Site icon Vistara News

Motivational story: ನೆಮ್ಮದಿಯೇ ಇಲ್ಲದ ಶ್ರೀಮಂತ ಮಹಿಳೆಗೆ ಏನೂ ಇಲ್ಲದ ವಿಶಾಲಾಕ್ಷಮ್ಮ ಹೇಳಿದ ಕಥೆ

Old rich woman

ಕೃಷ್ಣ ಭಟ್‌ ಅಳದಂಗಡಿ- Motivational Story
ಒಮ್ಮೆ ಒಬ್ಬ ಶ್ರೀಮಂತ ಮಹಿಳೆ ಮನೋವೈದ್ಯರ ಬಳಿ ಬಂದಿದ್ದರು. ʻʻನಿಜವಾಗಿ ಹೇಳಬೇಕು ಎಂದರೆ ನನಗೆ ಯಾವುದರಲ್ಲೂ ಕಡಿಮೆ ಇಲ್ಲ.  ಆದರೆ, ಒಂದು ಕ್ಷಣವೂ ನೆಮ್ಮದಿ ಇಲ್ಲ. ನನಗೆ ಬದುಕೇ ಬೇಡ ಅನಿಸಿದೆ. ಹಣವಿದೆ ನನ್ನ ಬಳಿ. ಆದರೆ, ಅದರಿಂದ ನೆಮ್ಮದಿಯನ್ನು ಕೊಂಡುಕೊಳ್ಳುವುದಕ್ಕೆ ಸಾಧ್ಯವೇ? ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲʼʼ ಎಂದು ವೈದ್ಯರ ಮುಂದೆ ತಮ್ಮ ನೋವನ್ನು ತೋಡಿಕೊಂಡರು.

ಮನೋವೈದ್ಯರು ಹೆಚ್ಚು ಮಾತನಾಡಲಿಲ್ಲ. ಒಬ್ಬ ವಯಸ್ಸಾದ ಮಹಿಳೆಯನ್ನು ಕರೆದು ಶ್ರೀಮಂತ ಮಹಿಳೆಗೆ ಪರಿಚಯಿಸಿದರು. ʻಇವರು ವಿಶಾಲಾಕ್ಷ್ಮಮ್ಮ ಅಂತ. ತಮ್ಮ ಆಫೀಸಿನ ನೆಲ ಎಲ್ಲ ಒರೆಸ್ತಾ ಇದ್ದರು ನೋಡಿ, ಅವರೇ ಇವರು. ಅವರು ತಮ್ಮ ಬದುಕಿನಲ್ಲಿ ನೆಮ್ಮದಿ ಪಡೆದುಕೊಂಡಿದ್ದು ಹೇಗೆ ಅಂತ ಹೇಳ್ತಾರೆ. ನೀವು ಸುಮ್ಮನೆ ಕೇಳಿಸಿಕೊಳ್ಳಿ ಸಾಕು. ಉಳಿದದ್ದು ಆಮೇಲೆ ಮಾತನಾಡೋಣʼʼ ಎಂದರು.

ವಿಶಾಲಾಕ್ಷ್ಮಮ್ಮ ಶ್ರೀಮಂತ ಮಹಿಳೆಯನ್ನು ಒಟ್ಟಿಗೆ ಕರೆದುಕೊಂಡು ಹೋದರು. ಅಲ್ಲೊಂದು ಕಡೆ ಬೆಂಚು ಇತ್ತು. ಇಬ್ಬರೂ ಅದರಲ್ಲಿ ಕುಳಿತುಕೊಂಡರು.

