ಕೃಷ್ಣ ಭಟ್ ಅಳದಂಗಡಿ- motivatioal story
ಇದೊಂದು ಸ್ವಲ್ಪ ಹಳೆ ಕಥೆ. ಈಗೆಲ್ಲ ಮರ ಕಡಿಯುವುದಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಬಂದಿವೆ. ಒಂದೇಟಿಗೆ ಮರಗಳನ್ನು ಕತ್ತರಿಸಿ ಹಾಕಲಾಗುತ್ತದೆ. ಆದರೆ, ಕೆಲವೇ ವರ್ಷಗಳ ಹಿಂದೆ ಗರಗಸ, ಕೊಡಲಿ, ಉಳಿ, ಚಾಣಗಳಿಂದಲೇ ಅದನ್ನು ಮಾಡಬೇಕಾಗಿತ್ತು. ಆ ಸಮಯದ ಕಥೆ ಇದು.
ಒಬ್ಬ ಮರ ಕಡಿಯುವುದರಲ್ಲಿ ತುಂಬ ಎಕ್ಸ್ ಪರ್ಟ್ ಆಗಿದ್ದ. ಹಲವಾರು ವರ್ಷಗಳ ಅನುಭವ ಅವನದ್ದು. ಅವನು ಒಬ್ಬ ಟಿಂಬರ್ ಮರ್ಚೆಂಟ್ ಬಳಿ ಕೆಲಸಕ್ಕೆ ಸೇರಿಕೊಂಡ. ತುಂಬ ಅನುಭವಿ ಆಗಿದ್ದರಿಂದ ಒಳ್ಳೆಯ ಸಂಬಳವನ್ನೇ ಫಿಕ್ಸ್ ಮಾಡಲಾಯಿತು. ಮರ ಕಡಿಯುವವನು ಕೂಡಾ ತುಂಬ ಉತ್ಸಾಹದಿಂದ ಕೆಲಸ ಮಾಡಲು ನಿರ್ಧರಿಸಿದ್ದ.
ಟಿಂಬರ್ ಮರ್ಚೆಂಟ್ ಅವನನ್ನು ಕರೆದು ಒಂದು ಕೊಡಲಿ, ಗರಗಸ ಮತ್ತಿತರ ಸಲಕರಣೆ ಕೊಟ್ಟು ಚೆನ್ನಾಗಿ ಕೆಲಸ ಮಾಡು ಎಂದು ಹೇಳಿದ. ಯಾವ ಮರ ಉರುಳಿಸಬೇಕು, ಎಲ್ಲಿ ಬೀಳಬೇಕು ಎಂದೆಲ್ಲ ವಿವರಿಸಿದ.
ಟಿಂಬರ್ ಮರ್ಚೆಂಟ್‍ನ ಮಾತಿನಿಂದ ಖುಷಿಯಾದ ಕಾರ್ಮಿಕ ಮೊದಲ ದಿನ 15 ಮರಗಳನ್ನು ಉರುಳಿಸಿದ. ಎರಡನೇ ದಿನವೂ ಅದೇ ಉತ್ಸಾಹದಿಂದ ಕೆಲಸಕ್ಕೆ ಹೋಗಿದ್ದ. ಆದರೆ, ಅವನಿಗೆ ಆವತ್ತು ಆಗಿದ್ದು 12 ಮರ ಉರುಳಿಸಲು ಮಾತ್ರ. ಮೂರನೇ ದಿನ ಅದ್ಯಾಕೋ 10ಕ್ಕೆ ಅಂತ್ಯವಾಯಿತು. ಹಾಗಂತ ಅವನು ಯಾವ ಕಾರಣಕ್ಕೂ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಹಾಳು ಹರಟೆಗಳಿರಲಿಲ್ಲ. ಆದರೂ ಕೆಲಸ ಮುಂದೆ ಸಾಗುತ್ತಿರಲಿಲ್ಲ.
