Site icon Vistara News

Motivatonal story : ಪ್ರೊಫಸರ್‌ ಹೇಳಿದ ಶಾರ್ಕ್‌ ಕಥೆ; ನಿಜವಾದ ಬ್ಯಾರಿಯರ್‌ ಇರುವುದು ತಲೆಯಲ್ಲಿ, ಅದನ್ನು ಕಿತ್ತು ಹಾಕಿ!

#image_title

ಕೃಷ್ಣ ಭಟ್‌ ಅಳದಂಗಡಿ- Motivational story
ಡಾ. ಹರಿಪ್ರಸಾದ್‌ ಮಂಗಳೂರಿನಲ್ಲಿ ಸಾಗರ ಜೀವವಿಜ್ಞಾನದ ಪ್ರೊಫೆಸರ್‌. ಮೀನುಗಳ ನಡವಳಿಕೆ, ಆಹಾರ ಪದ್ಧತಿ, ಅವುಗಳ ವಾಸಸ್ಥಾನಗಳ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡಿದವರು. ಅವರಿಗೆ ಮನುಷ್ಯರ ನಡವಳಿಕೆಗಳ ಅಧ್ಯಯನ ಮಾಡುವುದು ಕೂಡಾ ತುಂಬ ಇಂಟ್ರೆಸ್ಟಿಂಗ್‌ ಸಂಗತಿ.

ಅವರು ಪಾಠ ಮಾಡುತ್ತಿದ್ದ ಕಾಲೇಜಿನಲ್ಲಿ ಮೀನುಗಳ ಅಧ್ಯಯನ ಪ್ರಮುಖ ವಿಷಯ. ಹೀಗಾಗಿ ಅಲ್ಲಿ ಮೀನು ಸಾಕಣೆಯ ಹಲವಾರು ಟ್ಯಾಂಕ್‌ಗಳಿದ್ದವು. ಅವರು ಮಕ್ಕಳೊಂದಿಗೆ ಸೇರಿ ಒಂದು ಪ್ರಯೋಗ ಮಾಡಲು ಮುಂದಾದರು.

ಹರಿಪ್ರಸಾದ್‌ ಒಂದು ಸಾಧಾರಣ ಗಾತ್ರದ ಶಾರ್ಕ್‌ ಮೀನನ್ನು ತರಿಸಿಕೊಂಡರು. ಅದನ್ನು ಮಕ್ಕಳ ಸಹಾಯದಿಂದ ಒಂದು ಕೃತಕ ಟ್ಯಾಂಕ್‌ನಲ್ಲಿ ಬಿಡಲಾಯಿತು. ಬಳಿಕ ಅದರಲ್ಲಿ ಕೆಲವು ಸಾಮಾನ್ಯ ಮೀನುಗಳನ್ನೂ ಬಿಡಲಾಯಿತು. ಮೀನುಗಳನ್ನು ಬಿಡುತ್ತಿದ್ದಂತೆಯೇ ಶಾರ್ಕ್‌ ಒಮ್ಮೆಗೇ ಮುಗಿಬಿದ್ದು ತಿನ್ನಲು ಆರಂಭ ಮಾಡಿತು. ಸಹಜವಾಗಿ ಶಾರ್ಕ್‌ ಆಹಾರವೇ ಮೀನು. ಸಣ್ಣ ಮೀನುಗಳನ್ನು ದೊಡ್ಡ ಮೀನು ತಿನ್ನುವುದು ಜೀವಚಕ್ರದ ಸರಳ ಸೂತ್ರ ಎಂದು ಡಾ. ಹರಿಪ್ರಸಾದ್‌ ಮಕ್ಕಳಿಗೆ ವಿವರಣೆ ನೀಡಿದರು.

