ಕೃಷ್ಣ ಭಟ್ ಅಳದಂಗಡಿ- Motivational story
ಅವರೆಲ್ಲರೂ ಪ್ರತಿಷ್ಠಿತ ಕಾಲೇಜೊಂದರ ಹಳೆ ವಿದ್ಯಾರ್ಥಿಗಳು. ಗೆಳೆಯನೊಬ್ಬನ ಮದುವೆಗೆಂದು ಜತೆಯಾದವರು ಹಾಗೇ ತಮ್ಮ ಪ್ರೀತಿಯ ಪ್ರೊಫೆಸರ್ ಮನೆಗೂ ಹೋಗಿ ಬರೋಣ ಎಂದು ಹೊರಟರು. ಪ್ರೊಫೆಸರ್ ಈಗ ನಿವೃತ್ತರು. ಮನೆಯಲ್ಲೇ ಇದ್ದರು. ತಮ್ಮ ಹಳೆ ವಿದ್ಯಾರ್ಥಿಗಳನ್ನು ನೋಡಿ ಖುಷಿಯಾದರು.
ಒಬ್ಬೊಬ್ಬರನ್ನೇ ವಿಚಾರಿಸಿದರು: ನೀನೀಗ ಏನ್ಮಾಡ್ತಾ ಇದ್ದೀಯಾ? ಹೇಗಿದೆ ಲೈಫ್ ಅಂತ. ಹೆಚ್ಚಿನವರು ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಕೆಲವರು ದೊಡ್ಡ ಹುದ್ದೆಯಲ್ಲಿದ್ದೇವೆ. ಆದರೆ, ಕಿರಿಕಿರಿ ಅಂದರು. ಇನ್ನು ಕೆಲವರು ಸಂಬಳ ಓಕೆ ಅನಿಸುವಷ್ಟಿದೆ. ಆದರೆ, ಅದರಲ್ಲಿ ಜೀವನ ಮಾಡೋಕೆ ಆಗ್ತಿಲ್ಲ ಅಂದರು.
ಟೀ ಕುಡೀತೀರಾ?: ಪ್ರೊಫೆಸರ್ ಕೇಳಿದರು. ಆಗಷ್ಟೇ ಮದುವೆ ಊಟ ಮಾಡಿದ್ದರಿಂದ ಟೀ ಸಿಕ್ಕಿದ್ರೆ ಒಳ್ಳೆದು ಅಂತ ಎಲ್ಲರೂ `ಖಂಡಿತ ಸರ್’ ಅಂದರು. ಪ್ರೊಫೆಸರ್ ಟೀ ಮಾಡಿಕೊಂಡು ಬಂದರು. ಟೀ ಕಪ್‍ಗಳನ್ನೂ ತಂದರು. ಟೀ ಕಪ್‍ಗಳು ಒಂದೇ ತರ ಇರಲಿಲ್ಲ. ಕೆಲವು ತುಂಬಾ ಕಾಸ್ಟ್ಲೀ ಪಾರ್ಸೆಲೈನ್ ಡಿಶಸ್, ಕೆಲವು ಆಕರ್ಷಕ ವಿನ್ಯಾಸ ಹೊಂದಿದ್ದವು. ಬೇರೆ ಬೇರೆ ಸ್ಟೈಲಲ್ಲಿದ್ದವು. ಕೆಲವು ಆರ್ಡಿನರಿ, ಇನ್ನು ಕೆಲವು ಪೇಪರ್ ಗ್ಲಾಸ್‍ಗಳು.
ಪ್ರೊಫೆಸರ್ ಕಪ್‍ಗಳಿಗೆ ಚಹಾ ಸುರಿದು ನೋಡುತ್ತಾ ನಿಂತರು. ಎಲ್ಲರೂ ಟೀ ಕುಡಿದಾದ ಬಳಿಕ ಹೇಳಿದರು. ನಾನು ನೋಡ್ತಾ ಇದ್ದೆ. ಮೊದಲು ಬಂದವರೆಲ್ಲರೂ ತುಂಬ ಚಂದ ಇರುವ ಕಪ್‍ಗಳನ್ನು ಎತ್ತಿಕೊಂಡಿರಿ. ಅಗ್ಗದ ಕಪ್‍ಗಳನ್ನು ಯಾರೂ ಎತ್ತಿಕೊಳ್ಳಲಿಲ್ಲ. ಇದರಿಂದ ನಂಗೇನು ಅನಿಸಿತು ಅಂದರೆ, ನೀವೆಲ್ಲ ನಿಮಗೆ ಇರೋದ್ರಲ್ಲೇ ಬೆಸ್ಟ್ ಬೇಕು ಅನ್ನೋ ಆಸೆ ಹೊತ್ತುಕೊಂಡಿದ್ದೀರಿ. ಅದು ನಿಮ್ಮ ಸಮಸ್ಯೆ ಮತ್ತು ಒತ್ತಡದ ಮೂಲ ಅನಿಸುತ್ತದೆ ನಂಗೆ. ನೀವೇನೊ ಸಮಸ್ಯೆ ಅಂದ್ರಲ್ಲ, ಅದರ ಹಿಂದಿರುವುದು ಕೂಡಾ ಇದೇ ಅಂದರು.
