Site icon Vistara News

Motivational story: ಕಾಡು ದಾರಿಯಲ್ಲಿ ಕಾಲಿಗೆ ಮುಳ್ಳು ಚುಚ್ಚಿದಾಗ ಕಂಡ ದೇವರು

Motivational story

ಕೃಷ್ಣ ಭಟ್‌ ಅಳದಂಗಡಿ- Motivational story
ಹೇಮಂತ್ ಮತ್ತು ವಿಶ್ವನಾಥ್ ಇಬ್ಬರು ಬಹುಕಾಲದ ಗೆಳೆಯರು. ವಿಶ್ವನಾಥ್‍ಗೆ ದೇವರ ಮೇಲೆ ಅಪಾರವಾದ ನಂಬಿಕೆ. ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವರ ಮುಂದೆ ನಿಂತು ಪ್ರಾರ್ಥನೆ ಮಾಡದಿದ್ದರೆ ಅವನಿಗೆ ಸಮಾಧಾನವೇ ಇಲ್ಲ.

ಆದರೆ, ಹೇಮಂತ್‍ಗೆ ದೇವರ ಬಗ್ಗೆ ಅಷ್ಟೊಂದು ನಂಬಿಕೆ ಇಲ್ಲ.ಹಾಗಂತ ಈ ದೇವರ ವಿಚಾರ ಅವರಿಬ್ಬರ ಸ್ನೇಹಕ್ಕೆ ಯಾವತ್ತೂ ಅಡ್ಡಿಯಾಗಲೇ ಇಲ್ಲ. ಕೆಲವೊಮ್ಮೆ ಹೇಮಂತ್ ತಮಾಷೆ ಮಾಡುತ್ತಿದ್ದನಾದರೂ ವಿಶ್ವನಾಥ್ ನಕ್ಕು ಸುಮ್ಮನಾಗುತ್ತಿದ್ದ.

ಸ್ವಲ್ಪ ಕಾಲ ಕಳೆದ ಮೇಲೆ ಅವರಿಬ್ಬರೂ ಉದ್ಯೋಗ ಅರಸಿಕೊಂಡು ನಗರಕ್ಕೆ ಹೊರಟರು. ಹೋಗುವ ದಾರಿಯಲ್ಲಿ ಒಂದು ಕಡೆ ಹೇಮಂತ್‍ಗೆ ಒಂದು ಮೂಟೆ ಕಂಡಿತು. ಅದರ ಬಳಿ ಯಾರೂ ಇರಲಿಲ್ಲ. ಸಾಲದ್ದಕ್ಕೆ ಅದು ನಿರ್ಜನ ರಸ್ತೆ. ಹೇಮಂತ್ ಮೂಟೆಯನ್ನು ಬಿಚ್ಚಿ ನೋಡಿದ. ಅವನಿಗೆ ಖುಷಿ ಆಯಿತು. ಅದರೊಳಗೆ ಕಲ್ಲಿದ್ದಲು ಇತ್ತು. ಇದನ್ನು ನಗರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದರೆ ಒಳ್ಳೆ ದುಡ್ಡು ಸಿಗಬಹುದು. ಕೆಲಸ ಸಿಗುವವರೆಗಿನ ಖರ್ಚಿಗೂ ಆಗುತ್ತದೆ ಅಂದುಕೊಂಡ. ವಿಶ್ವನಾಥನಿಗೂ ಅದನ್ನೇ ಹೇಳಿದ.

ಹಾಗೇ ಸ್ವಲ್ಪ ಮುಂದೆ ಹೋದಾಗ ವಿಶ್ವನಾಥನ ಕಾಲಿಗೆ ಒಂದು ಮುಳ್ಳು ಚುಚ್ಚಿತು. ದೊಡ್ಡ ಮುಳ್ಳಾಗಿದ್ದರಿಂದ ತೀವ್ರ ಯಾತನೆಯಿಂದ ನರಳಿದ. ಅದು ಎಷ್ಟು ಆಳವಾಗಿ ಚುಚ್ಚಿತ್ತೆಂದರೆ ಎಳೆದರೂ ಹೊರಬರಲಿಲ್ಲ. ಎಳೆದಾಗ ಜೋರಾಗಿ ನೋವಾಗುತ್ತಿತ್ತು.

ಆಗ ಒಬ್ಬ ಸಂತರು ಆ ದಾರಿಯಾಗಿ ಬಂದರು. ಅವರು ಕೂಡಲೇ ಒಂದು ಎಲೆಯನ್ನು ಜಜ್ಜಿ ರಸ ತೆಗೆದು ಮುಳ್ಳು ಚುಚ್ಚಿದಲ್ಲಿಗೆ ಹಾಕಿದರು. ಆಗ ಗಾಯ ತೆರೆದುಕೊಂಡು ಮುಳ್ಳು ತೆಗೆಯಲು ಸಹಾಯವಾಯಿತು. ಬಳಿಕ ಸಂತರು ಹೇಳಿದರು: ಇದೊಂಥರಾ ವಿಷದ ಮುಳ್ಳು, ಬೇಗನೆ ತೆಗೆದದ್ದು ಒಳ್ಳೆದಾಯಿತು. ಇಲ್ಲದಿದ್ದರೆ ಕಾಲು ಕೊಳೆಯುವ ಅಪಾಯವಿತ್ತು.

