ಕೃಷ್ಣ ಭಟ್ ಅಳದಂಗಡಿ – Motivational stroy
ಅದೊಂದು ಊರಿನ ಪ್ರವೇಶ ದ್ವಾರ. ಮೊದಲು ಸುಂಕದ ಕಟ್ಟೆ ಅಂತಿದ್ದೆವಲ್ಲ ಅಂತದ್ದು. ಅಲ್ಲೊಂದು ಮರದ ಬುಡದಲ್ಲಿ ಒಬ್ಬ ಹಿರಿಯ ವ್ಯಕ್ತಿ ಕೂತಿದ್ದರು. ಅಷ್ಟು ಹೊತ್ತಿಗೆ ಒಬ್ಬ ವ್ಯಕ್ತಿ ಬೈಕ್‍ನಲ್ಲಿ ಬಂದ. ಬೈಕ್ ನಿಲ್ಲಿಸಿ ಬಂದು ಹಿರಿಯರ ಬಳಿ ಕೇಳಿದ: ಈ ಊರಿನ ಜನ ಹೇಗೆ ಸರ್?
ಆಗ ವೃದ್ಧರು ಕೇಳಿದರು: ಈ ಪ್ರಶ್ನೆ ಯಾಕೆ ಕೇಳ್ತಾ ಇದ್ದೀರಿ ಅಂತ ತಿಳ್ಕೊಬಹುದಾ?
ಆ ವ್ಯಕ್ತಿಹೇಳಿದ: ನಾನು ಮೊದಲು ಒಂದು ಊರಲ್ಲಿದ್ದೆ. ಅಲ್ಲಿನ ಜನರು ತುಂಬಾ ಕೆಟ್ಟವರು. ನಂಗೆ ಅಲ್ಲಿ ತುಂಬ ಮಾನಸಿಕ ಕಿರಿಕಿರಿ ಆಯ್ತು. ಹಾಗಾಗಿ ಆ ಊರು ಬಿಟ್ಟು ಬೇರೆ ಕಡೆ ಮನೆ ನೋಡ್ತಾ ಇದ್ದೇನೆ. ಹೇಗಿದ್ದರೂ ನಾನು ಕೆಲಸಕ್ಕೆ ಬೈಕಲ್ಲಿ ಓಡಾಡಬಹುದು. ಅದಕ್ಕೆ ಕೇಳಿದ್ದು, ಈ ಊರಿನ ಜನರು ಹೇಗೆ ಅಂತ.
ಆಗ ವೃದ್ಧರು ಹೇಳಿದರು: ತಮ್ಮಾ ವಿಷಯ ಹೀಗಿದ್ದರೆ ನಿಂಗೆ ಈ ಊರೂ ಆಗ್ಲಿಕ್ಕಿಲ್ಲ. ಯಾಕೆಂದರೆ, ಇಲ್ಲಿನ ಜನ ಇನ್ನೂ ಸ್ವಲ್ಪ ಒರಟರೆ. ತುಂಬ ಪಾಲಿಶ್ ಆಗಿ ಮಾತನಾಡ್ಲಿಕೆ ಬರುವುದಿಲ್ಲ. ನಿನಗೆ ಇಲ್ಲಿನ ಜನ ಇನ್ನೂ ಅಸಭ್ಯ ಅನಿಸಬಹುದು. ಹೀಗಾಗಿ ನೀನು ಬೇರೆ ಯಾವುದಾದರೂ ಊರನ್ನು ನೋಡುವುದು ಒಳ್ಳೆಯದು.
ಬೈಕ್ ಸವಾರ `ಹೌದಾ’ ಎಂದು ಕೇಳಿ ತಾನು ಬಂದ ದಾರಿಯಲ್ಲೇ ತಿರುಗಿ ಹೊರಟ.
ಸ್ವಲ್ಪ ಹೊತ್ತಿನಲ್ಲಿ ಇನ್ನೊಬ್ಬ ವ್ಯಕ್ತಿ ಬೈಕ್‍ನಲ್ಲಿ ಬಂದ. ಬೈಕ್ ನಿಲ್ಲಿಸಿ ಅತ್ತಿತ್ತ ನೋಡಿ ಮರದ ಕಟ್ಟೆಯಲ್ಲಿ ಕುಳಿತಿದ್ದ ಹಿರಿಯರ ಬಳಿ ಬಂದು ಕೇಳಿದ: ಸ್ವಾಮೀ, ಈ ಊರಿನ ಜನ ಹೇಗೆ?
ಆಗ ವೃದ್ಧರು ಕೇಳಿದರು: ಈ ಪ್ರಶ್ನೆ ಯಾಕೆ ಕೇಳ್ತಾ ಇದ್ದೀರಿ ಅಂತ ತಿಳ್ಕೊಬಹುದಾ?
ಆ ವ್ಯಕ್ತಿ ಹೇಳಿದ: ನಾನು ಹಿಂದಿದ್ದ ಊರಿನಲ್ಲಿ ಜನ ಬಹಳ ಒಳ್ಳೆಯವರು. ಕಷ್ಟದಲ್ಲಿ ಪರಸ್ಪರ ಸಹಾಯಕ್ಕೆ ನಿಲ್ಲುತ್ತಿದ್ದರು. ನಂಗೆ ಆ ಊರು ಬಿಡಲು ಮನಸಿಲ್ಲ. ಆದರೆ, ಈಗ ಅನಿವಾರ್ಯವಾದ ಕಾರಣದಿಂದ ಈ ಊರಿಗೆ ಮನೆ ಶಿಫ್ಟ್ ಮಾಡಬೇಕಾಗಿದೆ. ಹಾಗೆ ಊರಿನ ಬಗ್ಗೆ ತಿಳಿದುಕೊಳ್ಳೋಣ ಅಂತ ಕೇಳಿದ್ದು.
