ಕೃಷ್ಣ ಭಟ್ ಅಳದಂಗಡಿ – Motivational story
ಮ್ಯಾನೇಜ್‍ಮೆಂಟ್ ಗುರು ವಿಶ್ವನಾಥ್ ಸೆಮಿನಾರ್ ನಲ್ಲಿ ಒಂದು ಕಥೆ ಹೇಳಿದರು.
ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಆತ ಹತ್ತು ಕ್ರೂರ ನಾಯಿಗಳನ್ನು ಸಾಕಿದ್ದ. ತಪ್ಪು ಮಾಡುವ, ತಪ್ಪು ಸಲಹೆ ನೀಡುವ ಮಂತ್ರಿಗಳನ್ನು ಅವುಗಳ ನಡುವೆ ಬಿಟ್ಟು ಕೊಲ್ಲಿಸುತ್ತಿದ್ದ. ಅದೊಂದು ಸಾರಿ ಒಬ್ಬ ಮಂತ್ರಿ ನೀಡಿದ ಸಲಹೆ ತಪ್ಪಾಗಿತ್ತು. ಯಾವ ಕರುಣೆಯನ್ನೂ ತೋರದ ರಾಜ ʻಇವನನ್ನು ತೆಗೆದುಕೊಂಡು ಹೋಗಿ ನಾಯಿಗಳಿಗೆ ಹಾಕಿ’ ಎಂದು ಆಜ್ಞಾಪಿಸಿದ.
ಆಗ ಮಂತ್ರಿ, ʻದೊರೆಗಳೇ ನಾನು ಹತ್ತು ವರ್ಷಗಳಿಂದ ನಿಮ್ಮ ಸೇವೆ ಮಾಡುತ್ತಿದ್ದೇನೆ. ಒಂದೇ ಒಂದು ತಪ್ಪು ಮಾಡಿಲ್ಲ. ನನ್ನ ಮೊದಲ ತಪ್ಪನ್ನು ಮನ್ನಿಸಬಾರದೇʼ ಎಂದು ಅಂಗಲಾಚಿದ. ರಾಜ ಒಪ್ಪಲಿಲ್ಲ. ಆಗ ಮಂತ್ರಿ ʻ10 ವರ್ಷಗಳ ಸೇವೆ ಮನ್ನಿಸಿ 10 ದಿನಗಳ ಕಾಲವಾದರೂ ಬದುಕಲು ಬಿಡಿʼ ಎಂದು ಕೇಳಿಕೊಂಡ. ರಾಜ ಬಹುಕಷ್ಟದಿಂದ ಒಪ್ಪಿದ.
ಮಂತ್ರಿ ಬಹಳ ಬುದ್ಧಿವಂತ. 10 ದಿನಗಳ ಸಮಯಾವಕಾಶ ಪಡೆದ ಅವನು ನೇರವಾಗಿ ನಾಯಿಗಳಿದ್ದಲ್ಲಿಗೇ ಹೋದ. ಅಲ್ಲಿದ್ದ ವಾಚ್‍ಮ್ಯಾನ್‍ಗೆ ʻʻಮುಂದಿನ 10 ದಿನಗಳ ಕಾಲ ನಾನು ನಾಯಿಗಳನ್ನು ಆರೈಕೆ ಮಾಡುತ್ತೇನೆ,” ಎಂದ. ಕಾವಲುಗಾರನಿಗೆ ಅಚ್ಚರಿ. ಆದರೂ ಒಪ್ಪಿಕೊಂಡ.
ಈ ಹತ್ತು ದಿನಗಳಲ್ಲಿ ಮಂತ್ರಿ ನಾಯಿಗಳನ್ನು ಚೆನ್ನಾಗಿ ನೋಡಿಕೊಂಡ. ಅವುಗಳಿಗೆ ಆಹಾರ ಕೊಟ್ಟ, ಮುದ್ದಿಸಿದ, ಆಡಿಸಿದ. ಅವುಗಳೂ ಖುಷಿಪಟ್ಟವು. ಹತ್ತು ದಿನಗಳ ಬಳಿಕ ಮಂತ್ರಿ ಆಸ್ಥಾನಕ್ಕೆ ಬಂದು ಶಿಕ್ಷೆ ಎದುರಿಸಲು ಸಿದ್ಧ ಎಂದ. ಅವನನ್ನು ರಾಜಾಜ್ಞೆಯಂತೆ ನಾಯಿಗಳ ನಡುವೆ ಎಸೆಯಲಾಯಿತು. ನಾಯಿಗಳು ಮಂತ್ರಿಯನ್ನು ನೆಕ್ಕಲು ಶುರು ಮಾಡಿದವು. ಇದನ್ನು ನೋಡಿ ರಾಜನಿಗೆ ಆಶ್ಚರ್ಯವಾಯಿತು. ʻನಾಯಿಗಳಿಗೆ ಏನಾಗಿದೆ’ ಎಂದು ಕೇಳಿದ.
