ಕೃಷ್ಣ ಭಟ್ ಅಳದಂಗಡಿ- motivational story
ಅದು ಜಗತ್ತಿನ ಅತ್ಯಾಧುನಿಕ ಕಾರುಗಳನ್ನು ಉತ್ಪಾದಿಸುವ ಒಂದು ಸಂಸ್ಥೆ. ಅಲ್ಲಿನ ಎಂಜಿನಿಯರ್ ಗಳ ತಂಡ ಹೊಸ ಹೊಸ ಮಾಡೆಲ್‍ಗಳನ್ನು ತಯಾರಿಸುವುದಕ್ಕೆ ಹೆಸರುವಾಸಿ. ಹಾಗೆ ಅದು ವಿಶ್ವ ದರ್ಜೆಯ ಕಾರೊಂದನ್ನು ವಿನ್ಯಾಸಗೊಳಿಸಿತು.
ಆವತ್ತು ಅದರ ಅನಾವರಣ. ಕಂಪನಿಯ ಮಾಲೀಕರೂ ಬಂದಿದ್ದರು. ಹಲವು ಗಣ್ಯರನ್ನು ಕೂಡಾ ಕರೆಸಲಾಗಿತ್ತು. ದೊಡ್ಡ ಗಾತ್ರದ ವಿಭಿನ್ನ ವಿನ್ಯಾಸದ ಈ ಕಾರಿನ ಬಗ್ಗೆ ಆಗಲೇ ಸಾಕಷ್ಟು ಕುತೂಹಲ ಕ್ರಿಯೇಟ್ ಆಗಿತ್ತು. ಜನರು ಕೂಡಾ ಸೇರಿದ್ದರು.
ಒಂದು ನಿರ್ದಿಷ್ಟ ಪ್ರದೇಶದಿಂದ ಅದನ್ನು ಹೊರತರಲು ಎಲ್ಲ ಸಿದ್ಧತೆಗಳು ನಡೆದಿದ್ದವು. ಈಗ ಕಾರು ನಿಮ್ಮೆದುರು ಬರಲಿದೆ ಎನ್ನುವ ಘೋಷಣೆಗಳೂ ಮೊಳಗಿದವು. ಆದರೆ, ಕಾರು ಬರಲೇ ಇಲ್ಲ! ಯಾಕೆಂದರೆ, ಯಾವ ಭಾಗದಿಂದ ಕಾರು ಹೊರಬರಬೇಕಾಗಿತ್ತೋ ಆ ಪ್ರವೇಶ ದ್ವಾರಕ್ಕಿಂತ ಕಾರು ಒಂದಿಂಚು ಎತ್ತರವಾಗಿತ್ತು. ಹೇಗೆ ಹೊರಗೆ ತರುವುದು ಎಂದು ಮಾಲೀಕರು, ಎಂಜಿನಿಯರ್ ಆದಿಯಾಗಿ ಎಲ್ಲರೂ ಯೋಚಿಸಿದರು. ಹಾಗೇ ಬಂದರೆ ಕಾರಿನ ಮೇಲ್ಭಾಗ ಸ್ಕ್ರಾಚ್ ಆಗಲಿದೆ. ಅದರಿಂದ ತುಂಬ ಹಾನಿ ಆಗುತ್ತದೆ ಎಂದು ಪೇಂಟರ್ ವಿವರಿಸಿದ. ಅಷ್ಟು ಹೊತ್ತಿಗೆ ಇನ್ನೊಬ್ಬರು ಬಾಗಿಲಿನ ಮೇಲ್ಭಾಗವನ್ನು ಒಂದಿಂಚಿನಷ್ಟು ಒಡೆಯಬೇಕು ಎಂದು ಸಲಹೆ ನೀಡಿದರು. ಆಮೇಲೆ ಸರಿ ಮಾಡಬಹುದಲ್ಲಾ ಎಂದು ಹೇಳಿದರು.
ಆದರೆ, ಮಾಲೀಕರಿಗೆ ಎರಡೂ ಸಮ್ಮತವಾಗಲಿಲ್ಲ. ಈ ರೀತಿ ಗೋಡೆಗೆ ತಾಗಿಸಿಕೊಂಡು ಬರುವುದಾಗಲಿ, ಗೋಡೆಯನ್ನು ಒಡೆಯುವುದಾಗಲೀ ಅಪಶಕುನ ಎಂದರು. ಕಾರನ್ನು ಹಿಂದೆ ತಿರುಗಿಸಿ, ಬೇರೆಡೆಯಿಂದ ಹೊರ ತರುವುದು ಕೂಡಾ ಶುಭ ಶಕುನವಲ್ಲ ಎಂದರು.
