಿತಾ ಮಾಡುತ್ತೇನೆ. ಆದರೆ, ಒಂದು ಮಾತು. ನೀನೊಮ್ಮೆ ಹಂಸದ ಬಳಿ ಹೋಗಿ ಅದು ಖುಷಿಯಾಗಿದೆಯೇ ಅಂತ ಕೇಳಿಕೊಂಡು ಬಾ’ ಎಂದರು.
ಕಾಗೆ ವಿಶಾಲ ಸರೋವರದಲ್ಲಿರುವ ಹಂಸದ ಬಳಿ ಹೋಗಿ ಹೇಳಿತು: ಓ ಅಚ್ಚ ಬಿಳಿಯ ಹಂಸವೇ, ನೀನೆಷ್ಟು ಸುಂದರ. ನಿನ್ನನ್ನು ಎಲ್ಲರೂ ಪ್ರೀತಿಸುತ್ತಾರೆ. ನಿನಗೆ ತುಂಬ ಖುಷಿ ಆಗುತ್ತಿರಬಹುದಲ್ಲವೇ?
ಆಗ ಹಂಸ ಬೇಸರದಿಂದ ಹೇಳಿತು: ಇಲ್ಲ ಗೆಳೆಯ, ನಾನು ಸಂತೋಷವಾಗಿಲ್ಲ. ಜಗತ್ತಿನಲ್ಲಿ ಎಷ್ಟೊಂದು ಬಣ್ಣಗಳಿವೆ. ನಾನು ಮಾತ್ರ ಈ ಬಿಳಿ ಬಣ್ಣ ಹಚ್ಚಿಕೊಂಡು ಕೂತಿದ್ದೇನೆ. ನಿನ್ನ ಕಪ್ಪು ಹೇಗೋ ನನ್ನ ಬಿಳಿಯೂ ಹಾಗೇ. ಆ ಗಿಳಿಯನ್ನು ನೋಡು, ಎಷ್ಟೊಂದು ಬಣ್ಣಗಳಿವೆ. ಅದು ನಿಜವಾಗಿ ಸುಂದರ.
ಕಾಗೆ ಗಿಣಿಯ ಬಳಿ ಹೋಗಿ ಹೇಳಿತು: ಪಂಚರಂಗಿ ಗಿಣಿಯೇ ನೀನೆಷ್ಟು ಸುಂದರವಾಗಿದ್ದಿ. ಬಹುಶಃ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಖುಷಿಯಲ್ಲಿರುವ ಹಕ್ಕಿ ನೀನೇ ಇರಬಹುದು.
ಆಗ ಗಿಣಿ ಹೇಳಿತು: ಇಲ್ಲ ಗೆಳೆಯಾ, ನಾನು ಸಂತೋಷವಾಗಿಲ್ಲ. ಜನರು ಗಿಳಿಗಳನ್ನು ಗೂಡಿನಲ್ಲಿ ಕೂಡಿ ಹಾಕುತ್ತಾರೆ. ನಂಗೆ ಎಲ್ಲಿದ್ದರೂ ಜನ ನನ್ನನ್ನು ಬಲೆ ಬೀಸಿ ಹಿಡಿದು ಗೂಡಿಗೆ ಹಾಕುತ್ತಾರೆ ಅನ್ನೋ ಭಯವೇ ಕಾಡುತ್ತಿರುತ್ತದೆ. ನನಗನಿಸುತ್ತದೆ ನಮಗಿಂತ ನವಿಲು ಹೆಚ್ಚು ಖುಷಿಯಾಗಿರುತ್ತದೆ ಅಂತ.
