Site icon Vistara News

ರಾಜ ಮಾರ್ಗ ಅಂಕಣ : ಜಗತ್ತಿನ ಅತಿ ದೊಡ್ಡ ಶೂ ಕಂಪನಿ ಬಾಟಾ ಹುಟ್ಟಿ, ಬೆಳೆದ ರೋಚಕ ಕಥೆ!

How Bata shoe brand built as a international brand?

How Bata shoe brand built as a international brand?

ಇಂದು ಶೂ ಅಥವಾ ಚಪ್ಪಲಿ ಅಂದೊಡನೆ ನಮ್ಮ ಕಣ್ಮುಂದೆ ಬರುವ ಮೊದಲ ಬ್ರಾಂಡ್‌ಗಳಲ್ಲಿ ಬಾಟಾ ( BATA) ಕೂಡಾ ಒಂದು ಅಲ್ಲವೇ? ಆ ಕಂಪನಿಯನ್ನು ಬಹಳ ಕಷ್ಟಪಟ್ಟು ಕಟ್ಟಿದವರು ಥೋಮಸ್ ಬಾಟಾ ಮತ್ತು ಅವರ ಮಗ ಜೂನಿಯರ್ ಥೋಮಸ್ ಬಾಟಾ. ಅಪ್ಪ ಮತ್ತು ಮಗ ಇಬ್ಬರೂ ಒಬ್ಬರನ್ನು ಒಬ್ಬರು ಮೀರಿಸುವ ಘಮಂಡಿಗಳೇ! ಅವರಿಬ್ಬರೂ ಸೇರಿ ತಮ್ಮ ಕನಸಿನ ಶೂ ಮತ್ತು ಚಪ್ಪಲ್ ಕಂಪೆನಿಯನ್ನು ಬೆಳೆಸಿದ ರೀತಿಯೇ ಅದ್ಭುತವಾಗಿದೆ!

ಸೀನಿಯರ್ ಥೋಮಸ್ ಬಾಟಾ ಕಥೆ!

ಅಪ್ಪ ಸೀನಿಯರ್ ಥೋಮಸ್ ಬಾಟಾ ಒಬ್ಬ ಬಡ ಚಮ್ಮಾರನ ಮಗ. ಹುಟ್ಟಿದ್ದು ಜೆಕ್ ರಾಷ್ಟ್ರದ ಜಲೀನ್ ಎಂಬ ಅತಿ ಸಣ್ಣ ಊರಿನಲ್ಲಿ. ಅವರ ತಂದೆ ಚರ್ಮದ ಚಪ್ಪಲಿಯನ್ನು ಸ್ವತಃ ತಯಾರಿಸಿ ಮಾರಾಟ ಮಾಡುತ್ತಿದ್ದರು. ಹಾಗೆ ಮಗನಿಗೆ ಅದರಲ್ಲಿ ಪರಿಣತಿಯು ಬಂದಿತ್ತು. 1894ರ ಆಗಸ್ಟ್ 24ರಂದು ಹತ್ತು ಉದ್ಯೋಗಿಗಳನ್ನು ನೇಮಕ ಮಾಡಿ ಮೊದಲ ಶೂ ಕಂಪನಿಯನ್ನು ಆರಂಭ ಮಾಡಿದರು. ಅನುಭವದ ಕೊರತೆಯಿಂದ ಮೊದಲ ವರ್ಷವೇ ಕಂಪನಿಯು ಭಾರಿ ನಷ್ಟದಲ್ಲಿ ಮುಳುಗಿತು.

ಆಗ ಬೇರೆ ದಾರಿ ಇಲ್ಲದೆ ಚರ್ಮಕ್ಕೆ ಬದಲು ಕ್ಯಾನ್ವಾಸನ್ನು ಬಳಸಿ ಶೂಗಳನ್ನು ತಯಾರಿಸಿದರು. ಇದರಿಂದ ಹಗುರವಾದ ಮತ್ತು ಆರಾಮದಾಯಕವಾದ ಶೂಗಳನ್ನು ಮಾರಾಟ ಮಾಡಲು ಸುಲಭವಾಯಿತು. ಶೂ ರೇಟು ಕಡಿಮೆಯಾಯ್ತು. ಯುರೋಪ್ ರಾಷ್ಟ್ರಗಳಲ್ಲಿ BATOVIK ಶೂ ಕಂಪೆನಿಯು ಆರಂಭವಾದ ಕಥೆ ಇದು!

