ಕೃಷ್ಣ ಭಟ್ ಅಳದಂಗಡಿ- Motivational story
ಒಂದು ಊರಿನಲ್ಲಿ ಒಬ್ಬ ಮುದುಕ ಇದ್ರು. ತುಂಬಾ ಜಿಪುಣ. ಯಾವುದೇ ವಸ್ತುವನ್ನು ಬಳಸುವುದಕ್ಕೆ ಮೊದಲು ಸಾವಿರ ಬಾರಿ ಯೋಚಿಸುತ್ತಿದ್ದರು. ಅವರು ಹಣ ಸಂಗ್ರಹಿಸಿ ಸಂಗ್ರಹಿಸಿ ಒಂದು ಬೆಳ್ಳಿಯ ತಟ್ಟೆಯನ್ನು ಖರೀದಿ ಮಾಡಿದ್ದರು. ಅದರ ಬಗ್ಗೆ ಅವರಿಗೆ ಭಾರಿ ಹೆಮ್ಮೆ. ಹಾಗಂತ ಅದನ್ನು ಬಳಸಲು ಅವರಿಗೆ ಮನಸು ಇರಲಿಲ್ಲ. ಯಾರಾದರೂ ಅತ್ಯಂತ ಮಹತ್ವದ ವ್ಯಕ್ತಿಗಳು ಮನೆಗೆ ಬಂದರೆ ಅವರಿಗೆ ಈ ತಟ್ಟೆಯಲ್ಲಿ ಊಟ ಬಡಿಸಬೇಕು ಎಂದು ಯೋಚಿಸುತ್ತಿದ್ದರು. ಅದನ್ನು ಅವರು ಒಂದು ಬಾಕ್ಸ್‌ನ ಒಳಗೆ ಸುರಕ್ಷಿತವಾಗಿ ಮುಚ್ಚಿಟ್ಟಿದ್ದರು.. ಯಾರಿಗೂ ಸುಲಭದಲ್ಲಿ ಕಾಣದ ಹಾಗೆ!
ಒಂದು ಸಾರಿ ಒಬ್ಬ ಸನ್ಯಾಸಿ ಅವರ ಮನೆಗೆ ಬಂದರು. ಈ ಬೆಳ್ಳಿಯ ಬಟ್ಟಲಲ್ಲಿ ಈ ಸನ್ಯಾಸಿಗೆ ಊಟ ಬಡಿಸಿದರೆ ಹೇಗೆ ಎನ್ನುವ ಸಣ್ಣ ಯೋಚನೆ ಅವರಿಗೆ ಬಂತು. ಮರು ಕ್ಷಣವೇ, ʻʻನನ್ನ ಈ ಬೆಳ್ಳಿಯ ಬಟ್ಟಲು ತುಂಬಾ ಮೌಲ್ಯಯುತವಾದದ್ದು. ಊರಿಂದ ಊರಿಗೆ ಅಲೆಯುವ ಈ ಸನ್ಯಾಸಿಗೆ ಅದರಲ್ಲಿ ಊಟ ಹಾಗೆ ಅದರ ಮರ್ಯಾದೆ ಕಳೆಯೋದು ಯಾಕೆʼ ಅಂತ ಅವರಿಗೆ ಅನಿಸಿತು. ಇದಕ್ಕಿಂತಲೂ ಗಂಭೀರವಾದ, ದೊಡ್ಡ ಮನುಷ್ಯ ಬರಲಿ ಎಂದು ತೀರ್ಮಾನಿಸಿದರು. ಬೆಳ್ಳಿ ತಟ್ಟೆಯನ್ನು ಹೊರಗೆ ತೆಗೆಯಲೇ ಇಲ್ಲ.
ಕೆಲವು ಸಮಯದ ನಂತರ ಆ ಮನೆಗೆ ಆ ರಾಜ್ಯದ ಮಂತ್ರಿ ಬಂದ. ಅವನಿಗೆ ಏನಾದರೂ ಆಹಾರ ಕೊಡಬೇಕಲ್ಲ ಎಂದು ಯೋಚಿಸಿದ ಮುದುಕನಿಗೆ ಬೆಳ್ಳಿ ತಟ್ಟೆ ನೆನಪಾಯಿತು. ಆಗಲೂ ಮುದುಕನಿಗೆ ಅನಿಸಿದ್ದು: ಈ ಮನುಷ್ಯ ರಾಜನ ಆಸ್ಥಾನದಲ್ಲಿ ಒಬ್ಬ ಸಾಮಾನ್ಯ ಮಂತ್ರಿ. ಒಂದೊಮ್ಮೆ ರಾಜನೇ ಏನಾದರೂ ಬಂದರೆ ಅವನಿಗೆ ಅದರಲ್ಲಿ ಆಹಾರ ಕೊಡೋಣ. ಮಂತ್ರಿಗಳಿಗೆಲ್ಲ ಬೆಳ್ಳಿ ತಟ್ಟೆ ಬೇಕಾಗಿಲ್ಲ!
