ಕೃಷ್ಣ ಭಟ್ ಅಳದಂಗಡಿ- Motivational story
ರಮೇಶ್ಚಂದ್ರ ಎಂದಿನಂತೆ ಕಚೇರಿಗೆ ಬಂದಿದ್ದರು. ಸುಮಾರು 100 ಜನ ಇರುವ ಅದೊಂದು ಖಾಸಗಿ ಕಂಪನಿ. ಬೆಳಗ್ಗೆ 10ರಿಂದ ಸಂಜೆ ಏಳು ಗಂಟೆವರೆಗೆ ತೆರೆದಿರುತ್ತದೆ. ರಮೇಶ್ಚಂದ್ರರದು ಅಂತ ದೊಡ್ಡ ಜವಾಬ್ದಾರಿಯೇನಲ್ಲ. ಕ್ಲರ್ಕ್ ಅಷ್ಟೆ. ಒಂದು ಮೂಲೆಯಲ್ಲಿ ಕೂರುತ್ತಾರೆ. ಸಾಮಾನ್ಯವಾಗಿ 6.30ಕ್ಕೆಲ್ಲ ಕಚೇರಿ ಬಿಡುತ್ತಾರೆ. ಅವರು ಹೋದ ಬಳಿಕವೂ ಕೆಲವು ಹಿರಿಯ ಅಧಿಕಾರಿಗಳು ಕಚೇರಿಯಲ್ಲಿ ಇರ್ತಾರೆ. ಏಳು ಗಂಟೆಗೆಲ್ಲ ಅವರೆಲ್ಲ ಹೋದ ಬಳಿಕ ಸೆಕ್ಯುರಿಟಿ ಮ್ಯಾನ್ ಬೀಗ ಹಾಕೋದು ಕ್ರಮ.
ಆವತ್ತು ಕೂಡಾ ಎಲ್ಲರೂ ಹೊತ್ತಿಗೆ ಸರಿಯಾಗಿ ಕಚೇರಿ ಬಿಟ್ಟರು. ಸೆಕ್ಯುರಿಟಿ ಮ್ಯಾನ್ ಇನ್ನೇನು ಬಾಗಿಲು ಹಾಕಿ ಮನೆಗೆ ಹೋಗಬೇಕು ಎನ್ನುವಾಗ ಯಾಕೋ ರಮೇಶ್ಚಂದ್ರ ಅವರು ಹೊರಗೆ ಹೋದ ಹಾಗೆ ಕಾಣಿಸಲಿಲ್ಲವಲ್ಲ ಅನಿಸಿತು.
ನೋಡೋಣ ಅಂತ ಒಳಗೆ ಹೋಗಿ ನೋಡಿದರೆ ರಮೇಶ್ಚಂದ್ರ ತಮ್ಮ ಸೀಟಿನಲ್ಲಿ ಇನ್ನೂ ಕುಳಿತೇ ಇದ್ದರು. ಸೆಕ್ಯುರಿಟಿ ಮ್ಯಾನ್ ಹತ್ತಿರ ಹೋಗಿ ನೋಡಿದರೆ ಅವರಿಗೆ ಪ್ರಜ್ಞೆ ತಪ್ಪಿತ್ತು. ಸೆಕ್ಯುರಿಟಿ ಮ್ಯಾನ್ ಕೂಡಲೇ ಒಂದು ವಾಹನ ಗೊತ್ತು ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಅಲ್ಲಿ ಪರೀಕ್ಷಿಸಿ ನೋಡಿದಾಗ ರಮೇಶ್ಚಂದ್ರ ಅವರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ʻʻನೀವು ಇವರನ್ನು ಕರೆದುಕೊಂಡು ಬರುವುದು ಒಂದೈದು ನಿಮಿಷ ತಡವಾಗಿದ್ದರೂ ಏನಾದರೂ ಅಪಾಯವಾಗುವ ಸಾಧ್ಯತೆ ಇತ್ತು. ಒಳ್ಳೆಯ ಕೆಲಸ ಮಾಡಿದಿರಿ’ʼ ಎಂದು ವೈದ್ಯರು ಹೇಳಿದರು. ಕೂಡಲೇ ಸೂಕ್ತ ಚಿಕಿತ್ಸೆ ನಡೆಸಿದ್ದರಿಂದ ರಮೇಶ್ಚಂದ್ರ ಅಪಾಯದಿಂದ ಪಾರಾದರು.
ಇತ್ತ ರಮೇಶ್ಚಂದ್ರರ ಮನೆ ಮಂದಿಯೂ ಬಂದರು. ರಮೇಶ್ಚಂದ್ರ ಸ್ವಲ್ಪ ಹೊತ್ತಿನ ಬಳಿಕ ನಿದ್ದೆಯಿಂದ ಎಂಬಂತೆ ಎಚ್ಚರಗೊಂಡರು. ಆಸ್ಪತ್ರೆಯಲ್ಲಿರುವುದನ್ನು ನೋಡಿ ಗಾಬರಿಗೊಂಡರು. ಆಗ ಸೆಕ್ಯುರಿಟಿ ಮ್ಯಾನ್ ವಿಷಯ ತಿಳಿಸಿದರು.