ʻʻನನ್ನದೇನೂ ತುಂಬ ದೊಡ್ಡ ಕಥೆ ಅಲ್ಲ. ನಾಲ್ಕು ತಿಂಗಳ ಹಿಂದೆ ನನ್ನ ಗಂಡ ಕೊರೊನಾದಿಂದ ತೀರಿಕೊಂಡರು. ಮೂರು ತಿಂಗಳ ಹಿಂದೆ ನನ್ನ ಒಬ್ಬನೇ ಮಗ ಅಪಘಾತದಲ್ಲಿ ತೀರಿಕೊಂಡ. ನನಗೆ ನನ್ನದೂಂತ ಯಾವುದೇ ಆದಾಯದ ಮೂಲ ಇರಲಿಲ್ಲ. ಗಂಡ, ಮಗನೇ ಆಸರೆಯಾಗಿದ್ದರು. ಅವರಿಬ್ಬರೂ ಹೋದ ಮೇಲೆ ನನಗೆ ಸಹಾಯ ಮಾಡಲು ಯಾರೂ ಇಲ್ಲದ ಅನಾಥ ಸ್ಥಿತಿ ಬಂತು. ನನಗೆ ನಿದ್ದೆ ಬರುತ್ತಿರಲಿಲ್ಲ. ತಿನ್ನಲು ಏನೂ ಬೇಡ ಅನಿಸುತ್ತಿತ್ತು. ನನಗೆ ನಗುವೇ ಮರೆತುಹೋಯಿತು. ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಯೋಚನೆನೂ ಮಾಡಿದ್ದೆʼʼ- ಕಥೆ ಹೇಳುತ್ತಾ ಹೋದರು ವಿಶಾಲಾಕ್ಷಮ್ಮ.

ಈ ಮಧ್ಯೆ ನಾನು ಒಂದು ಸಣ್ಣ ಮನೆ ಕೆಲಸಕ್ಕೆ ಸೇರಿಕೊಂಡಿದ್ದೆ. ಅಲ್ಲಿಯೂ ಸಾಕಷ್ಟು ಕಿರಿಕಿರಿ ಇತ್ತು. ಆವತ್ತೊಂದು ದಿನ ನಾನು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದೆ. ಆಗ ಇದ್ದಕ್ಕಿದ್ದಂತೆಯೇ ಒಂದು ಬೆಕ್ಕಿನ ಮರಿ ನನ್ನನ್ನು ಹಿಂಬಾಲಿಸಲು ಆರಂಭಿಸಿತು. ಮನೆಯವರೆಗೂ ಬಂತು. ಆವತ್ತು ತುಂಬ ಚಳಿ ಇತ್ತು. ಹೊರಗಡೆ ಚಳಿಗೆ ಪಾಪ ಬೆಕ್ಕಿನ ಮರಿ ಕಷ್ಟಾದೀತು ಅಂತ ಒಳಗೆ ಬಿಟ್ಟುಕೊಂಡೆ. ಒಳಗೆ ಕರೆದು ಸ್ವಲ್ಪ ಹಾಲು ಹಾಕಿದೆ. ಪಾಪ ಹಸಿವು ಆಗಿತ್ತು ಅನಿಸುತ್ತದೆ, ಎಲ್ಲವನ್ನೂ ನೆಕ್ಕಿ ನೆಕ್ಕಿ ಕುಡಿಯಿತು. ನನ್ನ ಹತ್ತಿರ ಬಂದು ಕಾಲಿಗೆ ಸುತ್ತುಬಂತು. ಮೆಲ್ಲಗೆ ಏರಿ ಬಂದು ಎದೆ ಮೇಲೆ ಕುಳಿತಿತು. ನಾಲ್ಕು ತಿಂಗಳ ನಂತರ ನಂಗ್ಯಾಕೋ ಹಿತ ಅನಿಸಿತು, ಸಣ್ಣದಾಗಿ ನಗು ಬಂತು. ಒಂದು ಸಣ್ಣ ಬೆಕ್ಕಿನ ಮರಿಗೆ ಹಾಲು ಹಾಕುವುದರಿಂದ ಇಷ್ಟೊಂದು ಖುಷಿ ಇದೆ ಎಂದರೆ ಇನ್ನು ಸ್ವಲ್ಪ ದೊಡ್ಡ ಕೆಲಸ ಮಾಡಿದರೆ ಅದೆಷ್ಟು ನೆಮ್ಮದಿ ಸಿಕ್ಕೀತು ಅಲ್ವಾ ಅನಿಸತೊಡಗಿತು.

