Site icon Vistara News

Motivational story | ಕಾಲೇಜಿನಲ್ಲಿ ನಿತ್ಯವೂ ಟಾಯ್ಲೆಟ್‌ ತೊಳೆಯುವ ಆ ಹೆಣ್ಮಗಳ ಹೆಸರೇನು?

Motivational story

ಕೃಷ್ಣ ಭಟ್‌ ಅಳದಂಗಡಿ- Motivational story
ಐದು ವರ್ಷದ ಕಾಲೇಜು ಜೀವನವನ್ನು ಮುಗಿಸಿದ ವಿದ್ಯಾರ್ಥಿಗಳನ್ನು ಬೀಳ್ಕೊಡುವ ಸಂದರ್ಭ ಅದಾಗಿತ್ತು. ಆವತ್ತು ಬೆಳಗ್ಗೆ ಕ್ಲಾಸಿಗೆ ಬಂದ ಪ್ರೊಫೆಸರ್ ವಿಶ್ವನಾಥ ರಾಯರು ಆ ಕ್ಲಾಸಿನ ಎಲ್ಲ ಮಕ್ಕಳಿಗೆ ಒಂದು ಸಣ್ಣ ಎಕ್ಸಾಂ ಮಾಡುವುದಾಗಿ ಹೇಳಿದಳು. ಅವರದು ಸಮಾಜಶಾಸ್ತ್ರ ಸಬ್ಜೆಕ್ಟ್.

ಅದು 25 ಪ್ರಶ್ನೆಗಳಿರುವ ಪ್ರಶ್ನೆ ಪತ್ರಿಕೆ. ಎಲ್ಲ ಪ್ರಶ್ನೆಗಳು ಕೂಡಾ ಅತ್ಯಂತ ಸುಲಭವಾಗಿಯೇ ಇದ್ದವು. ಒಂದೊಂದು ಪ್ರಶ್ನೆಗೂ ಉತ್ತರಿಸುತ್ತಾ ಉತ್ತರಿಸುತ್ತಾ ಖುಷಿಯಿಂದಲೇ ಮುಂದುವರಿದ ಅವರಲ್ಲಿ ಹೆಚ್ಚಿನವರು ಕೊನೆಯ ಪ್ರಶ್ನೆಯಾಗುವ ಹೊತ್ತಿಗೆ ಒಮ್ಮೆಗೇ ತಬ್ಬಿಬ್ಬಾದರು.

ಆ ಪ್ರಶ್ನೆ ಏನಿತ್ತೆಂದರೆ: ನಮ್ಮ ಕಾಲೇಜಿನ ಟಾಯ್ಲೆಟ್‍ಗಳನ್ನು ಕ್ಲೀನ್ ಮಾಡುವ ಮಹಿಳೆಯ ಪೂರ್ಣ ಹೆಸರೇನು?

ಎಲ್ಲರೂ ಆ ಹೆಂಗಸನ್ನು ನೆನಪು ಮಾಡಿಕೊಂಡರು. ಹೆಚ್ಚು ಕಡಿಮೆ ಇಡೀ ದಿನ ಒಂದಲ್ಲ ಒಂದು ಟಾಯ್ಲೆಟ್‍ನಲ್ಲೇ ಇರುತ್ತಾರೆ. ಸುಮಾರು 60 ವರ್ಷ ಆಗಿರಬಹುದೇನೋ. ಉದ್ದಕ್ಕೆ, ಸ್ವಲ್ಪ ಕಪ್ಪಾಗಿ ಇದ್ದಾರೆ. ಸ್ವಲ್ಪ ಕಣ್ಣು ಆಳಕ್ಕಿಳಿದಿದೆ. ಎಳೆದು ಕಟ್ಟಿದ ತುರುಬು.. ಹೀಗೆ ಅವರ ಚಿತ್ರವನ್ನು ಕಣ್ಣ ಮುಂದೆ ತಂದುಕೊಂಡರು. ಅವರು ಒಂದು ದಿನ ಬಾರದೆ ಟಾಯ್ಲೆಟ್ ವಾಸನೆ ಬರುತ್ತಿದ್ದುದರ ಬಗ್ಗೆ ದೊಡ್ಡ ಮಟ್ಟದ ಪ್ರತಿಭಟನೆಯೇ ನಡೆದದ್ದು ಕೆಲವರಿಗೆ ನೆನಪಾಯಿತು. ಅವರು ಸರಿಯಾಗಿ ಕ್ಲೀನ್ ಮಾಡ್ಲಿಲ್ಲ ಎಂದು ಕೆಲವು ಹುಡುಗಿಯರು ಕಂಪ್ಲೇಂಟ್ ಮಾಡಿದ್ದು ನೆನಪಾಯಿತು. ಆದರೆ ಅವರ ಸರಿಯಾದ ಹೆಸರು ಮಾತ್ರ ಹೆಚ್ಚಿನವರಿಗೆ ನೆನಪಾಗಲೇ ಇಲ್ಲ. ಕೆಲವರು ಅಕ್ಕ ಎಂದರು ಬರೆದರು, ಇನ್ನು ಕೆಲವರು ಕಮಲಕ್ಕ ಎಂದರು, ಕೆಲವರು ಕಮಲಿ ಎಂದರು. ಒಬ್ಬೊಬ್ಬರದು ಒಂದೊಂದು ಹೆಸರು.