ತನ್ನ ಮೇಲೆ ನಂಬಿಕೆ ಇಟ್ಟ ವ್ಯಾಪಾರಿಗೆ ಯಾಕೋ ಮೋಸ ಮಾಡುತ್ತಿದ್ದೇನೆ ಎಂದು ಅವನಿಗೆ ಅನಿಸಿತು. ಹಾಗಾಗಿ ಕೆಲವು ದಿನ ಬಿಟ್ಟು ಅವನಲ್ಲಿಗೆ ಹೋಗಿ ಹೇಳಿದ; ಸ್ವಾಮೀ ಯಾಕೋ ನನಗೆ ಮೊದಲಿನ ಹಾಗೆ ಕೆಲಸ ಮಾಡಲು ಆಗುತ್ತಿಲ್ಲ. ಯಾಕೋ ಕೆಲಸವೇ ಸಾಗುತ್ತಿಲ್ಲ. ನೀವು ಒಳ್ಳೆಯ ಸಂಬಳ ಕೊಟ್ಟು ಕರೆಸಿಕೊಂಡಿರಿ. ಆದರೆ, ಅದಕ್ಕೆ ನ್ಯಾಯ ಕೊಡ್ತಿಲ್ಲ ಅನಿಸ್ತಿದೆ. ದಯವಿಟ್ಟು ಕ್ಷಮಿಸಿ. ನೀನು ನನ್ನ ಜಾಗಕ್ಕೆ ಸಮರ್ಥರಾದ ಬೇರೆ ವ್ಯಕ್ತಿಗಳನ್ನು ನೇಮಿಸಿಕೊಳ್ಳಬಹುದು.
ಆಗ ವ್ಯಾಪಾರಿ ಹೇಳಿದ: ಕೆಲಸ ಬಿಡುವ ಬಗ್ಗೆ ಆಮೇಲೆ ಯೋಚಿಸೋಣ. ನೀನು ನಿನ್ನ ಕೊಡಲಿ, ಗರಗಸಗಳನ್ನು ಹರಿತಗೊಳಿಸಿಕೊಂಡಿದ್ದೀಯಾ? ಸರಿಯಾಗಿ ವಿಶ್ರಾಂತಿ ಪಡೆದಿದ್ದೀಯಾ- ಎಂದು ಕೇಳಿದ.
ಅದಕ್ಕೆ ಕಾರ್ಮಿಕ: ನೀನು ಮೊನ್ನೆಯಷ್ಟೇ ಕೊಟ್ಟ ಕೊಡಲಿ ಅದು. ಅದನ್ನೇ ಬಳಸುತ್ತಿದ್ದೇನೆ. ಹರಿತ ಮಾಡಿಲ್ಲ. ಅದೇನೂ ಸವೆದಿದೆ ಎಂದು ನನಗೆ ಅನಿಸಿಲ್ಲ. ಜತೆಗೆ ಬೇಗ ಕೆಲಸ ಆಗಬೇಕು ಎನ್ನುವ ಕಾರಣಕ್ಕೆ ನಾನು ಅದರ ಬಗ್ಗೆ ಎಲ್ಲ ಯೋಚಿಸಲೂ ಇಲ್ಲ ಎಂದ.
