ಕೃಷ್ಣ ಭಟ್ ಅಳದಂಗಡಿ – motivational story
ಅದೊಂದು ದಟ್ಟವಾದ ಕಾಡು. ಕಾಡಿನ ರಾಜ ಸಿಂಹ ಒಂದು ಆದೇಶವನ್ನು ಹೊರಡಿಸಿತು. ನಮ್ಮ ಮಕ್ಕಳು ಕೂಡಾ ಶಿಕ್ಷಣವನ್ನು ಪಡೆಯುವಂತಾಗಬೇಕು. ಯಾರೂ ನಿರಕ್ಷರಿಗಳಾಗಿರಬಾರದು. ಹೀಗಾಗಿ ಪ್ರತಿಯೊಂದು ಪ್ರಾಣಿಯೂ ತನ್ನ ಮಗುವನ್ನು ಶಾಲೆಗೆ ಕಳುಹಿಸಬೇಕು ಎಂದು ಸೂಚಿಸಿತು. ಅಂತೆಯೇ ಶಾಲೆ ಆರಂಭವಾಯಿತು.
ಕೆಲವೇ ದಿನದಲ್ಲಿ ಶಾಲೆ ಜನಪ್ರಿಯವಾಯಿತು. ಆನೆ, ಸಿಂಹ, ಕೋತಿ, ಮೀನು, ಮೊಲ, ಆಮೆ, ಜಿರಾಫೆ, ಒಂಟೆ, ಹುಲಿ ಸೇರಿದಂತೆ ಎಲ್ಲ ಪ್ರಾಣಿಗಳ ಮಕ್ಕಳೂ ಶಾಲೆಗೆ ಬರಲು ಶುರು ಮಾಡಿದವು. ಮಕ್ಕಳು ಶಾಲೆಗೆ ಹೋಗುವುದು ಹೆತ್ತವರಿಗೂ ಹೆಮ್ಮೆಯ ವಿಷಯವಾಯಿತು.
ಕೆಲವು ತಿಂಗಳ ನಂತರ ಫಸ್ಟ್ ಟರ್ಮ್ ಎಕ್ಸಾಂ ನಡೆಯಿತು. ಈ ಟರ್ಮ್‍ನಲ್ಲಿದ್ದ ಪ್ರಮುಖ ಪಾಠ ಮರ ಹತ್ತುವುದು ಹೇಗೆ ಎನ್ನುವುದು. ಪರೀಕ್ಷೆಯಲ್ಲಿ ಕೋತಿ ಮರಿ ಮೊದಲ ರ‍್ಯಾಂಕ್ ಪಡೆಯಿತು. ಆನೆ ಮರಿಗೆ ಕೊನೆಯ ಸ್ಥಾನ.
ಇದರಿಂದ ಆನೆಗೆ ಸಿಕ್ಕಾಪಟ್ಟೆ ಬೇಜಾರಾಯಿತು. ಇಷ್ಟೊಂದು ದೈತ್ಯ ಶಕ್ತಿ ಇದೆ ನನಗೆ. ಆದರೂ ನನ್ನ ಮಗುವಿಗೆ ಮರ ಹತ್ತುವ ಪರೀಕ್ಷೆಯಲ್ಲಿ ಕೊನೆಯ ಸ್ಥಾನ ಬಂತಲ್ಲ ಎಂದು ಬೇಸರಿಸಿತು. ಏನು ಮಾಡುವುದು ಎಂದು ಆಲೋಚಿಸಿ ಮರ ಹತ್ತುವ ಕೋಚಿಂಗ್ ಕ್ಲಾಸ್‍ಗೆ ಕಳುಹಿಸಲು ಆರಂಭಿಸಿತು. ಇದರ ನಡುವೆ ಫೈನಲ್ ಪರೀಕ್ಷೆಗಳು ನಡೆದವು. ಸಿಲೆಬಸ್‍ನಲ್ಲಿ ಹೆಚ್ಚು ಮರ ಹತ್ತುವುದಕ್ಕೆ ಸಂಬಂಧಿಸಿದ ವಿಷಯಗಳೇ ಇದ್ದುದರಿಂದ ಕೋತಿ ಮರಿಯೇ ಫಸ್ಟ್ ಬಂತು. ಆನೆ, ಜಿರಾಫೆ, ಒಂಟೆ ಮೊದಲಾದ ಪ್ರಾಣಿಗಳ ಮಕ್ಕಳು ಪಾಸ್ ಆಗಲೇ ಇಲ್ಲ.
