ಕೃಷ್ಣ ಭಟ್ ಅಳದಂಗಡಿ- Motivational story
ಒಂದೂರಲ್ಲಿ ಒಬ್ಬ ಆಲಸಿ ಇದ್ದ. ಅವನಿಗೆ ಕೆಲಸ ಮಾಡೋದು ಅಂದ್ರೆ ಅಲರ್ಜಿ. ಬದುಕಲು ಸುಲಭದ ದಾರಿಗಳನ್ನು ಹುಡುಕೋದ್ರಲ್ಲೇ ಖುಷಿ ಕಾಣ್ತಿದ್ದ. ಒಂದು ದಿನ ಅವನು ನಡೆದುಕೊಂಡು ಹೋಗುತ್ತಿದ್ದಾಗ ಪಕ್ಕದಲ್ಲೊಂದು ಹಣ್ಣಿನ ತೋಟ ಕಂಡಿತು. ಯಾರೂ ನೋಡ್ತಿಲ್ಲ ಅಂತ ಖಾತ್ರಿ ಮಾಡಿಕೊಂಡು ಒಳಗೆ ಹೋದ. ಇನ್ನೇನು ಹಣ್ಣು ಕೀಳಬೇಕು ಎನ್ನುವಷ್ಟರಲ್ಲಿ ಮಾಲೀಕ ನೋಡಿಬಿಟ್ಟ. ಹಿಡಿದುಕೊಳ್ಳಲೆಂದು ಓಡಿಬಂದ. ಆದರೆ ಈ ಮನುಷ್ಯ ಒಂದೇ ಓಟದಲ್ಲಿ ತಪ್ಪಿಸಿಕೊಂಡ. ಆದರೆ, ಓಡುವ ಭರದಲ್ಲಿ ದಾರಿ ತಪ್ಪಿ ಒಂದು ಕಾಡು ಪ್ರವೇಶಿಸಿಬಿಟ್ಟ!
ಕತ್ತಲಾಗಲು ಶುರುವಾಯಿತು. ಇನ್ನು ನಿಧಾನಕ್ಕೆ ಊರಿಗೆ ಹೋಗೋಣ ಅಂತ ಹೊರಟ. ಆಗ ಒಂದು ನರಿ ತೆವಳಿಕೊಂಡು ಹೋಗುತ್ತಿರುವುದು ಅವನಿಗೆ ಕಂಡಿತು. ಅದಕ್ಕೆ ಎರಡೇ ಕಾಲುಗಳಿದ್ದವು. ಛೆ.. ಈ ನರಿ ಹೊಟ್ಟೆಗೇನು ಮಾಡುತ್ತದೋ, ಬೇಟೆ ಹೇಗೆ ಆಡ್ತದೋ, ವೈರಿಗಳಿಂದ ಹೇಗೆ ತಪ್ಪಿಸಿಕೊಳ್ಳುತ್ತೋ ಅಂತ ಆತಂಕಗೊಂಡ.
ಅಷ್ಟು ಹೊತ್ತಿಗೆ ಒಂದು ಸಿಂಹ ಅವನಿದ್ದ ಕಡೆಗೆ ಬರುತ್ತಿರುವುದು ಕಂಡಿತು. ಇವನು ಛಂಗನೆ ಜಿಗಿದು ಒಂದು ಮರವನ್ನು ಹತ್ತಿಕೊಂಡ. ಈಗ ಸಿಂಹ ನರಿಯನ್ನು ಹಿಡಿದು ತಿನ್ನುತ್ತದೆ ಅಂದುಕೊಂಡ. ಆದರೆ, ಆಶ್ಚರ್ಯ ಎಂಬಂತೆ ಸಿಂಹ ನರಿಯನ್ನು ಕೊಲ್ಲಲಿಲ್ಲ. ಬದಲಾಗಿ, ತಾನು ಬಾಯಲ್ಲಿ ಕಚ್ಚಿಕೊಂಡಿದ್ದ ಒಂದು ತುಂಡು ಮೂಳೆಯನ್ನು ಅದರ ಮುಂದಿಟ್ಟು ಸುಮ್ಮನೆ ಹೋಯಿತು.
