ಕೃಷ್ಣ ಭಟ್ ಅಳದಂಗಡಿ- motivational story
ವಿಶ್ವನಾಥನಿಗೆ ಒಂದು ಸಣ್ಣ ಸಂಶಯ ಬರಲು ಶುರುವಾಯಿತು. ಮೊದಲೆಲ್ಲ ಏನಾದರೂ ಕೇಳಿದರೆ ತಕ್ಷಣ ಉತ್ತರ ನೀಡುತ್ತಿದ್ದ ಹೆಂಡತಿ ಇತ್ತೀಚೆಗೆ ಯಾಕೋ ಸರಿಯಾಗಿ ಉತ್ತರ ನೀಡುತ್ತಿಲ್ಲ. ದೂರದಿಂದ ಕೇಳಿದರಂತೂ ಉತ್ತರವೇ ಇಲ್ಲ. ಹತ್ತಿರ ಹೋಗಿ ಕೇಳಿದರೆ ಮಾತ್ರ ಉತ್ತರ ಬರುತ್ತಿತ್ತು. ಹಾಗಿದ್ದರೆ ಅವಳಿಗೆ ಕಿವಿ ಸರಿಯಾಗಿ ಕೇಳಿಸುತ್ತಿಲ್ಲವೇ?
ಹಾಗಂತ ಅವಳಲ್ಲಿ ಈ ಬಗ್ಗೆ ನೇರವಾಗಿ ಚರ್ಚಿಸಿದರೆ ಆಕೆಗೆ ಬೇಸರ ಆಗಬಹುದು ಅನಿಸಿತು ವಿಶ್ವನಾಥನಿಗೆ. ಹೀಗಾಗಿ ಏನು ಮಾಡುವುದು ಎಂದು ಫ್ಯಾಮಿಲಿ ಡಾಕ್ಟರ್ ಬಳಿ ಕೇಳಿದ.
ಡಾಕ್ಟರ್ ಒಂದು ಸಲಹೆ ನೀಡಿದರು: ಒಂದು ಸಣ್ಣ ಟೆಸ್ಟ್ ಮಾಡಿ ನೋಡಿ. ಇದರಿಂದ ನಿಮಗೆ ಆಕೆಗೆ ಸಮಸ್ಯೆ ಯಾವ ಮಟ್ಟದಲ್ಲಿದೆ ಎನ್ನುವುದು ಕೂಡಾ ಗೊತ್ತಾಗುತ್ತದೆ. ಸಮಸ್ಯೆಯನ್ನು ವಿವರಿಸಿ ಹೇಳಲು ಕೂಡಾ ಅನುಕೂಲವಾಗುತ್ತದೆ ಎಂದರು.
ಡಾಕ್ಟರ್ ಹೇಳಿದ್ದಿಷ್ಟು: ವಿಶ್ವನಾಥ್ ನೀವು ಒಂದು ಕೆಲಸ ಮಾಡಿ. ಮೊದಲು ಹೆಂಡತಿಯಿಂದ ಸುಮಾರು 40 ಮೀಟರ್ ದೂರದಲ್ಲಿ ನಿಂತುಕೊಳ್ಳಿ. ಅಲ್ಲಿಂದ ಸಾಮಾನ್ಯ ಧ್ವನಿಯಲ್ಲಿ ಮಾತನಾಡಿ.. ಆಕೆಗೆ ಕೇಳುತ್ತದೆಯೇ? ಆಕೆ ಉತ್ತರ ನೀಡುತ್ತಿದ್ದಾರೆಯೇ ಎಂದು ಗಮನಿಸಿ. ಬಳಿಕ ಅದನ್ನು 30, 20, 10 ಮೀಟರ್ ಹೀಗೆ ಇಳಿಸುತ್ತಾ ಹೋಗಿ ಯಾವಾಗ ನಿಮಗೆ ಉತ್ತರ ಬರುತ್ತದೆ ಎಂದು ಗಮನಿಸಿ. ಬಳಿಕ ಕಿವಿ ತಜ್ಞರಿಗೆ ನಾನು ಚೀಟಿ ಬರೆದುಕೊಡುತ್ತೇನೆ.
