ಕೃಷ್ಣ ಭಟ್ ಅಳದಂಗಡಿ-motivational stroy
ವಿಶ್ವನಾಥ ಒಂದು ಕಬ್ಬಿಣದ ಅಂಗಡಿ ಇಟ್ಟುಕೊಂಡಿದ್ದ. ಅಲ್ಲಿ ಕಬ್ಬಿಣದ ರಾಡ್, ಶೀಟ್, ಮೊಳೆ, ಸ್ಪ್ರಿಂಗ್ ಸೇರಿದಂತೆ ಎಲ್ಲ ರೀತಿಯ ವಸ್ತುಗಳು ಇದ್ದವು. ಗುಜರಿಯವರು ತಂದುಕೊಟ್ಟ ಕಬ್ಬಿಣವನ್ನು ಕೂಡಾ ಅಲ್ಲಿ ಖರೀದಿ ಮಾಡ್ತಾ ಇದ್ದರು.
ವಿಶ್ವನಾಥ್‍ಗೆ ಒಬ್ಬ ಮಗ… ಚಿಂತನ್. ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದ ಮಗ ಸಮಯ ಸಿಕ್ಕಾಗಲೆಲ್ಲ ಅಂಗಡಿಗೆ ಬಂದು ಅಪ್ಪನ ಜತೆಗಿರುತ್ತಿದ್ದ. ಅವನಿಗೆ ಲೋಕದ ನಾನಾ ಸಂಗತಿಗಳ ಬಗ್ಗೆ ಚರ್ಚೆ ಮಾಡುವ ಹುಮ್ಮಸ್ಸು. ಅಪ್ಪನ ಜತೆ ಅವನ ಸಂವಾದ ಆಗಾಗ ನಡೆಯುತ್ತಿತ್ತು.
ಅದೊಂದು ದಿನ ಚಿಂತನ್ ಅಪ್ಪನಲ್ಲಿ ಕೇಳಿದ: ಅಪ್ಪ ಈ ಜಗತ್ತಿನಲ್ಲಿ ಮನುಷ್ಯನ ಮೌಲ್ಯ ಎಷ್ಟು?
ವಿಶ್ವನಾಥನಿಗೆ ಆಶ್ಚರ್ಯ ಆಯಿತು. ಮಗ ತುಂಬ ಗಂಭೀರವಾದ ಪ್ರಶ್ನೆ ಕೇಳಿದ್ದಾನೆ ಅಂತ. ಸ್ವಲ್ಪ ಹೊತ್ತು ಯೋಚಿಸಿ ಹೇಳಿದ: ಇದನ್ನು ಲೆಕ್ಕ ಹಾಕುವುದು ತುಂಬ ಕಷ್ಟ ಮಗನೇ. ಯಾಕೆಂದರೆ, ಮನುಷ್ಯನ ಜೀವನ ಅಮೂಲ್ಯ.
ಮಗ ಮತ್ತೊಂದು ಪ್ರಶ್ನೆ ಕೇಳಿದ: ನನಗೆ ನೀನು ಹೇಳ್ತಾ ಇರುವುದು ಅರ್ಥ ಆಗ್ತಿಲ್ಲ ಅಪ್ಪ. ಮನುಷ್ಯರ ಜೀವನ ಅಮೂಲ್ಯ. ಅದರ ಮೌಲ್ಯವನ್ನು ನಿರ್ಧರಿಸಲಾಗದು ಅಂತೀರಿ. ಆದರೆ, ಕೆಲವರಿಗೆ ಜನರು ಜಾಸ್ತಿ ಮರ್ಯಾದೆ ಕೊಡ್ತಾರೆ, ಕೆಲವರಿಗೆ ಮರ್ಯಾದೆಯನ್ನೇ ಕೊಡಲ್ಲ ಯಾಕೆ?
ಆಗ ಅಪ್ಪ ಗಂಭೀರನಾದ. ಆಗಷ್ಟೇ ಗುಜರಿ ವ್ಯಾಪಾರಿಯೊಬ್ಬ ತಂದುಕೊಟ್ಟಿದ್ದ ಕಬ್ಬಿಣದ ತುಂಡನ್ನು ಎತ್ತಿ `ಇದರ ಮೌಲ್ಯ ಎಷ್ಟು’ ಎಂದು ಕೇಳಿದ. ಆಗಷ್ಟೇ ಅಪ್ಪ ಗುಜರಿ ವ್ಯಾಪಾರಿಗೆ ಐನೂರು ರೂ. ಕೊಟ್ಟಿದ್ದನ್ನು ನೋಡಿದ್ದ ಮಗ ಹೇಳಿದ: ಐನೂರು ರೂ. ಅಂತ ನೀವೇ ತೀರ್ಮಾನ ಮಾಡಿದ್ರಲ್ವ ಅಪ್ಪಾ..