ಶಾಲಾ ವಾರ್ಷಿಕೋತ್ಸವದ ದಿನ ಪ್ರಿನ್ಸಿಪಾಲ್ ಕೋತಿ ಮರಿಯನ್ನು ಕರೆದು ಪ್ರಶಸ್ತಿ ಪತ್ರ ನೀಡಿದರು. ಕೋತಿ ಮರಿ ಅಲ್ಲಿಂದಲೇ ಮರದಿಂದ ಮರಕ್ಕೆ ಜಿಗಿದು ಸಂಭ್ರಮ ಆಚರಿಸಿತು. ಹೆತ್ತವರಿಗೂ ಭಾರಿ ಖುಷಿ. ಆದರೆ, ಆನೆ, ಜಿರಾಫೆ, ಒಂಟೆಗಳಿಗೆ ತುಂಬ ಅಪಮಾನ ಆಯಿತು. ತಮ್ಮ ಮಕ್ಕಳ ಬಗ್ಗೆ ಬೇಜಾರಾಯಿತು.
ಜಿರಾಫೆ ತನ್ನ ಮಗುವನ್ನು ಕರೆದು ಹೇಳಿತು: ʻಏ ಮೂರ್ಖ, ನಾನು ನಿನ್ನನ್ನು ಎಷ್ಟೊಂದು ಕಷ್ಟಪಟ್ಟು ಒಳ್ಳೆಯ ಶಾಲೆಗೆ ಸೇರಿಸಿದೆ. ಅಲ್ಲಿ ಸಾಕಾಗಲ್ಲ ಅಂತ ಕೋಚಿಂಗ್‍ಗೂ ಹಾಕಿದೆ. ಆದರೂ ನಿನಗೆ ಮರ ಹತ್ತಲು ಆಗಲಿಲ್ಲ. ಆ ಕೋತಿ ಮರಿಯನ್ನು ನೋಡು.. ಅದು ಯಾವ ಕೋಚಿಂಗಿಗೂ ಹೋಗಿಲ್ಲ. ಮರ ಹತ್ತುವುದು ಅದಕ್ಕೊಂದು ಆಟ. ಅದೇ ರೀತಿ ನೀನೂ ಕಲಿಬೇಕಿತ್ತು. ನೀನು ಇದ್ದೀಯಲ್ಲಾ.. ವೇಸ್ಟ್ ಬಾಡಿ’ ಎಂದು ಸಿಟ್ಟು ಪ್ರದರ್ಶಿಸಿತು.
ಈ ನಡುವೆ, ಶಿಕ್ಷಕರು ಬಂದು ಮೀನಿನ ತಾಯಿಯ ಬಳಿ ಹೇಳಿದರು: ನಿಮ್ಮ ಮಗುವಿನ ಅಟೆಂಡೆನ್ಸ್ ಕಡಿಮೆ ಉಂಟು ಅಂತ. ಆಗ ಮೀನಿನ ಮರಿ ಅಮ್ಮನ ಹತ್ತಿರ ಹೇಳಿತು: ಅಮ್ಮಾ ಪ್ಲೀಸ್ ನನ್ನನ್ನು ಶಾಲೆಗೆ ಹೋಗು ಅಂತ ಒತ್ತಡ ಹಾಕಬೇಡ. ನಾನು ಶಾಲೆಗೆ ಹೋದ ಕೂಡಲೇ ಉಸಿರು ಕಟ್ಟಿದ ಹಾಗಾಗುತ್ತದಮ್ಮಾ.. ಹಾಗಾಗಿ ಕೆಲವೊಮ್ಮೆ ನಾನು ದಾರಿ ಮಧ್ಯದಿಂದಲೇ ವಾಪಸ್ ಬರೋದು.
