ಕೃಷ್ಣ ಭಟ್ ಅಳದಂಗಡಿ- Motivational story
ಒಂದು ಊರಿನಲ್ಲಿ ಇಬ್ಬರು ಗೆಳೆಯರಿದ್ದರು. ಬಾಲ್ಯದಿಂದಲೂ ಪ್ರಾಣ ಸ್ನೇಹಿತರು. ಪದವಿ ಶಿಕ್ಷಣ ಮುಗಿಸಿದ ಅವರು ತಾವಿರುವ ಹಳ್ಳಿಯಿಂದ ಪಟ್ಟಣಕ್ಕೆ ಹೋಗಿ ಉದ್ಯೋಗ ಸಂಪಾದಿಸಲು ನಿರ್ಧರಿಸಿದರು. ಅವರು ಇದ್ದ ಊರಿನಿಂದ ಪಟ್ಟಣಕ್ಕೆ ಹೋಗಬೇಕು ಎಂದರೆ ಒಂದು ಕಾಡು ದಾರಿಯನ್ನು ದಾಟಿ ಹೋಗಬೇಕು. ಹಾಗಾಗಿ ತಮಗೆ ಈ ದಾರಿ ಸವೆಸುವಾಗ ಏನೆಲ್ಲ ಆಹಾರ ಬೇಕೋ ಅದನ್ನೆಲ್ಲ ಹಿಡಿದುಕೊಂಡು ಆ ಕಡೆಗೆ ಹೊರಟಿದ್ದರು.
ಅರ್ಧ ದಾರಿ ಸವೆಸಿದ ಬಳಿಕ ಅವರಿಬ್ಬರೂ ಸುಸ್ತಾಯಿತು ಎಂಬ ಕಾರಣಕ್ಕೆ ವಿಶ್ರಾಂತಿ ಪಡೆಯಲು ನಿರ್ಧರಿಸಿದರು. ಅಷ್ಟು ಹೊತ್ತಿಗೆ ಒಬ್ಬ ಸ್ವಲ್ಪ ಮಟ್ಟಿಗೆ ಸನ್ಯಾಸಿಯಂತೆ ಕಾಣುವ ವ್ಯಕ್ತಿ ಕಾಡಿನ ಕಡೆಯಿಂದ ಓಡಿ ಬಂದ. ಭಾರಿ ಭಯದಲ್ಲಿದ್ದಂತೆ ಕಂಡ ಅವನಿಗೆ ಗೆಳೆಯರು ನೀರು ನೀಡಿ ಉಪಚರಿಸಿದರು. ಅವನು ಏದುಸಿರು ಬಿಡುತ್ತಲೇ ಹೇಳಿದ: ಈ ದಾರಿಯಲ್ಲಿ ಸ್ವಲ್ಪ ಮುಂದೆ ಒಬ್ಬ ಮಾಟಗಾತಿ ಇದ್ದಾಳೆ. ನನ್ನನ್ನು ಕೊಲ್ಲಲು ಓಡಿಸಿಕೊಂಡು ಬಂದಳು. ನೀವು ದಯವಿಟ್ಟು ಮುಂದೆ ಹೋಗಬೇಡಿ!
ಸ್ನೇಹಿತರಿಗೆ ಧರ್ಮ ಸಂಕಟ. ಈ ಸನ್ಯಾಸಿ ಹೇಳಿದ ಮಾತು ಕೇಳಬೇಕಾ? ಮನೆಗೆ ವಾಪಸ್ ಹೋಗಬೇಕಾ ಅಂತ. ಬದುಕಿನ ದೊಡ್ಡ ನಿರ್ಧಾರ ಮಾಡಿ ಹೊರಟ ಅವರು, ಉದ್ಯೋಗದ ಬೇಟೆ ನಿಲ್ಲಿಸುವುದು ಬೇಡ, ಏನಾದರಾಗಲೀ ಮುಂದೆ ಹೋಗುವುದೇ ಎಂಬ ತೀರ್ಮಾನಕ್ಕೆ ಬಂದರು. ಎಲ್ಲ ಧೈರ್ಯವನ್ನು ಒಟ್ಟುಗೂಡಿಸಿಕೊಂಡು ಕಾಡಿನ ಒಳಗೆ ನಡೆದರು. ಅವರಲ್ಲಿ ಒಬ್ಬ ತನ್ನ ಬ್ಯಾಗಿನಲ್ಲಿದ್ದ ಹರಿತವಾದ ಚೂರಿಯನ್ನು ಒಮ್ಮೆ ಮುಟ್ಟಿ ನೋಡಿಕೊಂಡ.
ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆಯೇ ಅವರಿಬ್ಬರಿಗೂ ದಾರಿ ಬದಿಯಲ್ಲಿ ಬಿದ್ದಿದ್ದ ಒಂದು ದೊಡ್ಡ ಚೀಲ ಕಾಣಿಸಿತು. ಹತ್ತಿರ ಹೋಗಿ ತೆರೆದು ನೋಡಿದರೆ ಚಿನ್ನದ ನಾಣ್ಯಗಳು! ಗೆಳೆಯರು ನಕ್ಕರು: ಆ ಸನ್ಯಾಸಿಯ ಮಾತೇನಾದರೂ ಕೇಳಿದರೆ ಎಂಥಾ ಅವಕಾಶ ಮಿಸ್ ಆಗುತ್ತಿತ್ತಲ್ಲ. ಇದು ನಮ್ಮ ಧೈರ್ಯಕ್ಕೆ ಒದಗಿದ ಪರೀಕ್ಷೆ. ಬದುಕಿನಲ್ಲಿ ಹಿಡಿದ ಕೆಲಸವನ್ನು ಬಿಡಬಾರದು ಎನ್ನುವುದಕ್ಕೆ ಇದುವೇ ನಿದರ್ಶನ ಎಂದು ತತ್ವಜ್ಞಾನ ಮಾತನಾಡಿಕೊಂಡರು. ತಮ್ಮನ್ನು ಮುಂದೆ ಹೋಗಬೇಡಿ ಎಂದೆಲ್ಲ ಹೆದರಿಸಿದ ಪುಕ್ಕಲ ಸನ್ಯಾಸಿಯ ಬಗ್ಗೆ ತಮಾಷೆ ಮಾಡಿಕೊಂಡರು.
ಇಬ್ಬರೂ ಗೆಳೆಯರು ಬ್ಯಾಗ್‌ನಲ್ಲಿದ್ದ ಹಣವನ್ನು ಸಮಾನವಾಗಿ ಹಂಚಿಕೊಳ್ಳಲು ನಿರ್ಧರಿಸಿದರು. ಉದ್ಯೋಗಕ್ಕೆ ಹೋಗಬೇಕಾಗಿಯೂ ಇಲ್ಲ, ಮನೆಗೆ ಮರಳಿದರೂ ಓಕೆನೆ ಅಂತೆಲ್ಲ ಮಾತನಾಡಿಕೊಂಡರು. ಈ ನಡುವೆ, ಇಬ್ಬರಿಗೂ ಹಸಿವಾಗತೊಡಗಿತು. ಒಬ್ಬ ಗೆಳೆಯ ತಾನು ಆಹಾರ ತಯಾರಿಯ ಸಿದ್ಧತೆ ನಡೆಸುವುದಾಗಿ ಹೇಳಿದ. ಇನ್ನೊಬ್ಬ ಪಕ್ಕದಲ್ಲೇ ಇದ್ದ ಒಂದು ನದಿಯಿಂದ ನೀರು ತರುವುದಾಗಿ ಹೊರಟ.
ಗೆಳೆಯ ನೀರು ತರಲು ಹೋಗುತ್ತಿದ್ದಂತೆಯೇ ಇಲ್ಲಿ ಆಹಾರ ತಯಾರಿಗೆ ಸಿದ್ಧತೆ ಮಾಡಿಕೊಂಡ ಯುವಕನಿಗೆ ಒಂದು ಆಲೋಚನೆ ಬಂತು. ʻʻಈ ಚಿನ್ನದ ನಾಣ್ಯಗಳನ್ನು ಹಂಚಿಕೊಳ್ಳದೆ ಇದ್ದರೆ ಏನಾಗುತ್ತದೆ. ನಾನೇ ಎಲ್ಲವನ್ನೂ ಇಟ್ಟುಕೊಂಡರೆ ಏನಾಗುತ್ತದೆ. ದಾರಿ ಮಧ್ಯೆ ಹೋಗುವಾಗ ಯಾರೋ ಕಳ್ಳರು ತಮ್ಮನ್ನು ಬೆನ್ನಟ್ಟಿದರು. ಗೆಳೆಯನನ್ನು ಕೊಂದು ಹಾಕಿದರು, ನಾನು ತಪ್ಪಿಸಿಕೊಂಡು ಬಂದೆ ಎಂಬ ಕಥೆ ಕಟ್ಟಿದರೆ ಹೇಗೆʼ ಎಂದು ಯೋಚಿಸಿದ. ಹಾಗಿದ್ದರೆ ಗೆಳೆಯನನ್ನು ಕೊಲ್ಲುವುದು ಹೇಗೆ ಎಂದು ಯೋಚಿಸಿದ. ಆಗ ಅವನಿಗೆ ಬ್ಯಾಗ್‌ನಲ್ಲಿ ಇಟ್ಟಿದ್ದ ಹರಿತವಾದ ಚೂರಿ ನೆನಪಿಗೆ ಬಂತು.
