Site icon Vistara News

Motivational story | ನಿಮ್ಮಂಥ ಮಗು ಬೇಕು ಎಂದು ಬಂದವಳಿಗೆ ನಾನೇ ನಿಮಗೆ ಮಗುವಾಗುವೆ ಎಂದಿದ್ದರು ವಿವೇಕಾನಂದರು!

Swami vivekananda

ಕೃಷ್ಣ ಭಟ್‌ ಅಳದಂಗಡಿ- Motivational story
ಶಿಕಾಗೋ ಧರ್ಮ ಸಮ್ಮೇಳನದ ಬಳಿಕ ವಿವೇಕಾನಂದರು ಅಮೆರಿಕದಲ್ಲಿ ಭಾರಿ ಜನಪ್ರಿಯರಾಗಿದ್ದರು. ಅವರನ್ನು ಒಬ್ಬ ಧಾರ್ಮಿಕ ವ್ಯಕ್ತಿಯಾಗಿ ಆರಾಧಿಸುವುದಷ್ಟೇ ಅಲ್ಲ, ಅವರೊಬ್ಬ ಯುವ, ಪ್ರತಿಭಾವಂತ, ಆಕರ್ಷಕ ವ್ಯಕ್ತಿ ಎನ್ನುವ ನೆಲೆಯಲ್ಲೂ ಎಲ್ಲರ ಗಮನ ಸೆಳೆದಿದ್ದರು. ಹಾಗಾಗಿ ಅವರನ್ನು ಒಲಿಸಿಕೊಳ್ಳಬೇಕು ಎನ್ನುವ ಹಂಬಲವೂ ಸಾಕಷ್ಟು ಮಂದಿಗಿತ್ತು. ಅದರಲ್ಲೂ ಯುವತಿಯರ ಕಣ್ಣಲ್ಲೂ ವಿವೇಕಾನಂದರೂ ಒಬ್ಬ ಆದರ್ಶ ವ್ಯಕ್ತಿಯಾಗಿ ಗೌರವವನ್ನು ಮತ್ತು ಪ್ರೀತಿಯನ್ನು ಪಡೆದಿದ್ದರು.

ಅದೊಂದು ಬಾರಿ ಒಂದು ತಂಡ ವಿವೇಕಾನಂದರನ್ನು ಭೇಟಿಯಾಗಲು ಬಂದಿತ್ತು. ಅದರಲ್ಲಿ ಒಬ್ಬ ಆಕರ್ಷಕ ಯುವತಿ ಕೂಡಾ ಇದ್ದಳು. ವಿವೇಕಾನಂದರನ್ನು ಒಲಿಸಿಕೊಳ್ಳಬೇಕು ಎನ್ನುವ ಆಸೆ ಆಕೆಯಲ್ಲಿತ್ತು. ಆ ಮೂಲಕ ತಾನು ಜಗತ್ತಿನ ಅತಿ ದೊಡ್ಡ ದಾರ್ಶನಿಕರೊಬ್ಬರ ಜತೆಗಿರಬಹುದು ಎನ್ನುವುದು ಅವಳ ನಂಬಿಕೆ. ಜತೆಗೆ ಹೆಣ್ಣಿನ ಸೌಂದರ್ಯಕ್ಕೆ, ಮಾತಿಗೆ ಮರುಳಾಗದವರು ಈ ಜಗತ್ತಿನಲ್ಲಿ ಯಾರಾದರೂ ಇದ್ದಾರೆಯೇ ಎಂಬ ಹಮ್ಮೂ ಇತ್ತು.

ಅದೇನೋ ಗೊತ್ತಿಲ್ಲ, ಆಕೆ ಭೇಟಿಗೆ ಬಂದ ಆರಂಭದಲ್ಲೇ ಆಕೆಗೆ ವಿವೇಕಾನಂದರ ಜತೆ ಮಾತನಾಡುವ ಅವಕಾಶ ಸಿಕ್ಕಿತು.ಮಾತಿಗೆ ಸಿಗುತ್ತಲೇ ಆಕೆ ವಿವೇಕಾನಂದ ಅವರನ್ನು ಇಂದ್ರ ಚಂದ್ರನೆಂದು ಹೊಗಳಿದಳು. ಅವರಿಗೆ ಇರುವ ಆಕರ್ಷಣೆಯನ್ನು ವಿವರಿಸಿದಳು. ಕೊನೆಗೊಂದು ಪ್ರಶ್ನೆಯನ್ನೂ ಕೇಳಿದಳು: ನಂಗೆ ನಿಮ್ಮನ್ನು ಮದುವೆಯಾಗಬೇಕು ಅಂತ ಆಸೆಯಾಗಿದೆ!