ತಾಯಿ ಮೀನಿಗೆ ಸಿಟ್ಟು ನೆತ್ತಿಗೇರಿತು: ಇದು ಕಾಡಿನ ರಾಜನಾಗಿರುವ ಸಿಂಹ ಆರಂಭಿಸಿರುವ ಶಾಲೆ. ಇದು ಈ ಪ್ರದೇಶದ ಬೆಸ್ಟ್ ಸ್ಕೂಲ್. ನೀನು ಕೊಳದ ಸ್ಕೂಲ್‍ನಲ್ಲೇ ಕಲೀತೇನೆ ಅಂದರೆ ನಾನು ಬಿಡುವುದಿಲ್ಲ. ಸತ್ತರೂ ಸರಿ ಇಲ್ಲೇ ಓದಬೇಕು ಎಂದಿತು.
ಶಾಲಾ ವಾರ್ಷಿಕೋತ್ಸವ ಮುಗಿಸಿ ಈ ಎಲ್ಲಾ ಪ್ರಾಣಿಗಳು ತಮ್ಮ ಮಕ್ಕಳನ್ನು ನಾಲಾಯಕ್ ಎಂದು ಬೈಯುತ್ತಾ, ಹೊಡೆಯುತ್ತಾ ಮನೆಗೆ ಬರುತ್ತಿದ್ದವು. ಇದನ್ನೆಲ್ಲ ನೋಡುತ್ತಿದ್ದ ಭಾರಿ ವಯಸ್ಸಾದ ಆಲದ ಮರವೊಂದು ಅವರನ್ನು ಕೇಳಿತು: ಯಾಕ್ರಯ್ಯಾ.. ಮಕ್ಕಳಿಗೆ ಹೀಗೆ ಹೊಡೆಯುತ್ತಿದ್ದೀರಿ?
ಆಗ ಜಿರಾಫೆ, ಆನೆಗಳು ತಮ್ಮ ಮಕ್ಕಳ ವೈಫಲ್ಯದ ಕಥೆ ಹೇಳಿದವು.
ಆಗ ಮರ ಹೇಳಿತು: ನಿಮಗೇನಾದರೂ ತಲೆ ಕೆಟ್ಟಿದೆಯಾ? ಜಿರಾಫೆ.. ನಿನ್ನ ಮಗು ಯಾಕೆ ಮರ ಹತ್ತಬೇಕು ಮಾರಾಯ್ತಿ? ಸುಮ್ನೆ ತಲೆ ಎತ್ತಿದ್ರೆ ಸಾಕು ಬೇಕಾದ ಹಣ್ಣೆಲ್ಲ ಬಾಯಿಗೇ ಸಿಕ್ತದೆ.. ಏ ಆನೆ ರಾಣಿ ಎಂಥ ಕಥೆ ನಿಂದು? ನಿನ್ನ ಮಗಳು ಮರ ಯಾಕೆ ಹತ್ತಬೇಕು, ಕೊಂಬೆ ಮುರಿಯೋ ಶಕ್ತಿಯೇ ಅವಳಿಗಿದೆ. ಒಂದೇ ಏಟಲ್ಲಿ ಎಲ್ಲ ಹಣ್ಣೂ ಬೀಳ್ತದೆ. ಇವರೆಲ್ಲ ಮರ ಹತ್ತಿ ಏನಾಗ್ಲಿಕುಂಟು.. ಯಾರೋ ನಿಮ್ಮ ತಲೆ ತಿಂದಿದ್ದಾರೆ.. ನೀವು ನಿಮ್ಮ ಮಕ್ಕಳ ತಲೆ ತಿನ್ತಾ ಇದ್ದೀರಿ?
ಇದನ್ನೂ ಓದಿ | Motivational story | ನಾವು ಜೀವನದಲ್ಲಿ ಖುಷಿಯಾಗಿ ಇರಬೇಕು ಎಂದರೆ ಎಷ್ಟು ಜನ ಗೆಳೆಯರು ಬೇಕು?