ಕೃಷ್ಣ ಭಟ್ ಅಳದಂಗಡಿ- Motivational story
ಅವನಿನ್ನೂ ಏಳು ವರ್ಷದ ಹುಡುಗ. ಪ್ರತಿ ದಿನ ಸಂಜೆ ಅಮ್ಮನೊಂದಿಗೆ ಕುಳಿತು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದ, ಶ್ಲೋಕಗಳನ್ನು ಹೇಳುತ್ತಿದ್ದ. ಅಮ್ಮ ಅವನಿಗೆ ದೇವರ ಲೀಲೆಗಳ ನೂರಾರು ಕಥೆಗಳನ್ನು ಹೇಳುತ್ತಿದ್ದಳು. ದೇವರು ಎಷ್ಟು ಸುಂದರ, ಹೇಗೆ ಪ್ರೀತಿ ಮಾಡುತ್ತಾನೆ, ಹೇಗೆ ರಕ್ಷಣೆ ಮಾಡುತ್ತಾನೆ ಅಂತೆಲ್ಲ ವಿವರಿಸುತ್ತಿದ್ದಳು.
ಹೀಗೆ ಕೇಳುತ್ತಿದ್ದಾಗಲೆಲ್ಲ ಆ ಹುಡುಗನಿಗೆ ಅಂಥ ಹಿತವಾದ ದೇವರನ್ನೊಮ್ಮೆ ನೋಡಬೇಕು ಅನಿಸ್ತಾ ಇತ್ತು. ಒಂದು ದಿನ ಹುಡುಗ ಶಾಲೆಗೆ ಹೊರಟಿದ್ದ. ಅಮ್ಮ ಎರಡು ಬಾಕ್ಸ್‌ಗಳಲ್ಲಿ ತಿಂಡಿ ಕೊಟ್ಟಿದ್ದಳು.
ಹುಡುಗ ಮನೆಯಿಂದ ಸ್ವಲ್ಪ ದೂರ ನಡೆದು ಹೋಗಿದ್ದ ಅಷ್ಟೆ. ಅಲ್ಲೊಂದು ಉದ್ಯಾನವಿದೆ. ಅಲ್ಲಿ ಪಾರಿವಾಳಗಳು ಇರ್ತವೆ. ಹುಡುಗ ದಿನವೂ ಅದನ್ನು ನೋಡಿಕೊಂಡೇ ದಾಟಿ ಹೋಗುತ್ತಿದ್ದ. ಆವತ್ತು ಆ ಪಾರಿವಾಳಗಳು ಆಟವಾಡುವ ಜಾಗದಲ್ಲಿರುವ ಬೆಂಚಿನ ಮೇಲೆ ಒಬ್ಬ ಅಜ್ಜಿ ಕುಳಿತಿದ್ದರು. ಹುಡುಗನಿಗೆ ಆ ಅಜ್ಜಿ ತುಂಬ ಸೋತು ಹೋದಂತೆ, ಹಸಿವಿನಿಂದ ಕಂಗಾಲಾಗಿರುವಂತೆ ಕಂಡಿತು. ಅವನು ತನ್ನ ಬ್ಯಾಗಿನಿಂದ ಒಂದು ಬಾಕ್ಸ್ ತೆಗೆದು ಅದರಲ್ಲಿದ್ದ ಒಂದು ದೋಸೆಯನ್ನು ಅಜ್ಜಿಗೆ ಕೊಟ್ಟ. ಅಜ್ಜಿ ಖುಷಿಯಿಂದ ತಿಂದರು ಮತ್ತು ಚಂದನೆಯ ನಗುವೊಂದು ಹೊಮ್ಮಿತು ಆ ಮುಖದಲ್ಲಿ. ಹುಡುಗನಿಗೆ ಖುಷಿ ಆಯಿತು. ಅವನು ಇನ್ನೊಂದು ಪೀಸ್ ದೋಸೆ ಕೊಟ್ಟ, ಸ್ವಲ್ಪ ನೀರು ಕೊಟ್ಟ. ಅಜ್ಜಿ ಅದನ್ನು ತಿಂದು ಖುಷಿಯಾಗಿ ನಕ್ಕರು.