ಕಾರು ತಯಾರಿಸಿದ ಎಂಜಿನಿಯರ್ ಗಳು ನಿಜಕ್ಕೂ ನಾಚಿಕೆಯಿಂದ ತಲೆ ತಗ್ಗಿಸಿದ್ದರು. ಇಷ್ಟೆಲ್ಲ ಆಧುನಿಕವಾಗಿ ಯೋಚಿಸುವ ತಾವು ಬಾಗಿಲಿನ ಬಗ್ಗೆ ಯೋಚಿಸಲೇ ಇಲ್ಲವಲ್ಲ ಎಂದು ಬೇಸರಪಟ್ಟುಕೊಂಡರು.
ಎಲ್ಲರೂ ಯೋಚನೆ ಮಾಡುತ್ತಿರುವಾಗ ಅಲ್ಲಿನ ವಾಚ್‍ಮನ್ ಮುಂದೆ ಬಂದ. ನೀವೇನೂ ತಪ್ಪು ತಿಳಿಯುವುದಿಲ್ಲ ಎಂದಾದರೆ ನಾನು ಹೇಳುವ ಒಂದು ಐಡಿಯಾವನ್ನು ಟ್ರೈ ಮಾಡಿ ನೋಡಬಹುದೇ ಎಂದು ಕೇಳಿದ.
ಎಂಜಿನಿಯರ್ ಗಳೇ ಕಾರನ್ನು ಹೊರತರಲಾಗದೆ ಒದ್ದಾಡುತ್ತಿರುವಾಗ ಈ ವಾಚ್ ಮನ್ ಏನು ಐಡಿಯಾ ಕೊಟ್ಟಾನು ಎಂದು ಉಳಿದವರು ತಾತ್ಸಾರ ತೋರಿದರು. ಆದರೆ, ಮಾಲೀಕರು ಮಾತ್ರ `ಅದು ಏನೇ ಇರಲಿ’ ಹೇಳು ಎಂದರು.
ವಾಚ್ ಮ್ಯಾನ್ ಹೇಳಿದ: ಸರ್, ಮೇಲಿನ ಗೋಡೆ ಒಡೆಯುವುದು ಬೇಡ. ಈಗ ಕಾರು ಎತ್ತರವಾಗಿರುವುದು ಒಂದಿಂಚಿನಷ್ಟೇ ಅಲ್ವಾ? ಕೆಲವರು ಹೋಗಿ ಕಾರಿನಲ್ಲಿ ಕುಳಿತುಕೊಳ್ಳಲಿ. ನಾವು ಕಾರಿನ ಟಯರಿನ ಗಾಳಿಯನ್ನು ತೆಗೆಯೋಣ. ಆಗ ಕಾರು ಒಂದಿಂಚಿನಷ್ಟೇ ತಗ್ಗುತ್ತದೆ. ಅದನ್ನು ಸುಲಭವಾಗಿ ಹೊರಗೆ ತರಬಹುದು ಎಂದ.!
ಮಾಲೀಕರು ತುಂಬು ಖುಷಿಯಾದರು. ಜಗತ್ತಿನಲ್ಲಿ ಯಾರೂ ಅಸಮರ್ಥರಿಲ್ಲ. ಎಲ್ಲರೂ ಬುದ್ಧಿವಂತರೇ ಇದ್ದಾರೆ. ನಾವು ಸಮಸ್ಯೆಯನ್ನು ನಮ್ಮದೇ ಆದ ತಂತ್ರಗಳ ನೆಲೆಯಲ್ಲಿ ನೋಡಿದೆವು. ವಾಚ್‍ಮ್ಯಾನ್ ಇನ್ನೂ ಭಿನ್ನವಾದ ನೆಲೆಯಿಂದ ನೋಡಿದರು. ಪ್ರತಿಯೊಂದು ಸಮಸ್ಯೆಗೂ ಪರ್ಯಾಯವಾದ ಪರಿಹಾರವೊಂದು ಇರುತ್ತದೆ ಎಂದರು.
ಎಲ್ಲ ಕಡೆಯಿಂದ ಚಪ್ಪಾಳೆಗಳು ಕೇಳಿಬಂದವು.
ಇದನ್ನೂ ಓದಿ| Motivational story |ಪೋಸ್ಟ್ ಮ್ಯಾನ್‍ಗೆ ಚಪ್ಪಲಿ ಕೊಟ್ಟ ಆ ಹುಡುಗಿಗೆ ಕಾಲುಗಳೇ ಇರಲಿಲ್ಲ!