Site icon Vistara News

Motivational story: ದಾರಿ ಮಧ್ಯೆ ಚಿನ್ನದ ಚೀಲ ಸಿಕ್ಕರೆ ನೀವೇನು ಮಾಡ್ತೀರಾ?

motivational stories

ಕೃಷ್ಣ ಭಟ್‌ ಅಳದಂಗಡಿ-Motivational story
ಅದೊಂದು ಸಣ್ಣ ಆಶ್ರಮ. ಕೆಲವು ಶಿಷ್ಯರಿದ್ದರು. ಪ್ರತಿದಿನವೂ ಗುರುಗಳು ಜಗತ್ತಿನ ಒಳಿತು ಕೆಡುಕುಗಳ ಬಗ್ಗೆ ಶಿಷ್ಯರಿಗೆ ಹೇಳುತ್ತಿದ್ದರು. ಅದೊಂದು ದಿನ ಪಾಠ ಮಾಡುತ್ತಿರುವ ಮಧ್ಯೆಯೇ ಹೊರಗೆ ಹೋಗಿ ದಾರಿಯಲ್ಲಿ ನಡೆದುಕೊಂಡು ಹೋಗುತಿದ್ದ ಒಬ್ಬ ವ್ಯಕ್ತಿಯನ್ನು ಆಶ್ರಮಕ್ಕೆ ಕರೆತಂದರು.
ಶಿಷ್ಯರ ಮುಂದೆ ಅವನಲ್ಲಿ ಒಂದು ಪ್ರಶ್ನೆಯನ್ನು ಕೇಳಿದರು: ನೀವೀಗ ದಾರಿಯಲ್ಲಿ ಹೋಗುವಾಗ ಒಂದು ಚಿನ್ನಾಭರಣ ತುಂಬಿದ ಚೀಲ ಸಿಗುತ್ತದೆ ಎಂದಿಟ್ಟುಕೊಳ್ಳಿ. ಅದನ್ನು ನೀವು ಏನು ಮಾಡುತ್ತೀರಿ?
ಆ ವ್ಯಕ್ತಿ ಹೇಳಿದರು: ನಾನು ಅದನ್ನು ಹೆಚ್ಚಿಕೊಂಡು ಅದರ ನಿಜವಾದ ಮಾಲೀಕರು ಯಾರು ಎಂದು ಹುಡುಕಿ ಅವರ ಕೈಗೆ ಕೊಡುತ್ತೇನೆ. ಅದು ಸಾಧ್ಯವಾಗದೆ ಹೋದರೆ ಸರಕಾರಕ್ಕೆ ಕೊಡುತ್ತೇನೆ.
ಗುರುಗಳು ನಗುತ್ತಾ ಆ ವ್ಯಕ್ತಿಯನ್ನು ಬೆನ್ನು ತಟ್ಟಿ ಕಳುಹಿಸಿಕೊಟ್ಟರು. ಅವರು ತೆರಳಿದ ಬಳಿಕ ಗುರುಗಳು ಹೇಳಿದರು: ಅವನೊಬ್ಬ ಮೂರ್ಖ!

