ಕೃಷ್ಣ ಭಟ್ ಅಳದಂಗಡಿ- Motivational story
ಒಂದೂರಿನಲ್ಲಿ ಒಬ್ಬ ವ್ಯಾಪಾರಿ ಇದ್ದ. ಅವನು ಮಾರ್ಕೆಟ್‌ಗೆ ಹೋಗಿದ್ದ. ಅಲ್ಲಿ ಸುತ್ತಾಡುತ್ತಿರುವಾಗ ವಿಶೇಷ ತಳಿಯ ಕುದುರೆಯೊಂದು ಕಂಡಿತು. ವ್ಯಾಪಾರ ನಿಮಿತ್ತವಾದ ತನ್ನ ದೂರದ ಪ್ರಯಾಣಕ್ಕೆ ಇದು ಸೂಕ್ತ ಎಂದು ಕಂಡಿತು.
ಆ ಕುದುರೆಯ ಮಾಲೀಕನನ್ನು ಹುಡುಕಿ ವಿಚಾರಿಸಿದ. ಕುದುರೆ ವಿಶೇಷ ತಳಿಯದ್ದಾದ್ದರಿಂದ ಮಾಲೀಕ ದೊಡ್ಡ ಮೊತ್ತವನ್ನೇ ಕೇಳಿದ. ಅದರ ವೇಗ, ಬಲವನ್ನು ವಿವರಿಸ್ತಾ ಬೆಲೆ ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎಂದ. ಕೊನೆಗೆ ವ್ಯಾಪಾರಿ ನಿರ್ದಿಷ್ಟ ಮೊತ್ತ ಕೊಟ್ಟು ಖರೀದಿ ಮಾಡಿದ.
ಕುದುರೆ ಮನೆ ತಲುಪುತ್ತಿದ್ದಂತೆಯೇ ಕೆಲಸದಾಳುವನ್ನು ಕರೆದು ಕುದುರೆಯ ಜೀನು ಬಿಚ್ಚಿ ಒಮ್ಮೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸುವಂತೆ ಹೇಳಿದ.
ಕೆಲಸದಾಳು ಜೀನು ಬಿಚ್ಚುತ್ತಿದ್ದಂತೆಯೇ, ಅದರಿಂದ ವಜ್ರ, ಚಿನ್ನದ ಆಭರಣಗಳು ಉದುರಿದವು. ಕೆಲಸದಾಳು ವ್ಯಾಪಾರಿಯನ್ನು ಕೂಗಿ ಕರೆದು ಹೇಳಿದ: ಸ್ವಾಮಿಗಳೇ, ಕುದುರೆ ಜತೆ ವಜ್ರ, ಚಿನ್ನಾಭರಣಗಳು ಕೊಡುಗೆಯಾಗಿ ಬಂದಿವೆ.
ಆ ವ್ಯಾಪಾರಿ: ಓ ಹೌದಾ? ತಪ್ಪಿ ಬಂದಿದೆ… ಕೊಡು.. ಅದನ್ನೀಗಲೇ ಒಪ್ಪಿಸಿ ಬರುವೆ ಅಂದ.
ಅದಕ್ಕೆ ಕೆಲಸದಾಳು: ಬೇಡ ಸ್ವಾಮಿ, ಕುದುರೆ ವ್ಯಾಪಾರಿ ಸಾಕಷ್ಟು ಲಾಭ ಮಾಡಿರ್ತಾನೆ. ಅವನೇನೂ ಕಡಿಮೆಗೆ ಕೊಡಲ್ಲ. ಇದು ದೇವರು ಕೊಟ್ಟ ಕಾಣಿಕೆ ಅಂತ ಇಟ್ಕೊಳ್ಳೋಣ ಎಂದ.
ವ್ಯಾಪಾರದಲ್ಲೂ ಸನ್ನಡತೆಯನ್ನೇ ಕಾದುಕೊಂಡಿದ್ದ ವ್ಯಾಪಾರಿಗೆ ಹೀಗೆ ಇಟ್ಟುಕೊಳ್ಳುವುದು ತಪ್ಪೆನಿಸಿತು.. ಮತ್ತೆ ಮಾರ್ಕೆಟ್ ಗೆ ಹೊರಟ.
