Site icon Vistara News

Motivational story | ಆ ಅಂಗಡಿಯಲ್ಲಿ ಹಣ್ಣುಗಳ ಬೆಲೆ ಅಷ್ಟೊಂದು ವ್ಯತ್ಯಾಸ ಯಾಕೆ? ತಿಳಿದಾಗ ಗ್ರಾಹಕ ಕಣ್ಣೀರಾದ!

fruits

ಕೃಷ್ಣ ಭಟ್‌ ಅಳದಂಗಡಿ- Motivational story
ಅದೊಂದು ನಗರದ ಮಧ್ಯದಲ್ಲಿರುವ ಹಣ್ಣಿನ ಅಂಗಡಿ. ಬಗೆಬಗೆಯ ಹಣ್ಣುಗಳನ್ನು ಮಾರುತ್ತಿದ್ದ ಮಾಲೀಕ. ಅದೊಂದು ದಿನ ಒಬ್ಬ ಗ್ರಾಹಕ ಬಂದು ಕೇಳಿದ: ಸ್ವಾಮೀ.. ಬಾಳೆ ಹಣ್ಣಿಗೆ ಎಷ್ಟು? ಸೇಬಿಗೆ ಎಷ್ಟು?
ಅಂಗಡಿಯವನು ಹೇಳಿದ: ಬಾಳೆಹಣ್ಣಿಗೆ ಕೇಜಿ ೩೦ ರೂ., ಸೇಬಿಗೆ ೧೦೦ ರೂ.

ಅಷ್ಟು ಹೊತ್ತಿಗೆ ಒಬ್ಬ ಮಹಿಳೆ ಅಲ್ಲಿಗೆ ಬಂದರು. ಅವರೂ ಕೇಳಿದ್ದು ಅದೇ ಪ್ರಶ್ನೆ: ಅಣ್ಣಾ ಬಾಳೆ ಹಣ್ಣು, ಸೇಬಿಗೆ ಎಷ್ಟು ರೇಟು?
ಅಂಗಡಿಯವನು ಹೇಳಿದ: ಬಾಳೆ ಹಣ್ಣಿಗೆ ಕೆಜಿಗೆ ೧೫ ರೂ., ಸೇಬಿಗೆ ೫೦ ರೂ.

ಇದನ್ನು ಕೇಳಿ ಮೊದಲು ದರ ವಿಚಾರಣೆ ಮಾಡಿದ ಗ್ರಾಹಕನಿಗೆ ಉರಿದುಹೋಯ್ದು. ಅವನು ಮಾಲೀಕನನ್ನು ಗುರಾಯಿಸುತ್ತಾ ನೋಡಿದ. ಅದನ್ನು ಗಮನಿಸಿದ ಅಂಗಡಿಯವನು.. ಪ್ಲೀಸ್‌ ಸ್ವಲ್ಪ ಇರಿ ಸರ್‌ ಅಂತ ಸನ್ನೆಯಲ್ಲೇ ಹೇಳಿದ.

ಈ ನಡುವೆ ಮಹಿಳೆ ಒಂದಷ್ಟು ಹಣ್ಣನ್ನು ಖರೀದಿಸಿದರು ಮತ್ತು ಹಣ ಕೊಟ್ಟು ತುಂಬ ಖುಷಿಯಿಂದ ಹೊರಟರು. ಹೋಗುತ್ತಾ ಹೇಳಿಕೊಂಡು ಹೋದರು: ದೇವ್ರೇ ಒಳ್ಳೆದಾಗಲಪ್ಪ.. ಇವತ್ತು ಕಡಿಮೆ ರೇಟಿಗೆ ಹಣ್ಣು ಸಿಕ್ಕಿತು. ನನ್ನ ಮಕ್ಕಳು ತಿಂದು ಖುಷಿಪಡ್ಲಿ.

ಮಹಿಳೆ ಆಚೆ ಹೋಗುತ್ತಲೇ ಅಂಗಡಿಯವನು ಗ್ರಾಹಕನ ಹತ್ತಿರ ಹೇಳಿದ: ಸ್ವಾಮೀ ದೇವರಾಣೆ ಹೇಳ್ತೇನೆ.. ನಿಮಗೆ ನಾನು ಮೋಸ ಮಾಡ್ಲಿಲ್ಲ. ನಿಮಗೆ ಹೇಳಿದ್ದೇ ನಿಜವಾದ ರೇಟು.
ಸ್ವಲ್ಪ ಹೊತ್ತು ಮೌನವಾಗಿ ಮಾತು ಮುಂದುವರಿಸಿದ: ಈಗ ನೀವು ನೋಡಿದಿರಲ್ಲ.. ಆ ಹೆಣ್ಮಗಳು ಒಬ್ಬ ವಿಧವೆ. ಮನೆಯಲ್ಲಿ ನಾಲ್ಕು ಸಣ್ಣ ಸಣ್ಣ ಮಕ್ಕಳಿದ್ದಾರೆ. ನಮ್ಮ ಮನೆಯಿರುವ ಬೀದಿಯ ಕೊನೆಯಲ್ಲಿ ಇರುವುದು. ಆಕೆ ತುಂಬ ಕಷ್ಟದಲ್ಲಿದ್ದಾರೆ. ಅವರಿಗೆ ಇರುವುದು ಸಣ್ಣ ಕೆಲಸ. ನಾಲ್ಕು ಮಕ್ಕಳನ್ನು ಸಾಕಬೇಕು. ಹಾಗಂತ, ಹಿಂದೆ ನಾನೊಮ್ಮೆ ಅವರಿಗೆ ಹೆಲ್ಪ್‌ ಮಾಡಲು ಮುಂದಾಗಿದ್ದೆ. ಆದರೆ ಅವರು ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ. ಬಹುಶಃ ಅವರಿಗೆ ಕಹಿ ಅನುಭವಗಳಾಗಿರಬೇಕು.