ಬೆಕ್ಕಿನ ಮರಿಯನ್ನು ಚಂದ ನೋಡಿಕೊಂಡೆ. ಪಕ್ಕದ ಒಂದು ದೇವಸ್ಥಾನಕ್ಕೆ ಹೋಗಿ ಅಲ್ಲೆಲ್ಲ ಗುಡಿಸಿ ಬರುತ್ತೇನೆ. ಇಲ್ಲಿಗೆ ಬಂದು ಡಾಕ್ಟರಮ್ಮನನ್ನು ಮಾತನಾಡಿಸಿ ಹೋಗ್ತೇನೆ. ದಿನಕ್ಕೊಮ್ಮೆ ಇಲ್ಲಿ ನೆಲ ಒರೆಸಿಕೊಡುತ್ತೇನೆ. ಇದ್ಯಾವುದನ್ನೂ ನಾನು ದುಡ್ಡಿಗೇಂತ ಮಾಡುವುದಲ್ಲ. ನಿಮ್ಮಂಥ ಒಳ್ಳೆಯವರು ಸಿಗುತ್ತಾರೆ, ಮಾತನಾಡಿ ನಿರಾಳವಾಗುತ್ತೇನೆ. ಈಗ ನನಗೆ ಚೆನ್ನಾಗಿ ನಿದ್ದೆ ಬರುತ್ತದೆ. ಯಾವ ವಿಷಯದ ಬಗೆಗೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರ ಬಗೆಗೂ ನನಗೆ ಬೇಜಾರಿಲ್ಲ. ಯಾರನ್ನೂ ದೂರುವುದಿಲ್ಲ. ನನ್ನ ಖುಷಿ ನನಗೆ. ಸಾಧ್ಯವಾದರೆ ಇನ್ನೊಬ್ಬರಿಗೆ ಸಹಾಯ ಮಾಡುವುದಷ್ಟೇ ನನ್ನ ಈಗಿನ ಯೋಚನೆ ಅಷ್ಟೆ.

-ವಿಶಾಲಾಕ್ಷಮ್ಮ ಕಥೆ ಮುಗಿಸಿ ಹೊರಟು ನಿಂತರು. ಶ್ರೀಮಂತ ಮಹಿಳೆ ಅವರ ಕೈ ಹಿಡಿದು ಹೇಳಿದರು: ವಿಶಾಲಾಕ್ಷಮ್ಮ.. ಇವತ್ತು ನಾನು ನೆಮ್ಮದಿಯಿಂದ ನಿದ್ದೆ ಮಾಡಬಹುದು ಅನಿಸ್ತಿದೆ. ನಾಳೆ ಇಲ್ಲೇ ಸಿಗೋಣ.. ಸಿಕ್ತೀರಾ?

ಇದನ್ನೂ ಓದಿ| Motivational story: ಒಳ್ಳೆಯತನ ದೌರ್ಬಲ್ಯ ಅಲ್ಲ, ಅದು ತಾಕತ್ತು ಅಂತ ಸದಾಶಿವ..
ಇದನ್ನೂ ಓದಿ| Motivational story: ಅತ್ತೆಗೆ ಕೊಡಬೇಕಾಗಿರುವುದು ವಿಷ ಅಲ್ಲ ಮಗಳೇ, ಪ್ರೀತಿ!
ಇದನ್ನೂ ಓದಿ| Motivational story: ಕಿವಿ ಕೇಳಿಸದ್ದು ಯಾರಿಗೆ? ಹೆಂಡತಿಗಾ, ಗಂಡನಿಗಾ?

Exit mobile version