ಅಷ್ಟು ಹೊತ್ತಿಗೆ ಕುದುರೆ ವ್ಯಾಪಾರಿ ಅಲ್ಲಿಂದ ಹೊರಟಿದ್ದ. ಆದರೂ ಪಟ್ಟು ಬಿಡದೆ, ಯಾರನ್ನೋ ಕೇಳಿ ವ್ಯಾಪಾರಿ ಹೋದ ದಾರಿ ಕಡೆ ತೆರಳಿ ಹುಡುಕಿಯೇ ಹುಡುಕಿದ.
ವಜ್ರ, ಚಿನ್ನಾಭರಣಗಳನ್ನು ಒಪ್ಪಿಸಿ ವಿವರಣೆ ನೀಡಿದ. ಕುದುರೆ ಮಾಲೀಕ ತುಂಬ ಸಂತೋಷಗೊಂಡ. ಮರೆತು ಅಲ್ಲಿಟ್ಟಿದ್ದು, ನೀವು ತಂದು ಕೊಟ್ಟಿದ್ದು ತುಂಬ ಸಂತೋಷವಾಯಿತು ಎಂದ. ಮಾತ್ರವಲ್ಲ, ಇದೇ ಸಂತೋಷಕ್ಕೆ ಬಹುಮಾನವಾಗಿ ಯಾವುದಾದರೊಂದು ವಜ್ರವನ್ನು ಸ್ವೀಕರಿಸುವಂತೆ ಕೋರಿದ.
ಆದರೆ ವ್ಯಾಪಾರಿ ಒಪ್ಪಲಿಲ್ಲ. ಕುದುರೆ ಮಾಲೀಕ ಮತ್ತೆ ಮತ್ತೆ ಒತ್ತಾಯಿಸಿದ. ನಿಮ್ಮಂಥ ಪ್ರಾಮಾಣಿಕರು ಅಪರೂಪ. ಹಾಗಿರುವಾಗ ಅದನ್ನು ಗುರುತಿಸದೆ ಹೋದರೆ ತಪ್ಪಾಗುತ್ತದೆ, ಸ್ವೀಕರಿಸಿ ಎಂದ.
ಆಗ ವ್ಯಾಪಾರಿ, ನೀವು ಹೇಳುವ ಮೊದಲೇ ನಾನು ಎರಡು ಅಮೂಲ್ಯ ವಸ್ತುಗಳನ್ನು ಎತ್ತಿಟ್ಟುಕೊಂಡಿದ್ದೇನೆ ಎಂದು ಹೇಳಿದ.
ಆಗ ಕುದುರೆ ಮಾಲೀಕನಿಗೆ ಸಿಟ್ಟು ಬಂತು. ನನ್ನನ್ನು ಕೇಳದೆ ತೆಗೆಯಲು ಎಷ್ಟು ಧೈರ್ಯ ಎಂದು ಹೇಳುತ್ತಲೇ ಲೆಕ್ಕ ಮಾಡಲು ಶುರು ಮಾಡಿದ. ಆದರೆ ಒಂದು ವಜ್ರ, ಆಭರಣವೂ ಕಡಿಮೆ ಇರಲಿಲ್ಲ..
ಆಶ್ಚರ್ಯದಲ್ಲಿ ಕೇಳಿದ: ಎಲ್ಲವೂ ಸರಿಯಾಗಿದ್ಯಲ್ಲಾ? ನೀವು ತೆಗೆದುಕೊಂಡ ಹರಳು, ಆಭರಣ ಯಾವುದು-ಎಂದ.
ಅದಕ್ಕೆ ವ್ಯಾಪಾರಿ: ಅದು ತುಂಬ ಬೆಲೆ ಬಾಳುವಂಥದ್ದು .. ಒಂದು ಪ್ರಾಮಾಣಿಕತೆ, ಇನ್ನೊಂದು ನನ್ನ ಸತ್ಯನಿಷ್ಠೆ ಅಂದ.
ಸುತ್ತ ನೋಡುತ್ತಿದ್ದವರೆಲ್ಲ ಒಂದೇ ಸಮನೆ ಚಪ್ಪಾಳೆ ಹೊಡೆದರು.
ಇದನ್ನೂ ಓದಿ | Motivational story | ದೇವರ ದೃಷ್ಟಿಯಲ್ಲಿ ನೀನು ನರಿಯಲ್ಲ ಕಣೋ ಸಿಂಹ