ಕೃಷ್ಣ ಭಟ್ ಅಳದಂಗಡಿ- Motivational story
ಅದೊಂದು ದೊಡ್ಡ ಕಂಪನಿ. ಮ್ಯಾನೇಜರ್ ಹುದ್ದೆಗೆ ಅರ್ಜಿ ಕರೆದಿದ್ದರು. ಆ ಯುವಕ ಎಲ್ಲ ರೀತಿಯ ಪರೀಕ್ಷೆಗಳು ಮತ್ತು ಆರಂಭಿಕ ಸಂದರ್ಶನದಲ್ಲಿ ಪಾಸಾಗಿ ಫೈನಲ್ ಇಂಟರ್ ವ್ಯೂಗೆ ಬಂದು ನಿಂತಿದ್ದ. ಸಂದರ್ಶನ ಮಾಡಬೇಕಿದ್ದವರು ಆ ಕಂಪನಿಯ ನಿರ್ದೇಶಕರು.
ಆವತ್ತು ಯುವಕ ಒಳ್ಳೆಯ ಡ್ರೆಸ್ ಧರಿಸಿ ಸಂದರ್ಶನಕ್ಕೆ ಹೋಗಿದ್ದ. ನಿರ್ದೇಶಕರು ಅವನ ರೆಸ್ಯುಮೆಯನ್ನು ನೋಡಿದರು. ವ್ಹಾ ಎಕ್ಸಲೆಂಟ್ ಎಂಬ ಉದ್ಗಾರ ಅವರ ಬಾಯಿಯಿಂದಲೇ ಬಂತು. ಅಂಥ ಉತ್ತಮ ಶೈಕ್ಷಣಿಕ ಸಾಧನೆ ಅವನದಾಗಿತ್ತು.
ನಿರ್ದೇಶಕರು ಯುವಕನನ್ನು ಕೇಳಿದರು: ನಿಮಗೆ ಯಾವುದಾದರೂ ಸ್ಕಾಲರ್ ಷಿಪ್ ಸಿಕ್ಕಿತ್ತಾ? ಯುವಕ ಇಲ್ಲ ಎಂದ. ಹಾಗಾದ್ರೆ ನಿಮ್ಮ ಫೀಸ್ ಎಲ್ಲ ಕಟ್ಟಿದ್ದು ಯಾರು ಎಂದು ಕೇಳಿದರು. ನನ್ನ ಹೆತ್ತವರೇ ಸಾರ್ ಅಂತ ಯುವಕ ಉತ್ತರಿಸಿದ. ನಿಮ್ಮ ಹೆತ್ತವರು ಏನು ಕೆಲಸ ಮಾಡುತ್ತಾರೆ?-ನಿರ್ದೇಶಕರು ಕೇಳಿದರು. `ನನ್ನ ಹೆತ್ತವರು ಬಟ್ಟೆ ಒಗೆಯುವ ಧೋಬಿಗಳು ಸರ್’ ಅಂತ ಯುವಕ ಹೇಳಿದ.
ನಿರ್ದೇಶಕರು ಕುತೂಹಲದಿಂದ ಕೇಳಿದರು: ಒಮ್ಮೆ ನಿಮ್ಮ ಕೈಯನ್ನು ತೋರಿಸಿ. ಯುವಕ ತೋರಿಸಿದ. ಅವನ ಕೈಗಳು ತುಂಬ ಮೃದುವಾಗಿರುವುದನ್ನು ಗಮನಿಸಿದರು. ಬಳಿಕ ಕೇಳಿದರು: ಯಾವತ್ತಾದರೂ ನೀವು ನಿಮ್ಮ ಹೆತ್ತವರಿಗೆ ಅವರ ಕೆಲಸದಲ್ಲಿ ಸಹಾಯ ಮಾಡಿದ್ದೀರಾ? ಯುವಕ ಪ್ರಾಮಾಣಿಕವಾಗಿಯೇ ಹೇಳಿದ: ಇಲ್ಲ ಸರ್, ಅವರು ಅದಕ್ಕೆ ಅವಕಾಶ ಕೊಡಲೇ ಇಲ್ಲ. ನೀನು ಓದ್ತಾ ಇರಬೇಕು ಅಂತಾ ಇದ್ದರು.
ನಿರ್ದೇಶಕರು ಯುವಕನಿಗೆ ಹೇಳಿದರು: ಒಂದು ಕೆಲಸ ಮಾಡ್ತೀರಾ? ಇವತ್ತು ನೀವು ಮನೆಗೆ ಹೋದ ಮೇಲೆ ಅವರ ಕೈಗಳನ್ನೊಮ್ಮೆ ನೀರಿನಲ್ಲಿ ತೊಳೆಯಬೇಕು. ನಾಳೆ ಮತ್ತೆ ಬಂದು ನನ್ನನ್ನು ಕಾಣಿ.
ಯುವಕ ಮನೆಗೆ ಹೋದವನೇ ಅಪ್ಪ, ಅಮ್ಮ ಇಬ್ಬರನ್ನೂ ಕೂರಿಸಿ, ನಿಮ್ಮ ಕೈಗಳನ್ನು ತೊಳಿಬೇಕು ನಾನು ಅಂದ. ಇಬ್ಬರಿಗೂ ಇದೇನಪ್ಪಾ ಹೀಗಾಡ್ತಾನೆ ಅಂತ ಆಶ್ಚರ್ಯ ಆಯ್ತು. ಆದರೂ ಕೈಗಳನ್ನು ಮುಂದೊಡ್ಡಿದರು.