ಕಾರ್ಮಿಕನ ಮಾತು ಕೇಳಿದ ಟಿಂಬರ್ ಮರ್ಚೆಂಟ್ ಹೇಳಿದ: ನೋಡು.. ನಾನು ಕೊಡಲಿ ಕೊಟ್ಟೆ ಎಂದು ನೀನು ಸುಮ್ಮನೆ ಅದನ್ನು ಬಳಸಕೂಡದು. ಅದು ಹರಿತವಾಗಿದೆಯಾ ಎಂದು ಪರಿಶೀಲನೆ ಮಾಡಬೇಕು. ಆಮೇಲೆ ಕೊಡಲಿಯನ್ನು ಪ್ರತಿ ದಿನ ಎನ್ನುವ ಹಾಗೆ ಹರಿತ ಮಾಡಿದರೆ ಮಾತ್ರ ಅದನ್ನು ಸಶಕ್ತವಾಗಿ ಬಳಸಲು ಸಾಧ್ಯ. ಇಲ್ಲವಾದರೆ ಅದು ಮೊಂಡಾಗಿಬಿಡುತ್ತದೆ. ನೀನು ಹಲವು ದಿನದಿಂದ ಹರಿತ ಮಾಡಿಲ್ಲ. ಇನ್ನು ಕೆಲಸದ ಉತ್ಸಾಹದಲ್ಲಿ ನೀನು ವಿಶ್ರಾಂತಿ ಪಡೆಯುವುದನ್ನೇ ಮರೆತಿದ್ದಿ. ಗಮನಿಸು ಯಾವುದೇ ಒಂದು ಕೆಲಸವನ್ನು ಮುಕ್ಕಾಲು ಗಂಟೆಗಿಂತ ಹೆಚ್ಚು ಕಾಲ ನಿರಂತರವಾಗಿ ಮಾಡಲು ಸಾಧ್ಯವೇ ಇಲ್ಲ. ಒಂದು ಕೆಲಸವಾದ ಬಳಿಕ ಸಣ್ಣದೊಂದು ವಿಶ್ರಾಂತಿ ಪಡೆದರೆ ಮುಂದಿನ ಕೆಲಸವನ್ನು ಹಿಂದಿನಷ್ಟೇ ಪವರ್ ಫುಲ್ ಆಗಿ ಮಾಡಲು ಸಾಧ್ಯವಾಗುತ್ತದೆ. ನೀನು ವಿಶ್ರಾಂತಿ ಪಡೆಯಲೂ ಇಲ್ಲ. ಕೊಡಲಿ ಹರಿತ ಮಾಡಲೂ ಇಲ್ಲ. ಹಾಗಾಗಿ ಸಮಸ್ಯೆ ಆಗಿದೆ. ಇದರಿಂದಾಗಿ ಕೆಲಸ ಬಿಡುವ ಮಾತೆಲ್ಲ ಬೇಡ- ಎಂದರು.
ಕಾರ್ಮಿಕನಿಗೆ ತನ್ನ ತಪ್ಪಿನ ಅರಿವಾಯಿತು. ಸರಿ ಮಾಡಿಕೊಳ್ಳುತ್ತೇನೆ ಎಂದ.
ಟಿಂಬರ್ ಮರ್ಚೆಂಟ್ ಮತ್ತೊಂದು ವಿಷಯ ಹೇಳಿದ: ನೀನೊಬ್ಬನೇ ಅಂತಲ್ಲ… ಹೆಚ್ಚಿನವರು ತಮಗೆ ಅನುಭವ ಇದೆ ಎಂದುಕೊಳ್ಳುತ್ತಾರೆ. ಯಾವುದೇ ಹೊಸ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುವುದಿಲ್ಲ. ತಮ್ಮ ಕೌಶಲಗಳನ್ನು ಹರಿತಗೊಳಿಸುವುದಿಲ್ಲ. ಹಳೆ ಯೋಚನೆಗಳಿಂದ ಹೊರಗೆ ಬರುವುದಿಲ್ಲ. ಅಂಥವರು ನಿಧಾನಕ್ಕೆ ಕಸುವು ಕಳೆದುಕೊಳ್ಳುತ್ತಾರೆ..
iಇದನ್ನೂ ಓದಿ | Motivational story | ದಿನಾ ಅದೇ ಕೆಲಸ ಅಂತ ನಿಮಗೂ ಬೋರಾಗ್ತಾ ಇದೆಯಾ? ಚೇಂಜ್ ಮಾಡ್ಬೇಕು ಅನಿಸ್ತಾ ಇದೆಯಾ?