ಅಪ್ಪ ಹೇಳಿದ: ಈಗ ನಾನು ಇದನ್ನು ಬಳಸಿಕೊಂಡು ಮೊಳೆಗಳನ್ನು ಮಾಡಿದರೆ ಎಷ್ಟಾಗಬಹುದು.
ಮಗ ಲೆಕ್ಕ ಹಾಕಿ ಹೇಳಿದ: ಸುಮಾರು 2000 ರೂ. ಆಗಬಹುದಪ್ಪ.
ಇದನ್ನೇ ಒಂದು ಸ್ಪ್ರಿಂಗ್ ಆಗಿ ಬದಲಿಸಿದರೆ ಎಷ್ಟು ಸಿಗಬಹುದು? ಮಗ ಹೇಳಿದ: 2500 ರೂ.
ಅದಿರ್ಲಿ, ಇದನ್ನೇ ಒಂದು ಕಲಾಕೃತಿಯಾಗಿ ಪರಿವರ್ತಿಸಿದೆವು ಅಂತಿಟ್ಟುಕೋ ಎಷ್ಟಾಗಬಹುದು?
ಮಗ ಹೇಳಿದ: ಹೂಂ, ಅದು ಕೊಳ್ಳುವವನ ಕಲಾ ಪ್ರೀತಿಯನ್ನು ಅವಲಂಬಿಸಿರ್ತದೆ. ಎಷ್ಟು ಬೇಕಾದರೂ ಆಗಬಹುದಪ್ಪಾ..
ಅಪ್ಪ ಹೇಳಿದ: ಮನುಷ್ಯರ ಮೌಲ್ಯವೂ ಹೀಗೇ ಮಗನೇ… ನಾವು ಹೇಗಿದ್ದೇವೆ ಎನ್ನುವುದರ ಆಧಾರದ ಮೇಲೆ ನಮ್ಮ ಮೌಲ್ಯ ನಿರ್ಧಾರವಾಗುತ್ತದೆ. ನಮ್ಮ ಸ್ಥಿತಿ, ನಮ್ಮ ನಡವಳಿಕೆ, ನಮ್ಮ ಬುದ್ಧಿವಂತಿಕೆಗಳು ನಮ್ಮ ಮೌಲ್ಯವನ್ನು ಹೆಚ್ಚು ಇಲ್ಲವೇ ಕಡಿಮೆ ಮಾಡುತ್ತದೆ.
ಕೆಲವರು ತಾವು ಬರೀ ಕಬ್ಬಿಣದ ತುಂಡು, ಯಾವುದಕ್ಕೂ ಲಾಯಕ್ಕಿಲ್ಲ ಎಂದುಕೊಂಡು ಮೌಲ್ಯರಹಿತರಾಗಿಯೇ ಉಳಿಯುತ್ತಾರೆ. ಕೆಲವರು ತಮ್ಮ ಮೌಲ್ಯವರ್ಧನೆ ಮಾಡಿಕೊಂಡು ಎಲ್ಲರಿಂದ ಬೇಡಿಕೆ ಪಡೆಯುತ್ತಾರೆ.
ನಾವು ಕೂಡಾ ನಮ್ಮ ಮೌಲ್ಯವರ್ಧನೆ ಕಡೆಗೆ ಹೆಚ್ಚು ಗಮನ ಕೊಟ್ಟರೆ, ಜನರ ಗಮನ ಸೆಳೆಯಲು ಸಾಧ್ಯವಾದರೆ, ವರ್ತ್ ಅನಿಸಿದರೆ ಮೌಲ್ಯ ಹೆಚ್ಚುತ್ತದೆ. ಈಗ ನಾವು ಹೇಗಿದ್ದೇವೆ ಎನ್ನುವುದು ಮುಖ್ಯವೇ ಅಲ್ಲ.. ನಾವು ಏನಾಗಬೇಕು ಎಂದು ಗುರಿ ಇಟ್ಟುಕೊಂಡಿದ್ದೇವಲ್ಲಾ, ಆ ಕಡೆಗೆ ಪ್ರಯತ್ನ ಮಾಡುತ್ತೇವಲ್ಲಾ.. ಅದುವೇ ಮುಖ್ಯ.
ಚಿಂತನ್ ಅಪ್ಪನ ಮುಖವನ್ನೊಮ್ಮೆ, ಮೂಲೆಯಲ್ಲಿ ಬಿದ್ದ ಗುಜರಿಗಳನ್ನೊಮ್ಮೆ ನೋಡಿದ.
ಇದನ್ನೂ ಓದಿ | Motivational story | ಬಟ್ಟೆ ವಾಷ್‍ಗೆ ಕೊಡಲು ಹೋದರೆ ಮನಸ್ಸನ್ನೇ ಮೆಲ್ಲಗೆ ತೊಳೆದುಬಿಟ್ಟ!