Site icon Vistara News

Motivational story | ಆ ಹರಳಿಗಿಂತಲೂ ಅಮೂಲ್ಯವಾದುದು ಶಿಕ್ಷಕಿಯಲ್ಲಿತ್ತು.. ಅದು ಆ ಯುವಕನಿಗೆ ಕಂಡಿತ್ತು!

old woman

ಕೃಷ್ಣ ಭಟ್‌ ಅಳದಂಗಡಿ- motivational story
ಅವರೊಬ್ಬರು ಶಾಲಾ ಶಿಕ್ಷಕಿ. ಒಳ್ಳೆಯ ಟೀಚರ್ ಅಂತ ವಿದ್ಯಾರ್ಥಿಗಳು ಪ್ರೀತಿಯಿಂದ ಹೇಳುತ್ತಿದ್ದರು. ನಿವೃತ್ತಿಯ ಬಳಿಕವೂ ಜೀವನೋತ್ಸಾಹವನ್ನು ಉಳಿಸಿಕೊಂಡಿದ್ದ ಅವರಿಗೆ ಒಂಟಿಯಾಗಿ ಹಿಮಾಲಯದ ಯಾವುದಾದರೂ ಶಿಖರವನ್ನು ಹತ್ತಿಳಿಯಬೇಕೆಂದು ಸೋಲೋ ಟ್ರಿಪ್ ಹೊರಟಿದ್ದರು.

ಹಾಗೆ ಶಿಖರವೊಂದರ ಕೊನೆಯ ಅಂಚಿನಲ್ಲಿದ್ದಾಗ ಅವರಿಗೆ ಅಮೂಲ್ಯವಾದ ಒಂದು ಹರಳು ಸಿಕ್ಕಿತು. ಅದನ್ನು ಅವರು ಅದನ್ನು ಬ್ಯಾಗ್‍ನಲ್ಲಿ ಇಟ್ಟುಕೊಂಡು ಪ್ರಯಾಣ ಮುಂದುವರಿಸಿದರು. ಶಿಖರವನ್ನು ಹತ್ತಿ ಸಂಭ್ರಮಿಸಿದ ಬಳಿಕ ಅವರು ಕೆಳಗೆ ಇಳಿಯುತ್ತಿದ್ದರು.

ಹೆಚ್ಚು ಕಡಿಮೆ ಅಮೂಲ್ಯವಾದ ಹರಳು ದೊರೆತಿದ್ದ ಅದೇ ಜಾಗಕ್ಕೆ ಬರುತ್ತಿದ್ದಂತೆಯೇ ಶಿಖರವನ್ನು ಹತ್ತುತ್ತಿದ್ದ ಇನ್ನೊಬ್ಬ ಪ್ರಯಾಣಿಕ ಎದುರಾದರು. ಶಿಕ್ಷಕಿಯ ಪ್ರಸನ್ನವಾದ ಮುಖ, ದೈವಿಕ ಕಳೆ ಮತ್ತು ಮಂದಹಾಸಕ್ಕೆ ಮನ ಸೋತ ಒಬ್ಬ ಯುವಕ ಅಲ್ಲೇ ಆಕೆಯ ಪಾದ ಮುಟ್ಟಿ ನಮಸ್ಕರಿಸಿದ.

ಮಾತನಾಡಿಸುವ ಕಾರಣಕ್ಕೆ, ʻʻಸ್ವಲ್ಪ ನೀರು ಕೊಡಬಹುದೇ” ಎಂದು ಕೇಳಿದ. ಶಿಕ್ಷಕಿ ತಮ್ಮ ಚೀಲದಿಂದ ಬಾಟಲಿ ತೆಗೆದು ನೀರು ಕೊಟ್ಟರು. ಆಗ ಚೀಲದ ಒಳಗಿದ್ದ ಆ ಹರಳು ಯುವಕನಿಗೆ ಕಾಣಿಸಿತು. ʻʻಅದನ್ನು ನನಗೆ ಕೊಡಬಹುದೇ’ ಎಂದು ಯುವಕ ಆಸೆಯಿಂದ ಕೇಳಿದ. ಶಿಕ್ಷಕಿ ಮರು ಮಾತು, ಮರು ಯೋಚನೆ ಇಲ್ಲದೆ ಅದನ್ನು ಯುವಕನ ಕೈಗೆ ಕೊಟ್ಟರು.

ಯುವಕ ಪರ್ವತದ ಶಿಖರದ ಕಡೆಗೆ ನಡೆದರೆ, ಈ ಶಿಕ್ಷಕಿ ನಿಧಾನಕ್ಕೆ ಇಳಿಯುತ್ತಿದ್ದರು. ಯುವಕ ತುಂಬ ಖುಷಿಯಾಗಿದ್ದ. ಈ ಪರ್ವತಕ್ಕೆ ಬಂದಿದ್ದು ಸಾರ್ಥಕವಾಯಿತು. ಈಗ ಸಿಕ್ಕಿರುವ ಈ ಅಮೂಲ್ಯಹರಳು ನನ್ನ ಜೀವಮಾನಕ್ಕೆ ಸಾಕಾಗುವಷ್ಟು ಭದ್ರತೆಯನ್ನು ನೀಡಲಿದೆ ಎಂದು ಭಾವಿಸಿದ.

