ಕೃಷ್ಣ ಭಟ್ ಅಳದಂಗಡಿ- Motivational story
ಅದೊಂದು ದೊಡ್ಡ ಕಾಡು. ಆ ರಾಜ್ಯದ ಸೇನೆಯ ಒಂದು ತುಕಡಿ ಅಲ್ಲಿ ಗಡಿ ರಕ್ಷಣೆಯ ಕೆಲಸ ಮಾಡುತ್ತಿತ್ತು. ಅದೊಂದು ದಿನ ಪಕ್ಕದ ರಾಜ್ಯದ ಸೇನೆ ಈ ಕಾಡಿನ ಭಾಗವನ್ನು ಅತಿಕ್ರಮಿಸಿಕೊಳ್ಳಲು ಹೊಂಚು ಹಾಕಿ ಮುನ್ನುಗ್ಗಿತು.
ತುಕಡಿಯ ಮುಖ್ಯಸ್ಥ ದೂರದಿಂದಲೇ ನೋಡಿದ, ಬರ್ತಾ ಇದ್ದದ್ದು ದೊಡ್ಡ ಸೇನೆ. ಇವರಿಗಿಂತ ಹಲವು ಪಟ್ಟು ದೊಡ್ಡದಿತ್ತು. ಉಳಿದ ಸೈನಿಕರೂ ಇದನ್ನು ಗಮನಿಸಿದರು. ಮುಖ್ಯಸ್ಥ ಹೇಳಿದ: ಅವರಿಗಿಂತ ಮೊದಲು ನಾವೇ ದಾಳಿ ಮಾಡಿಬಿಡೋಣ, ಖಂಡಿತ ನಾವು ಗೆದ್ದೇ ಗೆಲ್ಲುತ್ತೇವೆ.
ಆದರೆ, ಸೈನಿಕರಲ್ಲಿ ಒಂದು ರೀತಿಯ ಭಯ ಆವರಿಸಿತ್ತು. ಇದನ್ನು ಗಮನಿಸಿದ ಮುಖ್ಯಸ್ಥ ಹೇಳಿದ. ನಿಮ್ಮ ಕಳವಳ ನನಗೆ ಅರ್ಥವಾಗುತ್ತದೆ. ನಾವು ಕಡಿಮೆ ಜನ ಇದ್ದೇವೆ, ಗೆಲ್ಲುತ್ತೇವೋ, ಸಾಯುತ್ತೇವೋ ಎನ್ನುವ ಪ್ರಶ್ನೆ ನಿಮ್ಮಲ್ಲಿದೆ ಅಲ್ವಾ? ಎಂದು ಕೇಳಿದ. ಎಲ್ಲರೂ ಹೌದು ಎಂದರು.
ಆಗ ಸೇನಾ ಮುಖ್ಯಸ್ಥ ಪಕ್ಕದಲ್ಲೇ ಇದ್ದ ಕಾಡು ದೇವರ ಮುಂದೆ ಎಲ್ಲರನ್ನೂ ಕರೆದುಕೊಂಡು ಹೋದ. ಈ ವಿಚಾರದಲ್ಲಿ ನಾವೇ ನಿರ್ಧಾರ ತೆಗೆದುಕೊಳ್ಳೋದು ಬೇಡ. ದೇವರಿಚ್ಛೆ ಏನೆಂದು ತಿಳಿದು ಮುಂದುವರಿಯೋಣ.
ನಾನೊಂದು ನಾಣ್ಯವನ್ನು ಚಿಮ್ಮಿಸುತ್ತೇನೆ. ಅದರಲ್ಲಿ ರಾಜನ ಭಾಗ ಮೇಲೆ ಬಿದ್ದರೆ ಗೆಲುವು ನಮ್ಮದೇ ಅಂತ ಲೆಕ್ಕ. ಹಾಗಾಗಿ ಧೈರ್ಯದಿಂದ ಮುಂದುವರಿಯೋಣ. ಒಂದೊಮ್ಮೆ ಮತ್ತೊಂದು ಭಾಗ ಬಿತ್ತಾ ನಾವು ಯುದ್ಧ ಮಾಡೋದೇ ಬೇಡ, ಹಿಂದೆ ಹೋಗಿ ಬಿಡೋಣ ಅಂತ ಹೇಳಿದ. ಸೈನಿಕರಿಗೆ ಇದು ಸರಿ ಎನಿಸಿತು.