ಮರುದಿನ ಮುಂಜಾನೆ ವಿಶ್ವನಾಥ ಎದ್ದಾಗ ಹೆಂಡತಿ ಅಡುಗೆ ಮನೆಯಲ್ಲಿದ್ದರು. ಇದೇ ಸರಿಯಾದ ಸಮಯ ಎಂದು ತಿಳಿದ ವಿಶ್ವನಾಥ ಡಾಕ್ಟರ್ ಹೇಳಿದಂತೆ ಪರೀಕ್ಷೆಗೆ ಮುಂದಾದರು.
ಅಂಗಳದಲ್ಲಿ ಬಂದು ನಿಂತು ಕೇಳಿದರು: ಇವಳೇ.. ಇವತ್ತು ಬೆಳಗ್ಗಿನ ತಿಂಡಿಗೆ ಎಂತ ಮಾಡ್ತಾ ಇದ್ದೀಯಾ?
ಹೆಂಡತಿಯಿಂದ ಯಾವುದೇ ಉತ್ತರ ಬರಲಿಲ್ಲ.
ಮೆಟ್ಟಿಲು ಹತ್ತಿ ಹಾಲ್‌ನ ಬಾಗಿಲ ಹತ್ತಿರ ಬಂದು ಕೇಳಿದ: ಇವಳೇ.. ಇವತ್ತು ಬೆಳಗ್ಗಿನ ತಿಂಡಿಗೆ ಎಂತ ಮಾಡ್ತಾ ಇದ್ದೀಯಾ?
ಉಹೂಂ ಅಡುಗೆ ಮನೆಯಿಂದ ಯಾವುದೇ ಉತ್ತರ ಇಲ್ಲ
ವಿಶ್ವನಾಥ್ ಹಾಲ್‌ನ ಕೊನೆಗೆ ಬಂದು ಕೇಳಿದರು: ಇವಳೇ, ಇವತ್ತು ಬೆಳಗ್ಗಿನ ತಿಂಡಿಗೆ ಎಂತ ಮಾಡ್ತಾ ಇದ್ದೀಯಾ?
ಇಲ್ಲವೇ ಇಲ್ಲ.. ಕಿಚನ್‌ನಿಂದ ಯಾವುದೇ ಸೌಂಡ್ ಬರಲಿಲ್ಲ.
ವಿಶ್ವನಾಥ್ ಕಿಚನ್ ಬಾಗಿಲಿಗೆ ಹೋಗಿ ಕೇಳಿದರು. ಉತ್ತರ ಬರಲಿಲ್ಲ. ʻಛೆ ಪರಿಸ್ಥಿತಿ ತುಂಬ ಗಂಭೀರವಾಗಿದೆʼ ಅಂದುಕೊಂಡ ವಿಶ್ವನಾಥ ಹೆಂಡತಿಯ ಪಕ್ಕದಲ್ಲೇ ಹೋಗಿ ನಿಂತು ಕೇಳಿದ: ಲೇ ಇವಳೇ, ಇವತ್ತು ಬೆಳಗ್ಗಿನ ತಿಂಡಿಗೆ ಎಂಥ ಮಾಡ್ತಾ ಇದ್ದೀಯಾ?
ಹೆಂಡತಿ ಕಣ್ಣು ಕೆಕ್ಕರಿಸಿ ನೋಡಿ ಕೇಳಿದಳು: ಏನಾಗಿದೇರಿ ನಿಮಗೆ.. ಇವತ್ತು ಮುಳ್ಳು ಸೌತೆ ದೋಸೆ ಅಂತ ಆಗದಿಂದ ಬಡ್ಕೊಳ್ತಾ ಇದ್ದೇನೆ. ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇಳ್ತಾ ಇದೀರಲ್ವಾ? ಕಿವಿ ಕೇಳಿಸೋಲ್ವಾ ನಿಮ್ಗೆ?
ಇದನ್ನೂ ಓದಿ| Motivational story: ಅತ್ತೆಗೆ ಕೊಡಬೇಕಾಗಿರುವುದು ವಿಷ ಅಲ್ಲ ಮಗಳೇ, ಪ್ರೀತಿ!