ಹೀಗೆ ಕೆಲವು ದಿನಗಳ ಕಾಲ ಇವರು ಮೀನು ಬಿಡುವುದು, ಶಾರ್ಕ್‌ ಅದನ್ನು ತಿಂದು ಹಾಕುವ ಪ್ರಯೋಗ ಮುಂದುವರಿಯಿತು. ಕೆಲವು ದಿನಗಳಾದ ಮೇಲೆ ಹರಿಪ್ರಸಾದ್‌ ಸರ್‌ ಟ್ಯಾಂಕ್‌ನ್ನು ಎರಡು ಭಾಗಗಳಾಗಿ ವಿಭಜಿಸಬಲ್ಲ ಒಂದು ಪಾರದರ್ಶಕ ಫೈಬರ್‌ ಗ್ಲಾಸ್‌ ತರಿಸಿದರು. ಅದನ್ನು ಆಯತಾಕಾರದ ಟ್ಯಾಂಕ್‌ ಮಧ್ಯ ಭಾಗದಲ್ಲಿ ಫಿಕ್ಸ್‌ ಮಾಡಲಾಯಿತು. ಅಂದರೆ ಈಗ ಶಾರ್ಕ್‌ನ್ನು ಟ್ಯಾಂಕ್‌ನ ಒಂದು ಭಾಗಕ್ಕೆ ಮಾತ್ರ ಸೀಮಿತಗೊಳಿಸಲಾಯಿತು.

ಒಂದು ಕಡೆ ಶಾರ್ಕ್‌ ಇದ್ದರೆ ಇನ್ನೊಂದು ಭಾಗದಲ್ಲಿ ಮೀನುಗಳನ್ನು ಹಾಕಲಾಯಿತು. ಮೀನುಗಳನ್ನು ಟ್ಯಾಂಕ್‌ಗೆ ಸುರಿದುದನ್ನು ಗಮನಿಸಿದ್ದೇ ತಡ, ಶಾರ್ಕ್‌ ಆ ಕಡೆ ಧಾವಿಸಿ ಬಂತು. ಆದರೆ, ಫೈಬರ್‌ ಗ್ಲಾಸ್‌ ಅಡ್ಡವಿತ್ತು. ಆಚೆ ಹೋಗಲು ಆಗುತ್ತಿಲ್ಲ ಎಂದು ಸಿಟ್ಟಿಗೆದ್ದ ಶಾರ್ಕ್‌ ಗುದ್ದಿತು, ತಾಡಿಸಿತು, ಬಡಿಯಿತು.. ಏನೆಲ್ಲಾ ಮಾಡಿತು. ಹೀಗೆ ವಿಪರೀತ ಬಡಿದಾಡಿದ್ದರಿಂದ ಮೈಯಲ್ಲಿ ರಕ್ತವೂ ಬಂತು. ಈ ಕಡೆ ಹಾಕಿದ ಮೀನುಗಳು ಆರಾಮವಾಗಿ ಓಡಾಡುತ್ತಿದ್ದವು. ಕಣ್ಣೆದುರಿಗೆ ಶಾರ್ಕ್‌ ಇದ್ದರೂ ಅದಕ್ಕೆ ತಮ್ಮ ಕಡೆ ಬರಲಾಗುತಿಲ್ಲ ಎಂದು ಬಹುಶಃ ಖುಷಿಯಲ್ಲಿದ್ದಿರಬೇಕು.

ಹೀಗೆ ಒಂದು ಕಡೆ ಶಾರ್ಕ್‌, ಇನ್ನೊಂದು ಕಡೆ ಮೀನುಗಳು ಅನ್ನೋ ಪ್ರಯೋಗ ಕೆಲವು ದಿನಗಳ ಕಾಲ ನಡೆಯಿತು. ಆರಂಭದ ಕೆಲವು ದಿನ ಫೈಬರ್‌ ಗ್ಲಾಸ್‌ ಜತೆ ಗುದ್ದಾಡಿದ್ದ ಶಾರ್ಕ್‌, ಬಳಿಕ ಇದು ಆಗೋ ಕೆಲಸ ಅಲ್ಲ ಅಂತ ತಣ್ಣಗಾಗಿ ಮೂಲೆಯಲ್ಲಿ ಕುಳಿತಿತ್ತು.

ಒಂದು ದಿನ ಹರಿಪ್ರಸಾದ್‌ ಅವರು ಯಾರಿಗೂ ಗೊತ್ತಾಗದಂತೆ ಫೈಬರ್‌ ಗ್ಲಾಸ್‌ ತೆಗೆಸಿದರು. ಮೀನುಗಳೆಲ್ಲ ಅತ್ತಿಂದಿತ್ತ ಓಡಾಡಲು ಆರಂಭಿಸಿದವು. ಆದರೆ, ಶಾರ್ಕ್‌ ಮಾತ್ರ ಸುಮ್ಮನೆಯೇ ಕುಳಿತಿತ್ತು!

