ಕೃಷ್ಣ ಭಟ್ ಅಳದಂಗಡಿ- motivational story
ಮೆಟ್ರೋ ಬಜಾರ್ ಹೊರಗಡೆ ಒಬ್ಬ ಮಹಿಳೆ ನಿಂತಿದ್ದರು. ಆಕೆಯ ದಿರಸು, ಧರಿಸಿದ ಗಾಗಲ್ಸ್, ಸ್ಟೈಲ್ ಎಲ್ಲವೂ ಆಕೆಯ ಶ್ರೀಮಂತಿಕೆಯನ್ನು ಸಾರುತ್ತಿತ್ತು. ಅದೇ ಹೊತ್ತಿಗೆ ಅಲ್ಲಿಗೆ ಮತ್ತೊಬ್ಬ ಮಹಿಳೆ ಬಂದರು. ಸಾಧಾರಣವಾದ ಸೀರೆ ಉಟ್ಟಿದ್ದ ಅವರಿಗೆ ಮಧ್ಯಮ ವರ್ಗದ ಲುಕ್ ಇತ್ತು.
ಎರಡನೇ ಮಹಿಳೆ ಬಂದವರೇ ಕೇಳಿದರು: ನೀವು ವನಿತಾ ಮೇಡಂ ಅಲ್ವಾ?
ಆಗ ಮೊದಲ ಮಹಿಳೆ: ಹೌದೂ.. ನೀವು ಪೂರ್ಣಿಮಾ ಅಲ್ವಾ? ನಮ್ಮ ಮನೆ ವಠಾರ ಬಿಟ್ಮೇಲೆ ಮತ್ತೆ ಯಾವತ್ತೂ ಸಿಕ್ಕೇ ಇರಲಿಲ್ಲ. ಹೇಗಿದ್ದೀರಿ ಮತ್ತೆ?- ಎಂದು ಕೇಳಿದಳು.
ʻನಿಮಗೇ ಗೊತ್ತಲ್ವಾ ಮೇಡಂ, ನನ್ನ ಗಂಡನಿಗೆ ಅನಾರೋಗ್ಯ ಇತ್ತು. ಅವರು ತೀರಿಕೊಂಡರು. ಈಗ ಹೇಗೋ ಜೀವನ ನಡೀತಾ ಇದೆ. ಅಂದ ಹಾಗೆ, ನಿಮ್ಮ ಮಗ ಏನ್ಮಾಡ್ತಾನೆ. ತುಂಬ ಸಣ್ಣ ಇದ್ದ ನಾವು ಬಿಟ್ಟು ಹೋಗುವಾಗ’ ಎಂದರು ಪೂರ್ಣಿಮಾ.
ಆಗ ವನಿತಾ ಮೇಡಂ ಮಗನ ಬಗ್ಗೆ ತುಂಬಾ ಹೇಳಿದರು. ʻʻಅವನು ಆಕ್ಸ್ ಫರ್ಡ್‍ನಲ್ಲಿ ಶಿಕ್ಷಣ ಮುಂದುವರಿಸಿ ಕೆಲವು ವರ್ಷದ ಹಿಂದೆ ಮರಳಿ ಬಂದಿದ್ದಾನೆ. ಈಗ ಅವನದ್ದೇ ಒಂದು ಸ್ವಂತ ಕಂಪನಿ ಮಾಡಿದ್ದಾನೆ. ಒಂದು ಮನೆ ಕೂಡಾ ಮಾಡಿದ್ದಾನೆ. ಒಂದು ಸೈಟ್ ಇದೆ. ನಿಮಗೂ ಅಷ್ಟೇ ದೊಡ್ಡ ಮಗನಿದ್ದಾನಲ್ವಾ? ಏನ್ಮಾಡ್ತಾ ಇದ್ದಾನೆ” ಎಂದು ಕೇಳಿದರು ವನಿತಾ ಮೇಡಂ.