ಮುಖ್ಯಸ್ಥ ನಾಣ್ಯ ಚಿಮ್ಮಿಸಿದ. ಮೇಲೆ ಬಿದ್ದಿದ್ದು ರಾಜ! ಆಗ ಸೈನಿಕರು ಕುಣಿದು ಕುಪ್ಪಳಿಸಿದರು. ರಣೋತ್ಸಾಹದಿಂದ ವೈರಿಪಡೆಯ ಮೇಲೆ ಮುಗಿಬಿದ್ದರು. ದುಪ್ಪಟ್ಟು ಶಕ್ತಿಯ ವಿರೋಧಿ ಪಾಳಯವನ್ನು ತರಿದುಹಾಕಿದರು. ಒಮ್ಮಿಂದೊಮ್ಮೆಗೇ ಎದುರಾದ ಪ್ರತಿರೋಧ, ಕೆಲವೇ ಸೈನಿಕರಿದ್ದರೂ ಅಪಾರವಾದ ಸಾಹಸ ಕಂಡು ವಿರೋಧಿಗಳು ಪೇರಿಕಿತ್ತರು.
ಗೆಲುವಿನಿಂದ ಖುಷಿಯಾದ ಸೈನಿಕರು ಕುಣಿದು ಕುಪ್ಪಳಿಸಿದರು. ದೇವರು ನುಡಿದ ಭವಿಷ್ಯ ಸರಿಯೇ ಇರುತ್ತದೆ ಎಂದು ಮಾತನಾಡಿಕೊಂಡರು. ತಂಡದ ಹಿರಿಯನೊಬ್ಬ ಮುಖ್ಯಸ್ಥನ ಬಳಿ ಬಂದು ದೇವರು ನಮ್ಮನ್ನು ಕಾಪಾಡಿದ. ನಾಣ್ಯದಲ್ಲಿ ರಾಜನ ಮುಖ ಬಿದ್ದಿದ್ದಕ್ಕೆ ನಾವು ಗೆದ್ದೆವು ಎಂದು ಹೇಳಿದ.
ಆಗ ಮುಖ್ಯಸ್ಥ ಹಿರಿಯರನ್ನು ಪಕ್ಕಕ್ಕೆ ಕರೆದು ಮೆಲ್ಲಗೆ ಹೇಳಿದ: ನಮ್ಮನ್ನು ಗೆಲ್ಲಿಸಿದ್ದು ದೇವರೇ ಇರಬಹುದು, ಆದರೆ, ಅದಕ್ಕಿಂತಲೂ ದೊಡ್ಡದು ಗೆಲುವು ನಮ್ಮದೇ ಎನ್ನುವ ನಂಬಿಕೆ ಇತ್ತಲ್ಲ ಅದು ಅಂದ.
ಹಿರಿಯನಿಗೆ ಅರ್ಥವಾಗಲಿಲ್ಲ. ಮುಖ್ಯಸ್ಥ ತನ್ನ ಕೈಯಲ್ಲಿದ್ದ ನಾಣ್ಯವನ್ನು ತೋರಿಸಿದ: ಅದರ ಎರಡೂ ಬದಿಗಳಲ್ಲಿ ರಾಜನೇ ಇದ್ದ!
ಇದನ್ನೂ ಓದಿ | Motivational story | ನಾವು ಮಾಡೋ ಕೆಲಸಕ್ಕೆ ಒಂದು ಸ್ವಯಂ ಮೌಲ್ಯಮಾಪನ ಇರಬೇಕು ಅಲ್ವಾ?