ಅಂಥ ದಿನವೂ ಬಂದು ಬಿಟ್ಟಿತು. ಆ ದೇಶದ ರಾಜ ಒಂದು ಯುದ್ಧದಲ್ಲಿ ಪಾಲ್ಗೊಂಡು ಮರಳಿದ್ದ. ಸಂಸ್ಥಾನದ ಒಂದು ಭಾಗವನ್ನು ಅವನು ಕಳೆದುಕೊಂಡಿದ್ದ. ಆಯಾಸಗೊಂಡವನಂತೆ ಇದ್ದ ಅರಸನಿಗೆ ಈ ವ್ಯಕ್ತಿ ಉಪಚಾರ ಮಾಡಿದ. ಹಾಗಿದ್ದರೆ ಈಗ ಈ ರಾಜನಿಗೆ ಬೆಳ್ಳಿ ತಟ್ಟೆಯಲ್ಲಿ ಆಹಾರ ಕೊಡೋಣ ಎಂದು ತೀರ್ಮಾನಿಸಿದ. ಆದರೆ, ಆಗಲೂ ಮನಸು ಹಿಂದಕ್ಕೆ ಎಳೆಯಿತು. ʻಈ ರಾಜ ಯುದ್ಧಗಳನ್ನು ಸೋತು ಬಂದಿದ್ದಾನೆ. ನನ್ನ ಬೆಳ್ಳಿ ತಟ್ಟೆಯಲ್ಲಿ ಸೋತವರಿಗೆ ಊಟ ಬಡಿಸುವುದೇʼ ಎಂದು ಯೋಚಿಸಿ ಆಗಲೂ ಅದನ್ನು ಹೊರಗೆ ತೆಗೆಯಲಿಲ್ಲ!
ಹೀಗೆ ಕಾಲ ಕಳೆಯಿತು. ಬೆಳ್ಳಿ ತಟ್ಟೆ ಹೊರಗೆ ಬರಲೇ ಇಲ್ಲ. ಕೊನೆಗೆ ಒಂದು ದಿನ ಆ ಮುದುಕ ಸತ್ತೇ ಹೋದ!
ಅಪ್ಪನ ಮರಣಾನಂತರ ಮಗ ಮನೆಯಲ್ಲಿ ಏನೇನು ವಸ್ತುಗಳಿವೆ ಎಂಬ ಲೆಕ್ಕಾಚಾರಕ್ಕೆ ಇಳಿದ. ಅವನಿಗೆ ಒಂದು ಬಾಕ್ಸ್‌ನ ತಳದಲ್ಲಿ ಒಂದು ತಟ್ಟೆ ಕಾಣಿಸಿತು. ಅವನು ಹೆಂಡತಿಯನ್ನು ಕರೆದು ಕೇಳಿದ: ನೋಡೇ ಇಲ್ಲೊಂದು ಕಪ್ಪಾಗಿರೋ ತಟ್ಟೆ ಇದೆ. ಇದನ್ನು ಏನು ಮಾಡೋಣ?
ಅವಳು ಬಂದು ನೋಡಿದಳು: ಏನ್ರೀ ಇದು, ಎಷ್ಟೊಂದು ಕೊಳಕಾಗಿದೆ. ಏನೂಂತ ಈ ಬಾಕ್ಸ್‌ನೊಳಗೆ ಹಾಕಿಟ್ಟಿದ್ದಾರೋ ನಿಮ್ಮಪ್ಪ? ನಾಯಿಗೆ ಅನ್ನ ಹಾಕೋ ತಟ್ಟೆ ಹಳತಾಗಿದೆ. ಅದನ್ನು ಎಸೆದು ಇದನ್ನು ಇಡಿ- ಎಂದಳು.
ಆವತ್ತಿನಿಂದ ಬೆಳ್ಳಿತಟ್ಟೆಯಲ್ಲಿ ಉಣ್ಣುವ ಭಾಗ್ಯ ನಾಯಿಗೆ ಒಲಿಯಿತು. ಅತ್ಯಂತ ವಿಶೇಷ ವ್ಯಕ್ತಿಗೆ, ವಿಶೇಷ ವ್ಯಕ್ತಿಗೆ ಅಂತ ತೆಗೆದಿಟ್ಟ ಆ ಬೆಳ್ಳಿ ತಟ್ಟೆ ವರ್ಷಾಂತರಗಳ ಕಾಲ ಉಪಯೋಗವೇ ಆಗದೆ ತನ್ನ ಮೌಲ್ಯವನ್ನೇ ಕಳೆದುಕೊಂಡಿತ್ತು. ಗುರುತಿಸಲಾಗದ ಹಾಗೆ ಕಪ್ಪಾಗಿತ್ತು. ಯಾವುದೇ ಒಂದು ವಸ್ತು ಅದೆಷ್ಟೋ ಮೌಲ್ಯಯುತವಾಗಿದ್ದರೂ ಬಳಸಿದಾಗಲಷ್ಟೇ ಅದಕ್ಕೆ ಮೌಲ್ಯ ಅಂತ ಮುದುಕನಿಗೆ ಹೊಳೆಯಲಿಲ್ಲ. ನಮಗೂ ಕೆಲವೊಮ್ಮೆ ಹೀಗೇ ಆಗುತ್ತದೆ ಅಲ್ವೇ?
ಇದನ್ನೂ ಓದಿ | Motivational story | ಎಚ್ಚರಿಕೆ ಬೇಕಿರುವುದು ಕೇವಲ ಮರ ಹತ್ತುವಾಗ ಅಲ್ಲ, ಇಳಿಯುವಾಗಲೂ ಬೇಕು!