ಕೃಷ್ಣ ಭಟ್ ಅಳದಂಗಡಿ- Motivational story
ಅದೊಂದು ಗುಡ್ಡ ಬೆಟ್ಟಗಳ ಪ್ರದೇಶ. ಕೆಲವೊಂದು ಪ್ರವಾಸಿಗರು ಬೆಟ್ಟದ ತುದಿಯ ಸೌಂದರ್ಯ ಸವಿಯಲು ಬರುತ್ತಿದ್ದರು. ಆವತ್ತು ಕತ್ತಲಾಗುತ್ತಿತ್ತು. ವಿಶ್ವನಾಥ್ ತನ್ನ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ.
ಎದುರಿನ ಒಂದು ತಿರುವಿನಲ್ಲಿ ಒಂದು ಕಾರು ನಿಂತಿರುವುದು ಮಬ್ಬಾಗಿ ಕಾಣುತಿತ್ತು. ಹತ್ತಿರ ಬರುತ್ತಿದ್ದಂತೆಯೇ ಸ್ವಲ್ಪ ವಯಸ್ಸಾದ ಮಹಿಳೆ ಕಾರಿನ ಬಳಿ ಇರುವುದು ಕಂಡಿತು. ಆಕೆ ಮೆಲ್ಲಗೆ ಕೈ ಮಾಡುತ್ತಿದ್ದರು. ವಿಶ್ವನಾಥ ತನ್ನ ಸ್ಕೂಟರನ್ನು ಸೈಡಿಗೆ ಹಾಕಿ ಅಲ್ಲಿಗೆ ಹೋದ.
ಮಹಿಳೆ ಹೇಳಿದರು: ನನ್ನ ಕಾರಿನ ಟಯರ್ ಪಂಕ್ಚರ್ ಆಗಿದೆ. ಆಗದಿಂದ ಕಂಡವರಿಗೆಲ್ಲ ಮಾಡುತ್ತಿದ್ದೇನೆ. ಯಾರೂ ನಿಲ್ಲಿಸುತ್ತಿಲ್ಲ. ಟಯರ್ ಚೇಂಜ್ ಮಾಡುವ ಶಕ್ತಿ ನನಗಿಲ್ಲ.
ಆಗ ವಿಶ್ವನಾಥ ಹೇಳಿದ: ಇದು ಅಪರಿಚಿತ ಜಾಗ ಅಲ್ವಾ? ಯಾರೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಕಾರು ಹಾಳಾಗಿದೆ ಎಂದು ಕಣ್ಣೀರು ಹಾಕಿ ದರೋಡೆ ಮಾಡಿದ ಘಟನೆಯೂ ನಡೆದಿದೆ ಎಂದು ನೆನಪಿಸಿಕೊಂಡ.
ʻʻನೀವು ಈ ಚಳಿಯಲ್ಲಿ ಯಾಕೆ ನಡುಗುತ್ತೀರಿ. ಕಾರಿನೊಳಗೆ ಬೆಚ್ಚಗೆ ಕುಳಿತುಕೊಳ್ಳಿ. ನಾನು ಟಯರ್ ಚೇಂಜ್ ಆದ ಮೇಲೆ ಕರೆಯುತ್ತೇನೆ’ ಎಂದ ವಿಶ್ವನಾಥ. ಮಹಿಳೆ ಒಳಗೆ ಕುಳಿತರು. ಕೆಲವೇ ನಿಮಿಷದಲ್ಲಿ ಟಯರ್ ಚೇಂಜ್ ಆಯಿತು. ʻಇನ್ನು ಹೊರಡಬಹುದು ಮೇಡಂ’ ಅಂದ.
