Site icon Vistara News

Motivational story: ಕಿಟಕಿ ಆಚೆಗೆ ಇದ್ದದ್ದು ಕತ್ತಲೆ! ಆದರೆ, ಇವರಿಗೆ ಬೆಳಕು ತುಂಬಿತ್ತು!

motivational story

ಕೃಷ್ಣ ಭಟ್‌ ಅಳದಂಗಡಿ- Motivational story
ಅವರು ಆಸ್ಪತ್ರೆಯ ಬೆಡ್‍ನಲ್ಲಿ ಜೀವಂತ ಶವದಂತೆ ಮಲಗಿದ್ದರು. ಕಾಲು, ಕೈಗಳೆಲ್ಲ ಸ್ವಾಧೀನ ಕಳೆದುಕೊಂಡಿದ್ದವು. ಯಾವ ಕಡೆಗೂ ಹೊರಳುವಂತಿಲ್ಲ, ಏಳುವಂತಿಲ್ಲ. ತನ್ನ ಬಳಿ ಬರುವ ನರ್ಸ್‌ಗೆ ಅವರು ಹೇಳುತ್ತಿದ್ದುದು ಒಂದೇ ಮಾತು: ಯಾವ ಸುಖಕ್ಕಾಗಿ ನಾನು ಬದುಕಬೇಕು? ಒಂದು ಇಂಜೆಕ್ಷನ್ ಕೊಟ್ಟು ಸಾಯಿಸಿಬಿಡು ನನ್ನನ್ನು!

ಅವರ ಪಕ್ಕದ ಬೆಡ್‍ನಲ್ಲಿ ಇನ್ನೊಬ್ಬ ರೋಗಿ ಇದ್ದರು. ಅವರು ಪ್ರತಿದಿನ ಬೆಳಗ್ಗೆ ಎದ್ದು ಕಿಟಕಿ ತೆರೆದು ಅದರಿಂದಾಚೆಗೆ ಏನು ನಡೆಯುತ್ತಿದೆ ಎಂದು ಚಂದ ಮಾಡಿ ವಿವರಿಸಿ  ಹೇಳುತ್ತಿದ್ದರು. ವ್ಹಾ ಅಲ್ಲೊಂದು ಸುಂದರವಾದ ಬೀಚು, ಅಲ್ಲಿ ಆಡುವ ಮಕ್ಕಳು, ಒಂದು ಮರ, ಹಕ್ಕಿಗಳ ಆಟ, ರಸ್ತೆಯಲ್ಲಿ ಓಡಾಡುವ ಜನ.. ಹೀಗೆ ಎಲ್ಲವನ್ನೂ ವಿವರಿಸುತ್ತಿದ್ದರು.

ಪ್ಯಾರಾಲಿಸಿಸ್‍ಗೆ ಒಳಗಾದ ವ್ಯಕ್ತಿಗೆ ಈ ಮಾತುಗಳು ಖುಷಿಕೊಡುತ್ತಿದ್ದವು. ಹಾಗಾಗಿ ಯಾವಾಗ ಬೆಳಗಾಗುತ್ತದೋ, ಆ ಪ್ರಕೃತಿಯ ಸೌಂದರ್ಯದ ವಿವರಣೆ ಯಾವಾಗ ಕೇಳುತ್ತೇನೋ ಎಂದು ಹಾತೊರೆಯುತ್ತಿದ್ದರು. ಅವರಲ್ಲೊಂದು ಜೀವ ಸಂಚಾರವಾಗಿತ್ತು.