ಯುವಕ ಕೈಗಳನ್ನು ತೊಳೆಯತೊಡಗಿದ. ನಿಜವೆಂದರೆ, ಅದೇ ಮೊದಲ ಸಾರಿ ಅವರು ಅಪ್ಪ-ಅಮ್ಮನ ಕೈಗಳನ್ನು ಮುಟ್ಟಿದ್ದ. ಅವರಿಬ್ಬರ ಕೈಗಳೂ ಸಿಕ್ಕಾಪಟ್ಟೆ ದೊರಗಾಗಿದ್ದವು. ಸಾಬೂನಿನ ನೀರು, ಹಿಂಡುವ ಕಷ್ಟಗಳು ಆ ಕೈಗಳನ್ನು ಎಷ್ಟು ಹೈರಾಣ ಮಾಡಿದ್ದವೆಂದರೆ ಅಲ್ಲಲ್ಲಿ ಗಾಯಗಳಾಗಿದ್ದವು. ಅದಕ್ಕೆ ನೀರು ಬಿದ್ದಾಗ ಆ.. ಆಂತ ಕೈ ಹಿಂದಕ್ಕೆಳೆದುಕೊಳ್ಳುತ್ತಿದ್ದರು. ಯುವಕನಿಗೆ ಕಣ್ಣಲ್ಲಿ ನೀರೇ ಬಂತು.
ಅವನಿಗೆ ಅರಿವಾಯಿತು… ನನ್ನ ಬದುಕನ್ನು ಕಟ್ಟಿದ್ದು ಇದೇ ಕೈಗಳು ಅಂತ. ಆವತ್ತು ರಾತ್ರಿ ಅವನು ತುಂಬ ಹೊತ್ತು ಅಪ್ಪ, ಅಮ್ಮನನ್ನು ಕುಳ್ಳಿರಿಸಿಕೊಂಡು ಮಾತನಾಡಿದ. ನನಗಾಗಿ ಎಷ್ಟೆಲ್ಲ ಕಷ್ಟಪಟ್ಟಿದ್ದೀರಲ್ಲಾ ಅಂತ ಕಣ್ಣೀರೂ ಹಾಕಿದ.
ಮರುದಿನ ಮುಂಜಾನೆ ಅವನು ಮತ್ತೆ ಕಂಪನಿಯ ಕಚೇರಿಯ ಬಾಗಿಲಲ್ಲಿ ನಿಂತಿದ್ದ. ಎದುರು ಕುಳ್ಳಿರಿಸಿಕೊಂಡ ನಿರ್ದೇಶಕರು: ನಿನ್ನೆ ರಾತ್ರಿ ಮನೆಯಲ್ಲಿ ಏನಾಯಿತು ಅಂತ ಹೇಳಬಹುದಾ? ಅಂತ ಕೇಳಿದರು.
ಯುವಕ ಹೇಳಿದ: ನಾನು ಅಪ್ಪ-ಅಮ್ಮನ ಕೈಗಳನ್ನು ತೊಳೆದೆ. ಬಾಕಿ ಉಳಿದಿದ್ದ ಎಲ್ಲ ಬಟ್ಟೆಗಳನ್ನು ಒಗೆದು ಒಣಗಲು ಹಾಕಿದೆ. ನನ್ನ ವಿದ್ಯಾಭ್ಯಾಸಕ್ಕಾಗಿ ನೀವು ಎಷ್ಟೊಂದು ಕಷ್ಟಪಟ್ಟಿದ್ದೀರಲ್ವಾ ಅಂತ ಕಣ್ಣೀರು ಹಾಕುತ್ತಾ ಧನ್ಯವಾದ ಹೇಳಿದೆ. ಅವರ ತ್ಯಾಗದಿಂದ ನಾನು ಈ ಸಾಧನೆ ಮಾಡುವ ಹಾಗಾಯ್ತು ಸರ್. ಅವರಿಲ್ಲದೆ ನಾನು ಏನೂ ಅಲ್ಲ.
ನಿರ್ದೇಶಕರು ಹೇಳಿದರು: ವೆರಿ ಗುಡ್ ಮ್ಯಾನ್. ನಿನಗೆ ಕೆಲಸ ಕೊಟ್ಟಿದ್ದೇನೆ. ನಿನ್ನ ಶೈಕ್ಷಣಿಕ ಸಾಧನೆ ನೋಡಿ ಅಲ್ಲ. ಬದಲಾಗಿ, ಒಬ್ಬ ಮ್ಯಾನೇಜರ್ ಆಗಿ ತಂಡವನ್ನು ಮುನ್ನಡೆಸುವ ಶಕ್ತಿ ನಿನ್ನಲ್ಲಿದೆ ಅಂತ ಅರಿತೆ.
ಮ್ಯಾನೇಜರ್ ಕೆಲಸ ಅಂದ್ರೆ ಇನ್ನೊಬ್ಬರನ್ನು ದುಡಿಸಿಕೊಳ್ಳುವುದಷ್ಟೇ ಅಲ್ಲ. ಪ್ರತಿಯೊಬ್ಬರ ಕೆಲಸವನ್ನೂ ಅರ್ಥ ಮಾಡಿಕೊಂಡು ಬೆನ್ನು ತಟ್ಟುವುದು. ಎಲ್ಲರ ನೋವನ್ನು ಅರ್ಥ ಮಾಡಿಕೊಳ್ಳುವುದು. ಆ ಶಕ್ತಿ ನಿನಗೀಗ ಬಂದಿದೆ: ನಿರ್ದೇಶಕರು ಹೇಳುತ್ತಲೇ ಇದ್ದರು.
ಇದನ್ನೂ ಓದಿ| Motivational story: ಶತಮೂರ್ಖ ಅಂತ ಚೀಟಿ ಬರೆದವರೇ ಮೂರ್ಖರಾದರು!