ವಿದ್ಯಾರ್ಥಿಗಳು ಮುಖ ನೋಡಿಕೊಂಡರು. ಪ್ರೊಫೆಸರ್ ಮುಂದುವರಿಸಿದರು: ನಿಮಗೆಲ್ಲರಿಗೂ ಗೊತ್ತಿದೆ. ನಾನು ಮಾಡಿರುವುದು ಒಂದೇ ರೀತಿಯ ಚಹಾ. ಅದನ್ನು ಯಾವುದರಲ್ಲಿ ಕುಡಿದರೂ ರುಚಿ ಒಂದೇ ಅಂತ. ಆದರೆ, ನೀವು ಕಡಿಮೆ, ಅಗ್ಗದ ಕಪ್‍ಗಳನ್ನು ಆಯ್ಕೆಮಾಡಲಿಲ್ಲ. ಬದಲಾಗಿ ನಿಮ್ಮ ಸರದಿ ಬಂದಾಗ ಯಾವುದು ಬೆಸ್ಟಿದೆಯೋ ಅದನ್ನೇ ಆಯ್ಕೆ ಮಾಡಿಕೊಂಡಿರಿ. ಮಾತ್ರವಲ್ಲ, ಉಳಿದವರಿಗೆ ಯಾವ ರೀತಿಯ ಕಪ್ ಸಿಕ್ಕಿದೆ ಎಂದು ಕೂಡಾ ನೋಡ್ತಾ ಇದ್ರಿ. ಚಂದದ ಕಪ್ ಸಿಕ್ಕಿದವರು ಬೀಗಿದ್ರಿ.
ನೋಡಿ ಮಕ್ಕಳೇ ಈ ಚಹಾ ಅನ್ನೋದು ನಮ್ಮ ಬದುಕು. ಉದ್ಯೋಗ, ಹಣ, ಸ್ಥಾನಮಾನ, ಸಮಾಜ ಎಲ್ಲವೂ ಕೂಡಾ ಕಪ್‍ಗಳು ಅಷ್ಟೆ. ಬದುಕನ್ನು ಬಾಳುವುದಕ್ಕೆ ಇರುವ ಪರಿಕರಗಳು. ನಾವು ಯಾವ ಕಪ್ಪಲ್ಲಿ ಚಹಾ ಕುಡಿತೇವೆ ಎನ್ನುವುದು ಚಹಾದ ರುಚಿಯನ್ನು ನಿರ್ಧರಿಸುವುದಿಲ್ಲ. ನಾವು ಹೆಚ್ಚಿನ ಸಂದರ್ಭದಲ್ಲಿ ಮಾಡುವ ತಪ್ಪೇನೆಂದರೆ, ನಮ್ಮ ಗಮನವೆಲ್ಲ ಚಹಾ ಕಪ್‍ನ ಮೇಲೇ ಇರುತ್ತದೆ. ಚಹಾದ ರುಚಿಯನ್ನು ಆಸ್ವಾದಿಸುವುದನ್ನೇ ಮರೆಯುತ್ತೇವೆ. ಕಪ್ ಯಾವುದಾದರೇನು ಮಕ್ಕಳೇ? ಚಹಾ ರುಚಿಯಾಗಿದ್ದರೆ ಸಾಕು.
ಇದನ್ನೂ ಓದಿ | ಕಹಿ ಸತ್ಯವನ್ನೇ ಹೇಳಿದರೂ ಅದನ್ನು ಹಿತವಾಗುವಂತೆ ಹೇಳಬಹುದು.. ಹೇಗೆ ಅಂತ ತಿಳೀಬೇಕಾ? ಈ ಕಥೆ ಓದಿ