ಮನುಷ್ಯನ ಸಹಾಯದಿಂದ ತುಂಬ ಖುಷಿಯಾದ ಈ ಶ್ರೀಮಂತ ಮಹಿಳೆ`ʻಎಷ್ಟು ಕೊಡಲಿ ಹೇಳು’ ಎಂದು ಕೇಳಿದರು. ಒಂದೆರಡು ಗರಿಗರಿ ನೋಟು ಹಿಡಿದುಕೊಂಡಿದ್ದರು. ಆಗ ವಿಶ್ವನಾಥ `ʻಇದಕ್ಕೆಲ್ಲ ದುಡ್ಡೆಂತಕೆ ಮೇಡಂ. ಕಷ್ಟ ಕಾಲದಲ್ಲಿ ಸಹಾಯ ಮಾಡಲು ಸಿಗುವ ಅವಕಾಶವೇ ಭಾಗ್ಯ’ ಎಂದು ಕೈಮುಗಿದ.
ಮಹಿಳೆ ಕೃತಜ್ಞತಾ ಭಾವದಿಂದ ಕೈಮುಗಿದು ಬೆಟ್ಟವಿಳಿಯಲು ಆರಂಭಿಸಿದರು.
ಸ್ವಲ್ಪ ಇಳಿದ ಮೇಲೆ ಅಲ್ಲೊಂದು ಚಹಾ ಅಂಗಡಿ ಕಂಡಿತು. ಸಾಕಷ್ಟು ಹೊತ್ತು ಕಾದು ಸುಸ್ತಾಗಿದ್ದ ಅವರಿಗೆ ಚಹಾ ಕುಡಿಯೋಣ ಅನಿಸಿತು. ಅಲ್ಲಿ ಚಹಾ ಮಾಡುತ್ತಿದ್ದುದು ಒಬ್ಬ ತುಂಬು ಗರ್ಭಿಣಿ. ಈ ವೃದ್ಧೆಯನ್ನು ನೋಡುತ್ತಿದ್ದಂತೆಯೇ ಹತ್ತಿರ ಬಂದ ಆಕೆ ತಾನು ಹೊದ್ದಿದ್ದ ಟವಲ್‍ನಿಂದಲೇ ಒದ್ದೆಯಾದ ಮಹಿಳೆಯ ತಲೆಯನ್ನೂ ಒರಸಿದಳು. `ʻತಲೆ ಒದ್ದೆ ಬಿಡಬೇಡಿ ಮೇಡಂ.. ಮೊದಲೇ ಹಿಮ ಬಿದ್ದಿದೆ. ಚಳಿ ಜೋರಾಗಿದೆ’ ಎಂದಳು.
ಸ್ವಲ್ಪ ಹೊತ್ತಿನಲ್ಲಿ ಒಳಗಿನಿಂದ ಚಹಾ ಮತ್ತು ತಿಂಡಿ ತಂದಿಟ್ಟಳು. ಈ ಎಂಟನೇ ತಿಂಗಳಿನಲ್ಲೂ ಇಷ್ಟೊಂದು ಖುಷಿಯಾಗಿ ಕೆಲಸ ಮಾಡುತ್ತಾಳಲ್ಲಾ ಅನಿಸಿ ಹೆಮ್ಮೆ ಅನಿಸಿತು.