ಶಿಷ್ಯರಿಗೆ ಆಶ್ಚರ್ಯವಾಯಿತು. “ಏನು ಹೇಳ್ತಾ ಇದ್ದೀರಿ ಗುರುಗಳೇ. ಅವರು ಹೇಳಿದ್ದು ಸರಿಯಾಗಿಯೇ ಇತ್ತಲ್ಲವೇ? ನಮಗೆ ನೀವು ಹೇಳಿಕೊಟ್ಟಿದ್ದೂ ಅದೇ. ನಮ್ಮದಲ್ಲದ ಯಾವುದೇ ವಸ್ತು ಸಿಕ್ಕರೂ ಅದನ್ನು ಅದರ ನಿಜ ಮಾಲೀಕರಿಗೆ ಒಪ್ಪಿಸಬೇಕೂಂತ ಅಲ್ವೇ?” ಎಂದು ಕೇಳಿದರು.
ಗುರುಗಳು ಏನೂ ಮಾತನಾಡದೆ ನಸುನಕ್ಕರು. ಸ್ವಲ್ಪ ಹೊತ್ತಿನ ಬಳಿಕ ಆಶ್ರಮದ ಹೊರಗೆ ಹೋಗಿ ಇನ್ನೊಬ್ಬ ವ್ಯಕ್ತಿಯನ್ನು ಕರೆತಂದರು. ಅವನಿಗೂ ಇದೇ ಪ್ರಶ್ನೆ ಕೇಳಿದರು.
ಅವನು ಹೇಳಿದ: ಹಾಗೊಮ್ಮೆ ಸಿಕ್ಕಿದರೆ ನಾನು ನನ್ನ ಕೈಯಲ್ಲೇ ಇಟ್ಟುಕೊಳ್ಳುತ್ತೇನೆ. ಆಗ ಗುರುಗಳು ಕೇಳಿದರು: ಅದನ್ನು ಅದರ ನಿಜವಾದ ಮಾಲೀಕರಿಗೆ ಒಪ್ಪಿಸುವುದು ಧರ್ಮವಲ್ಲವೇ?
ಅದಕ್ಕೆ ಅವನು ಉತ್ತರಿಸಿದ: ನಾನೇನು ಮೂರ್ಖ ಅಂದುಕೊಂಡಿರಾ? ಸಿಕ್ಕಿದ್ದನ್ನು ಹಾಗೆ ಬಿಟ್ಟುಹೋಗಲು, ಯಾರದ್ದೂಂತ ಹುಡುಕಿಕೊಂಡು ಹೋಗಿ ಕೊಟ್ಟು ಬರಲು? ನಾನೇ ಇಟ್ಟುಕೊಳ್ಳುತ್ತೇನೆ.
ಗುರುಗಳು ನಸು ನಕ್ಕು ಅವನನ್ನು ಕಳುಹಿಸಿ, ಮಕ್ಕಳ ಕಡೆಗೆ ತಿರುಗಿ ಹೇಳಿದರು: ಅವನೊಬ್ಬ ರಾಕ್ಷಸ!
ಶಿಷ್ಯರಿಗೆ ಇನ್ನಷ್ಟು ಆಶ್ಚರ್ಯ. ಮಾಲೀಕನನ್ನು ಹುಡುಕಿಕೊಂಡು ಹೋಗಿ ಕೊಡುತ್ತೇನೆ ಅಂದವನನ್ನು ಮೂರ್ಖ ಅಂದರು. ತಾನೇ ಇಟ್ಟುಕೊಳ್ಳುತ್ತೇನೆ ಅಂದವನನ್ನು ರಾಕ್ಷಸ ಅಂತಾರೆ. ಏನು ಹೇಳಲು ಹೊರಟಿದ್ದಾರೆ ಇವರು!?
ಅಷ್ಟು ಹೊತ್ತಿಗೆ ಗುರುಗಳು ದಾರಿಯಿಂದ ಮೂರನೇ ವ್ಯಕ್ತಿಯನ್ನು ಕರೆದುಕೊಂಡು ಬಂದು ಅವನಿಗೂ ಇದೇ ಪ್ರಶ್ನೆ ಕೇಳಿದರು. ಆಗ ಅವನೆಂದ: ಗುರುಗಳೇ, ಈಗಲೇ ಏನನ್ನೂ ಹೇಳುವುದು ಕಷ್ಟ. ನಿಜವೆಂದರೆ ನನಗೆ ಅದನ್ನು ಹಿಂದಿರುಗಿಸಬೇಕು ಎನ್ನುವ ಮನಸು ಈಗ ಇದೆ. ಆದರೆ, ಆ ಕ್ಷಣದಲ್ಲಿ ನನಗೆ ಏನು ಅನಿಸೀತು ಎಂದು ಈಗಲೇ ಹೇಳಲಾರೆ. ನನ್ನ ಪರಿಸ್ಥಿತಿ ಹೇಗಿರುತ್ತದೋ ಗೊತ್ತಿಲ್ಲ. ನನ್ನ ವಿವೇಕ ಈಗಿನ ಹಾಗೇ ಇದ್ದರೆ ಖಂಡಿತವಾಗಿ ಮರಳಿಸುತ್ತೇನೆ. ಆದರೆ, ಈಗಲೇ ಹೇಳಲಾಗದು ಸ್ವಾಮಿ.
ಅವನನ್ನೂ ಕಳುಹಿಸಿಕೊಟ್ಟ ಗುರುಗಳು ಶಿಷ್ಯರತ್ತ ತಿರುಗಿ ಹೇಳಿದರು.
ಮಕ್ಕಳೇ ನನಗೆ ಮೂರನೇಯವನೇ ಸತ್ಯವಂತನ ಹಾಗೆ ಕಾಣುತ್ತಾನೆ. ಕೆಲವರು ಇನ್ನೊಬ್ಬರ ಎದುರು ದೊಡ್ಡವರಾಗಬೇಕು ಎಂದು ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ, ನಿಜವಾದ ಪರಿಸ್ಥಿತಿ ಬಂದಾಗ ಬೇರೆಯದೇ ರೀತಿಯಲ್ಲಿ ಯೋಚಿಸುತ್ತಾರೆ. ಇನ್ನೊಬ್ಬ ಪರಮ ದುಷ್ಟನೇ ಇದ್ದಾನೆ.. ಯಾವ ಸಂಶಯವೂ ಬೇಡ. ಆದರೆ, ಮೂರನೇ ವ್ಯಕ್ತಿಯಲ್ಲಿ ವಿವೇಕ ಇದೆ.. ಈಗ ಪರಿಸ್ಥಿತಿ ನೋಡಿಕೊಂಡು, ವಿವೇಕ ಹೇಳಿದಂತೆ ಮಾಡುತ್ತೇನೆ ಅಂದನಲ್ಲ, ಅವನು ತಪ್ಪು ಮಾಡುವ ಸಾಧ್ಯತೆ ಸ್ವಲ್ಪ ಕಡಿಮೆ.

ಇದನ್ನೂ ಓದಿ| Motivational story: ವಾಚು ಕದ್ದ ಹುಡುಗ ಮತ್ತು ಮರೆಯಲಾಗದ ಪಾಠ ಕಲಿಸಿದ ಮೇಸ್ಟ್ರು ಇದನ್ನೂ ಓದಿ | motivational story: ನಾವಾಡಿದ ಮಾತೇ ನಮಗೆ ತಿರುಗಿ ಕೇಳೋದು ಮಗಾ..!

Exit mobile version