ಆಗ ಮಂತ್ರಿ ಹೇಳಿದ: ಮಹಾರಾಜರೇ ನಾನು ಹತ್ತು ವರ್ಷಗಳ ಕಾಲ ನಿಮ್ಮ ಸೇವೆ ಮಾಡಿದರೂ ನೀವು ನನ್ನ ಸಣ್ಣದೊಂದು ತಪ್ಪನ್ನು ಕ್ಷಮಿಸಲು ಸಿದ್ಧರಿಲ್ಲ. ಆದರೆ, ಈ ನಾಯಿಗಳು ನೋಡಿ, ನಾನು ಕೆಲವು ದಿನ ಆರೈಕೆ ಮಾಡಿದ್ದಕ್ಕೇ ಈ ರೀತಿ ಪ್ರೀತಿಸುತ್ತಿವೆ.
ರಾಜನಿಗೆ ತಾನು ಮಾಡಿದ ತಪ್ಪಿನ ಅರಿವಾಯಿತು.
++++++++++++++++++++++++++++++
ಇಷ್ಟು ಹೇಳಿ ವಿಶ್ವನಾಥ್ ಕಥೆ ನಿಲ್ಲಿಸಿದರು.
ಮುಂದೆ ಏನಾಗಿರಬಹುದು ಹೇಳಬಹುದೇ? ಎಂದು ಸಭಿಕರನ್ನು ಕೇಳಿದರು. ಎಲ್ಲರೂ ರಾಜ ಮಂತ್ರಿಯನ್ನು ಕ್ಷಮಿಸಿರಬಹುದು, ಉಡುಗೊರೆ ಕೊಟ್ಟಿರಬಹುದು. ನಾಯಿಗಳಿಂದ ಕೊಲ್ಲಿಸುವ ಕ್ರಮವನ್ನು ರಾಜ ನಿಲ್ಲಿಸಿರಬಹುದು ಎಂದೆಲ್ಲ ಹೇಳಿದರು.
ಆಗ ವಿಶ್ವನಾಥ್ ಮುಂದುವರಿಸಿದರು: ರಾಜ ತನ್ನ ತಪ್ಪನ್ನು ಅರಿತುಕೊಂಡು ಈ ನಾಯಿಗಳನ್ನು ಗುಂಡಿಟ್ಟು ಸಾಯಿಸಿದ ಮತ್ತು ಹೊಸದಾಗಿ ಹತ್ತು ಬೇಟೆ ನಾಯಿಗಳನ್ನು ತರಿಸಿಕೊಂಡು ಅವುಗಳ ಮುಂದೆ ಮಂತ್ರಿಯನ್ನು ಎಸೆಯಲು ಸೂಚಿಸಿದ!
ವಿಶ್ವನಾಥ್ ಕಥೆಯ ನೀತಿಯನ್ನು ಸಭೆಗೆ ತಿಳಿಸಿದರು: ಆಡಳಿತ ವ್ಯವಸ್ಥೆ, ಮ್ಯಾನೇಜ್‍ಮೆಂಟ್‍ಗಳು ಹಾಗೇನೇ.. ಅವು ಒಂದು ನಿರ್ಧಾರ ತೆಗೆದುಕೊಂಡರೆ ಹೇಗಾದರೂ ಕಾರ್ಯಗತ ಮಾಡಿಯೇ ಮಾಡುತ್ತವೆ!
ಇದನ್ನೂ ಓದಿ | Motivational story | ತಿರಂಗಾ ಹೊದ್ದು ಮಲಗಿದ ಕರೀಮನ ಕಿಸೆಯಲ್ಲಿತ್ತು ಟೀಚರ್ ಕೊಟ್ಟ ಆ ಚೀಟಿ!