ಯಾಕೆ ಹೀಗೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.. ಆಗ ಡಾ. ಹರಿಪ್ರಸಾದ್‌ ಈ ರೀತಿ ವಿವರಣೆ ನೀಡಿದರು.

ʻʻಶಾರ್ಕ್‌ ಆರಂಭದಲ್ಲಿ ಇದು ನನಗೆ ಸಾಧ್ಯ ಎಂದು ಫೈಬರ್‌ ಗ್ಲಾಸ್‌ನ್ನು ಒಡೆಯಲು ಮುಂದಾಗಿತ್ತು. ಅದು ಸಾಧ್ಯವಾಗದೆ ಇದ್ದಾಗ ಸುಮ್ಮನಾಯಿತು, ತಣ್ಣಗಾಯಿತು. ಹೀಗಾಗಿ ಫೈಬರ್‌ ಗ್ಲಾಸ್‌ ತೆಗೆದಿದ್ದರೂ ಅದರ ತಲೆಯಲ್ಲಿ ಸೃಷ್ಟಿಯಾಗಿದ್ದ ತಡೆಗೋಡೆ ತೆರೆಯಲೇ ಇಲ್ಲ. ಇದು ನಮಗೂ ಅನ್ವಯಿಸುವ ಸಂಗತಿಯೇ ಆಗಿದೆ. ನಾವು ಯಾವುದೋ ಹಿನ್ನಡೆ ಆಯಿತು, ಸೋಲಾಯಿತು ಎಂದ ಕೂಡಲೇ ಭಾವನಾತ್ಮಕವಾಗಿ ಅದನ್ನು ಕೈಬಿಟ್ಟುಬಿಡುತ್ತೇವೆ. ಪ್ರಯತ್ನ ಪಡುವುದನ್ನೇ ನಿಲ್ಲಿಸುತ್ತೇವೆʼʼ.

ʻʻಒಮ್ಮೆ ನಮ್ಮ ತಲೆಯಲ್ಲಿ ಇದು ಆಗೊಲ್ಲ ಅಂತ ಹೊಕ್ಕುಬಿಟ್ಟರೆ ನಾವು ಕೂಡಾ ಮರಳಿ ಪ್ರಯತ್ನ ಮಾಡಲು ಹೋಗುವುದಿಲ್ಲ. ಯಾಕೆ ಪದೇಪದೆ ಸೋಲುವುದು ಅಂತ ಸುಮ್ಮನಾಗುತ್ತೇವೆ. ಬಳಿಕ ಅವಕಾಶಗಳೇ ನಮ್ಮ ಬಳಿಗೆ ಬಂದರೂ ಬಳಸಿಕೊಳ್ಳದೆ ಸುಮ್ಮನಾಗುತ್ತೇವೆ. ನಿಜ ಅಂದರೆ ಈ ತಡೆಗೋಡೆಗಳೆಲ್ಲ ಇರುವುದು ನಮ್ಮ ತಲೆಯಲ್ಲಿ. ಯಾವಾಗಲೋ ಏನೋ ಮಾಡಿದಾಗ ಅಡ್ಡಿ ಎದುರಾಯಿತು ಎಂದರೆ ಅದು ಪರ್ಮನೆಂಟ್‌ ಅಂತೇನೂ ಅಲ್ಲ. ಇಲ್ಲಿ ಫೈಬರ್‌ ಗ್ಲಾಸ್‌ ಆದಂತೆ ಅದು ಕಾಣೆಯಾಗಬಹುದು. ಆಗ ಮತ್ತೆ ಪ್ರಯತ್ನಿಸಿದರೆ ಗೆಲುವುದು ಸಿಗಬಹುದುʼʼ ಎಂದು ಹೇಳಿ ಡಾ. ಹರಿಪ್ರಸಾದ್‌ ಸರ್‌ ಮಾತು ಮುಗಿಸಿದರು.

ಇದನ್ನೂ ಓದಿ : Motivational story : ನಾವು ಮಾಡಿದ ಕೆಲಸದ ಫಲ ನಮಗೇ ಸಿಗುತ್ತಲ್ವಾ?

Exit mobile version