ಹಾಗಿದ್ದರೆ ನಾನು ಅವರಿಗೆ ಹೇಗೆ ಸಹಾಯ ಮಾಡಬಹುದು ಎಂದು ಯೋಚನೆ ಮಾಡಿದೆ. ನನ್ನ ನೆಲೆಯಲ್ಲಿ ನನಗೆ ಹೊಳೆದದ್ದು ಇಷ್ಟು. ಅವರು ಯಾವಾಗೆಲ್ಲ ಹಣ್ಣು ಖರೀದಿಸಲು ಬರ್ತಾರೋ ಆವಾಗಲೆಲ್ಲ.. ನನ್ನ ಲಾಭದ ಭಾಗವನ್ನು ಬಿಡುವುದು ಮಾತ್ರವಲ್ಲ, ದರವನ್ನು ಅರ್ಧಕ್ಕೆ ಅರ್ಧ ಮಾಡಿ ನೀಡತೊಡಗಿದೆ. ಅವರು ಕಷ್ಟದಲ್ಲಿದ್ದರೂ ಸ್ವಾಭಿಮಾನಿ. ಇನ್ನೊಬ್ಬರ ಸಹಾಯ ಪಡೆದುಕೊಳ್ಳುವಷ್ಟು ಅಸಹಾಯಕಳು ಅಂತ ಅವರಿಗೆ ಅನಿಸಬಾರದು ಅಂತ ಯೋಚನೆ ಮಾಡಿದೆ. ನಾನು ಇಷ್ಟು ಮಾತ್ರ ಮಾಡಬಲ್ಲೆ..

ಇನ್ನೊಂದು ವಿಷಯ ಇದನ್ನು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ ಅಣ್ಣ.. ಯಾವಾಗ್ಯಾವಾಗ ಹೆಣ್ಣು ಮಗಳು ಬಂದು ಖರೀದಿ ಮಾಡ್ತಾರೋ ಆವತ್ತಿನ ದಿನ ನನ್ನ ಅಂಗಡಿಯ ವ್ಯಾಪಾರ ಹೆಚ್ಚಾಗ್ತದೆ. ಅವರಿಗೆ ಕಡಿಮೆ ದರಕ್ಕೆ ಹಣ್ಣು ಕೊಟ್ಟು ನನಗೆ ಆಗುವ ನಷ್ಟವನ್ನು ಮೀರಿ ಹತ್ತು ಪಟ್ಟು ಲಾಭ ಆವತ್ತು ಆಗ್ತದೆ. ಮತ್ತೇನು ಬೇಕು ನಂಗೆ..

ಇದಿಷ್ಟನ್ನು ಕೇಳಿದ ಗ್ರಾಹಕನ ಕಣ್ಣಲ್ಲಿ ಸಣ್ಣಗೆ ನೀರಿಳಿಯಿತು. ಅವನು ಅಂಗಡಿಯವನನ್ನು ಹಿತವಾಗಿ ತಬ್ಬಿದ. ಏನೂ ಮಾತನಾಡದೆ ಬೇಕಾದ ಹಣ್ಣು ಖರೀದಿಸಿ.. ದುಡ್ಡು ಕೊಟ್ಟು ಹೊರಟೇ ಹೋದ.. ಅಂಗಡಿಯವನು ೨೦ ರೂ. ಚಿಲ್ಲರೆ ವಾಪಸ್‌ ಕೊಡಬೇಕಾಗಿತ್ತು. ಅವನು ಕರೆದು ಹೇಳಿದ.. ಅಣ್ಣಾ ಚೇಂಜ್‌ ತಗೊಳ್ಳಿ.

ಗ್ರಾಹಕ ದೂರದಿಂದಲೇ ಹೇಳಿದ: ಚೇಂಜ್‌ ನೀವೇ ಇಟ್ಕೊಳ್ಳಿ..

ಇದನ್ನೂ ಓದಿ | Motivational story | ಬೀಜ ಒಂದೇ ಇರಬಹುದು, ಅದಕ್ಕೆ ಲಕ್ಷಾಂತರ ಬೀಜ ಸೃಷ್ಟಿಸುವ ತಾಕತ್ತಿದೆ!

Exit mobile version