ಬಾಟಾ ಕಂಪನಿಯನ್ನು ಸ್ಥಾಪಿಸಿ ಬೆಳೆಸಿದವರು

ಆದರೆ ಮುಂದೆ ಎದುರಾದ ಸಂಕಷ್ಟಗಳ ಪರಂಪರೆಯನ್ನು ಅವರು ಹೇಗೆ ನಿಭಾಯಿಸಿದರು ಎನ್ನುವುದು ಕೂಡ ಸ್ವಾರಸ್ಯಕರ ಆಗಿದೆ.

1914ರಲ್ಲಿ ಮೊದಲ ವಿಶ್ವಸಮರ ಆರಂಭವಾಗಿ ನಿರಂತರವಾಗಿ ಲಾಕ್ ಡೌನ್ ನಡೆಯಿತು. ಎಲ್ಲೆಡೆ ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ಆದರೆ ಸೀನಿಯರ್ ಥೋಮಸ್ ತಲೆಯಲ್ಲಿ ಬೇರೆಯೇ ಹುಳ ಓಡುತ್ತಿತ್ತು!

ಸೈನಿಕರು ಯುದ್ಧ ರಂಗದಲ್ಲಿ ಬಳಸಬಹುದಾದ ಹಗುರವಾದ ಮತ್ತು ಕಠಿಣವಾದ ಶೂಗಳನ್ನು ತಯಾರಿಸಿ ಸರಕಾರಗಳಿಗೆ ಮಾರಿದರು! ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಅವರ ಶೂ ಕಂಪನಿಯು ಹತ್ತು ಪಟ್ಟು ಲಾಭ ಗಳಿಸಿತು ಮತ್ತು ಉದ್ಯೋಗಿಗಳ ಸಂಖ್ಯೆ ಆರು ಸಾವಿರಕ್ಕೆ ಏರಿತು! ಸಮಸ್ಯೆಗಳ ನಡುವೆ ಪರಿಹಾರ ಹುಡುಕುವ ಥೋಮಸ್ ಪ್ರತಿಭೆಗೆ ಮಿತಿಯೇ ಇರಲಿಲ್ಲ!

ಸಮಸ್ಯೆಗಳನ್ನು ಎದುರಿಸುವುದು ಒಂದು ಕಲೆ!

1918ರ ಹೊತ್ತಿಗೆ ಇನ್ನೊಂದು ಸಮಸ್ಯೆಯು ಎದುರಾಯಿತು. ಜೆಕ್ ರಾಷ್ಟ್ರವು ಸ್ವಾತಂತ್ರ್ಯವನ್ನು ಪಡೆದ ಬೆನ್ನಿಗೆ ಇಬ್ಭಾಗವಾಗಿತ್ತು. ಆಂತರಿಕ ಕ್ಷೋಭೆಯಿಂದ ಮತ್ತೆ ಆರ್ಥಿಕ ಹಿನ್ನಡೆ ಎದುರಾಯಿತು. ಅದನ್ನು ಎದುರಿಸಲು ಥೋಮಸ್ ಇನ್ನೊಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡರು. ತನ್ನ ಕಂಪೆನಿಯ ಶೂಗಳಿಗೆ 50% ರಿಯಾಯಿತಿ ಘೋಷಣೆ ಮಾಡಿದರು. ಅವರ ಕಂಪೆನಿಯ ಕಾರ್ಮಿಕರು ಕೂಡ ತಮ್ಮ ವೇತನದಲ್ಲಿ 40% ಕಡಿಮೆ ಮಾಡಲು ಒಪ್ಪಿದರು. ಟೀಮ್ ವರ್ಕ್ ಕ್ಲಿಕ್ ಆಯಿತು. ಬೇರೆಲ್ಲ ಕಂಪನಿಗಳು ಸ್ಪರ್ಧೆ ಕೊಡಲು ಸಾಧ್ಯವಾಗದೆ ಕೈ ಚೆಲ್ಲಿ ಅಡ್ಡ ಮಲಗಿದವು. ಆದರೆ ಬಾಟಾ ಕಂಪನಿಗೆ ಸ್ಪರ್ಧೆಗಳೇ ಇರಲಿಲ್ಲ. ತನ್ನ ಜೀವನದ ಅವಧಿಯಲ್ಲಿ ಥೋಮಸ್ ತೆಗೆದುಕೊಂಡ ಅಷ್ಟೂ ನಿರ್ಧಾರಗಳು ತುಂಬಾ ರಿಸ್ಕಿ ಆಗಿದ್ದವು. ಆದರೆ ದೂರಗಾಮಿ ಫಲಿತಾಂಶಗಳು ಅದ್ಭುತವಾಗಿದ್ದವು!