ʻʻಅಯ್ಯೋ ನೀವು ಬಂದು ನೋಡದೆ ಇದ್ದರೆ ನಾನು ಹೆಂಡ್ತಿ ಮಕ್ಕಳ ಮುಖ ಮತ್ತೆ ನೋಡಲು ಸಾಧ್ಯವಾಗುತ್ತಿರಲಿಲ್ಲʼʼ ಎಂದು ನೋವಿನಿಂದ ಹೇಳಿದರು ರಮೇಶ್ಚಂದ್ರ. ಮತ್ತೆ ಕೇಳಿದರು: ಅಲ್ಲಾ, ಸಾಮಾನ್ಯವಾಗಿ ಎಲ್ಲಾ ಹೋದ ಮೇಲೆ ನೀವು ಬಾಗಿಲು ಹಾಕಿಕೊಂಡು ಹೋಗುತ್ತೀರಿ. ನಾನು ಹೋಗಿಲ್ಲ ಅಂತ ನಿಮಗೆ ಹೇಗೆ ಗೊತ್ತಾಯಿತು? ಒಳಗೆ ಬಂದು ನೋಡಬೇಕು ಅಂತ ನಿಮಗ್ಯಾಕೆ ಅನಿಸಿತು?
ಅದಕ್ಕೆ ಅವನು ಹೇಳಿದ: ಸರ್, ನಾನು ಈ ಆಫೀಸಿಗೆ ಬಂದು ಹತ್ತು ವರ್ಷ ಆಯಿತು ಸಾರ್. ಪ್ರತಿದಿನವೂ ಕಚೇರಿಗೆ ಬರುವಾಗ ಮತ್ತು ಮನೆಗೆ ಹೋಗುವಾಗ ನನಗೆ ನಮಸ್ಕಾರ ಅಂತ ಹೇಳ್ತಾ ಇದ್ದ ಏಕೈಕ ವ್ಯಕ್ತಿ ನೀವು ಸರ್. ಬೇರೆ ಕೆಲವರೂ ಇದೇ ಅಭ್ಯಾಸ ಹೊಂದಿದ್ದಾರೆ. ಆದರೆ, ಒಂದು ದಿನವೂ ತಪ್ಪದೆ ಅಷ್ಟು ಪ್ರೀತಿಯಿಂದ ನನಗೆ ಗೌರವ ಕೊಡುತ್ತಿದವರು ನೀವೊಬ್ಬರೇ ಸಾರ್.. ಆವತ್ತು ನೀವು ನಮಸ್ಕಾರ ಹೇಳಿಲ್ಲ ಅನ್ನೋದು ನನ್ನ ತಲೆಯಲ್ಲಿತ್ತು. ಹೊರಗೆ ಹೋಗಿದ್ದರೆ ಖಂಡಿತಾ ಮಾತನಾಡಿಸದೆ ಹೋಗುತ್ತಿರಲಿಲ್ಲ. ಅವರು ಹೋಗೇ ಇಲ್ಲ, ಒಳಗೇ ಇದ್ದಾರೆ ಅಂತ ಒಳಮನಸ್ಸು ಹೇಳ್ತಾ ಇತ್ತು.. ಹಾಗಾಗಿ ಒಳಗೆ ನೋಡಿ ಹೋಗೋಣ ಅಂತ ಬಂದೆ. ಆಗ ನೀವು ಕುಳಿತಲ್ಲೇ ಕುಸಿದಿದ್ದಿರಿ ಸರ್. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದೆ.
ರಮೇಶ್ಚಂದ್ರ ಅವನ ಕೈಹಿಡಿದು ಹೇಳಿದರು: ಕಚೇರಿಯಲ್ಲಿ ನಾನು ಏನೂ ಅಲ್ಲ, ಅಧಿಕಾರಿ ನಾನಲ್ಲ, ಹತ್ತರಲ್ಲಿ ಹನ್ನೊಂದು ಅಂದುಕೊಳ್ಳುತ್ತಿದ್ದೆ. ಆದರೆ, ನನ್ನನ್ನೂ ಇಷ್ಟು ಜತನದಿಂದ ಕಾಯೋ ಒಂದು ಜೀವ ಅಲ್ಲಿದೆ ಅಂತ ಗೊತ್ತಿರಲಿಲ್ಲ. ತ್ಯಾಂಕ್ಸ್ ಕಣೊ.
ಸೆಕ್ಯೂರಿಟಿ ರಮೇಶ್ಚಂದ್ರ ಅವರ ಹೆಂಡತಿ, ಮಕ್ಕಳನ್ನು ನೋಡಿ ಹೇಳಿದ: ಇನ್ನೊಬ್ಬರನ್ನು ಗೌರವಿಸುವ ದೊಡ್ಡ ಗುಣ ಇವರದು. ಹಾಗಾಗಿಯೇ ಇವತ್ತು ಮತ್ತೆ ಬದುಕಿದ್ದಾರೆ.
ಇದನ್ನೂ ಓದಿ | Motivational story | ದೊಡ್ಡ ಎಲೆ ಹೊತ್ತು ಸಾಗುತ್ತಿದ್ದ ಪುಟ್ಟ ಇರುವೆ ಮತ್ತು ಆ ಉದ್ಯಮಿಯ ಕಲಿತುಕೊಂಡ ಪಾಠ!