Site icon Vistara News

Motivational story | ಆ ಇಬ್ಬರು ಪುಟಾಣಿ ಮಕ್ಕಳು ಮತ್ತು ಅವರ ಕೈಯಲ್ಲಿದ್ದ ನಾಲ್ಕು ಚಿಪ್ಪು ದುಡ್ಡು!

Girl in doll shop

ಕೃಷ್ಣ ಭಟ್‌ ಅಳದಂಗಡಿ- Motivational story
ನಾಲ್ಕುವರೆ ವರ್ಷದ ಪುಟ್ಟ ಹುಡುಗ ಮತ್ತು ಮೂರು ವರ್ಷದ ಅವನ ತಂಗಿ ಇಬ್ಬರೂ ಅಪ್ಪ-ಅಮ್ಮನ ಜತೆಗೆ ಒಂದು ಮಾಲ್‍ಗೆ ಬಂದಿದ್ದರು. ಅಪ್ಪ-ಅಮ್ಮ ಏನೋ ಖರೀದಿಯಲ್ಲಿ ಬ್ಯುಸಿ ಇದ್ದಾಗ ಹೊರಗಡೆ ಮಕ್ಕಳು ಆಡಿಕೊಳ್ಳುತ್ತಿದ್ದರು. ಅತ್ತಿತ್ತ ಓಡುತ್ತಿದ್ದಾಗ ಅಣ್ಣನಿಗೆ ತಂಗಿ ಯಾಕೋ ಹಿಂದೆ ಬಿದ್ದಿದ್ದಾಳೆ ಅನಿಸಿತು. ಏನೂ ಅಂತ ಹಿಂದೆ ಬಂದು ನೋಡಿದರೆ ಆಕೆ ಒಂದು ಗೊಂಬೆಗಳ ಅಂಗಡಿಯ ಮುಂದೆ ನಿಂತಿದ್ದಾಳೆ. ಏನನ್ನೋ ಭಾರಿ ಆಸಕ್ತಿಯಿಂದ ನೋಡುತ್ತಿದ್ದಾಳೆ.

ಅಣ್ಣ ಅವಳ ಹತ್ತಿರಕ್ಕೆ ಬಂದು ಕೇಳಿದ: ನಿಂಗೆ ಏನಾದರೂ ಬೇಕಿತ್ತಾ?
ಪುಟ್ಟಹುಡುಗಿ ಕಣ್ಣರಳಿಸಿ, ಕೊರಳು ಕೊಂಕಿಸಿ ಹೇಳಿತು: ನಂಗೆ ಆ ಗೊಂಬೆ ಬೇಕು.
ಅಣ್ಣ ದೊಡ್ಡ ಜನರಂತೆ ಅವಳ ಕೈ ಹಿಡಿದು ಕರೆದುಕೊಂಡು ಹೋದ. ಅವಳು ಕೇಳಿದ ಗೊಂಬೆಯನ್ನು ತೆಗೆದು ಕೈಗೆ ಕೊಟ್ಟ. ಪುಟ್ಟ ಹುಡುಗಿ ತುಂಬ ಖುಷಿಯಾದಳು.

ಅಷ್ಟು ಹೊತ್ತಿಗೆ ಗೊಂಬೆಗಳ ಅಂಗಡಿಯ ಕೆಲಸಗಾರ ಬಂದು `ಏ ಗೊಂಬೆ ಕೊಡಿಲ್ಲಿ' ಎಂದ. ಅವನಿಗೆ ಈ ಮಕ್ಕಳು ಹಣ ಕೊಡದೆ ಗೊಂಬೆಯನ್ನು ಕೊಂಡು ಹೋದರೆ ಎಂಬ ಆತಂಕ. ಅಷ್ಟು ಹೊತ್ತಿಗೆ ಬಾಲಕ ದುಡ್ಡು ಕೊಡುವ ಕೌಂಟರ್ ಬಳಿಗೆ ಹೋಗಿಈ ಗೊಂಬೆಗೆ ಎಷ್ಟಾಗುತ್ತೆ’ ಅಂತ ಕೇಳಿದ.

ಅಷ್ಟೂ ಹೊತ್ತಿಂದ ಮಕ್ಕಳ ಆಟವನ್ನು, ಬಾಲಕ ತಂಗಿ ಜತೆ ಪ್ರೌಢವಾಗಿ ನಡೆದುಕೊಂಡಿದ್ದನ್ನು ಮಾಲೀಕ ನೋಡಿದ್ದ. ʻಎಷ್ಟು ಕೊಡ್ತೀಯಾ ಕಂದಾ’ ಎಂದು ಕೇಳಿದ ಮಾಲೀಕ.

