Site icon Vistara News

Motivational story: ಯುವಕನಿಗೆ ಕೊನೆಗೂ ಅರ್ಥವಾಯ್ತು ಗೆಲುವಿನ ಓಟದ ಗುಟ್ಟು!

motivational story

ಕೃಷ್ಣ ಭಟ್‌ ಅಳದಂಗಡಿ– Motivational story
ಅದೊಂದು ಊರಿತ್ತು. ಅಲ್ಲೊಬ್ಬ ಯುವಕನಿದ್ದ. ಓಡುವುದರಲ್ಲಿ ಅವನು ಭಾರಿ ಜೋರು. ಓಡುವುದರಲ್ಲಿ ಎಲ್ಲರನ್ನೂ ಮೀರಿಸಬೇಕೆಂಬ ತವಕ ಅವನಿಗೆ. ಕಂಡ ಕಂಡವರನ್ನೆಲ್ಲ ಕರೆದು ಬಾರೋ ಇಲ್ಲಿ, ನನ್ನನ್ನು ಓಟದಲ್ಲಿ ಮೀರಿಸು ನೋಡೋಣ ಅಂತ ಸವಾಲು ಹಾಕುತ್ತಿದ್ದ. ಓಟದಲ್ಲಿ ಗೆಲ್ಲುವುದೇ ನಿಜವಾದ ಗೆಲುವು ಅನ್ನುತ್ತಿದ್ದ.

ಅದೊಂದು ದಿನ ಅವನು ಪಕ್ಕದೂರಿಗೆ ಹೋಗಿ ಅದೇ ರೀತಿಯ ಸವಾಲು ಹಾಕಿದ.  ಅಲ್ಲಿನ ಯುವಕರು ಓಟದ ಸ್ಪರ್ಧೆಯನ್ನು ಆಯೋಜನೆ ಮಾಡಿದರು. ಸಾಕಷ್ಟು ಜನರೂ ಸೇರಿದರು. ಮೊದಲು ಊರಿನ ಇಬ್ಬರು ಗಟ್ಟಿಗ ಯುವಕರೊಂದಿಗೆ ಸ್ಪರ್ಧೆ ನಡೆಯಿತು. ಅವರಿಬ್ಬರನ್ನೂ ಆತ ತುಂಬ ಅಂತರದಿಂದ ಮೀರಿಸಿದ. ಸೋತವರು ತಮ್ಮ ಊರಿನವರೇ ಎಂಬುದು ಗೊತ್ತಿದ್ದರೂ ಆ ಊರಿನ ಜನ ಅವನ ಸಾಧನೆಗೆ ಚಪ್ಪಾಳೆ ತಟ್ಟಿದರು.

ಇದನ್ನೂ ಓದಿ: Motivational story: ಬಡತನ ತೋರಿಸಲು ಹೋದರೆ ಮಗನಿಗೆ ಕಂಡದ್ದು ಶ್ರೀಮಂತಿಕೆ!
ನಂತರ ಬೇರೊಂದು ತಂಡದೊಂದಿಗೆ ಓಟದ ಸ್ಪರ್ಧೆ ನಡೆಸಲಾಯಿತು. ಆಗಲೂ ಕೂಡಾ ಸಾಹಸಿ ಯುವಕನೇ ಗೆದ್ದ. ಜನರು ಮತ್ತದೇ ಉತ್ಸಾಹದಿಂದ ಚಪ್ಪಾಳೆ ತಟ್ಟಿದರು. ಯುವಕನಿಗೆ ತುಂಬ ಉತ್ಸಾಹ ಬಂತು. ಖುಷಿಯೂ ಆಯಿತು.
ಬನ್ನಿ ಯಾರಾದರೂ ಬನ್ನಿ, ನನ್ನನ್ನು ಸೋಲಿಸಿ ನೋಡೋಣ ಅಂತ ಮತ್ತೆ ಪಂಥಾಹ್ವಾನ ನೀಡಿದ. ನನ್ನನ್ನು ಸೋಲಿಸುವವರು ಯಾರೂ ಇಲ್ಲವೇ ಅಂತ ಕೂಗಿ ಕೇಳಿದ.
ಆಗ ಒಬ್ಬ ವ್ಯಕ್ತಿ ನಡೆದುಕೊಂಡು ಅಲ್ಲಿಗೆ ಬಂದ. *ಗೆಲ್ತಾರೋ ಬಿಡ್ತಾರೋ ಗೊತ್ತಿಲ್ಲ. ನಿನ್ನ ಜತೆ ಓಡಬಲ್ಲವರು ಇನ್ನೂ ಇದಾರೆ* ಅಂತ ಹೇಳಿದ. ಬರಲಿ,  ಯಾರು ಬೇಕಾದರೂ ಅಂತ ಯುವಕ ಹೇಳಿದ‌.
ಆಗ ವ್ಯಕ್ತಿ ಒಬ್ಬ ಅನಾರೋಗ್ಯಪೀಡಿತ ಮಹಿಳೆ ಮತ್ತು ಕಣ್ಣು ಕಾಣದ ವ್ಯಕ್ತಿಯನ್ನು ತಂದು ಟ್ರ್ಯಾಕ್‌ ನಲ್ಲಿ ನಿಲ್ಲಿಸಿದ. ಇದೆಂಥಾ ಸ್ಪರ್ಧೆ ಅಂತ ಯುವಕ ಕೇಳಿದ. *ಇದೂ ಸ್ಪರ್ಧೆಯೇ… ಓಡು* ಅಂದ ವ್ಯಕ್ತಿ.
ಓಟ ಶುರುವಾಯಿತು. ಯುವಕ ಓಡಿದ. ಆದರೆ ಉಳಿದವರು ಓಡಲೇ ಇಲ್ಲ. ಯುವಕ ಓಡಿ ಗುರಿ ಮುಟ್ಟಿದರೂ ಯಾರೂ ಚಪ್ಪಾಳೆ ತಟ್ಟಲಿಲ್ಲ.

