Site icon Vistara News

Motivational story |ನಿಮ್ಮ ಸಾಧನೆಗೆ ಅಡ್ಡಿಯಾಗಿದ್ದ ಆ ವ್ಯಕ್ತಿ ಅಲ್ಲಿ ಹೆಣವಾಗಿ ಮಲಗಿದ್ದಾನೆ ನೋಡಿ!

coffin box

ಕೃಷ್ಣ ಭಟ್‌ ಅಳದಂಗಡಿ – Motivational story
ಅದೊಂದು ಕಂಪನಿ. ಬೆಳಗ್ಗೆ 10 ಗಂಟೆಗೆ ತೆರೆಯುತ್ತಿತ್ತು. ಆವತ್ತು ಒಬ್ಬೊಬ್ಬರಾಗಿ ಕಟ್ಟಡ ಪ್ರವೇಶಿಸಲು ಆರಂಭಿಸಿದರು. ಹಾಗೆ ಬಂದವರಿಗೆ ಬಾಗಿಲಿನಲ್ಲಿ ಇಟ್ಟಿದ್ದ ಒಂದು ಪತ್ರ ಭಾರಿ ಆತಂಕವನ್ನು ಸೃಷ್ಟಿಸಿತು.

ಅದರಲ್ಲಿ ಬರೆದಿತ್ತು: ನಿಮ್ಮ ಅಭಿವೃದ್ಧಿಗೆ, ಬೆಳವಣಿಗೆಗೆ, ದೊಡ್ಡ ಯಶಸ್ಸಿಗೆ ಅಡ್ಡಗಾಲು ಹಾಕುತ್ತಿದ್ದ ವ್ಯಕ್ತಿ ನಿನ್ನೆ ಪ್ರಾಣ ಕಳೆದುಕೊಂಡಿದ್ದಾನೆ. ಇವತ್ತು ಅವನಿಗೆ ಅಂತಿಮ ನಮನ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಲ್ಲರೂ ಬೆಳಗ್ಗೆ 11 ಗಂಟೆಗೆ ಸೆಮಿನಾರ್ ಹಾಲ್‍ನಲ್ಲಿ ಸೇರೋಣ.

ಈ ನೋಟನ್ನು ನೋಡಿದ ಪ್ರತಿಯೊಬ್ಬರಿಗೂ ಒಮ್ಮೆಗೇ ಬೇಜಾರಾಗುತ್ತಿತ್ತು. ಛೆ.. ನಮ್ಮ ನಡುವೆಯೇ ಇದ್ದವನು ಈಗಿಲ್ಲವಾಗಿ ಹೋದನಲ್ಲ ಅಂತ. ಆದರೆ, ಅದರ ಜತೆಗೆ ಕುತೂಹಲ ತೀರಿಕೊಂಡವನು ಯಾರು? ಅದರಲ್ಲೂ ನಮ್ಮೆಲ್ಲರ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದವನು ಅಂದರೆ ಯಾರು ಅಂತ. ಎಲ್ಲರೂ ತಮ್ಮೊಳಗೆ ಮಾತನಾಡಿಕೊಂಡರು. ಮ್ಯಾನೇಜರ್‌ ಇರಬಹುದಾ? ಸೂಪರ್‌ವೈಸರ್‌? ಸೀನಿಯರ್‌ ಆಫೀಸರ್‌ ಒಬ್ಬ ಇದ್ದ, ಎಲ್ಲರಿಗೂ ಕಿರಿಕಿರಿ ಮಾಡ್ತಿದ್ದ.. ಅವನು? ಹೂಂ.. ಯಾರಿಗೂ ಹೊಳೆಯಲಿಲ್ಲ.

ಅಷ್ಟು ಹೊತ್ತಿಗೆ 11 ಗಂಟೆ ಆಗುತ್ತಾ ಬಂತು. ಎಲ್ಲರೂ ನಿಧಾನವಾಗಿ ಭಾರವಾದ ಹೃದಯೊಂದಿಗೆ ಸೆಮಿನಾರ್ ಹಾಲ್ ಕಡೆಗೆ ನಡೆದರು. ಎಲ್ಲರಿಗೂ ಸತ್ತಿರುವ ವ್ಯಕ್ತಿ ಯಾರು ಎನ್ನುವುದೇ ದೊಡ್ಡ ಕುತೂಹಲ.

ಅಲ್ಲೊಂದು ಶವ ಪೆಟ್ಟಿಗೆಯನ್ನು ಇಟ್ಟು ಸುತ್ತಲೂ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಎಲ್ಲರೂ ಸಾಲಾಗಿ ಬಂದು ಅಂತಿಮ ದರ್ಶನ ಪಡೆಯುವಂತೆ ಸೂಚಿಸಲಾಯಿತು. ಒಬ್ಬೊಬ್ಬರಾಗಿ ಬಂದು ನೋಡಿದಾಗ ಅವರಿಗೆ ಆಘಾತವಾಯಿತು. ಅಲ್ಲಿ ಅವರದೇ ಮುಖ ಕಾಣುತ್ತಿತ್ತು. ಆ ಕಾಫಿನ್ ಬಾಕ್ಸ್‌ನೊಳಗೆ ಇಟ್ಟದ್ದು ಒಂದು ಕನ್ನಡಿ. ಹಾಗಾಗಿ ಯಾರೇ ಇಣುಕಿ ನೋಡಿದರೂ ಅವರದೇ ಮುಖ ಕಾಣುತ್ತಿತ್ತು, ಅದೂ ವಿಷಾದ ತುಂಬಿದ ಮುಖ.