ನೀರು ತರಲು ಹೋಗಿದ್ದ ಗೆಳೆಯ ಅಷ್ಟು ಹೊತ್ತಿಗೆ ವಾಪಾಸು ಬಂದ. ಅವನು ತಂದ ನೀರನ್ನು ಬಾಗಿ ಇನ್ನೊಂದು ಪಾತ್ರೆಗೆ ಸುರಿದು ಅಡುಗೆಗೆ ಸಹಕಾರ ಮಾಡಿದ. ಆಹಾರ ಬೇಯಲು ಆರಂಭವಾಯಿತು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಗೆಳೆಯ ತನ್ನ ಸ್ನೇಹಿತನಿಗೆ ಚೂರಿ ಹಾಕಿಯೇ ಬಿಟ್ಟ. ಗೆಳೆಯ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟ.
ಗೆಳೆಯನ ಸಾವಿನಿಂದ ಏನೋ ನಿರಾಳವಾದ ಹಾಗೆ ಅನಿಸಿತು. ಚಿನ್ನದ ಬ್ಯಾಗ್ ಇನ್ನು ನನ್ನದೇ ಎನ್ನುತ್ತಾ ನೆಮ್ಮದಿಯಾದ. ಗೆಳೆಯನನ್ನು ಕೊಲೆ ಮಾಡಿದ್ದರಿಂದಲೋ ಏನೋ ಅವನಿಗೆ ಆಯಾಸವೂ ಆಗಿತ್ತು. ಅವನು ಸ್ವಲ್ಪ ನೀರು ತೆಗೆದು ಕುಡಿದ. ಕೆಲವೇ ಕ್ಷಣಗಳಲ್ಲಿ ಅವನು ರಕ್ತ ಕಾರಿಕೊಂಡು ಸತ್ತು ಹೋದ!
ನಿಜವೆಂದರೆ, ನೀರು ತರಲು ಹೋಗಿದ್ದ ಗೆಳೆಯನೂ ಮೊದಲನೆಯವನಂತೆಯೇ ಯೋಚಿಸಿದ್ದ. ಜತೆಗಿರುವವನ್ನು ಕೊಂದರೆ ಹಣವೆಲ್ಲ ತನ್ನದಾಗುತ್ತದೆ ಅಂತ. ಹಾಗಾಗಿ ಅವನು ನದಿಯಿಂದ ನೀರು ತರುವಾಗ ದಾರಿಯಲ್ಲಿ ಒಂದು ವಿಷದ ಮೂಲಿಕೆಯನ್ನು ನೀರಿಗೆ ಮಿಕ್ಸ್ ಮಾಡಿದ್ದ. ತಾನು ಆ ನೀರನ್ನು ಕುಡಿಯಬಾರದು, ಗೆಳೆಯನಿಗೆ ಮಾತ್ರ ಕುಡಿಸಬೇಕು ಎಂದು ನಿರ್ಧಾರ ಮಾಡಿದ್ದ. ಆದರೆ, ʻಮಾಟಗಾತಿʼ ನಿರ್ಧಾರ ಬೇರೆಯೇ ಆಗಿತ್ತು.
ಇಬ್ಬರೂ ಗೆಳೆಯರು ಸತ್ತು ಬಿದ್ದಿದ್ದನ್ನು ನೋಡಿದ ಚಿನ್ನದ ಚೀಲ ಗಹಗಹಿಸಿ ನಕ್ಕಂತೆ ಭಾಸವಾಯಿತು. ಅದರಿಂದ ಒಬ್ಬ ಮಾಟಗಾತಿ ಎದ್ದು ಕಾಡು ದಾರಿಯಲ್ಲಿ ವಯ್ಯಾರದಿಂದ ನಡೆದಳು!
ಇದನ್ನೂ ಓದಿ | Motivational story | ಬೆಲೆ ಕೊಡಬೇಕಾದ್ದು ಆ ಕ್ಷಣ ಕೆಲಸಕ್ಕಷ್ಟೇ ಅಲ್ಲ, ಅದರ ಹಿಂದಿನ ಅನುಭವಕ್ಕೂ!