Site icon Vistara News

Motivational story | ಕರ್ಣನೇ ಏಕೆ ಮಹಾ ದಾನಿ?: ಅರ್ಜುನನ ಪ್ರಶ್ನೆಗೆ ಕೃಷ್ಣ ನೀಡಿದ ಉತ್ತರ ನಮಗೂ ಹತ್ತಿರ

Krishna Arjuna

ಕೃಷ್ಣ ಭಟ್‌ ಅಳದಂಗಡಿ- Motivational story
ಒಂದು ಸಾರಿ ಕೃಷ್ಣ ಮತ್ತು ಅರ್ಜುನ ಜತೆಯಾಗಿ ಸುತ್ತಾಡುತ್ತಿದ್ದರು. ಆಗ ಅರ್ಜುನ ಹೇಳಿದ: ಕೃಷ್ಣಾ.. ನೀನು ಅನುಮತಿ ಕೊಟ್ಟರೆ ನಾನೊಂದು ಪ್ರಶ್ನೆ ಕೇಳಬೇಕು!
ಆಗ ಕೃಷ್ಣ ಹೇಳಿದ: ಊರಿದ್ದೆಲ್ಲ ಮಾತಾಡಲು ನಮಗೆ ಯಾವುದೇ ಮುಜುಗರ ಕಾಡುವುದಿಲ್ಲ. ಈಗ ಒಂದು ಪ್ರಶ್ನೆ ಕೇಳಲು ಅದೆಂಥ ಮುಜುಗರ? ಯಾವುದೇ ಅಂಜಿಕೆ ಇಲ್ಲದೆ ಕೇಳು.
ಅರ್ಜುನ: ಅಲ್ಲ ಕರ್ಣನನ್ನು ದಾನಶೂರ, ಮಹಾದಾನಿ ಅಂತೆಲ್ಲ ಹೇಳ್ತಾರಲ್ಲಾ.. ಏನು ಅವನನ್ನು ಬಿಟ್ಟರೆ ಜಗತ್ತಿನಲ್ಲಿ ಯಾರೂ ದಾನಿಗಳಿಲ್ವಾ?

ಕೃಷ್ಣನಿಗೆ ಅರ್ಜುನನ ಒಳಗಿರುವ ಮಾತ್ಸರ್ಯದ ಅರಿವಾಯಿತು. ಅವನಂದ: ಓ ಹಾಗೋ.. ಸಮಯ ಬಂದಾಗ ಉದಾಹರಣೆ ಸಹಿತ ವಿವರಿಸುತ್ತೇನೆ ಅಂತ.

ಹಾಗೆಯೇ ಮುಂದೆ ಸಾಗುತ್ತಿದ್ದಾಗ ಕೃಷ್ಣ ಕಣ್ಣು ಮಿಟುಕಿಸುವುದರೊಳಗೆ ಎದುರಿದ್ದ ಎರಡು ಬೆಟ್ಟಗಳು ಬಂಗಾರದ ಪರ್ವತಗಳಾದವು. ಅವನು ಅರ್ಜುನನಿಗೆ ಹೇಳಿದ: ನೋಡು ಆ ಬೆಟ್ಟಗಳನ್ನು ಚಿನ್ನದ ಪರ್ವತಗಳನ್ನಾಗಿ ಮಾಡಿದ್ದೇನೆ. ಈ ಚಿನ್ನವನ್ನು ನೀನು ಈ ಊರಿನ, ಆಸುಪಾಸಿನ ಜನರಿಗೆಲ್ಲ ಹಂಚಬಹುದು.

ಅರ್ಜುನನಿಗೆ ಖುಷಿ ಆಯಿತು. ಅವನು ಊರಿನೊಳಗೆ ಹೋಗಿ ಎಲ್ಲರಿಗೂ ಪರ್ವತದ ಬಳಿ ಬರುವಂತೆ ಸೂಚಿಸಿದ. ಎಲ್ಲರೂ ಸರತಿ ಸಾಲಿನಲ್ಲಿ ನಿಲ್ಲುವಂತೆ ಸೂಚಿಸಿದ. ಒಬ್ಬರಾದ ಮೇಲೆ ಒಬ್ಬರು ಬಂದು ಚಿನ್ನವನ್ನು ಪಡೆಯುವಂತೆ ಹೇಳಿದ.

ಹಾಗೆಯೇ ಜನರು ಸಂಭ್ರಮದಿಂದ ಬಂದರು. ಸರದಿ ಸಾಲಿನಲ್ಲಿ ನಿಂತರು. ಅರ್ಜುನ ಒಬ್ಬರಾದ ಬಳಿಕ ಒಬ್ಬರಿಗೆ ಚಿನ್ನವನ್ನು ತೆಗೆದುಕೊಟ್ಟ. ಜನರು ಅವನನ್ನು ಮಹಾದಾನಿ ಎಂದರು, ಹೊಗಳಿ ಅಟ್ಟಕ್ಕೇರಿಸಿದರು. ಅವನಿಗೆ ಒಳಗೊಳಗೇ ಪುಳಕ. ತಾನು ಕರ್ಣನನ್ನು ಮೀರಿಸುವ ಮಹಾದಾನಿ ಆಗುತ್ತೇನೆ ಎನ್ನುವ ಖುಷಿ.

ಎರಡು ರಾತ್ರಿ ಎರಡು ಹಗಲು ಅರ್ಜುನ ಚಿನ್ನವನ್ನು ಅಗೆದ, ಅಳೆದ, ಹಂಚಿದ.. ಅಗೆದ.. ಅಳೆದ.. ಹಂಚಿದ. ಆದರೆ, ಅಷ್ಟು ಹೊತ್ತಿಗೆ ಅವನಿಗೆ ಸುಸ್ತಾಗಿ ಹೋಯಿತು. ಬಂದ ಜನಗಳೇ ಮತ್ತೆ ಬಂದರು. ಆದರೂ ಬಂಗಾರದ ಬೆಟ್ಟದಲ್ಲಿ ಒಂದಿನಿತೂ ಚಿನ್ನ ಕಡಿಮೆ ಆಗಲಿಲ್ಲ.