ಹಿರಿಯರು ಸ್ಪಷ್ಟ ಧ್ವನಿಯಲ್ಲಿಉತ್ತರಿಸಿದರು: ಓ ಹಾಗಾ? ನಿಜ ಹೇಳಬೇಕು ಅಂದರೆ ಇಲ್ಲಿನ ಜನ ತುಂಬಾ ಒಳ್ಳೆಯವರು. ಅಲ್ಲಿನ ಜನರಿಗಿಂತಲೂ ಹೆಚ್ಚು ಪ್ರೀತಿಯಿಂದ ನಿಮ್ಮನ್ನು ನೋಡಿಕೊಳ್ಳುತ್ತಾರೆ. ನೀವು ಧಾರಾಳವಾಗಿ ಬರಬಹುದು.
ಆಗ ಬೈಕ್ ಸವಾರ, ಹಾಗಿದ್ದರೆ ಒಮ್ಮೆ ಊರಿನಲ್ಲಿ ರೌಂಡ್ ಹೊಡೆದುಕೊಂಡು ಬರ್ತೇನೆ ಅಂತ ಹೇಳಿ ಹೊರಟ.
ಇಷ್ಟೆಲ್ಲ ನಡೆಯುವಾಗ ಮರದ ಕೆಳಗೆ ಇನ್ನೊಬ್ಬ ಯುವಕ ಕೂತಿದ್ದ. ಅವನು ಹಿರಿಯರನ್ನು ಕೇಳಿದ: ಅಲ್ಲಾ ಸ್ವಾಮಿ, ನೀವು ಮೊದಲನೇ ವ್ಯಕ್ತಿಗೆ ಊರಿನ ಜನ ತುಂಬಾ ಕೆಟ್ಟವರು ಅಂದಿರಿ. ಈಗ ನೋಡಿದರೆ ಊರಿನ ಜನ ತುಂಬಾ ಒಳ್ಳೆಯವರು ಅಂತೀರಿ. ನಂಗೆ ಏನೂಂತ ಅರ್ಥ ಆಗ್ತಿಲ್ಲ ಅಂದ.
ಆಗ ಹಿರಿಯರು ಹೇಳಿದರು: ಒಂದು ವಿಷಯ ಹೇಳ್ಳಾ ನಾನು.. ಜಗತ್ತಿನಲ್ಲಿ ಇದು ಒಳ್ಳೆದು, ಇದು ಕೆಟ್ಟದು ಅಂತೇನೂ ಇಲ್ಲ. ಯಾವ ದೃಷ್ಟಿಯಲ್ಲಿ ನೋಡುತ್ತೇವೆ ಅನ್ನೋದಷ್ಟೇ ವ್ಯತ್ಯಾಸ. ನಾವಿರುವ ಊರಿನ ಬಗ್ಗೆ ಆದರಾಭಿಮಾನಗಳು ಇಲ್ಲದೆ ಹೋದರೆ ನಾವು ಯಾವ ಊರಿನಲ್ಲೂ ಸುಖವಾಗಿರಲಾರೆವು. ನಮಗೆ ಖುಷಿ ಇದೆ, ಹಿತವಿದೆ ಅಂತ ಯೋಚಿಸುವವನಿಗೆ ಕೊಳೆಗೇರಿಯೂ ಸ್ವರ್ಗವೇ ಆಗಿರುತ್ತದೆ. ಮೊದಲನೇ ವ್ಯಕ್ತಿಗೆ ಜನರ ಬಗ್ಗೆ ಒಂದು ಅಸಹನೆ ಇದೆ. ಅವನಿಗೆ ಊರೆಷ್ಟು ಒಳ್ಳೆಯದಿದ್ದರೂ ತಪ್ಪನ್ನೆ ಹುಡುಕುವ ಧೋರಣೆ ಇರುತ್ತದೆ. ಅವನು ಎಲ್ಲಿ ಹೋದರೂ ನೆಮ್ಮದಿ ಆಗಿರೋದು ಕಷ್ಟ. ಊರಿನ ಬಗ್ಗೆ ಅವನಿಗೆ ನಾನೆಷ್ಟು ಒಳ್ಳೆಯದು ಹೇಳಿದರೂ ಅಷ್ಟೆ. ಎರಡನೆಯವನು ಎಲ್ಲಿದ್ದರೂ ಖುಷಿಪಡುವ ಮನೋಸ್ಥಿತಿಯಲ್ಲಿದ್ದಾನೆ. ಅವನಿಗೆ ಯಾವ ಊರಾದರೂ ಒಳ್ಳೆಯದೇ ಕಾಣುತ್ತದೆ. ನಾವು ಹೇಗೆ ನೋಡ್ತೇವೆ ಅನ್ನೋದೇ ಮುಖ್ಯ ಅಂದರು.
ಪ್ರಶ್ನೆ ಕೇಳಿದ ಯುವಕನಿಗೆ ಹೀಗೂ ಒಂದು ಅಭಿಪ್ರಾಯ ಇರುತ್ತಲ್ವಾ ಅನಿಸಿತು.
Motivational story | ವಯಸ್ಸಾದ ಮೇಲೆ ಮನಸಿಗೆ ನೆಮ್ಮದಿ ಇರಬೇಕಾದರೆ ಹೀಗೆ ಮಾಡಿ ಎಂದರು ಆ ವ್ಯಕ್ತಿ!