ʻʻನನ್ನ ಮಗ ಕಾಲೇಜಿಗೆ ಹೋಗಲಿಲ್ಲ ಮೇಡಂ. ಇವರು ತೀರಿಕೊಂಡ ಮೇಲೆ ನಮಗೆ ಭಾರಿ ಕಷ್ಟವಾಯಿತು. ನಾನೂ ಅನಾರೋಗ್ಯಕ್ಕೆ ಬಿದ್ದೆ. ಅವನು ನನ್ನ ಸಹಾಯಕ್ಕೆ ನಿಂತ. ಕಾಲೇಜಿಗೆ ಹೋಗು ಎಂದರೆ ನಿಮ್ಮನ್ನು ಬಿಟ್ಟು ಹೇಗಮ್ಮಾ ಹೋಗಲಿ ಎಂದ. ಕೊನೆಗೆ ಹೇಗೋ ಅವನ ವಿದ್ಯಾಭ್ಯಾಸಕ್ಕೆ ಒಂದು ಸಣ್ಣ ಕಂಪನಿಯಲ್ಲಿ ಕೆಲಸಕ್ಕಿದ್ದಾನೆ,” ಎಂದರು ಪೂರ್ಣಿಮಾ.
ಹೌದಾ ಎಂದು ಲೊಚಗುಟ್ಟಿದರು ವನಿತಾ ಮೇಡಂ. ʻʻನೋಡೋಣ.. ನನ್ನ ಮಗನ ಕಂಪನಿಯಲ್ಲಿ ಏನಾದರೂ ಕೆಲಸ ಇದ್ದರೆ ಹೇಳ್ತೇನೆ” ಎಂದರು. `ʻʻಪರ್ವಾಗಿಲ್ಲ ಮೇಡಂ. ಅವನು ಈಗಿರುವ ಕಂಪನಿಯಲ್ಲಿ ಸಂಬಳ ಸ್ವಲ್ಪ ಕಡಿಮೆ. ಆದರೆ, ಜನರ ಸೇವೆ ಮಾಡ್ಲಿಕೆ ಒಳ್ಳೆಯ ಅವಕಾಶ ಅಂತಾ ಇದ್ದ. ಖುಷಿಯಾಗಿದ್ದಾನೆ ಅನಿಸ್ತದೆ” ಎಂದರು.
ʻʻಈಗ ಖುಷಿಯಾಗಿರ್ತಾರೆ. ಇನ್ನು ಮದುವೆ ಎಲ್ಲ ಆದ್ರೆ ಕಷ್ಟ. ನಿಮ್ಮನ್ನೂ ಸಾಕ್ಬೇಕಲ್ವಾ? ಕಷ್ಟ ಆದೀತು. ಅದೂ ಹಳೆ ಮನೆಯಲ್ಲೇ ಇದ್ದೇವೆ ಅಂತೀರಿ. ನನ್ನ ಮಗನಿಗಾದರೆ ಸಮಸ್ಯೆ ಇಲ್ಲ. ಬೇರೆ ಮನೇನೆ ಇದೆ’ ಎಂದರು ವನಿತಾ.
ʻʻಇವತ್ತು ನಮಗೆ ನಂದಿ ಬೆಟ್ಟಕ್ಕೆ ಹೋಗ್ಲಿಕ್ಕಿದೆ. ಮಗ ಕಾರು ತಗೊಂಡು ಬರ್ತಾನೆ” ಎಂದರು ವನಿತಾ.
ಅಷ್ಟು ಹೊತ್ತಿಗೆ ಪೂರ್ಣಿಮಾ ಅವರ ಮಗ ಬಂದ. `ʻʻಓ ವನಿತಾ ಆಂಟಿ.. ನೀವಾ? ನಿಮ್ಮನ್ನು ನೋಡಿ ಖುಷಿ ಆಯಿತು’ ಎಂದು ಹೇಳುತ್ತಲೇ ಹಾಗೇ ಸೊಂಟ ಬಗ್ಗಿಸಿ ಕಾಲಿಗೆ ನಮಿಸಿದ. `ʻʻಅಮ್ಮಾ.. ನಿಮ್ಮ ಚೀಲ ಎಲ್ಲ ಕೊಡಿ. ರೋಡ್‍ನ ಆ ಕಡೆ ಟೂ ವೀಲರ್ ಇಟ್ಟಿದ್ದೇನೆ. ನೀವು ವನಿತಾ ಆಂಟಿ ಹತ್ರ ಮಾತು ಮುಗಿದ ಮೇಲೆ ಕರೀರಿ.. ಆಮೇಲೆ ಮನೆಗೆ ಹೋಗೋಣ,’ ಅಂತ ಹೇಳಿ ಬ್ಯಾಗ್‍ಗಳನ್ನು ಹಿಡಿದು ಹೊರಟ.