ಯುವಕ ಪರ್ವತಾಗ್ರವನ್ನು ಏರಿ ನಿಂತಾಗ ವಿಶಿಷ್ಟ ಅನುಭೂತಿಯನ್ನು ಅನುಭವಿಸಿದ. ದಾರಿಯಲ್ಲಿ ಸಿಕ್ಕಿದ ಶಿಕ್ಷಕಿ ನೆನಪಾದರು. ಅವರು ಕೊಟ್ಟ ಅಮೂಲ್ಯ ಹರಳನ್ನು ಇನ್ನೊಮ್ಮೆ ಕೈಯಲ್ಲಿ ಹಿಡಿದುಕೊಂಡ. ಒಂದು ಅಪೂರ್ವ ಸಮಾಧಾನ ಅವನ ಮನಸಿನಲ್ಲಿ. ಒಂದು ನಿರಾಳತೆಯನ್ನು ಹೊತ್ತುಕೊಂಡು ಅಲ್ಲಿಂದ ಕೆಳಗಿಳಿದ.. ತುಸು ವೇಗವಾಗಿಯೇ.

ಇಳಿದು ತಪ್ಪಲು ತಲುಪಿದವನೇ ಅಮೂಲ್ಯ ಹರಳನ್ನು ಕೊಟ್ಟ ಆ ಶಿಕ್ಷಕಿಗಾಗಿ ಹುಡುಕಾಡಿದ. ಅತ್ತಿಂದಿತ್ತ ಅಲೆದ. ಕೊನೆಗೆ ಇನ್ನೇನು ಹೊರಡಲಿರುವ ಒಂದು ವಾಹನದಲ್ಲಿ ಅವರಿರುವುದು ಕಂಡಿತು. ಓಡಿ ಹೋಗಿ ಅವರ ಮುಂದೆ ನಿಂತ.

ತನ್ನ ಕೈಯಲ್ಲಿದ್ದ ಅಮೂಲ್ಯವಾದ ಹರಳನ್ನು ಅವರ ಕೈಗೇ ನೀಡಿದ. ಶಿಕ್ಷಕಿಗೆ ಆಶ್ಚರ್ಯವಾಯಿತು. ʻಯಾಕಪ್ಪಾ ಏನಾಯಿತು’ ಎಂದು ಪ್ರಶ್ನಿಸಿದರು. ಆಗ ಅವನು ಹೇಳಿದ: ಅಮ್ಮಾ.. ನನಗೆ ಇದಕ್ಕಿಂತಲೂ ಅಮೂಲ್ಯವಾದ ವಸ್ತು ಬೇಕು. ಇದು ಸಾಲದು ಎಂದ.

ಅದಕ್ಕೆ ಶಿಕ್ಷಕಿ: ಇದೇ ತುಂಬ ಅಮೂಲ್ಯವಾದುದು.. ಇದನ್ನು ಮೀರಿದ್ದು ಇನ್ನೇನಿದೆಯಪ್ಪಾ ಅಂತ ಕೇಳಿದರು.

ಯುವಕ ಹೇಳಿದ: ಇದೆಯಮ್ಮಾ.. ಈ ಅಮೂಲ್ಯವಾದ ಹರಳನ್ನು ನಾನು ಕೇಳಿದ ಕ್ಷಣದಲ್ಲಿ ಒಂದಿನಿತೂ ಯೋಚಿಸದೆ ನನಗೆ ನೀಡಿದ ನಿಮ್ಮ ಒಳ್ಳೆತನಕ್ಕಿಂತ, ನಿರ್ಮೋಹಕ್ಕಿಂತ ದೊಡ್ಡದು ಇನ್ನೇನಿದೆ. ಅದರಲ್ಲಿ ಒಂದು ಪಾಲನ್ನು ನನಗೆ ಕೊಡಿ ಸಾಕು. ಈ ಹರಳು ನೀವೇ ಇಟ್ಟುಕೊಳ್ಳಿ ಎಂದ.

ಶಿಕ್ಷಕಿ ಕಣ್ಣೀರಾದರು. `ʻʻಇಲ್ಲಪ್ಪ.. ನಾನೊಬ್ಬ ಶಿಕ್ಷಕಿ. ನನ್ನಲ್ಲಿ ಏನಿದೆಯೋ ಅದನ್ನು ಮಕ್ಕಳಿಗೆ ಹಂಚಿಯೇ ಅಭ್ಯಾಸ… ಅಷ್ಟೇ ಮತ್ತೇನಿಲ್ಲ’ ಎಂದರು.

ಇದನ್ನೂ ಓದಿ | Motivational story | ಕಷ್ಟಪಟ್ಟು ಬರೆದ ಚಿತ್ರದಲ್ಲಿ ತಪ್ಪು ಹುಡುಕೋದು ಭಾರಿ ಸುಲಭ.. ಆದರೆ, ಸರಿ ಮಾಡೋದು?

Exit mobile version