ವ್ಯಕ್ತಿ ಮತ್ತೊಮ್ಮೆ ಯುವಕನನ್ನು ಕರೆದ.. ಈಗ ಮತ್ತೊಮ್ಮೆ ಸ್ಪರ್ಧೆಗೆ ಬಾ ಎಂದು ಕರೆದ. *ಯಾರು ನೀವು ಓಡ್ತೀರಾ* ಅಂತ ಯುವಕ ಕೇಳಿದ. ವ್ಯಕ್ತಿ ಹೇಳಿದ: ಇಲ್ಲ ನಾನು ಓಡಲ್ಲ. ಅವರೇ ಓಡ್ತಾರೆ.
ವ್ಯಕ್ತಿ ಹೇಳಿದ: ಈ ಸಾರಿ ಅವರು ನಿನ್ನೆ ಜತೆ ಓಡೋದಲ್ಲ.. ನೀನು ಅವರ ಜತೆ ಓಡಬೇಕು. ನೀನು ಮಧ್ಯದಲ್ಲಿ ನಿಂತು ಅವರಿಬ್ಬರ ಕೈ ಹಿಡಿದುಕೊಂಡು ಓಡಬೇಕು.
ಯುವಕ ಒಪ್ಪಿದ. ಅವರಿಬ್ಬರ ಕೈಯನ್ನು ಹಿಡಿದುಕೊಂಡ ಓಡಲು ಶುರು ಮಾಡಿದ. ಕೆಲವು ಹೆಜ್ಜೆಯಲ್ಲೇ ಅಂಧ ವ್ಯಕ್ತಿ ಎಡವಿಬಿದ್ದರು. ಅವರನ್ನೂ ಎಬ್ಬಿಸಿ ಮೇಲೆತ್ತಿ ಓಟ ಮುಂದುವರಿಸಿದ. ಈ ಬಾರಿ ಅವನು ಓಟ ಆರಂಭಿಸಿದ ಕ್ಷಣದಿಂದ ಶುರುವಾಗಿ ಕೊನೆಯವರೆಗೆ ಒಂದೇ ಸಮನೆ ಚಪ್ಪಾಳೆ, ಕೇಕೆಯ ರಣೋತ್ಸಾಹ ಕೇಳಿಬಂತು.
ಓಟ ಮುಗಿಸಿದ ಯುವಕ ವ್ಯಕ್ತಿಯ ಬಳಿಗೆ ಬಂದ. ವ್ಯಕ್ತಿ ಕೇಳಿದ: ಯಾವ ಓಟ ಚೆನ್ನಾಗಿತ್ತು? ಯುವಕ ಹೇಳಿದ: ಕೊನೆಯದು.

ವ್ಯಕ್ತಿ ಹೇಳಿದ: ಮೊದಲೆಲ್ಲ ನೀನೊಬ್ಬನೇ ಗೆಲ್ತಿದ್ದೆ. ಎಲ್ಲರನ್ನೂ ಸೋಲಿಸಿ ಗೆಲ್ತಿದ್ದೆ. ಕೊನೆಯ ಓಟದಲ್ಲಿ  ಅವರಿಬ್ಬರನ್ನು ಗೆಲ್ಲಿಸಿ ನೀನು ಗೆದ್ದೆ. ಎಲ್ಲರೂ ಗೆದ್ದೋರೆ. ಬದುಕಿನಲ್ಲಿ ನಾನೊಬ್ಬನೇ ಗೆಲ್ಲಬೇಕು, ಉಳಿದವರೆಲ್ಲ ಸೋಲಬೇಕು ಎನ್ನುವ ಹಠ ಬೇಡ. ಹಾಗೆ ಮಾಡಿದರೆ, ಎಲ್ಲರೂ ಸೋತರೆ, ನಿನ್ನ ಗೆಲುವಿಗೆ ಚಪ್ಪಾಳೆ ಹೊಡೆಯೋರೆ ಇರುವುದಿಲ್ಲ.. ! ಅಸಹಾಯಕರಾದವರನ್ನು ಕೈ ಹಿಡಿದು ಸಾಗುವ ನಿನ್ನ ಓಟಕ್ಕೆ ಜಗತ್ತೇ ಚಪ್ಪಾಳೆ ತಟ್ಟುತ್ತದೆ.

ಇದನ್ನೂ ಓದಿ: Motivational story: ಇದರಲ್ಲಿ ನಾವೇನು? ಆಲೂನಾ, ಮೊಟ್ಟೆನಾ? ಕಾಫಿ ಬೀಜಾನಾ?

Exit mobile version