ಸ್ವಲ್ಪ ಹೊತ್ತಿನಲ್ಲಿ ವನಿತಾ ಮೇಡಂ ಮಗ ಪ್ರಶಾಂತ್ ಬಂದ. ʻʻಏನಮ್ಮಾ ನೀನು.. ಟೈಮ್ ಸೆನ್ಸೇ ಇಲ್ವಲ್ಲ.. ಬೇಗ ಶಾಪಿಂಗ್ ಮುಗಿಸಿ ಆ ಕಡೆ ಬಾ ಅಂತ ಹೇಳಿದ್ನಲ್ವಾ ನಾನು.. ನೀನು ನೋಡಿದ್ರೆ ಕಂಡವರ ಜತೆ ಮಾತಾಡ್ತಾ ನಿಂತಿದ್ದಿ. ನಂದಿ ಬೆಟ್ಟ ನಂದಿ ಬೆಟ್ಟ ಅಂತ ಕನವರಿಸ್ತೀ.. ನಿಮಗೆ ಯಾಕೆ ಬೆಟ್ಟ ಹತ್ತೋ ಕೆಲಸ. ಬೇಗ ಬರೋದಾದ್ರೆ ಬನ್ನಿ.. ಇಲ್ಲದಿದ್ದರೆ ಮನೆಗೆ ಹೋಗಿ.. ನನ್ನ ಟೈಮ್ ಹಾಳು ಮಾಡಬೇಡಿ” ಎಂದ.
ಆಗ ಪೂರ್ಣಿಮಾ, ʻʻವನಿತಾ ಮೇಡಂ ತುಂಬ ಸಮಯದ ನಂತ್ರ ಸಿಕ್ಕಿದ್ರು.. ಹಾಗಾಗಿ ಸ್ವಲ್ಪ ಮಾತಾಡ್ತಾ ನಿಂತ್ವಿ. ನಾನು ಪೂರ್ಣಿಮಾ ಆಂಟಿ ಕಣೋ.. ಗುರುತು ಸಿಗ್ಲಿಲ್ವಾ’ ಎಂದರು.
ಪ್ರಶಾಂತ್ ಸಿಟ್ಟಿನಿಂದಲೇ ಹೇಳಿದ: ʻʻಗೊತ್ತಾಯಿತು. ನಿಮಗೆ ಬೇರೆ ಏನೂ ಕೆಲಸ ಇಲ್ವಾ.. ಸುಮ್ನೆ ಬೀದಿ ಬದೀಲಿ ನಿಂತು ಹರಟೆ ಹೊಡೆಯೋದೇ ಕೆಲಸವಾ?ʼʼ ಎಂದು ಅವರನ್ನೂ ಬಿಡದೆ ತರಾಟೆಗೆ ತೆಗೆದುಕೊಂಡ.
ಪೂರ್ಣಿಮಾ ಬೇಸರಿಸಿಕೊಳ್ಳಲಿಲ್ಲ. ವನಿತಾ ಮೇಡಂ ಕಾಲಿಗೆರಗಿದ ಪೂರ್ಣಿಮಾಳ ಮಗನನ್ನು ನೆನಪಿಸಿಕೊಂಡು ಒಂದು ಕ್ಷಣ ಗದ್ಗದರಾದರು.
ಇದನ್ನೂ ಓದಿ | Motivational story | ಖುಷಿಪಡಲು ಕೂಡಾ ಸಮಯ ಇಲ್ಲದಿದ್ದರೆ ಯಾವ ಸಾಧನೆ ಮಾಡಿ ಏನು ಪ್ರಯೋಜನ?