ಎಲ್ಲರೂ ಉತ್ತರ ಪತ್ರಿಕೆಯನ್ನು ವಿಶ್ವನಾಥ ರಾಯರ ಕೈಗೆ ಹಸ್ತಾಂತರಿಸಿದ ಬಳಿಕ ಒಬ್ಬ ವಿದ್ಯಾರ್ಥಿ ಎದ್ದು ನಿಂತು ಕೇಳಿದ: ಸರ್ 25ನೇ ಪ್ರಶ್ನೆಗೂ ನಮಗೂ ಸಂಬಂಧವೇ ಇಲ್ಲವಲ್ಲ, ಅದು ಬೇಕಿತ್ತಾ?

ಆಗ ವಿಶ್ವನಾಥ ರಾಯರು ಹೇಳಿದರು: ಅದು ಅತ್ಯಂತ ಮೌಲಿಕವಾದ ಪ್ರಶ್ನೆ. ನಾವು ಸಮಾಜ ಶಾಸ್ತ್ರ ವಿದ್ಯಾರ್ಥಿಗಳು. ಸಾಮಾಜಿಕ ನಡವಳಿಕೆಗಳ ಬಗ್ಗೆ ನಮಗೆ ಅರಿವು ಇರಬೇಕು. ನಮ್ಮ ಜತೆಗೆ ಕೆಲಸ ಮಾಡುವ, ನಮ್ಮೊಂದಿಗೆ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಅತ್ಯಂತ ಮುಖ್ಯ ಅಂತ ನಮಗೆ ಅನಿಸಬೇಕು. ನಿಮಗೆ ಎಲ್ಲ ಪ್ರೊಫೆಸರ್‌ಗಳ ಹೆಸರು ಗೊತ್ತಿದೆ. ನಿಮ್ಮ ಗೆಳೆಯರ ಹೆಸರು ಗೊತ್ತಿದೆ. ಆದರೆ, ಕಳೆದ ಐದು ವರ್ಷಗಳಿಂದ ನಿಮ್ಮ ತಾಯಿಗಿಂತಲೂ ಹೆಚ್ಚು ಕಾಳಜಿಯಿಂದ ಪಾಯಿಖಾನೆ ತೊಳೆಯುವ ಆ ಹೆಣ್ಮಗಳ ಹೆಸರು ಗೊತ್ತಿಲ್ಲ ಎಂದರೆ ಹೇಗೆ? ಆಕೆಯ ಕೆಲಸ ಸಣ್ಣದೇನೂ ಅಲ್ಲ, ಅತ್ಯಂತ ಮುಖ್ಯವಾದದ್ದು ಎನ್ನುವುದು ಒಂದು ದಿನ ಆಕೆ ಬಾರದೆ ಇದ್ದಾಗ ನಿಮಗೇ ಗೊತ್ತಾಗಿದೆ. ಆಕೆಯೂ ಇಲ್ಲಿನ ಪ್ರೊಫೆಸರ್‌ಗಳಷ್ಟೇ ಮುಖ್ಯಳು. ಅವರನ್ನು ಕೂಡಾ ನಾವು ಅದೇ ಗೌರವದಿಂದ ಕಾಣಬೇಕು. ಪ್ರೊಫೆಸರ್‌ಗಳನ್ನು ಕಂಡಾಗ ಹೇಗೆ ನಮಸ್ಕಾರ ಸರ್ ಅಂತೀರೋ ಅದೇ ರೀತಿ ಆಕೆಯನ್ನು ಕೂಡಾ ಅಷ್ಟೇ ಪ್ರೀತಿಯಿಂದ ಮಾತನಾಡಿಸಬೇಕಲ್ವಾ? ಒಂದು ಸಣ್ಣ ಮುಗುಳ್ನಗೆ, ಒಂದು ಸಣ್ಣ ಹಲೋ ಆಕೆಗೂ ಸಲ್ಲಬೇಕಲ್ವಾ?

ವಿಶ್ವನಾಥ ರಾಯರ ಮಾತು ಎಲ್ಲರ ಮನಸ್ಸನ್ನು ತಟ್ಟಿತು. ಆವತ್ತು ಸಂಜೆ ಆ ಕ್ಲಾಸಿನ ಎಲ್ಲ ವಿದ್ಯಾರ್ಥಿಗಳು ಕಮಲಾಕ್ಷಿ ಕೃಷ್ಣಮೂರ್ತಿ ಎಂಬ ಹೆಸರಿನ ಆ ಹೆಣ್ಮಗಳನ್ನು ಮಧ್ಯದಲ್ಲಿ ಕೂರಿಸಿಕೊಂಡು ಪ್ರೀತಿಯಿಂದ ಮಾತನಾಡಿದರು. ಒಂದು ಪುಟ್ಟ ಉಡುಗೊರೆಯನ್ನು ಕೈಯಲ್ಲಿಟು ಬರ್ತೀವಿ ಅಕ್ಕಾ ಅಂದರು. ಕಮಲಾಕ್ಷಿ ಕೃಷ್ಣಮೂರ್ತಿ ತಮ್ಮ ಬದುಕಿನಲ್ಲಿ ದೊರೆತ ಮೊದಲ ಪ್ರೀತಿಯ ಗೌರವವನ್ನು ತಡೆದುಕೊಳ್ಳಲಾಗದೆ ಬಿಕ್ಕಳಿಸಿದರು.

ಇದನ್ನೂ ಓದಿ | Motivational story | ವೃತ್ತಿ ಮಾತ್ಸರ್ಯದ ಅತಿರೇಕ: ಅವನು ಬೆಂಕಿ ಇಟ್ಟ ಅಂಗಡಿ ಅವನದೇ ಆಗಿತ್ತು!

Exit mobile version