ಚಹಾ ಕುಡಿದು ಮುಗಿಸಿದ ಮಹಿಳೆ 100 ರೂ. ನೋಟು ಕೈಗಿಟ್ಟರು. ಗರ್ಭಿಣಿ ಮಹಿಳೆ ಚಿಲ್ಲರೆ ತರಲೆಂದು ಒಳಗೆ ಹೋಗಿ ಚಿಲ್ಲರೆಗೆ ಹುಡುಕಿದಳು. ಪಕ್ಕನೆ ಸಿಗಲಿಲ್ಲ. ಕೊನೆಗೆ ಎಲ್ಲೆಲ್ಲೋ ಹುಡುಕಿ ಚಿಲ್ಲರೆ ಹಿಡಿದು ಹೊರಗೆ ಬಂದರೆ ಅಲ್ಲಿ ಆ ಮಹಿಳೆ ಇರಲಿಲ್ಲ. ಮರ್ಸಿಡಿಸ್ ಕಾರು ಇಳಿಯುತ್ತಿತ್ತು. `ʻಛೇ ಮೇಡಂ ಚೇಂಜ್ ತಗೊಳದೆ ಹೋದರಲ್ಲಾ..’ ಅಂತ ಯೋಚಿಸುತ್ತಾ ಅವರು ಚಹಾ ಕುಡಿದ ಲೋಟ ತೆಗೆಯಲು ಮುಂದಾದಳು. ಅವಳಿಗೇ ಅಶ್ಚರ್ಯ. ಚಹಾ ಗ್ಲಾಸಿನ ಅಡಿಯಲ್ಲಿ ಐದು ಸಾವಿರ ರೂ. ಇತ್ತು! ಜತೆಗೊಂದು ಸಣ್ಣ ಪತ್ರ.
ʻಮನುಷ್ಯ ಮನುಷ್ಯನನ್ನು ಯಾಕೆ ಇಷ್ಟೊಂದು ಪ್ರೀತಿಸುತ್ತಾನೋ ನನಗೆ ಅರ್ಥವಾಗುತ್ತಿಲ್ಲ. ಅವನೊಬ್ಬ ಗುಡ್ಡದಲ್ಲಿ ಸಿಕ್ಕಿ ನನಗೆ ಸಹಾಯ ಮಾಡಿದ. ನೀನು ನೋಡಿದರೆ ನನ್ನ ತಲೆ ಒರೆಸಿದೆ. ನಿನ್ನ ಮಕ್ಕಳು, ಕುಟುಂಬ ಚೆನ್ನಾಗಿರಲಮ್ಮ.. ನಾನು ನೇರವಾಗಿ ಕೊಟ್ಟರೆ ನೀನು ತೆಗೆದುಕೊಳ್ಳುವುದಿಲ್ಲವೇನೋ ಅನಿಸಿತು. ಅಲ್ಲಿ ಅವನೊಬ್ಬ ಕೂಡಾ ಬೇಡ ಅಂತ ಕೈಮುಗಿದಿದ್ದ. ಹಾಗಾಗಿ, ನಿನಗೆ ಹೇಳದೆ ಹೊರಟೆ. ತಪ್ಪು ತಿಳಿಬೇಡ.ʼʼ
ಗರ್ಭಿಣಿ ಹಾಗೇ ಕಣ್ಮುಚ್ಚಿಕೊಂಡಳು. ಕಳೆದ ರಾತ್ರಿ ನಡೆದ ಸಂಭಾಷಣೆ ನೆನಪಾಯಿತು. ಗಂಡನ ಎದೆ ಮೇಲೆ ತಲೆ ಇಟ್ಟ ಆಕೆ ಕೇಳಿದ್ದಳು: ಅಲ್ಲರಿ.. ಇನ್ನೇನು ತಿಂಗಳಲ್ಲಿ ಹೆರಿಗೆ ನಂಗೆ. ಒಂದೈದು ಸಾವಿರವಾದರೂ ಹಣ ಬೇಕು. ಎಲ್ಲಿಂದ ತರೋಣ?
ಆಗ ಗಂಡ ಹೇಳಿದ್ದ: ದೇವರಿದ್ದಾನೆ ಕಣೆ, ಹೇಗೋ ಹೊಂದಾಣಿಕೆ ಆಗುತ್ತದೆ.
ಇದನ್ನೂ ಓದಿ| Motivational story | ಹೆಂಡ್ತಿಗೇನೂ ಕೆಲಸ ಇಲ್ಲ ಅಂತ ಪದೇಪದೆ ಹೇಳ್ತಿದ್ದ ಗಂಡ ಡಾಕ್ಟರ್ ಪ್ರಶ್ನೆಗಳಿಗೆ ಕಂಪಿಸಿದ!