ಶಕ್ತಿಶಾಲಿ ಬ್ರಾಂಡ್‌ ಆಗಿ ಬೆಳೆದ ಬಾಟಾ ಕಂಪನಿ

ಮುಂದೆ ಜ್ಯೂನಿಯರ್ ಬಾಟಾ ಯುಗ

ಅವರ ಮರಣದ ನಂತರ ಅವರ ಮಗ ಜೂನಿಯರ್ ಥೋಮಸ್ ಬಾಟಾ ಅಪ್ಪನ ಕಂಪನಿಯನ್ನು ಇನ್ನಷ್ಟು ವಿಸ್ತರಿಸಿದರು. ಅವರು ಉದ್ಯಮ ರಂಗದಲ್ಲಿ ತನ್ನ ಅಪ್ಪನ ಸ್ಟ್ರಾಟಜಿಗಳನ್ನು ಮೀರಿಸಿಬಿಟ್ಟರು!

ಭಾರತಕ್ಕೆ ಬಂದಿತು ಬಾಟಾ ಕಂಪೆನಿ!

ಒಮ್ಮೆ ಜೂನಿಯರ್ ಥೋಮಸ್ ಕಚ್ಚಾವಸ್ತುಗಳ ಸಂಗ್ರಹಕ್ಕಾಗಿ ಕೋಲ್ಕೊತಾಗೆ ಬಂದಿದ್ದರು. ಆಗ ಇಡೀ ಭಾರತದಲ್ಲಿ ಒಂದೇ ಒಂದು ಶೂ ಕಂಪೆನಿ ಇರಲಿಲ್ಲ. ಜಪಾನಿ ಶೂ ಕಂಪೆನಿಗಳು ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿ ಬಿಟ್ಟಿದ್ದವು. ಛೇ! ಇಷ್ಟೊಂದು ಜನಸಂಖ್ಯೆಯ ರಾಷ್ಟ್ರದಲ್ಲಿ ಒಂದೇ ಒಂದು ಶೂ ಕಂಪೆನಿ ಇಲ್ಲವಲ್ಲ! ಎಂದು ಉದ್ಗರಿಸಿದರು. ಅವರ ತಲೆಯಲ್ಲಿ ಕೂಡ ಹುಳ ಓಡುತ್ತಿತ್ತು.