ಹೀಗೆ ಅಜ್ಜಿ ಮತ್ತು ಹುಡುಗನ ಆಟ ಮಧ್ಯಾಹ್ನದವರೆಗೂ ನಡೆಯಿತು. ಹುಡುಗ ಇನ್ನೊಂದು ಬಾಕ್ಸ್ ತೆಗೆದು ಅಜ್ಜಿಗೊಮ್ಮೆ ತುತ್ತು ಕೊಟ್ಟ, ತಾನೂ ತಿಂದ. ಇಬ್ಬರೂ ಸೇರಿ ನೀರು ಕುಡಿದರು. ಅಜ್ಜಿ ಮನೆಗೆ ಹೋಗುವುದನ್ನು, ಹುಡುಗ ಶಾಲೆಗೆ ಹೋಗುವುದನ್ನೇ ಮರೆತಿದ್ದರು. ಆದರೆ, ಒಂದೂ ಮಾತು ಆಡಿರಲಿಲ್ಲ. ಬರೀ ನಗು ಮತ್ತು ಕಣ್ಣೋಟದಲ್ಲೇ ಅವರ ಮಾತುಕತೆ ಸಾಗಿತು.
ಸಂಜೆಯಾಗುವ ಸೂಚನೆ ಕಂಡಾಗ ಹುಡುಗ ಮನೆಗೆ ಹೊರಟ. ನಾಲ್ಕು ಹೆಜ್ಜೆ ಮುಂದಿಟ್ಟವನೇ ಮತ್ತೆ ಅಜ್ಜಿಯನ್ನು ನೋಡಿದ. ಆಕೆಯನ್ನೊಮ್ಮೆ ತಬ್ಬಿಕೊಳ್ಳಬೇಕು ಅನಿಸಿತು. ಓಡಿ ಹೋಗಿ ತಬ್ಬಿಕೊಂಡ. ಆಜ್ಜಿ ಇನ್ನೂ ಖುಷಿಯಿಂದ ನಕ್ಕು ಕೆಂಪಾದಳು.
ಹುಡುಗ ಮನೆಗೆ ಹೊರಟ. ಕುಣಿದುಕೊಂಡು ಬಂದ ಮಗನನ್ನು ನೋಡಿ ತಾಯಿಗೆ ಆಶ್ಚರ್ಯ. ʻಏನಿವತ್ತು ವಿಶೇಷ. ಇಷ್ಟೊಂದು ಖುಷಿಯಾಗಿದ್ದೀಯಲ್ಲಾ’ ಎಂದು ಕೇಳಿದಳು. ಆಗ ಹುಡುಗ ಹೇಳಿದಳು: ಅಮ್ಮಾ ಇವತ್ತು ನಾನು ದೇವರನ್ನು ನೋಡಿದೆ. ಎಷ್ಟು ಚಂದ ನಗ್ತಾಳೆ ಗೊತ್ತಾ ಆ ದೇವರು- ಅಂದ.
ಇತ್ತ ಅಜ್ಜಿ ತನ್ನ ಮನೆಗೆ ಹೋದರು. ಮಗ ಕೇಳಿದ: ಎಲ್ಲಿ ಹೋಗಿದ್ದಿಯಮ್ಮಾ ಇಷ್ಟು ಹೊತ್ತು? ಏನಿವತ್ತು ತುಂಬ ಲಕ ಲಕ ಹೊಳೀತಾ ಇದ್ದೀ. ಕಾಲು ನೋವು ಹೋದಂಗಿದೆ. ಕುಣೀತಾ ಬರ್ತಾ ಇರೋ ಹಾಗೆ ಕಂಡಿತು. ಏನಾಯ್ತು ಇವತ್ತು?
ಅಜ್ಜಿ ಹೇಳಿದಳು: ನಂಗೆ ಇವತ್ತು ಪಾರ್ಕ್‍ನಲ್ಲಿ ದೇವರು ಸಿಕ್ಕಿದ ಕಣೋ. ಎಷ್ಟು ಮುದ್ದಾಗಿದ್ದಾನೆ ಗೊತ್ತಾ ದೇವರು. ಸಣ್ಣ ಮಗು ಕಣೋ ಅವನು!
ಇದನ್ನೂ ಓದಿ | Motivatioal story | ಹಿಮ ಬೆಟ್ಟದ ತುತ್ತತುದಿಯ ಚಹಾ ಅಂಗಡಿಯಲ್ಲಿ ಆ ರಾತ್ರಿ ದೇವರು ಚಹಾ ಕುಡಿದು ಹೋಗಿದ್ದ!