ಕಾಗೆ ತುಂಬ ಹುಡುಕಿದ ಬಳಿಕ ನವಿಲು ಕಂಡಿತು. ಮೃಗಾಲಯದ ವಿಶಾಲ ಜಾಗದಲ್ಲಿ ಅದು ಓಡಾಡುತ್ತಿತ್ತು. ಅದು ರೆಕ್ಕೆ ಬಿಚ್ಚಿ ಕುಣಿಯುವುದನ್ನು ನೋಡಲು ನೂರಾರು ಜನರು ನೆರೆದಿದ್ದರು. ಅವರೆಲ್ಲ ಹೋದ ಬಳಿಕ ಕಾಗೆ ನವಿಲನ್ನು ಕೇಳಿತು: ಪ್ರೀತಿಯ ನವಿಲೇ, ನೀನು ಎಷ್ಟು ಚಂದ ಇದ್ದೀ ಎಂದರೆ ನಿನ್ನನ್ನು ನೋಡಲು ಎಷ್ಟೊಂದು ಜನ ಬರುತ್ತಾರೆ ಅಲ್ವಾ? ನೀನು ತುಂಬ ಖುಷಿಯಾಗಿರಬೇಕಲ್ವಾ?
ಆಗ ನವಿಲು ಹೇಳಿತು: ಹೌದು, ನನ್ನ ಸೌಂದರ್ಯ, ಬಣ್ಣದ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ, ಅದೇ ನನಗೆ ಮುಳುವಾಗಿದೆ. ಸೌಂದರ್ಯದ ಕಾರಣಕ್ಕಾಗಿಯೇ ನನ್ನನ್ನು ಇಲ್ಲಿ ಕೂಡಿ ಹಾಕಿದ್ದಾರೆ. ಚಂದದ ಗರಿಗಳನ್ನು ಕೀಳುವಾಗ ಎಷ್ಟೊಂದು ನೋವಾಗುತ್ತದೆ ಗೊತ್ತಾ.. ಎಂದಿತು.
ಕಾಗೆಗೆ ಆಶ್ಚರ್ಯವಾಯಿತು. ನೀನೇ ಖುಷಿಯಾಗಿಲ್ಲ ಎಂದರೆ ಇನ್ಯಾರು ಖುಷಿಯಾಗಿರುತ್ತಾರೆ ಗೆಳೆಯ ಎಂದು ಕೇಳಿತು. ಆಗ ನವಿಲು ಹೇಳಿತು: ನಿಜ ಹೇಳಲಾ, ನಾನು ಎಲ್ಲರನ್ನೂ ಗಮನಿಸುತ್ತಿದ್ದೇನೆ. ನನಗೆ ಕೆಲವೊಮ್ಮೆ ಅನಿಸುತ್ತದೆ, ನಾನು ನವಿಲಾಗದೆ ನಿನ್ನ ಹಾಗೆ ಕಾಗೆಯಾಗಿದ್ದರೆ ಎಷ್ಟೊಂದು ಚೆನ್ನಾಗಿತ್ತು ಅಂತ. ಕಾಗೆಗಳನ್ನು ಯಾರೂ ಬಂಧಿಸಿಡುವುದಿಲ್ಲ. ಎಲ್ಲಿಗೆ ಹೋಗಲೂ ನಿರ್ಬಂಧಗಳಿಲ್ಲ. ಅದರ ಬಣ್ಣಕ್ಕೆ ಮಾರುಹೋಗಿ ಕೊಲ್ಲುವುದಿಲ್ಲ.
ಇದನ್ನು ಕೇಳಿದ ಕಾಗೆ ಸನ್ಯಾಸಿಗೆ ವಿಷಯ ತಿಳಿಸಲೆಂದು ಅತ್ತ ಹಾರಿತು. ಮೊದಲ ಬಾರಿಗೆ ಆ ಹಾರಾಟದಲ್ಲಿ ಅದಮ್ಯವಾದ ವಿಶ್ವಾಸವಿತ್ತು, ಹೆಮ್ಮೆ ಇತ್ತು.
ಇದನ್ನೂ ಓದಿ| Motivational story | ನನ್ನ ಸಂಬಳ ನೀವು ನಿರ್ಧರಿಸೋದಲ್ಲ, ನಾನು ನಿರ್ಧರಿಸೋದು!