ಕೊನೆಗೆ ಅರ್ಜುನ ಕೃಷ್ಣನಲ್ಲಿಗೆ ಬಂದು ಹೇಳಿದ: ತುಂಬಾ ಸುಸ್ತಾಗ್ತಿದೆ ಕೃಷ್ಣ. ಇನ್ನು ಆಗದು.
ಆಗ ಕೃಷ್ಣ ಹೇಳಿದ: ಸ್ವಲ್ಪ ಹೊತ್ತು ವಿಶ್ರಾಂತಿ ತಗೋ.
ಆಗ ಹೊರಗೆ ಸರದಿಯಲ್ಲಿ ನಿಂತವರಲ್ಲಿ ಅಸಮಾಧಾನ ಶುರುವಾಯಿತು.

ಈ ನಡುವೆ ಕೃಷ್ಣ ಕರ್ಣನನ್ನು ಕರೆದು ಚಿನ್ನವನ್ನು ಸೇರಿದ ಎಲ್ಲ ಗ್ರಾಮಸ್ಥರಿಗೆ ಹಂಚುವಂತೆ ಹೇಳಿದ. ಕರ್ಣ ಬಂದ. ʻʻಈ ಚಿನ್ನ ನಿಮಗೆ ಸೇರಿದ್ದು. ನಿಮ್ಮ ನಿಮ್ಮ ಅಗತ್ಯ ಎಷ್ಟಿದೆಯೋ ಅಷ್ಟನ್ನು ತೆಗೆದುಕೊಂಡು ಹೋಗಿ.. ಯಾರೂ ದುರಾಸೆಗೆ ಬೀಳಬೇಡಿʼʼ ಎಂದು ಹೇಳಿ ಅಲ್ಲಿಂದ ಹೊರಟೇ ಹೋದ!

ಹಾಗೆ ನಡೆದುಹೋದ ಕರ್ಣನನ್ನು ಒಂದು ಬಾರಿ, ಪಕ್ಕದಲ್ಲಿದ್ದ ಕೃಷ್ಣನನ್ನು ಒಂದು ಬಾರಿ ನೋಡಿದ ಅರ್ಜುನ. ಕೃಷ್ಣನಿಗೆ ಅರ್ಜುನನ ಗೊಂದಲದ ಅರಿವಾಯಿತು.

ಅವನು ಹೇಳಿದ: ಅರ್ಜುನಾ.. ನಾನು ನಿನ್ನಲ್ಲಿ ಚಿನ್ನವನ್ನು ಹಂಚಲು ಹೇಳಿದಾಗ ನೀನು ಗ್ರಾಮಸ್ಥರ ಅಗತ್ಯ ಎಷ್ಟು ಎನ್ನುವುದನ್ನು ನೀನು ಲೆಕ್ಕ ಮಾಡಲು ಹೋದೆ. ಇದು ಉದಾರವಾದ ದಾನ ಎಂದು ತಿಳಿದೂ, ಚಿನ್ನ ಬೇಕಾದಷ್ಟಿದೆ ಎಂದು ಗೊತ್ತಿದ್ದೂ ನೀನು ಲೆಕ್ಕಾಚಾರಕ್ಕೆ ಇಳಿದೆ. ಕರ್ಣ ಹಾಗೆ ಮಾಡಲಿಲ್ಲ. ಅವನು ಎಲ್ಲವನ್ನೂ ಗ್ರಾಮಸ್ಥರ ಪಾಲಿಗೆ ಬಿಟ್ಟು ಹೋದ. ಇನ್ನೊಬ್ಬನ ಅಗತ್ಯಗಳನ್ನು ಗಮನಿಸಲು ಹೋಗಲಿಲ್ಲ. ಅಗತ್ಯವಿರುವಷ್ಟು ತೆಗೆದುಕೊಳ್ಳಿ ಎಂದಷ್ಟೇ ಹೇಳಿದ. ಜನರು ತನ್ನ ಬಗ್ಗೆ ಆಡಬಹುದಾದ ಒಳ್ಳೆಯ ಮಾತುಗಳು, ಪ್ರಶಂಸೆಗೆ ಕಿವಿಗೊಡಲೂ ಅವನು ಅಲ್ಲಿ ನಿಲ್ಲಲಿಲ್ಲ. ದಾನ ಮಾಡುವಾಗ ಇಂಥ ವ್ಯಾಮೋಹಗಳು ಇರಬಾರದು. ಒಂದು ಕೈಲಿ ಕೊಟ್ಟಿದ್ದು ಇನ್ನೊಂದು ಕೈಗೆ ಗೊತ್ತಾಗಬಾರದು ಎನ್ನುವುದು ಇದಕ್ಕೇ. ಅದಕ್ಕಾಗಿಯೇ ಕರ್ಣ ಮಹಾದಾನಿ ಅನಿಸಿಕೊಳ್ಳುವುದು ಎಂದ.

ಅರ್ಜುನನಿಗೆ ತಾನು ಮಾಡಿದ ತಪ್ಪಿನ ಅರಿವಾಯಿತು.

ಇದನ್ನೂ ಓದಿ | Motivational story | Don’t worry ನಮ್ಮ ಅತಿ ದೊಡ್ಡ ದೌರ್ಬಲ್ಯವೇ ನಮ್ಮ ಅತಿ ದೊಡ್ಡ ಶಕ್ತಿಯೂ ಆದೀತು!

Exit mobile version