ಆಗ ಅವನಿಗೆ ಒಂದು ಸತ್ಯ ಹೊಳೆಯಿತು. ದೇವರು ಈ ಜಗತ್ತಿನ ಸೃಷ್ಟಿಕರ್ತ. ಅವನು ಯಾವ ಕಾರಣಕ್ಕೂ ಯಾವ ಪ್ರಾಣಿಯನ್ನೂ ಹಸಿವಿನಿಂದ ಸಾಯೋ ಹಾಗೆ ಮಾಡೊಲ್ಲ. ಕಾಲು ಕಳೆದುಕೊಂಡ ನರಿಗೆ ಸಿಂಹದ ಮೂಲಕ ಆಹಾರ ಕೊಟ್ಟ ಅಂದುಕೊಂಡ. ಅದೇ ಹೊತ್ತಿಗೆ ಅವನಿಗೆ ಇನ್ನೊಂದು ಸಂಗತಿ ಹೊಳೆಯಿತು.
ʻಓ ನಾನೂ ದೇವರ ಸೃಷ್ಟಿಯೇ ಅಲ್ಲವೆ? ಅವನಲ್ಲಿ ನನ್ನ ಹೊಟ್ಟೆ ತುಂಬಿಸುವ ಒಂದು ದಾರಿ ಇರಲೇಬೇಕಲ್ಲ,’ ಅಂದುಕೊಂಡ. ಹೀಗೆ ಯೋಚಿಸುತ್ತಾ ಗ್ರಾಮದ ಒಳಗಿನ ಒಂದು ಮರದ ಬುಡಕ್ಕೆ ಬಂದು ಕುಳಿತುಕೊಂಡ. ಕೆಲವು ದಿನಗಳು ಕಳೆದವು. ಇವನ ನಿರೀಕ್ಷೆ ನಿಜವಾಗಲಿಲ್ಲ. ಯಾರು ಕೂಡಾ ಆಹಾರ ತಂದುಕೊಡಲಿಲ್ಲ.
ಅಷ್ಟು ಹೊತ್ತಿಗೆ ಒಬ್ಬ ಸನ್ಯಾಸಿ ಆ ದಾರಿಯಾಗಿ ಬಂದ. ಅವನಲ್ಲಿ ತನ್ನ ಕಥೆ ಹೇಳಿಕೊಂಡ ವ್ಯಕ್ತಿ: ʻದೇವರು ದಯಾಮಯ ಎನ್ನುವುದೆಲ್ಲ ಸುಳ್ಳು. ನಿಜಕ್ಕೂ ಒಳ್ಳೆಯವನಾಗಿದ್ದರೆ ನನಗೆ ಆಹಾರ ಕೊಡಿಸಬೇಕಿತ್ತಲ್ವಾ? ಎಂದ.
ಆಗ ಸನ್ಯಾಸಿ ಅವನಿಗೆ ಒಂದಿಷ್ಟು ಆಹಾರ ಮತ್ತು ನೀರು ಕೊಟ್ಟು ಹೇಳಿದ: ಖಂಡಿತವಾಗಿಯೂ ಮಗನೆ. ದೇವರು ಜಗತ್ತಿನ ಸರ್ವರಿಗೂ ಒಂದೊಂದು ದಾರಿ ತೋರಿಸಿಯೇ ತೋರಿಸುತ್ತಾನೆ. ನೀನು ಕೂಡಾ ಅವನ ಮಗನೇ ಅಲ್ಲವೆ? ನೀನು ಅವನ ಸಂಜ್ಞೆಯನ್ನು ತಪ್ಪಾಗಿ ಭಾವಿಸಿರುವೆ. ಅವನು ನಿನ್ನನ್ನು ಕಾಲು ಮುರಿದುಕೊಂಡ ನರಿಯಾಗಿ ನೋಡಲಿಲ್ಲ. ನೀನು ಸಿಂಹದ ಹಾಗಿರಬೇಕು ಎಂದು ಯೋಚನೆ ಮಾಡಿರಬೇಕು.
ವ್ಯಕ್ತಿಗೆ ಆಗ ಜ್ಞಾನೋದಯವಾಯಿತು. ಹೌದಲ್ಲ.. ನನಗೆ ಬೇರೆಯವರಿಗೆ ಕೊಡುವ ಶಕ್ತಿ ಇರುವಾಗ ಇನ್ನೊಬ್ಬರ ಮುಂದೆ ಕೈಚಾಚಬೇಕು, ಅಥವಾ ಕದಿಯಬೇಕು.!?
ಇದನ್ನೂ ಓದಿ | Motivational story | ಉಪ್ಪುಪ್ಪಾದ ಷರಬತ್ತು ಮತ್ತು ವಿಷಾದ ತುಂಬಿದ ಹುಡುಗ!