ಆ ಬಳಿಕ ಹುಡುಗರ ಬಗ್ಗೆ ವಿಚಾರಿಸಿದರು.

ಹೇಮಂತ್ ತಮಾಷೆಯಾಗಿ ನಕ್ಕು ಹೇಳಿದ: ನೋಡಿ ಸ್ವಾಮಿಗಳೇ, ಇವನೋ ದೇವರ ಪರಮ ಭಕ್ತ. ನಂಗೆ ದೇವರ ಮೇಲೆ ನಂಬಿಕೆ ಇಲ್ಲ. ಆದರೆ, ನೋಡಿ ನಂಗೆ ಒಂದು ಮೂಟೆ ಕಲ್ಲಿದ್ದಲು ಸಿಕ್ಕಿದೆ. ಅವನಿಗೆ ಸಿಕ್ಕಿದ್ದು ನರಳಾಟ ಮಾತ್ರ. ಅವನಿಗೆ ಈಗಲಾದರೂ ಅರ್ಥವಾಗಿರಬಹುದು ಅಲ್ವಾ?

ಆಗ ಸ್ವಾಮಿಗಳು ಜೋರಾಗಿ ನಗುತ್ತಾ ಹೇಳಿದರು: ಹುಡುಗಾ ವಿಷಯ ನೀನು ಯೋಚಿಸಿದಷ್ಟು ಸರಳವಾಗಿಲ್ಲ. ನಿಜವೆಂದರೆ, ಇವತ್ತುನಿನ್ನ ಪಾಲಿಗೆ ವಜ್ರವೇ ಸಿಗಬೇಕಾಗಿತ್ತು. ಆದರೆ, ನಿನಗೆ ಸಿಕ್ಕಿದ್ದು ಅದರ ಚಿಲ್ಲರೆ ರೂಪವಾದ ಕಲ್ಲಿದ್ದಲು. ಇದಕ್ಕೆ ಕಾರಣ ನಿನಗೆ ದೇವರ ಮೇಲೆ ನಂಬಿಕೆ ಇಲ್ಲದೆ ಇರುವುದು. ನಿನ್ನ ಗೆಳೆಯನಿಗೆ ನಿಜಕ್ಕೂ ಇವತ್ತು ದೊಡ್ಡ ಗಂಡಾಂತರವೇ ಆಗುವ ಅಪಾಯವಿತ್ತು. ಯಾಕೆಂದರೆ, ಅವನಿಗೆ ಚುಚ್ಚಿದ ಮುಳ್ಳು ಸಾಮಾನ್ಯದ್ದಲ್ಲ. ಆದರೆ, ನೋಡು ತಕ್ಷಣವೇ ನಾನು ಸಿಕ್ಕಿದೆ. ಅವನ ಮುಳ್ಳು ಕಿತ್ತು ಹಾಕಿದ್ದರಿಂದ ಅಪಾಯ ತಪ್ಪಿತು. ಬಹುಶಃ ದೇವರ ಮೇಲಿನ ಭಕ್ತಿ ಅವನನ್ನು ರಕ್ಷಣೆ ಮಾಡಿರಬಹುದು ಎಂದು ನನಗೆ ಅನಿಸುತ್ತದೆ.

ಆಗ ಹೇಮಂತ್‍ಗೆ ಹೀಗೂ ಇರಬಹುದಲ್ವಾ ಅನಿಸಿತು. ಹೇಮಂತ್ ಮತ್ತು ವಿಶ್ವನಾಥ್ ಇಬ್ಬರೂ ಸೇರಿ ಆ ಸಂತರ ಕಾಲಿಗೆ ಎರಗಿದರು. ತಲೆ ಎತ್ತಿ ನೋಡಿದರೆ ಆ ಸಂತರು ಪಕ್ಕದಲ್ಲೆಲ್ಲೂ ಕಾಣಿಸಲೇ ಇಲ್ಲ.

ಇದನ್ನೂ ಓದಿ| Motivational story: ದಾರಿ ಮಧ್ಯೆ ಚಿನ್ನದ ಚೀಲ ಸಿಕ್ಕರೆ ನೀವೇನು ಮಾಡ್ತೀರಾ?
ಇದನ್ನೂ ಓದಿ| Motivational story: ಮೂರ್ಖನಾಗಿದ್ದು ಯಾರು? ಅವನಾ? ಇವನಾ?

Exit mobile version