ವಿವೇಕಾನಂದರಿಗೆ ಆಶ್ಚರ್ಯವಾಯಿತು. ಆದರೆ, ಅದನ್ನು ತುಂಬಾ ತೋರ್ಪಡಿಸಿಕೊಳ್ಳದೆ: ಹೌದಾ? ಯಾಕೆ ಹಾಗೆ ಅನಿಸಿತು? ನನ್ನನ್ನು ಮದುವೆಯಾಗುವ ಉದ್ದೇಶವೇನು? ಎಂದು ಕೇಳಿದರು.

ಅದಕ್ಕೆ ಉತ್ತರವಾಗಿ ಆ ಮಹಿಳೆಯೂ ತುಂಬಾ ಬುದ್ಧಿ ಉಪಯೋಗಿಸಿ ಉತ್ತರ ನೀಡಿದಳು. ವಿವೇಕಾನಂದರನ್ನು ಗಂಡನಾಗಿ ಹೊಂದುವುದು ಎಂಬ ಉದ್ದೇಶವನ್ನು ಅಧ್ಯಾತ್ಮಿಕವಾಗಿಯೇ ಹೇಳಿದಳು. ʻʻನಾನು ನಿಮ್ಮನ್ನು ಮದುವೆಯಾಗಬೇಕು ಎಂದು ಬಯಸಿದ್ದು ಯಾಕೆಂದರೆ, ನನಗೆ ನಿಮ್ಮಂಥಹುದೇ ಒಬ್ಬ ಮಗ ಬೇಕು. ನಿಮ್ಮ ಹಾಗೇ ಇರುವ ಒಬ್ಬ ಮಗನನ್ನು ನಾನು ಹೊಟ್ಟೆಯಲ್ಲಿ ಹೊತ್ತು ಜನ್ಮ ನೀಡಬೇಕುʼʼ ಎಂದಳು.

ಆಗ ಸ್ವಾಮಿ ವಿವೇಕಾನಂದರು ಒಂದು ಕ್ಷಣವೂ ಯೋಚಿಸದೆ ಆ ಹೆಣ್ಮಗಳ ಕಾಲಿಗೆ ಬಿದ್ದರು. ʻʻನಾನು ಜೀವಂತವಾಗಿಯೇ ಇರುವಾಗ ಯಾಕೆ ಪ್ರತಿರೂಪಗಳ ಬಗ್ಗೆ ಯೋಚಿಸುತ್ತಿದ್ದೀರಾ? ನಾನೇ ಇಲ್ಲಿದ್ದೇನೆ. ನಿಮಗೆ ಬೇಕಿರುವುದು ನನ್ನ ಹಾಗಿರುವ ಮಗನಲ್ಲವೇ? ನಾನೇ ನಿಮ್ಮ ಮಗನಾಗಲು ಸಿದ್ಧನಿದ್ದೇನೆ. ಈ ಕ್ಷಣದಿಂದಲೇ ನಾನೇ ನಿಮ್ಮ ಮಗನೆಂದು ಸ್ವೀಕರಿಸಿ.. ನಿಮ್ಮನ್ನು ತಾಯಿ ಎಂದು ಒಪ್ಪಿಕೊಂಡಿದ್ದೇನೆ ನಾನುʼ ಎಂದು ಬಿಟ್ಟರು!

ಈ ಮಾತುಗಳನ್ನು ಕೇಳಿದ ಆ ಸುಂದರಿಗೆ ತನ್ನ ಬಗ್ಗೆಯೇ ತಪ್ಪಿತಸ್ಥ ಭಾವ ಕಾಡಿತು. ಎಂಥಾ ಮನುಷ್ಯನನ್ನು ನಾನು ತಪ್ಪು ಹಾದಿಗೆ ಎಳೆಯಲು ಯತ್ನಿಸಿದೆ ಎಂದು ಬೇಸರ ಮಾಡಿಕೊಂಡಳು. ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದಳು. ಮುಂದೆ ಆಕೆಯೇ ವಿವೇಕಾನಂದರ ಅನುಯಾಯಿಯಾಗಿ ಧರ್ಮ ಕಾರ್ಯಗಳಲ್ಲಿ ಸಾಥ್‌ ನೀಡಿದಳು.

ಇದನ್ನೂ ಓದಿ | Motivational story: ಯಾವಾಗಲೂ ಸೋಲುತ್ತಿದ್ದ ಅವನು ಆವತ್ತು ಗೆದ್ದೇ ಬಿಟ್ಟ!

Exit mobile version