ಅದೊಂದು ದಿನ ಬೆಳಗ್ಗೆ ಎದ್ದಾಗ  ಪಕ್ಕದ ಬೆಡ್ ಖಾಲಿಯಾಗಿತ್ತು. ನರ್ಸ್‌ ನ್ನು ಕರೆದು ಕೇಳಿದರು: ಅವರು ಎಲ್ಲಿ ಹೋದರು?
ನರ್ಸ್ ಹೇಳಿದಳು: ಅವರು ನಿನ್ನೆ ರಾತ್ರಿ ತೀರಿಕೊಂಡರು.
ಅಷ್ಟು ಹೊತ್ತಿಗೆ ಈ ವ್ಯಕ್ತಿಗೆ ಬಂದ ಜೀವವೂ ಹೋದಂತಾಯಿತು. ಹೊರ ಪ್ರಪಂಚಕ್ಕೆ ಕಿಂಡಿಯಾಗಿದ್ದ ನನ್ನ ಗೆಳೆಯನೇ ಹೋದ ಮೇಲೆ ನನಗೆ ಇನ್ನೇನು ಉಳೀತು ಅಂತ ದುಃಖಿತರಾದರು. ಆದರೂ ಸಾಯುವ ಮುನ್ನ ಆ ಕಿಟಕಿ ಮೂಲಕ ಗೆಳೆಯ ವರ್ಣಿಸುತ್ತಿದ್ದ ಸುಂದರ ಜಗತ್ತನ್ನೊಮ್ಮೆ ನೋಡೇ ಬಿಡಬೇಕು ಎಂದು ನಿರ್ಣಯಿಸಿದರು. ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಎದ್ದೇಳಲು ಯತ್ನಿಸಿದರು. ನೆಲಕ್ಕೆ ಬಿದ್ದರು. ಅಲ್ಲಿಂದ ತೆವಳುತ್ತಲೇ ಹೋಗಿ ಪಕ್ಕದ ಬೆಡ್ಡಿನಾಚೆ ಇದ್ದ ಕಿಟಕಿಯನ್ನು ಗಟ್ಟಿಯಾಗಿ ಹಿಡಿದು ನಿಂತರು.

ಇದನ್ನೂ ಓದಿ: Motivational story: ಬಡತನ ತೋರಿಸಲು ಹೋದರೆ ಮಗನಿಗೆ ಕಂಡದ್ದು ಶ್ರೀಮಂತಿಕೆ!

ಹೊರಗೆ ನೋಡುತ್ತಲೇ ಒಮ್ಮೆಲೇ ನರ್ಸನ್ನು ಕೂಗಿ ಕರೆದರು. “ʻʻಏನಿದು? ನನ್ನ ಗೆಳೆಯ ಹೇಳುತ್ತಿದ್ದ.. ಇಲ್ಲಿ ಬೀಚು ಕಾಣುತ್ತದೆ, ಮರ ಕಾಣಿಸುತ್ತದೆ, ಮಕ್ಕಳು ಕಾಣಿಸುತ್ತಾರೆ ಅಂತ. ಇಲ್ಲಿ ನೋಡಿದರೆ ಬರೀ ಗೋಡೆ ಇದೆ. ಬರೀ ಸುಳ್ಳ ಅವನು,” ಅಂತ ಕಿರುಚಿದರು.

ನರ್ಸ್ ಶಾಂತವಾಗಿ ಹೇಳಿದಳು: ಅವರ್ಯಾಕೆ ಸುಳ್ಳು ಹೇಳಿದರೋ ಗೊತ್ತಿಲ್ಲ. ಆದರೆ, ಅವರ ಈ ಮಾತುಗಳಿಂದಾಗಿಯೇ ನೀವು ಇವತ್ತು ಅಸಾಧ್ಯವನ್ನು ಸಾಧಿಸಿದ್ದೀರಿ. ಯಾವ ಕಾರಣಕ್ಕೂ ನೀವು ನಿಮ್ಮ ಕಾಲ ಮೇಲೆ ನಿಲ್ಲುವುದು ಸಾಧ್ಯವಿರಲಿಲ್ಲ. ಆದರೆ, ಅವರ ಮಾತು ನಿಮ್ಮನ್ನು ಈ ಸ್ಥಿತಿಗೆ ತಂದಿದೆ. ಮಾತು ಯಾರನ್ನಾದರೂ ಕೆಡವಬಲ್ಲದು ಸರ್, ಯಾರನ್ನು ಬೇಕಾದರೂ ಎದ್ದು ನಿಲ್ಲಿಸಬಲ್ಲುದು.. ಅಷ್ಟೇ ಸರ್.

ಇದನ್ನೂ ಓದಿ: motivational story: ನಾವಾಡಿದ ಮಾತೇ ನಮಗೆ ತಿರುಗಿ ಕೇಳೋದು ಮಗಾ..!

Exit mobile version