ಒಂದೇ ತಿಂಗಳ ಅವಧಿಯಲ್ಲಿ ಪಾಟ್ನಾ ಮತ್ತು ಕೋಲ್ಕೊತಾದಲ್ಲಿ ಬಾಟಾ ಕಂಪೆನಿಯು ಬಲಗಾಲು ಇಟ್ಟು ಪ್ರವೇಶ ಮಾಡಿತ್ತು. ಇಂದು ಕೋಲ್ಕೊತಾದಲ್ಲಿ ಬಾಟಾ ಶೂ ಕಂಪೆನಿಯು ದೊಡ್ಡದಾಗಿ ಬೆಳೆದಿದೆ ಮತ್ತು ಆ ಪ್ರದೇಶಕ್ಕೆ ಬಾಟಾ ಗಂಜ್ ಎಂಬ ಹೆಸರೇ ಬಂದಿದೆ! ಇಂದು ಭಾರತದಲ್ಲಿ 1300ಕ್ಕಿಂತ ಹೆಚ್ಚು ಬಾಟಾ ಶೂ ಕಂಪೆನಿಯ ಅದ್ಭುತ
ಶೋ ರೂಮುಗಳು ಇವೆ!

ಉದ್ಯಮಿಯ ತಲೆಯಲ್ಲಿ ಕೀಟ ಹೊಕ್ಕಿತು ಅಂದರೆ….!

ಜೂನಿಯರ್ ಥೋಮಸ್ ಒಮ್ಮೆ ಚಂದದ ಬಿಳಿ ಬಣ್ಣದ ಸಮವಸ್ತ್ರ ಧರಿಸಿ ಶಾಲೆಗೆ ಹೋಗುವ ಮಕ್ಕಳನ್ನು ಗಮನಿಸುತ್ತಿದ್ದರು. ಅವರ ಡ್ರೆಸ್ ಮತ್ತು ಶೂ ಬಣ್ಣಗಳು ಮ್ಯಾಚ್ ಆಗುತ್ತಿರಲಿಲ್ಲ. ಮತ್ತೆ ಅವರ ತಲೆಯಲ್ಲಿ ಕೀಟ ಹೊಕ್ಕಿತು! ಶಾಲೆಯ ಮಕ್ಕಳ ಸೈಜಿನ ಬಿಳಿ ಬಣ್ಣದ ಶೂಗಳನ್ನು ತಯಾರಿಸಿ ಮಾರಾಟಕ್ಕೆ ತೊಡಗಿದರು. ಎಲ್ಲವೂ ಶುಭ್ರವಾದ ಮತ್ತು ಶುದ್ಧವಾದ ಬಿಳಿಯ ಬಣ್ಣದ ಶೂಗಳು. ಆ ಶೂಗಳು ಎಷ್ಟು ಜನಪ್ರಿಯ ಆದವೆಂದರೆ 2004ರ ವರ್ಷದಲ್ಲಿ ಬಾಟಾ ಕಂಪೆನಿಯು ಅತೀ ಹೆಚ್ಚು ಶೂಗಳನ್ನು ಉತ್ಪಾದಿಸಿ ಗಿನ್ನೆಸ್ ದಾಖಲೆಯನ್ನು ಬರೆಯಿತು!

ಇಂದು ಬಾಟಾ ಕಂಪೆನಿಯು ವಿಶ್ವದ ಅತೀ ದೊಡ್ಡ ಶೂಗಳ ಕಂಪೆನಿ ಆಗಿ ಬಿಟ್ಟಿದೆ! ವಿಶ್ವದ 70 ರಾಷ್ಟ್ರಗಳಲ್ಲಿ 5000 ಶೋರೂಂಗಳನ್ನು ಹೊಂದಿರುವ ಬಿಗ್ ಬ್ರಾಂಡ್ ನೇಮ್! ಶೂನ್ಯದಿಂದ ಮಹಾ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿ ನಿಲ್ಲಿಸಿದ ಅಪ್ಪ ಮತ್ತು ಮಗ ಥೋಮಸ್‌ ಬಾಟಾ ಅವರ ಯಶೋಗಾಥೆ ಎಷ್ಟೊಂದು ರೋಮಾಂಚಕ ಅಲ್ಲವೇ?

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ರಾಮಾಯಣ ಹುಟ್ಟಿದ್ದು ಹೇಗೆ? ಶೋಕ ವಾಕ್ಯವು ಶ್ಲೋಕ ವಾಕ್ಯವಾಗಿ ಬದಲಾದದ್ದು ಹೇಗೆ?

Exit mobile version