ಬಾಲಕ ತನ್ನ ಜೇಬಿನಿಂದ ಒಂದೊಂದಾಗಿ ಚಿಪ್ಪುಗಳನ್ನು ತೆಗೆದು ಕೌಂಟರ್ ಮೇಲೆ ಇಡತೊಡಗಿದ. ಅಂಗಡಿ ಮಾಲೀಕ ಚಿಪ್ಪುಗಳೇ ನೋಟು ಎಂಬಂತೆ ಲೆಕ್ಕಮಾಡತೊಡಗಿದ. ಮಧ್ಯೆ ಬಾಲಕನನ್ನೊಮ್ಮೆ ನೋಡಿದ.

ಆಗ ಬಾಲಕ ಚಿಂತೆಯಿಂದ `ʻಏನು ಕಡಿಮೆ ಆಯ್ತಾ’ ಎಂದು ಕೇಳಿದ.

ಆಗ ಅಂಗಡಿಯವನು: ʻಏ ಇಲ್ಲ ಕಂದಾ.. ಜಾಸ್ತೀನೇ ಇದೆ. ನಂಗೆ ನಾಲ್ಕು ಚಿಪ್ಪು ಸಾಕು. ಉಳಿದುದನ್ನು ನೀನೇ ಇಟ್ಟುಕೋʼ ಎಂದ.

ಹುಡುಗ ಖುಷಿಯಿಂದ ಉಳಿದೆಲ್ಲ ಚಿಪ್ಪುಗಳನ್ನು ಕಿಸೆಗೆ ತುಂಬಿಕೊಂಡ. ತಂಗಿಯನ್ನು ಕೈಯಲ್ಲಿ ಹಿಡಿದುಕೊಂಡು ಹೊರಟ. ಅವಳೋ ಗೊಂಬೆ ಸಿಕ್ಕಿದ ಖುಷಿಯಲ್ಲಿ ಕುಣಿಯುತ್ತಿದ್ದಳು.

ಇದನ್ನೆಲ್ಲ ನೋಡುತ್ತಿದ್ದ ಅಂಗಡಿ ಕಾರ್ಮಿಕನಿಗೆ ಆಶ್ಚರ್ಯ. ಅವನು ಮಾಲೀಕನನ್ನು ಕೇಳಿದ: ಅಷ್ಟು ದುಬಾರಿ ಗೊಂಬೆಯನ್ನು ಕೇವಲ ಬೆಲೆಯಿಲ್ಲದ ನಾಲ್ಕು ಚಿಪ್ಪುಗಳಿಗೆ ಕೊಟ್ಟು ಬಿಟ್ರಲ್ಲ.

ಅದಕ್ಕೆ ಮಾಲೀಕ ನಗುತ್ತಾ ಹೇಳಿದ: ʻಹೌದು.. ನಮ್ಮ ಪಾಲಿಗೆ ಇವು ಕೇವಲ ಬೆಲೆರಹಿತ ಚಿಪ್ಪುಗಳು. ಆದರೆ, ಆ ಹುಡುಗನಿಗೆ ಇದುವೇ ಅಮೂಲ್ಯ. ಅವನಿಗೆ ಹಣದ ಮೌಲ್ಯ ಗೊತ್ತಿಲ್ಲ. ಹಣ ಎಂದರೇನೆಂದೇ ಗೊತ್ತಿಲ್ಲ. ಆದರೆ, ದೊಡ್ಡವನಾದಾಗ ಖಂಡಿತಾ ಗೊತ್ತಾಗುತ್ತದೆ. ಅವನಿಗೆ ಆಗ ಯಾವತ್ತಾದರೊಂದು ದಿನ ಇಲ್ಲಿಗೆ ಬಂದಿದ್ದು, ಗೊಂಬೆ ಖರೀದಿಸಿದ್ದು, ತಂಗಿ ಖುಷಿಯಾದದ್ದು, ದುಡ್ಡಿನ ಬದಲಾಗಿ ಚಿಪ್ಪು ಕೊಟ್ಟದ್ದು ನೆನಪಾಗಿಯೇ ಆಗುತ್ತದೆ. ಆಗ ಅವನಿಗೆ ಜಗತ್ತು ಎಷ್ಟೊಂದು ಪಾಸಿಟಿವ್ ಆಗಿದೆ ಅನ್ನುವ ಅರಿವು ಆಗೇ ಅಗುತ್ತದೆ. ನನಗೆ ಲಾಭ ಆವತ್ತು ಆಗುತ್ತದೆ. ಸಾಕು ನಂಗೆ.

ಅಂಗಡಿ ಕೆಲಸಗಾರ ಹೊರಗೆ ಬಂದು ಮಕ್ಕಳನ್ನೇ ನೋಡಲು ಶುರು ಮಾಡಿದ. ಮನೆಯಲ್ಲಿರುವ ಇಬ್ಬರು ಪುಟ್ಟ ಮಕ್ಕಳು ನೆನಪಾದರು.

ಇದನ್ನೂ ಓದಿ | Motivational story | ನನ್ನ ತಾಕತ್ತಿಗೆ ಸರಿಯಾದ ಸಂಬಳ ಬೇಕು.. ಅಂದವನಿಗೆ ಉದ್ಯೋಗ ಸಿಕ್ಕಿತಾ?

Exit mobile version