ಆ ಶವ ಪೆಟ್ಟಿಗೆಯ ಮೇಲೆ ಒಂದು ಪುಟ್ಟ ಕಾಗದದಲ್ಲಿ ಏನೋ ಬರೆಯಲಾಗಿತ್ತು.. ಪ್ರತಿಯೊಬ್ಬರೂ ಅದನ್ನು ಸಾವಧಾನದಿಂದ ಓದಿದರು.

-ನಿಮ್ಮ ಅಭಿವೃದ್ಧಿಗೆ ಅಡ್ಡಗಾಲು ಹಾಕಬಲ್ಲ ಏಕೈಕ ವ್ಯಕ್ತಿ ಅದು ನೀವು ಮಾತ್ರ. ಅದೇ ರೀತಿ ನಿಮ್ಮ ಬದುಕಿನಲ್ಲಿ ಕ್ರಾಂತಿ ಮಾಡಬಲ್ಲ, ಸಂತೋಷವಾಗಿರುವಂತೆ ನೋಡಿಕೊಳ್ಳಬಲ್ಲ ವ್ಯಕ್ತಿ ನೀವೊಬ್ಬರೇ..

-ಕಂಪನಿ ಬದಲಾಯಿಸಿದ ಮಾತ್ರಕ್ಕೆ, ಬಾಸ್ ಬದಲಾದ ಮಾತ್ರಕ್ಕೆ, ಸ್ನೇಹಿತರು ಬದಲಾದ ಮಾತ್ರಕ್ಕೆ, ಮನೆ ಬದಲಾಯಿಸಿದ ಮಾತ್ರಕ್ಕೆ ನಮ್ಮ ಅದೃಷ್ಟ ಬದಲಾಗುವುದಿಲ್ಲ. ನಾವು ಬದಲಾದಾಗ ಎಲ್ಲವೂ ಬದಲಾಗುತ್ತದೆ. ಹಾಗಾಗಿ ಒಳಿತಿನ, ಕೆಡುಕಿನ ಮೂಲ ಇರುವುದು ನಮ್ಮಲ್ಲೆ.

-ನಿಮಗೆ ನೀವೇ ಹಾಕಿಕೊಂಡಿರುವ ಗೆರೆಗಳನ್ನು ದಾಟಿದಾಗ, ನಿಮ್ಮ ಬದುಕಿಗೆ ನೀವೇ ಜವಾಬ್ದಾರರು ಎನ್ನುವುದನ್ನು ಅರಿತಾಗ, ನಿಮ್ಮ ಸಂತೋಷವನ್ನು ನಿಮ್ಮೊಳಗೇ ಹುಡುಕಿಕೊಂಡಾಗ, ನಿಮ್ಮ ಹಿಂಜರಿಕೆಗಳನ್ನು ನೀವೇ ಮೀರಿದಾಗಲಷ್ಟೇ ಯಶಸ್ಸು ಸಿಗುತ್ತದೆ.

– ನಮ್ಮನ್ನು ಯಾರೋ ಕೈ ಹಿಡಿದು ಜಗ್ಗುತ್ತಿದ್ದಾರೆ, ಯಾರೋ ಅಡ್ಡಗಾಲಾಗಿದ್ದಾರೆ ಎಂದೆಲ್ಲ ಯೋಚಿಸುತ್ತಾ ಕೂರಬೇಡಿ, ಅಡ್ಡಗಾಲುಗಳನ್ನೆಲ್ಲ ಒಂದೇ ಏಟಿಗೆ ಒದ್ದುಬಿಡಬಲ್ಲ ಶಕ್ತಿ ಇರುವುದು ನಿಮ್ಮಲ್ಲಿ ಮಾತ್ರ. ಹೀಗಾಗಿ, ನಿಮಗೇ ಅಡ್ಡಿಯಾಗಿರುವ ನಿಮ್ಮ ಸಣ್ಣತನಗಳನ್ನು, ಹಿಂಜರಿಕೆಗಳನ್ನು ಮೊದಲು ಸಾಯಿಸಿಬಿಡಿ, ಹೊಸದಾಗಿ ಹುಟ್ಟಿಬರುತ್ತೀರಿ.

ಇದನ್ನೂ ಓದಿ | Motivational story: ಅವನ ಮುಂಗೋಪದ ಮಾತಿಗೆ ಮುಗುಳ್ನಗುವೇ ಉತ್ತರ!

Exit mobile version